ಮಂಕಿಪಾಕ್ಸ್ ಹಾವಳಿ ಆರಂಭಿಸಿರುವ ವೈರಾಣು ಕಾಯಿಲೆ
Team Udayavani, Jul 24, 2022, 10:40 AM IST
ಮಂಕಿಪಾಕ್ಸ್ ಎಂಬ ವೈರಾಣು ಸಾಂಕ್ರಾಮಿಕ ಕಾಯಿಲೆ ಈಗ ಜಾಗತಿಕವಾಗಿ ಹಬ್ಬುತ್ತಿದ್ದು, ಭಾರತದಲ್ಲಿ 2022ರ ಜುಲೈ 14ರಂದು ಮೊದಲ ಪ್ರಕರಣವನ್ನು ಪ್ರಯೋಗಾಲಯ ಮೂಲಕ ದೃಢಪಡಿಸಲಾಯಿತು. ಮಧ್ಯಪ್ರಾಚ್ಯ ದೇಶದಿಂದ ಕೇರಳಕ್ಕೆ ಜುಲೈ 11ರಂದು ಆಗಮಿಸಿದ್ದ 31ವರ್ಷದ ಯುವಕನಲ್ಲಿ ಮಂಕಿಪಾಕ್ಸ್ ರೋಗದ ಲಕ್ಷಣಗಳಿದ್ದು, ಅನಂತರ ಈ ವೈರಾಣು ಸೋಂಕು ದೃಢಪಟ್ಟಿತು.
ಇದಾದ ಬಳಿಕ ದುಬಾೖಯಿಂದ ಮಂಗಳೂರಿನ ಮೂಲಕ ಕೇರಳಕ್ಕೆ ಆಗಮಿಸಿದ್ದ ಇನ್ನೊಬ್ಬನು ಕೂಡ ಮಂಕಿಪಾಕ್ಸ್ ರೋಗಕ್ಕೆ ತುತ್ತಾಗಿರುವುದು ಜುಲೈ 18ರಂದು ಖಚಿತವಾಯಿತು. ಜು. 22ರಂದು ಕೇರಳದಲ್ಲಿ ಈ ರೋಗದ ಮೂರನೇ ಪ್ರಕರಣ ದೃಢಪಟ್ಟಿದೆ. ಮಂಕಿಪಾಕ್ಸ್ ಕಾಯಿಲೆಯು ಪಶ್ಚಿಮ ಮತ್ತು ಮಧ್ಯ ಆಫ್ರಿಕದ ದೇಶಗಳಲ್ಲಿ ಒಂದು ಸ್ಥಳೀಯ ಸಾಂಕ್ರಾಮಿಕವಾಗಿದ್ದು, ಅದಕ್ಕೂ ಪ್ರಸ್ತುತ ಯುರೋಪ್‌ನಿಂದ ವರದಿಯಾದ ಮಂಕಿಪಾಕ್ಸ್ ಪ್ರಸರಣದ ಸರಪಳಿಗಳಿಗೂ ಸೋಂಕು ಶಾಸ್ತ್ರೀಯ ಸಂಬಂಧಗಳು ಇಲ್ಲವಾದ್ದರಿಂದ ಈ ಕಾಯಿಲೆ ಭಾರತಕ್ಕೂ ಹಬ್ಬುವುದು ಮತ್ತು ಇಲ್ಲಿ ಪ್ರಸಾರವಾಗುವುದನ್ನು ನಿರೀಕ್ಷಿಸಲಾಗಿತ್ತು. ಮಂಕಿಪಾಕ್ಸ್ ಹಾವಳಿ ಆರಂಭಿಸಿರುವ ಮಂಕಿಪಾಕ್ಸ್ ಹಾವಳಿಯ ಪ್ರಸ್ತುತ ಈ ಪರಿಸ್ಥಿತಿಯು ಯುರೋಪ್ ಮಾತ್ರವಲ್ಲದೆ ಮಂಕಿಪಾಕ್ಸ್ ಸ್ಥಳೀಯ ಸಾಂಕ್ರಾಮಿಕವಲ್ಲದ ಇನ್ನೂ ಅನೇಕ ದೇಶಗಳನ್ನು ಬಾಧಿಸುತ್ತಿದೆ; ಅಂಥ ದೇಶಗಳ ಸಾಲಿನಲ್ಲಿ ಈಗ ಭಾರತವೂ ಸೇರಿಕೊಂಡಿದೆ. ಮಂಕಿಪಾಕ್ಸ್ ಕಾಯಿಲೆಯ ಬಗ್ಗೆ ಪ್ರಸ್ತುತ ದೇಶದಲ್ಲಿ ಎಚ್ಚರಿಕೆಯ ಕರೆಘಂಟೆ ಬಾರಿಸುತ್ತಿರುವ ಈ ವೇಳೆಯಲ್ಲಿ ಈ ವೈರಾಣು ಕಾಯಿಲೆಯ ಬಗ್ಗೆ ಹೆಚ್ಚು ತಿಳಿದುಕೊಂಡು ಜಾಗೃತರಾಗಿರುವುದು ಉತ್ತಮ.
