ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ಮಳೆಗಾಲದ ಅನುಭವ
Team Udayavani, Jun 2, 2020, 5:25 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಮಳೆ ಸುರಿದಿದ್ದು, ಮಳೆಗಾಲ ಆರಂಭಕ್ಕೆ ಮುನ್ನುಡಿ ಬರೆದಿದೆ. ಆ ಮೂಲಕ, ವಾಡಿಕೆಯಂತೆ ಜೂ.1ರಂದೇ ಮುಂಗಾರು ಕೇರಳ ತೀರವನ್ನು ಪ್ರವೇಶಿಸುವುದರೊಂದಿಗೆ ಕರಾವಳಿಯಲ್ಲಿಯೂ ಮಳೆಗಾಲ ಪ್ರಾರಂಭದ ಮುನ್ಸೂಚನೆ ಕಾಣಿಸುತ್ತಿದೆ.
ಮಂಗಳೂರು ಸಹಿತ ಜಿಲ್ಲೆಯಾದ್ಯಂತ ಸೋಮವಾರ ನಸುಕಿನ ವೇಳೆಯಿಂದಲೇ ಜಿಟಿಜಿಟಿ ಮಳೆ ಸುರಿದಿದೆ. ಒಂದೆಡೆ ಮೋಡ ಕವಿದ ವಾತಾವರಣ; ಇನ್ನೊಂದೆಡೆ ತುಂತುರು ಮಳೆಯೊಂದಿಗೆ ಮಳೆಗಾಲದ ವಾತಾವರಣ ಕಂಡುಬಂದಿತ್ತು.
ಬೆಳಗ್ಗೆಯಿಂದಲೇ ಸುರಿದ ಮಳೆ ಯಿಂದಾಗಿ ದ್ವಿಚಕ್ರ ವಾಹನ ಸವಾರರಿಗೆ ಸ್ವಲ್ಪ ಮಟ್ಟಿಗೆ ಕಿರಿಕಿರಿಯುಂಟು ಮಾಡಿತ್ತು. ಕೆಲವೆಡೆ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರು ಪ್ರಯಾಸಪಡುವಂತಾಯಿತು. ಕೂಳೂರು, ನಂತೂರು, ಕಂಕನಾಡಿ, ಪಡೀಲು ಮುಂತಾದೆಡೆ ರಸ್ತೆಯಲ್ಲಿ ನೀರು ನಿಂತಿದ್ದುದು ಕಂಡು ಬಂತು.
ಇನ್ನು ಕೆಲವು ಮುಖ್ಯ ರಸ್ತೆಗಳಲ್ಲಿ ದುರಸ್ತಿ ಕೆಲಸ ನಡೆಯುತ್ತಿರುವುದರಿಂದ ಸಮಸ್ಯೆ ಉಂಟಾಯಿತು. ನಂತೂರು ಸಿಗ್ನಲ್ ಬಳಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ನಂತೂರಿನಿಂದ ಕುಲಶೇಖರ ಕಡೆಗೆ ತೆರಳುವ ಮತ್ತು ಕುಲಶೇಖರ, ಪಡೀಲು ಕಡೆಯಿಂದ ಬರುವ ವಾಹನಗಳಿಗೆ ಸಿಗ್ನಲ್ ಬಳಿ ಏಕಮುಖ ಸಂಚಾರದ ವ್ಯವಸ್ಥೆ ಮಾಡಿಕೊಡಲಾಗಿತ್ತು. ಸದಾ ವಾಹನ ದಟ್ಟಣೆಯಿಂದ ಕೂಡಿರುವ ಈ ರಸ್ತೆಯಲ್ಲಿ ಏಕಮುಖ ಸಂಚಾರದಿಂದಾಗಿ ವಾಹನ ಸವಾರರು ಗಂಟೆಗಟ್ಟಲೆ ಕಾಯಬೇಕಾಯಿತು. ಕೂಳೂರು ಸೇತುವೆಯಿಂದ ಮುಂದಕ್ಕೆ ಮಂಗಳೂರು ಕಡೆಗೆ ಸಂಪರ್ಕ ರಸ್ತೆಯ ಕಾಂಕ್ರೀಟ್ ಕಾಮಗಾರಿ ಪ್ರಗತಿಯಲ್ಲಿದ್ದು, ಅಲ್ಲಿ ಸೋಮವಾರ ಬೆಳಗ್ಗೆ ಸುರಿದ ಮಳೆಯಿಂದಾಗಿ ನೀರು ನಿಂತು ಸಂಚಾರ ವ್ಯತ್ಯಯವಾಯಿತು.
