Mangaluru ಚುನಾವಣ ಕಣಕ್ಕೆ ನವೋತ್ಸಾಹ ತುಂಬಿದ ಮೋದಿ ಶೋ
ಲೋಕಸಭಾ ಚುನಾವಣೆ 2024: ಕಡಲತಡಿಯಲ್ಲಿ ಮೋದಿ ಅಲೆ; ರಸ್ತೆಯುದ್ದಕ್ಕೂ ಅಭಿಮಾನಿಗಳ ಹೆದ್ದೆರೆ
Team Udayavani, Apr 15, 2024, 12:36 AM IST
ಮಂಗಳೂರು: ಇದುವರೆಗೆ ದಕ್ಷಿಣ ಕನ್ನಡದ ಚುನಾವಣ ಪ್ರಚಾರ ಕಣ ಥಂಡಾ ಹೊಡೆಯುತ್ತಿದ್ದರೆ, ಪ್ರಧಾನಿ ಮೋದಿ ಅವರೇ ಆಗಮಿಸಿ, ರೋಡ್ ಶೋ ನಡೆಸುವ ಮೂಲಕ ಪ್ರಚಾರಕ್ಕೆ ನವೋತ್ಸಾಹ ತುಂಬಿದರು. ನಗರದ ಮಧ್ಯೆ ನಡೆದ ರೋಡ್ ಶೋ ಕಾರ್ಯಕರ್ತರಲ್ಲಿ ಉತ್ತೇಜನ ತಂದರೆ ರಾಜಕೀಯದ ಕಣದಲ್ಲೂ ರೋಚಕತೆ ಸೃಷ್ಟಿಸಿದೆ. ಈ ರೋಡ್ ಶೋ ನಡೆದ ವಿವಿಧ ಹಂತಗಳ ಚಿತ್ರಣ ಇಲ್ಲಿದೆ.
ಬ್ರಹ್ಮಶ್ರೀ ನಾರಾಯಣ ಗುರು ವೃತ್ತ
ಪ್ರಧಾನಿ ನರೇಂದ್ರ ಮೋದಿ ಅವರು ಲೇಡಿಹಿಲ್‌ನಲ್ಲಿರುವ ನಾರಾಯಣಗುರು ವೃತ್ತಕ್ಕೆ ಸಮಯಕ್ಕೆ ಮುಂಚಿತವಾಗಿಯೇ 7.36 ಕ್ಕೆ ಆಗಮಿಸಿದರು. ಬಂದವರೇ ತಮ್ಮ ಕಾರಿನಿಂದ ಇಳಿದು ಸೇರಿದ್ದ ಬೃಹತ್ ಜನಸ್ತೋಮಕ್ಕೆ ಕೈ ಮುಗಿದರು, ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದರು.
ಅಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಮಾಲಾರ್ಪಣೆ ಹಾಗೂ ಶಾಲು ಹಾಕಿದರೆ,ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮೋದಿ ಅವರಿಗೆ ಶ್ರೀಕೃಷ್ಣ ದೇವರ ಪ್ರತಿಮೆ ಇರುವ ಪ್ರಭಾವಳಿಯನ್ನು ಸ್ಮರಣಿಕೆ ರೂಪದಲ್ಲಿ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮೋದಿಯವರಿಗೆ ಪೇಟ ತೊಡಿಸಿ ಗೌರವಿಸಿದರು. ಶಾಸಕರಾದ ಸುನಿಲ್ ಕುಮಾರ್, ವೇದವ್ಯಾಸ ಕಾಮತ್, ಡಾ|ಭರತ್ ಶೆಟ್ಟಿ, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ರಾಜೇಶ್ ನಾೖಕ್ ಉಳಿಪ್ಪಾಡಿ, ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಸುವರ್ಣ, ಮುಖಂಡರಾದ ಕ್ಯಾ.ಗಣೇಶ್ ಕಾರ್ಣಿಕ್, ನಿತಿನ್ ಕುಮಾರ್ ಮುಂತಾದವರಿದ್ದರು.
ಸಿದ್ಧವಾಗಿ ನಿಂತಿದ್ದ ರೋಡ್ ಶೋ ವಾಹನವನ್ನೇರಿದ ಪ್ರಧಾನಿಯವರ ಜೊತೆ ಇಬ್ಬರೂ ಅಭ್ಯರ್ಥಿಗಳೂ ಸೇರಿಕೊಂಡರು. ಸರಿಯಾಗಿ 7.45ಕ್ಕೆ ರೋಡ್ ಶೋ ಆರಂಭ ಗೊಂಡಿದ್ದೇ ಜನರಿಂದ ಪುಷ್ಪ ವೃಷ್ಟಿಯೂ ಶುರುವಾಯಿತು. ರೋಡ್ ಶೋ ಆರಂಭದ ಸ್ಥಳವಾಗಿದ್ದರಿಂದ ಲೇಡಿಹಿಲ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು 5.30 ರ ಸುಮಾರಿಗೇ ಸೇರಿದ್ದರು. ಮಕ್ಕಳು, ವೃದ್ಧರಾದಿಯಾಗಿ ನಾರಾಯಣಗುರು ವೃತ್ತದತ್ತ ಜನರು ಬರತೊಡಗಿದರು. ವೃತ್ತದ ಸುತ್ತಲೂ ಬ್ಯಾರಿಕೇಡ್ ಹಾಕಿ ಜನರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಮೋದಿ ಆಗಮನಕ್ಕೂ ಸಾಕಷ್ಟು ಮೊದಲೇ ಭಜನೆ, ವಿಪ್ರರಿಂದ ವೇದಘೋಷ, ಶಂಖಜಾಗಟೆ, ಕೊಂಬು ಕಹಳೆ, ಚಂಡೆ ವಾದನ ನಡೆಯುತ್ತಿತ್ತು.
