![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jan 19, 2024, 1:32 AM IST
ಜ.17 ಹಾಗೂ 18 ರಂದು ಉಡುಪಿಯಲ್ಲಿ ನಡೆದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಉತ್ಸವ ಅದ್ದೂರಿಯಾಗಿ ನಡೆಯಿತು. ವೈಭವದ ಮೆರವಣಿಗೆಯನ್ನು ಹಾಗೂ ದರ್ಬಾರ್ ಸಮಾರಂಭವನ್ನು ಸಾವಿರಾರು ಮಂದಿ ಕಣ್ತುಂಬಿಸಿಕೊಂಡರು.
ಉಡುಪಿ: ಕರ್ನಾಟಕ ಸಹಿತ ದಕ್ಷಿಣ ಭಾರತ ಮತ್ತು ಉತ್ತರ ಪ್ರದೇಶ ಸಹಿತವಾಗಿ ಉತ್ತರ ಭಾರತದ ನಡುವಿನ ಧಾರ್ಮಿಕ ಆಚರಣೆಗಳ ಕೊಂಡಿಯಾಗಿ ಮಠಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಕೃಷಿ (ರಾಜ್ಯಖಾತೆ)ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಗುರುವಾರ ರಾಜಾಂಗಣದಲ್ಲಿ ನಡೆದ ಬೆಳಗ್ಗಿನ ಪರ್ಯಾಯ ದರ್ಬಾರ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉಡುಪಿಯ ಕೃಷ್ಣ ಉತ್ತರದ ದ್ವಾರಕೆಯಿಂದ ಬಂದದ್ದು. ಅಯೋಧ್ಯೆಯಲ್ಲಿ ರಾಮನ ಜತೆ ಹನುಮನಿದ್ದಾನೆ. ಹಾಗೆಯೇ ಉಡುಪಿ ಯಲ್ಲಿ ಕೃಷ್ಣನ ಜತೆಗೂ ಹನುಮನಿದ್ದಾನೆ ಎಂದರು. ಪುತ್ತಿಗೆ ಶ್ರೀಪಾದರು ಕಟ್ಟಳೆಗಳನ್ನು ದಾಟಿ ಉಡುಪಿ ಕೃಷ್ಣನ ಖ್ಯಾತಿಯನ್ನು ವಿದೇಶಕ್ಕೆ ಪಸರಿ ಸಿದರು ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಹಲವು ವರ್ಷದ ಅನಂತರ ಪರ್ಯಾಯದಲ್ಲಿ ಪಾಲ್ಗೊಂಡು ಧನ್ಯತೆಯ ಕ್ಷಣಗಳನ್ನು ಅನುಭವಿಸಿದ್ದೇನೆ. ಅಯೋಧ್ಯೆಯಲ್ಲಿ ಶ್ರೀ ರಾಮದೇವರ ಪ್ರಾಣಪ್ರತಿಷ್ಠೆಯ ಶುಭಾವಸರದಲ್ಲಿ ಪುತ್ತಿಗೆ ಶ್ರೀಪಾದರ ಪರ್ಯಾಯ ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಪರ್ಯಾಯ ನಾಡಹಬ್ಬ ಮಾತ್ರವಲ್ಲ ವಿಶ್ವದ ಹಬ್ಬ. ಪುತ್ತಿಗೆ ಶ್ರೀಪಾದರು ಲೋಕದೆಲ್ಲೆಡೆ ಧರ್ಮಪ್ರಚಾರ ಮಾಡುತ್ತಿದ್ದಾರೆ. ಉಡುಪಿಯ ಹಲವರು ಅನೇಕ ಕೊಡುಗೆ ನೀಡಿದ್ದಾರೆ ಎಂದರು.