ಬಂಟ್ವಾಳ: ಸಾಧಾರಣ ಮಳೆ
ಬಂಟ್ವಾಳ: ಜೂನ್ ತಿಂಗಳ ಆರಂಭದಲ್ಲೇ ಮಳೆಗಾಲದ ಲಕ್ಷಣಗಳು ಕಂಡುಬಂದಿದ್ದು, ರವಿವಾರ ರಾತ್ರಿಯಿಂದಲೇ ಮಳೆ ಆರಂಭಗೊಂಡಿತ್ತು. ಸೋಮವಾರ ದಿನವಿಡೀ ಬಿಟ್ಟುಬಿಟ್ಟು ಮಳೆಯಾಗಿದೆ.
ಲಾಕ್‌ಡೌನ್ ಸಡಿಲಿಕೆ ಬಳಿಕ ಸೋಮವಾರ ಹೆಚ್ಚಿನ ಜನಸಂಚಾರ ಕಂಡುಬಂದಿದ್ದು, ಮಳೆಯ ಕಾರಣದಿಂದ ಜನ ಕೊಡೆ ಹಿಡಿದು ಸಾಗುವ ದೃಶ್ಯ ಕಂಡುಬಂತು.
ಬೆಳ್ತಂಗಡಿ: ಉತ್ತಮ ಮಳೆ
ಬೆಳ್ತಂಗಡಿ: ತಾಲೂಕಿನಾದ್ಯಂತ ಸೋಮವಾರವು ಉತ್ತಮ ಮಳೆ ಸುರಿದಿದೆ.ಮುಂಜಾನೆಯಿಂದಲೆ ಮೋಡಕವಿದ ವಾತಾವರದಿಂದ ಕೂಡಿದ್ದು, ಬೆಳ್ತಂಗಡಿ, ಧರ್ಮಸ್ಥಳ, ಕೊಯ್ಯೂರು, ದಿಡುಪೆ, ಮಿತ್ತಬಾಗಿಲು, ಕಡಿರುದ್ಯಾವರ, ಕಲ್ಮಂಜ, ಮುಂಡಾಜೆ, ಬರಾಯ ಕನ್ಯಾಡಿ, ನೆರಿಯಾ, ಚಾರ್ಮಾಡಿ ಮುಂತಾದೆಡೆ ಉತ್ತಮ ಮಳೆಯಾಗಿದೆ.
ಯಾವುದೇ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ. ರವಿವಾರ ಸಂಜೆ ಸುರಿದ ಮಳೆಗೆ ಮಲವಂತಿಗೆ ಗ್ರಾಮದ ಕರಿಯಾಲು ಮಹೇಶ್ ಗೌಡ ಅವರ ತೋಟಕ್ಕೆ ನದಿ ನೀರು ನುಗ್ಗಿ 60ಕ್ಕೂ ಅಧಿಕ ಅಡಿಕೆ ಸಸಿಗಳಿಗೆ ಹಾನಿಯಾಗಿದೆ.
ಸುಳ್ಯ: ಸಾಧಾರಣ ಮಳೆ
ಸುಳ್ಯ: ತಾಲೂಕಿನೆಲ್ಲೆಡೆ ಬೆಳಗ್ಗೆ ಹಾಗೂ ಸಂಜೆ ವೇಳೆ ಸಾಧಾರಣ ಮಳೆಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣ ಕಂಡು ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.