ಲಾಲ್ ಬಾಗ್ ವೃತ್ತ
ರೋಡ್‌ಶೋ ಸಾಗಿದ ಬಂದ ಪ್ರಮುಖ ಜಂಕ್ಷನ್‌ಗಳಲ್ಲಿ ಒಂದಾದ ಲಾಲ್‌ಬಾಗ್‌ನಲ್ಲಿ ಜನ ಸಾಗರವೇ ನೆರೆದಿತ್ತು. ಕೆಪಿಟಿ, ಕುಂಟಿಕಾನ ಕಡೆಯಿಂದ ಹೆದ್ದಾರಿ ಮೂಲಕ ಬಂದ ಮೋದಿ ಅಭಿಮಾನಿಗಳು ಬಂದು ಸೇರಿದ್ದು ಲಾಲ್‌ಬಾಗ್ ವೃತ್ತದಲ್ಲಿ.ಸಂಜೆ 5.30ರಿಂದಲೇ ಬ್ಯಾರಿಕೇಡ್ ಬದಿ ಯಲ್ಲಿ ಸ್ಥಳ ನಿಗದಿ ಪಡಿಸಿ ಕುಳಿತು, ನಿಂತು ಮೋದಿಯ ನಿರೀಕ್ಷೆಯಲ್ಲಿ ಜನರಿದ್ದರು. ಮಹಿಳೆಯರು ಮಕ್ಕಳು, ಯುವಜನರು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿ ದ್ದರು. “ಭಾರತ್ ಮಾತಾಕೀ ಜೈ”, “ಜೈ…ಜೈ…ಮೋದಿ”, “ಜೈ..ಜೈ.. ಬಿಜೆಪಿ’,”ಜೈ ಶ್ರೀರಾಮ್’ ಘೋಷಣೆಗಳು ಮುಗಿಲು ಮುಟ್ಟಿತ್ತು. ಪಕ್ಷದ ಬಾವುಟಗಳು, ಕೇಸರಿ ಬಾವುಟಗಳು, ಮೋದಿ ಮುಖವಾಡ, ಕೇಸರಿ ಟೋಪಿ, ಮುಂಡಾಸುಗಳು ಎಲ್ಲೆ ಲ್ಲೂ ಕಂಡು ಬಂತು.
ಮೋದಿಯವರು ರಾತ್ರಿ 8.03ಕ್ಕೆ ಲಾಲ್‌ಬಾಗ್ ವೃತ್ತದ ಕಡೆಗೆ ಆಗಮಿಸಿದ್ದು, 8.06ರ ವೇಳೆ ಪಾಲಿಕೆ ಕಟ್ಟಡ ದಾಟಿ ಮುಂದೆ ಮುಂದೆ ಸಾಗಿದರು. ಮೋದಿ ಆಗಮಿಸುತ್ತಿದ್ದಂತೆ ಬ್ಯಾರಿಕೇಡ್ ಬದಿಯಲ್ಲಿ ಒಮ್ಮೆಲೆ ನೂಕು ನುಗ್ಗಲು ಉಂಟಾಯಿತು. ಅಭಿಮಾನಗಳತ್ತ ಕೈ ಬೀಸುತ್ತಿದ್ದ ಮೋದಿಯವರ ಫೋಟೋ ತೆಗೆಯುವುದು – ವೀಡಿಯೋ ಮಾಡುವು ದರಲ್ಲಿ ಬಹುತೇಕರು ತೊಡಗಿದ್ದರು. ಪುಟಾಣಿ ಮಕ್ಕಳೂ “ಮೋದಿ…ಮೋದಿ’ ಹೇಳುತ್ತಿದ್ದ ದೃಶ್ಯಗಳೂ ಕಂಡು ಬಂತು.