ಶಾಸಕ ಗುರುರಾಜ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಭೋಜೇಗೌಡ, ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಕೆನಡಾದ ಶಾಸಕ ಹಾಗೂ ಮಾಜಿ ಆರೋಗ್ಯ ಸಚಿವ ಬೆನ್ವಾ ಬೋರ್ಕಿ, ಜಪಾನಿನ ರಿಶೋ ಕೋಸಿ ಕ್ಯಾಯ ಅಧ್ಯಕ್ಷೆ ರೆ| ಕೋಶೋ ನಿವಾನೋ, ಕರ್ಣಾಟಕ ಬ್ಯಾಂಕ್‌ನ ಇಡಿ ಶೇಖರ್ ರಾವ್, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಡಾ| ಎಚ್.ಎಸ್. ಬಲ್ಲಾಳ್ ಸ್ವಾಗತಿಸಿ, ಕಾರ್ಯಾಧ್ಯಕ್ಷ ಮಾಜಿ ಶಾಸಕ ಕೆ. ರಘುಪತಿ ಭಟ್ ಪ್ರಸ್ತಾವನೆಗೈದರು. ಡಾ| ಗೋಪಾಲಾಚಾರ್ಯ, ಯೋಗೀಂದ್ರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರೊ|ಎಂ.ಎಲ್.ಸಾಮಗ ನಿರ್ವಹಿಸಿದರು.
ಪುತ್ತಿಗೆ ಶ್ರೀಗಳ ‘ವಿಶ್ವ ಗೀತಾ ಪರ್ಯಾಯ’ದರ್ಬಾರ್: ವಿಶೇಷ ಫೋಟೋ ಗ್ಯಾಲರಿ – https://bit.ly/3SbJixY
ವಿವಿಧ ಕ್ಷೇತ್ರಗಳಿಂದ ಪ್ರಸಾದ
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಬಂದಿದ್ದ ಅರ್ಚಕರು ಅಲ್ಲಿನ ಪ್ರಸಾದದ ರೂಪದಲ್ಲಿ ಮುತ್ತುಗಳ ಅಭಿಷೇಕವನ್ನು ಶ್ರೀಪಾದರಿಗೆ ನೆರವೇರಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದ ಪರವಾಗಿ ಶ್ರೀಪಾದರನ್ನು ಪ್ರಸಾದ ನೀಡಿ ಗೌರವಿಸಿದರು. ತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನ, ಶ್ರೀರಂಗದ ರಂಗನಾಥ ಕ್ಷೇತ್ರ, ಪುರಿ ಜಗನ್ನಾಥ ದೇವಸ್ಥಾನ, ತಿರುವನಂತಪುರದ ಅನಂತ ಪದ್ಮನಾಭ ದೇವಸ್ಥಾನ, ದ್ವಾರಕ, ಮಧುರೈ ಮೀನಾಕ್ಷಿ ಹಾಗೂ ಸುಂದರೈ ದೇವಸ್ಥಾನ, ಮೈಸೂರು ಚಾಮುಂಡಿ ದೇವಿ, ನೀಲಾವರ ದೇವಸ್ಥಾನ, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನ, ಆನೇಗುಡ್ಡೆ ಸಿದ್ಧಿವಿನಾಯಕ ದೇವಸ್ಥಾನ, ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರ ಶೇಷ ವಸ್ತ್ರ ಪ್ರಸಾದ ಹೀಗೆ ದೇಶದ ವಿವಿಧ ಧಾರ್ಮಿಕ ಕ್ಷೇತ್ರಗಳಿಂದ ಶ್ರೀಪಾದರಿಗೆ ಪ್ರಸಾದ ಒಪ್ಪಿಸಲಾಯಿತು.
ಪುತ್ತಿಗೆ ಶ್ರೀಪಾದರು ಈರ್ವರನ್ನು ದರ್ಬಾರ್ ಸಭೆಯಲ್ಲಿ ಸಮ್ಮಾನಿಸಿದರು. ಇನ್ನೋರ್ವ ವಿದೇಶಿ ಅತಿಥಿ ಲುಕೀ ಡೊನ್ನೆಲ್ಲನ್ ಮಧ್ವಸರೋವರದಲ್ಲಿ ತಲೆಗೆ ನೀರು ಪ್ರೋಕ್ಷಿಸಿಕೊಂಡು ಸಂಭ್ರಮಿಸಿದರು.