ಮಂಕಿಪಾಕ್ಸ್ ಒಂದು ಪ್ರಾಣಿಜನ್ಯ ವೈರಾಣು ಕಾಯಿಲೆ. ಅಂದರೆ ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಪ್ರಸಾರವಾಗಿ ಉಂಟಾದ ರೋಗ. ಬಹಳ ಹಿಂದೆ ಸಿಡುಬು ರೋಗ ಇದ್ದ ಸಂದರ್ಭದಲ್ಲಿ ಅದಕ್ಕೆ ತುತ್ತಾದ ರೋಗಿಗಳಲ್ಲಿ ಕಂಡುಬರುತ್ತಿದ್ದ ಲಕ್ಷಣಗಳನ್ನು ಮಂಕಿಪಾಕ್ಸ್ ರೋಗ ಲಕ್ಷಣಗಳು ಹೋಲುತ್ತವೆ. ಆದರೆ ವೈದ್ಯಕೀಯವಾಗಿ ಈ ಲಕ್ಷಣಗಳು ಸಿಡುಬಿನಷ್ಟು ತೀವ್ರತರವಾಗಿರುವುದಿಲ್ಲ. 1958ರಲ್ಲಿ ಡೆನ್ಮಾರ್ಕ್‌ನ ಪ್ರಯೋಗಾಲಯವೊಂದರಲ್ಲಿ ಮಂಗಗಳಲ್ಲಿ ಈ ವೈರಾಣುಗಳನ್ನು ಪತ್ತೆ ಮಾಡಿದ್ದರಿಂದಾಗಿ ಮಂಕಿಪಾಕ್ಸ್ ಎಂಬ ಹೆಸರನ್ನು ನೀಡಲಾಗಿದೆ. 1970ರಲ್ಲಿ ಕಾಂಗೋ ರಿಪಬ್ಲಿಕ್‌ನ ಒಂದು ಮಗುವಿನಲ್ಲಿ ಈ ಸೋಂಕು ಪತ್ತೆಯಾದದ್ದು ಮನುಷ್ಯರಲ್ಲಿ ದಾಖಲಾದ ಮೊದಲ ಪ್ರಕರಣ.
ಮಂಕಿಪಾಕ್ಸ್ ಮನುಷ್ಯರಿಂದ ಮನುಷ್ಯರಿಗೆ ಪ್ರಸಾರವಾಗುವುದು ಸೋಂಕು ಪೀಡಿತನ ಶ್ವಾಸಕೋಶದಿಂದ ಹೊರಬೀಳುವ ದೊಡ್ಡಗಾತ್ರದ ಹನಿಬಿಂದುಗಳ ಮೂಲಕ; ಹೀಗಾಗಿ ಇದಕ್ಕೆ ದೀರ್ಘಕಾಲಿಕ ನಿಕಟ ಸಂಪರ್ಕ ಬೇಕು. ಸೋಂಕು ಪೀಡಿತನ ದೇಹ ದ್ರವಗಳು, ಗಾಯಗಳ ಜತೆಗೆ ಸಂಪರ್ಕ ಹೊಂದಿದ ಬಟ್ಟೆಬರೆ, ಹಾಸಿಗೆ ವಸ್ತ್ರ ಇತ್ಯಾದಿಗಳ ಮೂಲಕವೂ ಸೋಂಕು ಪ್ರಸಾರವಾಗಬಲ್ಲುದು.