ಬಳ್ಳಾಲ್‌ಬಾಗ್ ಜಂಕ್ಷನ್
8.15ರ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ರೋಡ್ ಶೋ ಮೂಲಕ ಬಳ್ಳಾಲ್‌ಬಾಗ್ ಜಂಕ್ಷನ್ ತಲುಪಿದರು. ನೆರೆದ ಜನಸ್ತೋಮದತ್ತ ಕೈ ಬೀಸುತ್ತಿದ್ದ ಮೋದಿಯ ಪರ ಸ್ಥಳದಲ್ಲಿದ್ದ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಮೋದಿ ವಾಹನ ಆಗಮಿಸುತ್ತಿದ್ದಂತೆ ಎಳೆಯರಿಂದ ಹಿಡಿದು ಹಿರಿಯರ ತನಕ ಎಲ್ಲರೂ ಎದ್ದು ನಿಂತು ಜೈ ಜೈ ಮೋದಿ…, ಮತ್ತೂಮ್ಮೆ ಮೋದಿ…., ಭಾರತ ಮಾತಾಕೀ ಜೈ…. ಎಂಬಿತ್ಯಾದಿ ಘೋಷಣೆ ಕೂಗಿದರು. ಹೂ ಮಳೆಯೇ ಸುರಿಯಿತು. ಕೇಸರಿ ಧ್ವಜಗಳು, ಪಕ್ಷದ ಬಾವುಟಗಳು, ಮೋದಿ ಫೋಟೋಗಳು ರಾರಾಜಿಸಿದವು. ಕೆಲವರು ಸೆಲ್ಫಿ, ಪೋಟೋ ವಿಡಿಯೋ ಚಿತ್ರೀಕರಣದಲ್ಲಿ ತೊಡಗಿದ್ದರು. ಮತ್ತೂಂದೆಡೆ ಲಾಲ್‌ಬಾಗ್ ಕಡೆಯಿಂದ ಜನಸಾಗರ ಮೋದಿ ಸಾಗುತ್ತಿದ್ದ ವಾಹನದೊಂದಿಗೆಯೇ ಹೆಜ್ಜೆ ಹಾಕುತ್ತಾ, ಬಿಜೆಪಿ ಪರ ಘೋಷಣೆಗಳನ್ನು ಮೊಳಗಿಸುತ್ತಾ ಬಿಜೆಪಿ ಧ್ವಜಗಳನ್ನು ಬೀಸಿಕೊಂಡು ತೆರಳಿದರು. ಅಲ್ಲಲ್ಲಿ ವೇದಿಕೆಗಳಲ್ಲಿ ಸಂಗೀತ, ನೃತ್ಯ, ಕುಣಿತ ಭಜನೆ ಪ್ರಧಾನಿಯವರಿಗೆ ಅದ್ಧೂರಿ ಸ್ವಾಗತ ನೀಡಿದವು. ಕೆಲವರು ಕಟ್ಟಡದ ಮೇಲಿಂದ ಹಾಗೂ ತಂಗುದಾಣದೊಳಗಿಂದ ಪ್ರಧಾನಿಯನ್ನು ಕಣ್ತುಂಬಿಕೊಂಡರು.
ಪಿವಿಎಸ್‌ನಲ್ಲಿ ಪ್ರಮುಖರಿಗೆ ವೇದಿಕೆ
ಪ್ರಮುಖ ವೃತ್ತವಾದ ಪಿವಿಎಸ್‌ನಲ್ಲಿ ಬಿಜೆಪಿ ಪ್ರಮುಖರಿಗೆ ವೇದಿಕೆಯನ್ನು ಹಾಕಲಾಗಿತ್ತು. ಬಿಜೆಪಿ ನಾಯಕರು, ಕಾರ್ಯಕರ್ತರು ನಿರಂತರವಾಗಿ ಘೋಷ ಣೆಗಳನ್ನು ಕೂಗುತ್ತಾ ಉತ್ಸಾಹ ಕಾತರದಿಂದ ಮೋದಿಯವರನ್ನು ನಿರೀಕ್ಷಿಸುತ್ತಿದ್ದರು. ಒಂದೆಡೆ ನಾಸಿಕ್ ಬ್ಯಾಂಡ್ ಸದ್ದಿಗೆ ಕೆಲವರು ಹೆಜ್ಜೆ ಹಾಕಿದರು. ಇನ್ನೊಂದೆಡೆ ವಯೋಲಿನ್ ಮತ್ತು ಚೆಂಡೆ ವಾದನದಿಂದ ಮತ್ತಷ್ಟು ಉತ್ಸಾಹಿತಗೊಂಡರು. ಬಾಲ ರಾಮನ ವೇಷ ಧರಿಸಿದ್ದ ಬಾಲಕಿ ಯೋರ್ವಳು “ಜೈ ಶ್ರೀ ರಾಮ್’ ಘೋಷಣೆ ಹಾಕುತ್ತಿದ್ದುದು ನೆರೆದವರ ಗಮನ ಸೆಳೆಯಿತು. ಅಲ್ಲಿದ್ದವರು ಆಕೆಯ ಘೋಷಣೆಗೆ ದನಿ ಸೇರಿಸಿದರು. ಬಿಜೆಪಿ ಬಾವುಟವನ್ನು ಹಿಡಿದು ಘೋಷಣೆ ಗಳನ್ನು ಕೂಗುತ್ತಾ ಬ್ಯಾರಿಕೇಡ್‌ಗಳ ಬಳಿ ನುಗ್ಗುತ್ತಿದ್ದವರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಯಿತು. ರಾತ್ರಿ 8.33ರ ವೇಳೆಗೆ ರೋಡ್ ಶೋ ಪಿವಿಎಸ ತಲುಪು ತ್ತಿದ್ದಂತೆ ಹೆಚ್ಚುವರಿ ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಯಿತು. ಮಹಿಳೆಯರು, ಹಿರಿಯರು ಸೇರಿದಂತೆ ನೆರೆದಿದ್ದವರು ಪುಳಕಿತಗೊಂಡರು. ಆ ಕ್ಷಣವನ್ನು ಮೊಬೈಲ್ ಕೆಮರಾದಲ್ಲಿ ಸೆರೆ ಹಿಡಿಯಲು ಮುಗಿಬಿದ್ದು ಸಂಭ್ರಮಿಸಿದರು.