ಪಶ್ಚಿಮಕ್ಕೆ ಪೂರ್ವದ ಕೃಷ್ಣ ಸಂದೇಶ: ಡಾ| ಹೆಗ್ಗಡೆ
ಉಡುಪಿ: ಪುತ್ತಿಗೆ ಸ್ವಾಮೀಜಿಯವರು ಇಸ್ಕಾನ್ ಸ್ಥಾಪಕ ಪ್ರಭುಪಾದರಂತೆ ಸಾಮಾನ್ಯರಾಗಿ ವಿದೇಶಗಳಿಗೆ ಹೋಗಿ ವಿಶ್ವ ಗೀತಾ ಪ್ರಚಾರದ ಮೂಲಕ ಭಾರತೀಯ ಸಂಸ್ಕೃತಿ, ಸಂಸ್ಕಾರ ಪಸರಿಸಲು ಕಾರಣರಾಗಿದ್ದಾರೆ. ವಿದೇಶೀಯರು ಭಾರತದಿಂದ ಕೃಷ್ಣ ಸಂದೇಶವನ್ನು ಹೊತ್ತೂಯ್ಯಲಿ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಗುರುವಾರ ಬೆಳಗ್ಗೆ ಪರ್ಯಾಯ ದರ್ಬಾರ್‌ನಲ್ಲಿ ಪಾಲ್ಗೊಂಡು ಗೌರವ ಸ್ವೀಕರಿಸಿದ ಅವರು, ವಿದೇಶಗಳಲ್ಲಿ ಧರ್ಮ ಪ್ರಸಾರ ಸಾಮಾನ್ಯ ಸಾಧನೆಯಲ್ಲ. ಅಲ್ಲಿ ಹಣ ಸಂಪಾದಿಸುವುದಕ್ಕಿಂತ ಸಾಲ ಮಾಡಿ ಮಂದಿರವನ್ನು ಕಟ್ಟುವ ಸವಾಲನ್ನು ಎದುರಿಸಬೇಕಾಗುತ್ತದೆ. ಪಾಶ್ಚಾತ್ಯರು ಭಾರತವನ್ನು ಹಾವಿನ ದೇಶ ಎನ್ನುತ್ತಿದ್ದರು. “ಬಡ ದೇಶ’ ಈಗ “ಬಡಾ ದೇಶ’ ಆಗಿದೆ ಎಂದರು. ಉಡುಪಿಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದ್ದು ಎರಡು ವರ್ಷಗಳ ಪರ್ಯಾಯ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಭಗವದ್ಗೀತೆ ಪೂರ್ತಿ ಕಂಠಪಾಠ ಹೇಳುವ ಬಾಲಕಿ
ಭಗವದ್ಗೀತೆಯ 700 ಶ್ಲೋಕಗಳನ್ನು ಕಂಠಪಾಠ ಹೇಳುವ ಮೂರೂ ವರೆ ವರ್ಷದ ಬಾಲಕಿ ಕೋಕಿಲಾ ವೇಮೂರಿ ಅವರಿಗೆಪುತ್ತಿಗೆ ಶ್ರೀಪಾದರು ಸಭೆಯಲ್ಲಿ ಕೋಕಿಲಾ ವೇಮೂರಿಗೆ ಚಿನ್ನದ ತುಳಸಿ ಮಣಿ ಬ್ರೇಸ್‌ಲೆಟ್ ನೀಡಿ ಆಶೀರ್ವದಿಸಿದರು.