ಮಂಕಿಪಾಕ್ಸ್ ಒಬ್ಬರಿಂದ ಒಬ್ಬರಿಗೆ ಇತರ ರೀತಿಗಳಲ್ಲಿ ಕೂಡ ಹರಡಬಲ್ಲದಾದ್ದರಿಂದ ತಾಂತ್ರಿಕವಾಗಿ ಇದನ್ನು ಲೈಂಗಿಕವಾಗಿ ಹರಡುವ ಸೋಂಕುರೋಗ (ಎಸ್‌ಟಿಐ) ಎಂಬುದಾಗಿ ಪರಿಗಣಿಸಲಾಗಿಲ್ಲ. ಆದರೂ ಮಂಕಿಪಾಕ್ಸ್ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯು ಲೈಂಗಿಕ ಕ್ರಿಯೆಯ ವೇಳೆ ಆರೋಗ್ಯವಂತ ವ್ಯಕ್ತಿಗೆ ಅದನ್ನು ಪ್ರಸಾರ ಮಾಡಬಲ್ಲ.
2022ರಲ್ಲಿ ಉಂಟಾಗಿರುವ ಮಂಕಿಪಾಕ್ಸ್ ಹಾವಳಿಯಲ್ಲಿ ವರದಿಯಾಗಿರುವ ಬಹುತೇಕ ಪ್ರಕರಣಗಳು ಲೈಂಗಿಕವಾಗಿ ಪ್ರಸಾರವಾದಂಥವು; ಅದರಲ್ಲೂ ಪುರುಷ-ಪುರುಷ ಲೈಂಗಿಕ ಸಂಪರ್ಕ (ಎಂಎಸ್‌ಎಂ)ದಿಂದ ಹರಡಿದಂಥವು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ. ಮಂಕಿಪಾಕ್ಸ್ ಸೋಂಕುಪೀಡಿತ ಪ್ರಾಣಿಗಳ ಕಡಿತ ಅಥವಾ ಅವುಗಳು ಮಾಡುವ ಗೀರುಗಾಯಗಳ ಮೂಲಕ ಸೋಂಕನ್ನು ಪ್ರಸಾರ ಮಾಡಬಲ್ಲವು.
ಮಂಕಿಪಾಕ್ಸ್ ಕಾಯಿಲೆಯು ತಾನೇ ತಾನಾಗಿ ಗುಣ ಹೊಂದುವಂಥದ್ದು, ಲಕ್ಷಣಗಳು 2ರಿಂದ 4 ವಾರಗಳ ಕಾಲ ಇರುತ್ತವೆ. ರೋಗ ಉಲ್ಬಣ ಸ್ಥಿತಿಯು ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತಿದ್ದು, ವೈರಾಣು ತೀವ್ರತೆ, ವೈಯಕ್ತಿಕ ಆರೋಗ್ಯದ ಸ್ಥಿತಿಗತಿ ಮತ್ತು ಸಂಕೀರ್ಣ ಆರೋಗ್ಯ ಸಮಸ್ಯೆಗಳ ಸ್ವಭಾವವನ್ನು ಅವಲಂಬಿಸಿರುತ್ತದೆ. ಈ ಕಾಯಿಲೆಯ ಲಕ್ಷಣರಹಿತ ಸ್ಥಿತಿಗತಿ, ವ್ಯಾಪ್ತಿಯ ಬಗ್ಗೆ ಇನ್ನೂ ಸರಿಯಾದ ಮಾಹಿತಿಗಳಿಲ್ಲ. ಸೋಂಕುಪೀಡಿತರ ಮರಣ ಪ್ರಮಾಣವು ಶೇ. 0ಯಿಂದ ಶೇ. 11ರ ವರೆಗಿರುತ್ತದೆ.