ಗೋವಿಂದ ಪೈ ವೃತ್ತದಲ್ಲಿ ಮುಕ್ತಾಯ
ನವಭಾರತ್ ವೃತ್ತದಲ್ಲಿ ನಿಗದಿತ ರೋಡ್‌ಶೋ ಮುಕ್ತಾಯವಾಯಿತು. ಬಳಿಕ ಮೋದಿಯವರು ಕಾರಿನಲ್ಲಿ ನಿಂತು ಪ್ರಯಾಣಿಸಿ ರೋಡ್ ಶೋದಲ್ಲಿ ಭಾಗವಹಿಸಿದರು. ಜನರು ಆಗಲೂ ಕೈ ಮುಗಿದು ಮೋದಿಯವರನ್ನು ಕಣ್ತುಂಬಿಕೊಂಡರು.
ಸಂಕಲ್ಪ ಪತ್ರದಲ್ಲಿ ಮಂಗಳೂರಿಗೆ
ಹಲವು ಅಂಶ: ಪ್ರಧಾನಿ ಮೋದಿ
ನಮ್ಮ ಸಂಕಲ್ಪ ಪತ್ರವು ಮಂಗಳೂರಿನ ಅಭಿವೃದ್ಧಿಗೆ ಉತ್ತೇಜನ ನೀಡುವ ಬಹಳಷ್ಟು ಅಂಶಗಳನ್ನು ಹೊಂದಿದೆ. ವಿಶೇಷವಾಗಿ ನಗರಾಭಿವೃದ್ಧಿ, “ಈಸ್ ಆಫ್ ಲಿವಿಂಗ್’ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ. ಮೀನುಗಾರಿಕೆಯಂತಹ ಕ್ಷೇತ್ರಗಳಲ್ಲಿ ಪ್ರಸ್ತುತಪಡಿಸಲಾದ ದೃಷ್ಟಿಕೋನವು ಕರಾವಳಿ ಆರ್ಥಿಕತೆಯನ್ನು ಪರಿವರ್ತಿಸಲಿದೆ ಎಂದು ರೋಡ್ ಶೋ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ರೋಡ್ ಶೋನಲ್ಲಿ ದಾಖಲೆ ಸಂಖ್ಯೆಯ ಜನರು ಭಾಗವಹಿಸಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಜನತೆಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಕೃತಜ್ಞತೆ ಹೇಳಿರುವ ಪ್ರಧಾನಿ, ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಮುಳುಗಿ ಜನರನ್ನು ವಿಭಜಿಸುವ ಕಾಂಗ್ರೆಸ್‌ಗೆ ಜಿಲ್ಲೆಯ ಜನತೆ ಮತ ಹಾಕಲು ಸಾಧ್ಯವಿಲ್ಲ. ಕರ್ನಾಟಕದ ಕಾಂಗ್ರೆಸ್ ಸರಕಾರ ಗುಂಪುಗಾರಿಕೆಯಲ್ಲಿ ನಿರತವಾಗಿದ್ದು, ಸಾರ್ವಜನಿಕರ ಹಣವನ್ನು ಲೂಟಿ ಮಾಡಿ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
ನಮ್ಮ ಸಿದ್ಧಾಂತಕ್ಕೆ ಕರಾವಳಿ ಜನ ಬೆಂಬಲ
ದ.ಕ. ಜಿಲ್ಲೆಗೂ ಬಿಜೆಪಿ ಪಕ್ಷಕ್ಕೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ಜನತೆ ಹಲವು ವರ್ಷಗಳ ಕಾಲ ನಮ್ಮನ್ನು ಆಶೀರ್ವದಿಸಿದ್ದಾರೆ. ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಿಸುವ ನಮ್ಮ ಸಿದ್ಧಾಂತಕ್ಕೆ ಸದಾ ಬೆಂಬಲವಾಗಿ ನಿಂತಿದ್ದಾರೆ. ಕಳೆದ ಒಂದು ದಶಕದಲ್ಲಿ ನಮ್ಮ ಸರಕಾರ ದ.