ಕೋಕಿಲಾ ತಾಯಿ ಅವನಿ ಮೂಲತಃ ಆಂಧ್ರ ಪ್ರದೇಶದವರು. ಈಗ ಅಮೆರಿಕದಲ್ಲಿದ್ದಾರೆ. ಭಗವದ್ಗೀತೆ ಯನ್ನು ನಿರಂತರ ಪಠನೆ ಮಾಡುತ್ತಿದ್ದಾರೆ. ಮಗು ಗರ್ಭದಲ್ಲಿದ್ದಾಗಲೂ ಪಠನೆಯನ್ನು ನಿಲ್ಲಿಸಿರಲಿಲ್ಲ. “ಮಗು ಜನಿಸಿ ಎರಡೂವರೆ ವರ್ಷಕ್ಕೆ ವಿದೇಶದಲ್ಲಿಯೇ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯರ ಭಗವದ್ಗೀತೆ ತರಗತಿಗೆ ಹೋಗುತ್ತಿದ್ದೆವು. ನಿತ್ಯವೂ ಗೀತೆಯ ಶ್ಲೋಕಗಳನ್ನು ಕಲಿಸಿಕೊಡುತ್ತಿದ್ದರು. ಕೋಕಿಲಾ ಅದನ್ನು ನಿತ್ಯ ಪಠನೆ ಮಾಡತೊಡಗಿದಳು.ಇದೀಗ ಎಲ್ಲ ಶ್ಲೋಕಗಳನ್ನು ನಿರರ್ಗಳವಾಗಿ ಪಠನೆ ಮಾಡುತ್ತಾಳೆ’ ಎಂದು ಅವನಿ “ಉದಯವಾಣಿ’ಗೆ ತಿಳಿಸಿದರು.
ಸಂತರು ಸಮಾಜಕ್ಕೆ ಸೌಹಾರ್ದತೆಯ ಪಾಠ ಮಾಡಬೇಕು: ಖಾದರ್
ಉಡುಪಿ: ಸಂತರು, ಸ್ವಾಮೀಜಿಗಳು, ಧಾರ್ಮಿಕ ಮುಖಂಡರು ಸಮಾಜಕ್ಕೆ ಸೌಹಾರ್ದತೆಯ ಪಾಠ ಮಾಡಬೇಕು. ಸಮಾಜದಲ್ಲಿ ಏನೇ ತಪ್ಪು ನಡೆದರೂ ಅದನ್ನು ತಿದ್ದುವ ಮತ್ತು ಸಮಾಜವನ್ನು ಸರಿದಾರಿಗೆ ಕೊಂಡೊಯ್ಯಬೇಕು ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ದರ್ಬಾರ್ ಸಭೆಯಲ್ಲಿ ಮಾತನಾಡಿದ ಅವರು, ಧಾರ್ಮಿಕ, ಸಾಮಾಜಿಕ ಚಿಂತನೆಯ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಅಗತ್ಯವಿದೆ. ಭವಿಷ್ಯದ ಪೀಳಿಗೆಗೆ ಈ ಸಂಸ್ಕಾರ, ಪರಂಪರೆಗಳನ್ನು ವರ್ಗಾಯಿಸುವ ಕಾರ್ಯವೂ ಆಗಬೇಕು. ಶ್ರೀಕೃಷ್ಣ ಮಠವು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ವಿಷಯಗಳಲ್ಲಿ ದಿಕ್ಸೂಚಿ ನೀಡುವ ಸರ್ವ ಧರ್ಮದ ಶಕ್ತಿಕೇಂದ್ರ ಆಗಲಿ ಎಂದು ಆಶಿಸಿದರು.
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಮಾತನಾಡಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಉಡುಪಿಯ ಶ್ರೀಮಂತಿಕೆ ಇಡೀ ವಿಶ್ವಕ್ಕೇ ಮಾದರಿ. ಪುತ್ತಿಗೆ ಶ್ರೀಪಾದರು ವಿದೇಶಗಳಲ್ಲಿ ಶಾಖಾಮಠಗಳನ್ನು ಸ್ಥಾಪಿಸಿ, ವಿದೇಶಿಯರಿಗೆ ಭಾರತೀಯ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಪರ್ಯಾಯೋತ್ಸವ ನೋಡಿ ಬೆರಗಾದೆ. ಸಾಂಸ್ಕೃತಿಕ ಶ್ರೀಮಂತಿಕೆಯ ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳು ಮೈಸೂರು ದಸರಾವನ್ನು ವೈಭವ ನೆನಪಿಸಿತು. ಭಾರತ ಸಾಂಸ್ಕೃತಿಕವಾಗಿ ವಿಶ್ವಗುರು ಆಗುವ ಪಥದತ್ತ ಸಾಗುತ್ತಿದೆ ಎಂದು ಹೇಳಿದರು.