ಸೋಂಕಿಗೆ ತುತ್ತಾದ ಬಳಿಕ ರೋಗ ಬೆಳವಣಿಗೆಯ ಹಂತದಲ್ಲಿ ಜ್ವರ, ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು, ತಲೆನೋವು, ಸ್ನಾಯುನೋವು, ಚಳಿ, ಗಂಟಲು ನೋವಿನಂತಹ ಅನಿರ್ದಿಷ್ಟ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜ್ವರ ಆರಂಭವಾದ 1ರಿಂದ 3 ದಿನಗಳ ಅವಧಿಯಲ್ಲಿ ಚರ್ಮದಲ್ಲಿ ಗುಳ್ಳೆಗಳು ಮೂಡುತ್ತವೆ. ಗುಳ್ಳೆಗಳು ಹೆಚ್ಚಾಗಿ ಮುಖ, ಕೈಕಾಲುಗಳ ಮೇಲೆಯೇ ಕಂಡುಬರುತ್ತವೆ. ಈ ಗುಳ್ಳೆಗಳು ಚರ್ಮದ ಆಳದಿಂದ ಮೂಡಿರುವಂಥವು, ದುಂಡಾಗಿರುತ್ತವೆ ಮತ್ತು ತುರಿಕೆಯನ್ನು ಹೊಂದಿದ್ದು ಗುಣಮುಖ ಹಂತದವರೆಗೆ ನೋವಿನಿಂದ ಕೂಡಿರುತ್ತವೆ. ಈ ಗುಳ್ಳೆಗಳು ನಿಧಾನವಾಗಿ ಮೂಡಿ 2ರಿಂದ 4 ವಾರಗಳ ಕಾಲ ಇರುತ್ತವೆ. ದೇಹದಲ್ಲಿ ಗುಳ್ಳೆಗಳನ್ನು ಮೂಡಿಸುವ ಕಾಯಿಲೆಗಳಾದ ಸಿತಾಳೆ ಸಿಡುಬು (ಚಿಕನ್‌ಪಾಕ್ಸ್), ಸರ್ಪಸುತ್ತು (ಡಿಸೆಮಿನೇಟೆಡ್ ಹರ್ಪಿಸ್ ಜೋಸ್ಟರ್), ದಡಾರ (ಮೀಸಲ್ಸ್), ಹುಣ್ಣು (ಕಾನ್ ಕ್ರಾಯ್ಡ್), ಸೆಕಂಡರಿ ಸಿಫಿಲಿಸ್, ಕಾಲುಬಾಯಿ ರೋಗ (ಹ್ಯಾಂಡ್ ಫೂಟ್ ಆಂಡ್ ಮೌತ್ ಡಿಸೀಸ್), ಇನ್‌ಫೆಕ್ಷಿಯಸ್ ಮೊನೊನ್ಯೂಕ್ಲಿಯೋಸಿಸ್ ಮತ್ತು ಮೊಲೆಸ್ಕಮ್ ಕಂಟೇಜಿಯಮ್ ನಂತಹ ಕಾಯಿಲೆಗಳಿಂದ ಮಂಕಿಪಾಕ್ಸ್ ಪ್ರಕರಣಗಳನ್ನು ಪ್ರತ್ಯೇಕಿಸಿ ಗುರುತಿಸುವುದು ವೈದ್ಯರೊಬ್ಬರಿಗೆ ಬಹಳ ಮುಖ್ಯವಾಗಿರುತ್ತದೆ.
-ಡಾ| ಅಮೃತಾ ಪಟ್ಟನಾಯಕ್
ವೈರಾಲಜಿಸ್ಟ್, ಅಸಿಸ್ಟೆಂಟ್ ಪ್ರೊಫೆಸರ್
ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ
ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.