ಕ. ಜಿಲ್ಲೆಗೆ ಹಲವಾರು ಕೊಡುಗೆ ನೀಡಿದೆ. ಆರ್ಥಿಕ ಸುಧಾರಣೆಗಳ ಮೇಲಿನ ನಮ್ಮ ಒತ್ತು ಇಲ್ಲಿನ ಅನೇಕ ಜನರಿಗೆ ಪ್ರಯೋಜನವನ್ನು ನೀಡಿದೆ, ಅವರು ತಮ್ಮ ಉದ್ಯಮಶೀಲತೆಯ ಮನೋಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಇಲ್ಲಿನ ಪ್ರಮುಖ ಕಾಮಗಾರಿಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಕೊಚ್ಚಿ-ಮಂಗಳೂರು ಪೈಪ್‌ಲೈನ್ ಕೂಡ ಸೇರಿದೆ. ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣ, ರೈಲು ನಿಲ್ದಾಣ ಮತ್ತು ಬಂದರು ಸಂಬಂಧಿ ತ ಮೂಲಸೌಕರ್ಯಗಳನ್ನು ಇನ್ನಷ್ಟು ಆಧುನೀಕರಣಗೊಳಿಸಲಾಗುವುದು ಎಂದಿದ್ದಾರೆ. ನಮ್ಮ ಸರಕಾರದ ಮೂರನೇ ಅವ ಧಿಯಲ್ಲಿ ಶಿಕ್ಷಣಕ್ಕೆ ಸಂಬಂ ಧಿಸಿದ ಅಂಶಗಳನ್ನು ಸುಧಾರಿಸುವಲ್ಲಿ, ಗುಣಮಟ್ಟದ ಆರೋಗ್ಯ ರಕ್ಷಣೆಗೆ ಮತ್ತಷ್ಟು ಕಾರ್ಯನಿರ್ವಹಿಸುತ್ತೇವೆ. ನಾವು ನೀಲಿ ಕ್ರಾಂತಿ ಮೂಲಕ ಮೀನುಗಾರರಿಗೂ ಅನುಕೂಲ ಕಲ್ಪಿಸುತ್ತೇವೆ ಎಂದರು.
ಮೋದಿ ಟೈಂಲೈನ್
ಸಂ.7.03: ವಿಮಾನ
ನಿಲ್ದಾಣಕ್ಕೆ ಮೋದಿ ಆಗಮನ
7.13: ನಗರಕ್ಕೆ ಪ್ರಯಾಣ ಆರಂಭ
7.36: ಲೇಡಿಹಿಲ್‌ಗೆ ಆಗಮನ
7.40: ಶ್ರೀ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ, ರೋಡ್ ಶೋ ಆರಂಭ
8.00: ಲಾಲ್‌ಬಾಗ್ ಜಂಕ್ಷನ್ ರಸ್ತೆ ತಲುಪಿದ ರೋಡ್‌ಶೋ
8.08: ಬಲ್ಲಾಳ್ ಬಾಗ್‌ಗೆ
8.20: ಟಿಎಂಎ ಪೈ ಹಾಲ್‌ನ ಎದುರಿಗೆ
8.22: ಎಸ್‌ಡಿಎಂ ಲಾ ಕಾಲೇಜು
8.31: ಮಾನಸ ಟವರ್ಸ್
8.45: ರೋಡ್ ಶೋ ಅಂತ್ಯ
9.23: ವಿಮಾನ ನಿಲ್ದಾಣದಿಂದ ಕೊಚ್ಚಿನ್‌ಗೆ ಪಯಣ
ಸಾಮಾನ್ಯ ಕಾರ್ಯಕರ್ತರಿಗೆ ಒಲಿದ ಸ್ವಾಗತ ಅವಕಾಶ!
ಹದಿನೈದು ಮಂದಿ ಸಾಮಾನ್ಯ ಕಾರ್ಯಕರ್ತರೇ ಪ್ರಧಾನಿ ಮೋದಿ ಅವರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮನ ವೇಳೆ ಸ್ವಾಗತಿಸಿದ್ದು ವಿಶೇಷ. ಬಿಜೆಪಿ ಬೂತ್ ಅಧ್ಯಕ್ಷರು, ಊರಿನ ಪ್ರಮುಖರು, ಪಕ್ಷದ ಪದಾಧಿಕಾರಿಗಳು ಸೇರಿದ ತಂಡವನ್ನು ಇದಕ್ಕಾಗಿ ರಚಿಸಲಾಗಿತ್ತು. ಇದೇ ರೀತಿ ರೋಡ್‌ಶೋ ಆರಂಭ ಮತ್ತು ಮುಕ್ತಾಯ ಹಂತದಲ್ಲೂ ಬೂತ್ ಮಟ್ಟದ ಅಧ್ಯಕ್ಷರು, ವಿವಿಧ ಸಮುದಾಯದ ಪ್ರಮುಖರು ಮತ್ತಿತರರೇ ಮೋದಿ ಅವರನ್ನು ಶಕ್ತಿ ಕೇಂದ್ರದ ಪ್ರಮುಖ್, ಸಮಾಜ ಸೇವಕರು ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡರು.