ಹಿಂದೂ ಧಾರ್ಮಿಕ ಆಚರಣೆಗೆ ವಿದೇಶಿಗರ ಮೆಚ್ಚುಗೆ
ಪುತ್ತಿಗೆ ಶ್ರೀಪಾದರ ಚತುರ್ಥ ಪರ್ಯಾಯಕ್ಕೆ ಆಗಮಿಸಿದ್ದ ಹಲವು ವಿದೇಶಿ ಗಣ್ಯರು ಹಿಂದೂ ಧಾರ್ಮಿಕ ಆಚರಣೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಪಾನಿನ ರಿಶೋ ಕೋಸಿ ಕ್ಯಾಯ ಅಧ್ಯಕ್ಷೆ ರೆ| ಕೋಶೋ ನಿವಾನೋ ಮಾತನಾಡಿ, ಹಿಂದೂ ಧಾರ್ಮಿಕ ಮೌಲ್ಯವು ಆ ಧರ್ಮಕ್ಕಷ್ಟೇ ಸೀಮಿತವಾಗಿರದೆ ಇಡೀ ಮಾನವ ಕುಲಕ್ಕೆ ಅವಶ್ಯವಾಗಿದೆ. ಪರ್ಯಾಯ ಉತ್ಸವದ ಧಾರ್ಮಿಕ ಮೌಲ್ಯವು ಭಕ್ತರ ಭಕ್ತಿಯಿಂದ ತಿಳಿಯುತ್ತದೆ. ಪುತ್ತಿಗೆ ಶ್ರೀಪಾದರು ಜಾಗತಿಕವಾಗಿ ಧಾರ್ಮಿಕ ಶಾಂತಿ ಸ್ಥಾಪನೆಯ ವಿಚಾರದಲ್ಲಿ ಬಹುದೊಡ್ಡ ಕಾರ್ಯ ಮಾಡುತ್ತಿದ್ದಾರೆ ಎಂದರು.
ಕೆನಡಾದ ಶಾಸಕ ಹಾಗೂ ಮಾಜಿ ಆರೋಗ್ಯ ಸಚಿವ ಬೆನ್ವಾ ಬೋರ್ಕಿ ಮಾತನಾಡಿ, ನಾನೊಬ್ಬ ಕ್ಯಾಥೋಲಿಕ್ ಕ್ರಿಶ್ಚಿಯನ್ ಆಗಿದ್ದು ಹಿಂದೂ ಧರ್ಮವನ್ನು ಬಹುವಾಗಿ ನಂಬುವೆ. ಈ ಹಿಂದೆ ಕಾಶಿ ವಿಶ್ವನಾಥ ದೇವಸ್ಥಾನದ ದರ್ಶನ ಪಡೆದಿದ್ದೆ. ಇದೀಗ ಉಡುಪಿಗೆ ಬಂದಿದ್ದೇನೆ. ಪರ್ಯಾಯ ಉತ್ಸವದ ಧಾರ್ಮಿಕ ಆಚರಣೆಗಳನ್ನು ಮತ್ತು ಸಾಂಸ್ಕೃತಿಕ ವೈಭವ ಕಂಡು ತುಂಬ ಖುಷಿ ಪಟ್ಟೆ. ಶ್ರೀಪಾದರು ಜಾಗತಿಕ ಧಾರ್ಮಿಕ ಶಾಂತಿ ಪ್ರತಿಪಾದನೆಯ ಜೀವಂತ ನಿದರ್ಶನ. ಅವರ ಕಾರ್ಯಗಳು ಜೀವನದಲ್ಲಿ ತುಂಬ ಪ್ರೇರಣೆ ನೀಡಿದೆ ಎಂದು ಹೇಳಿದರು.
ಪುತ್ತಿಗೆ ಶ್ರೀಗಳ ‘ವಿಶ್ವ ಗೀತಾ ಪರ್ಯಾಯ’ದರ್ಬಾರ್: ವಿಶೇಷ ಫೋಟೋ ಗ್ಯಾಲರಿ – https://bit.ly/3SbJixY
You seem to have an Ad Blocker on.
To continue reading, please turn it off or whitelist Udayavani.