ನಿಗದಿಗಿಂತ 1 ಕಿ.ಮೀ. ಹೆಚ್ಚುವರಿ ರೋಡ್ ಶೋ ನಡೆಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ಶೋ ಲೇಡಿಹಿಲ್‌ನಿಂದ ನವಭಾರತ ವೃತ್ತದ ವರೆಗೆ ನಿಗದಿಯಾಗಿದ್ದರೂ, ಅಲ್ಲಿಂದ ಕೆ.ಎಸ್.ರಾವ್ ರಸ್ತೆಯ ಪೂರ್ಣ ಬಿಜೆಪಿ ಕಾರ್ಯ ಕರ್ತರು ಹಾಗೂ ಅಭಿಮಾನಿಗಳು ನೆರೆದಿದ್ದ ಹಿನ್ನೆಲೆಯಲ್ಲಿ ಕಾರಿನ ಬಾಗಿಲು ತೆರೆದು ಪ್ರಧಾನಿ ಮೋದಿ ಅವರು ನಿಂತು ಮತ್ತೆ ರೋಡ್ ಶೋದಲ್ಲಿ ಭಾಗವಹಿಸಿದ್ದು ವಿಶೇಷ. ಈ ಮೂಲಕ ಮೋದಿ ಅವರು ಹೆಚ್ಚುವರಿಯಾಗಿ 1 ಕಿ.ಮೀ. ದೂರದವರೆಗೆ ರೋಡ್‌ಶೋದಲ್ಲಿ ಭಾಗವಹಿಸಿದಂತಾಗಿದೆ.
ರಾತ್ರಿ 8.45ಕ್ಕೆ ಮೋದಿ ರೋಡ್ ಶೋ ನವಭಾರತ್ ಸರ್ಕಲ್‌ಗೆ ಆಗಮಿಸಿತು. ಅಲ್ಲಿಯವರೆಗೆ ತೆರೆದ ವಾಹನದಲ್ಲಿ ಆಗಮಿಸಿದ ಮೋದಿ ಅವರು ನವಭಾರತ್ ಸರ್ಕಲ್ ಬಳಿಯಲ್ಲಿ ಕಾರಿನಿಂದಿಳಿದರು. ರೋಡ್ ಶೋ ಮುಕ್ತಾಯಗೊಂಡ ಕಾರಣ ಅಲ್ಲಿ ಈ ಮೊದಲೇ ಆಯ್ಕೆಯಾಗಿದ್ದ ಬಿಜೆಪಿಯ ಪ್ರಮುಖರು ಸಾಲಿನಲ್ಲಿ ನಿಂತು ಧನ್ಯವಾದ ಸಲ್ಲಿಸಿದರು. ಇದಾದ ಬಳಿಕ ಮೋದಿ ಅವರು ಸುತ್ತಲೂ ನೆರೆದಿದ್ದ ಜನಸಾ ಗರವನ್ನು ಕಂಡು ಒಂದೆರಡು ನಿಮಿಷ ರಸ್ತೆ ಯಲ್ಲೇ ನಿಂತು ಕೈಬೀಸಿ ಖುಷಿಪಟ್ಟರು. ಆ ವೇಳೆಗೆ ಜನರು “ಮೋದಿ ಮೋದಿ’ ಎಂಬ ಉದ್ಘಾರದೊಂದಿಗೆ ಸಂಭ್ರಮಿಸಿದರು.
ರೋಡ್ ಶೋ ಮುಕ್ತಾಯವಾದ ಹಿನ್ನೆಲೆಯಲ್ಲಿ ಬಳಿಕ ಅವರು ಕಾರನ್ನೇರಿ ವಿಮಾನ ನಿಲ್ದಾಣಕ್ಕೆ ತೆರಳುವವರಿದ್ದರು. ಆದರೆ, ನವಭಾರತ್ ಸರ್ಕಲ್‌ನಿಂದ ಆರಂಭ ವಾಗಿ ಕರ್ಣಾಟಕ ಬ್ಯಾಂಕ್ ಮುಂಭಾಗವಾಗಿ ಸಿಟಿಸೆಂಟರ್ ವ್ಯಾಪ್ತಿಯ ಲ್ಲೆಲ್ಲ ಜನಸಾಗರ ನೆರೆದಿದ್ದ ಹಿನ್ನೆಲೆಯಲ್ಲಿ ಮೋದಿ ಅವರು ಕಾರಿನಲ್ಲಿ ಕುಳಿತುಕೊಳ್ಳುವ ಬದಲು ಕಾರಿನ ಬಾಗಿಲು ತೆಗೆದು ನಿಂತುಕೊಂಡು ಜನರತ್ತ ಕೈ ಬೀಸುತ್ತಾ ಸಾಗಿದರು.
ಗೆದ್ದು ಬನ್ನಿ, ಮಾತಾಡೋಣ!
ಗೆದ್ದು ಬನ್ನಿ, ಬಳಿಕ ಸಿಕ್ಕಿ ಮಾತನಾಡೋಣ. ಇದು ರೋಡ್ ಶೋ ಮುಗಿದ ಬಳಿಕ ಪ್ರಧಾನಿ ಮೋದಿ ಅವರು ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಅವರಿಗೆ ಹೇಳಿದ ಮಾತು. ರೋಡ್ ಶೋ ಉದ್ದಕ್ಕೂ ಮೋದಿ ಅವರು ಹೆಚ್ಚೇನೂ ಮಾತನಾಡಿರಲಿಲ್ಲ, ಕೊನೆಯಲ್ಲಿ ರೋಡ್ ಶೋ ಮುಗಿಯುವ ಸಂದರ್ಭ ಚೌಟ ಅವರ ಬೆನ್ನು ತಟ್ಟಿ, ಗೆದ್ದು ಬನ್ನಿ ಬಳಿಕ ಮಾತನಾಡೋಣ ಎಂದು ಹೇಳಿ ತೆರಳಿದರು.
ಮಧ್ಯಾಹ್ನ ಬಳಿಕ ರಸ್ತೆ ಖಾಲಿ ಖಾಲಿ
ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಮಧ್ಯಾಹ್ನದ ಬಳಿಕ ನಗರದ ಪ್ರಮುಖ ರಸ್ತೆಗಳು ಖಾಲಿಯಾಗಿತ್ತು. ರೋಡ್ ಶೋ ಸಹಿತ ಸಮೀಪದ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿ, ಬದಲಿ ವ್ಯವಸ್ಥೆ ಮಾಡಲಾಗಿತ್ತು. ಸಂಜೆಯಾದಂತೆ ರೋಡ್ ಶೋ ನಡೆಯುವ ರಸ್ತೆಯುದ್ದಕ್ಕೂ ಸಾರ್ವಜನಿಕರು ಜಮಾಗೊಂಡಿದ್ದರು.
ದಾರಿಯುದ್ದಕ್ಕೂ ವಿದ್ಯುದ್ದೀಪ
ಪ್ರಧಾನಿ ಮೋದಿ ಅವರ ರೋಡ್ ಶೋ ದಾರಿ ಯುದ್ದಕ್ಕೂ ವಿದ್ಯುದ್ದೀಪಾಲಂಕಾರಗೊಳಿಸಲಾಗಿತ್ತು. ಕೆಲವೊಂದು ಖಾಸಗಿ ಕಟ್ಟಡದಲ್ಲೂ ಮಿನಿಯೇಚರ್ ಬಲ್ಬ್ ಕಾಣುತ್ತಿತ್ತು. ಲೇಸರ್ ಲೈಟ್‌ಗಳನ್ನು ಅಲ್ಲಲ್ಲಿ ಹಾಕಲಾಗಿದ್ದು, ಬಿಜೆಪಿಯ ತಾವರೆ ಕಂಗೊಳಿಸಿತು.
ಮಜ್ಜಿಗೆ, ನೀರಿಗೆ ಬೇಡಿಕೆ
ಬಿಸಿಲಿನ ತಾಪ ಹೆಚ್ಚಿದ್ದ ಹಿನ್ನೆಲೆಯಲ್ಲಿ ತಂಪು ಪಾನೀಯ, ಮಜ್ಜಿಗೆಗೆ ಬೇಡಿಕೆ ಇತ್ತು. ರೋಡ್ ಶೋಗೆ ಆಗಮಿಸುವವರಿಗೆ ನಗರದ ಹಲವು ಜಂಕ್ಷನ್‌ಗಳ ಸಹಿತ ರಸ್ತೆ ಬದಿಗಳಲ್ಲಿ ಮಜ್ಜಿಗೆ, ನೀರು, ಕಲ್ಲಂಗಡಿ ಜ್ಯೂಸ್‌ನ ವ್ಯವಸ್ಥೆ ಮಾಡಲಾಗಿತ್ತು.
ಟೋಪಿ, ಶಾಲ್, ಬಾವುಟ ಮಾರಾಟ
ನಗರದ ಅಲ್ಲಲ್ಲಿ ಬಿಜೆಪಿ ಧ್ವಜ, ಶಾಲು, ಟೋಪಿಗಳನ್ನು ಮಾರಾಟ ಮಾಡಲಾಗುತ್ತಿತ್ತು. ವಿಶೇಷವಾಗಿ ಮೋದಿ ಧರಿಸುವ ಶೈಲಿಯ ಕೇಸರಿ ವರ್ಣದ ಮುಂಡಾಸನ್ನು ಜನ ಖುಷಿಯಿಂದ ಧರಿಸುವುದು ಕಂಡುಬಂತು. ಮೋದಿಯ ಮುಖವರ್ಣಿಕೆಗಳು, ಬಿಜೆಪಿ ಚಿಹ್ನೆಯ ಕಟೌಟ್‌ಗಳೂ ರೋಡ್‌ಶೋ ಉದ್ದಕ್ಕೂ ಜನರ ಕೈಗಳಲ್ಲಿ ರಾರಾಜಿಸಿದವು.
ಮೋದಿ … ಮೋದಿ ಉದ್ಘೋಷ
ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ನವಭಾರತ ವೃತ್ತದವರೆಗೆ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಸೇರಿದ್ದರು. ದಾರಿಯುದ್ದಕ್ಕೂ “ಮೋದಿ .. ಮೋದಿ’, “ಹರ್‌ಹರ್ ಮೋದಿ ಘರ್‌ಘರ್ ಮೋದಿ’ “ಮತ್ತೂಮ್ಮೆ ಮೋದಿ’, “ಜೈ ಶ್ರೀರಾಮ್’ ಉದ್ಘೋಷ ಕೇಳಿಬಂತು
ಮೊಬೈಲ್‌ನಲ್ಲಿ ಲೈವ್ ವೀಕ್ಷಣೆಗೆ ವ್ಯವಸ್ಥೆ
ಪ್ರಧಾನಿ ಮೋದಿ ರೋಡ್ ಶೋ ಕಾರ್ಯ ಕ್ರಮವನ್ನು ಮೊಬೈಲ್ ಮುಖಾಂತರ ನೇರ ವೀಕ್ಷಣೆ ನಡೆಸಲು ವ್ಯವಸ್ಥೆ ಮಾಡಲಾಗಿತ್ತು. ಅನೇಕ ಮಂದಿ ಲೈವ್ ವೀಕ್ಷಿಸುತ್ತಿದ್ದ ದೃಶ್ಯ ಕಂಡುಬಂತು.
ವ್ಹೀಲ್‌ಚೇರ್‌ನಲ್ಲಿ ಬಂದರು
ಮಣ್ಣಗುಡ್ಡೆ ಬಳಿಯ ನಿವೃತ್ತ ಸೇನಾಧಿಕಾರಿ ಲೆ|ಕ| ಆರ್‌ಎಫ್ ಡಯಾಸ್ ಶೆಣೈ ಅವರ ಪತ್ನಿ 92 ವರ್ಷದ ಜೋಸೆಫೈನ್ ಡಯಾಸ್ ಅವರು ವ್ಹೀಲ್‌ಚೇರ್‌ನಲ್ಲಿ ಕುಳಿತು ನರೇಂದ್ರ ಮೋದಿ ರೋಡ್ ಶೋ ವೀಕ್ಷಿಸಿದರು. ಅವರ ಜತೆ 79 ವರ್ಷದ ಸೋದರಿ ಮರ್ಲಿನ್ ಕೂಡ ಜತೆಗಿದ್ದರು.
ಸಮಯಕ್ಕೆ ಮೊದಲೇ ಜನ ದಟ್ಟಣೆ
ಪ್ರಧಾನಿ ಮೋದಿ ಅವರ ರೋಡ್ ಶೋ ಸಂಜೆ 7.45ಕ್ಕೆ ನಿಗದಿಯಾಗಿತ್ತು. ಸಂಜೆ ಸುಮಾರು 4 ರ ಬಳಿಕ ವಿವಿಧ ಕಡೆಗಳಲ್ಲಿ, ಜಂಕ್ಷನ್ ಸಹಿತ ರಸ್ತೆಯು ದ್ದಕ್ಕೂ ಜನರ ಸೇರಲು ಆರಂಭಿಸಿದ್ದಾರೆ. ಜನ ಪ್ರವಾಹೋ ಪಾದಿಯಾಗಿ ಬರುವಾಗ ತೊಂದರೆ ಆಗಬಾರದು ಎಂದು ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime-follow up;ಇ.ಡಿ. ಅಧಿಕಾರಿಗಳಂತೆ ನಟಿಸಿ 30 ಲ.ರೂ. ದರೋಡೆ: 4 ತಂಡಗಳಿಂದ ತನಿಖೆ
Mangaluru: ದಿಢೀರ್ ಆಗಿ ಕಾಣಿಸಿಕೊಂಡ ನಟ ಯಶ್
ಬಡ ದಂಪತಿಗೆ ಮಾಜಿ ಮೇಯರ್ ಸುಧೀರ್ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ
Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ
Mangaluru ಧರ್ಮಪ್ರಾಂತ;ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Protest: ಆಶಾ ಕಾರ್ಯಕರ್ತೆಯರು ಪ್ರತಿಭಟಿಸದಂತೆ ಮನವೊಲಿಸುವ ಹೊಣೆ ಜಿಲ್ಲಾಧಿಕಾರಿಗಳಿಗೆ
Convention: ಮೊಗವೀರರ ಬೇಡಿಕೆ ಮುಂದಿನ ಬಜೆಟ್‌ನಲ್ಲಿ ಈಡೇರಿಸಲು ಬದ್ಧ: ಸಿದ್ದರಾಮಯ್ಯ
Kerala: ಬಾಲಕಿ ಮೇಲೆ ಅತ್ಯಾಚಾ*ರ: ಕೇರಳ ಯುವಕನಿಗೆ 87 ವರ್ಷ ಶಿಕ್ಷೆ
Kundapura: ಗೋಸಾಗಾಟ ತಡೆದ ಸಿಸಿಟಿವಿ ವೀಕ್ಷಣೆ
Horoscope: ಈ ರಾಶಿಯ ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.