![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Oct 3, 2021, 6:40 AM IST
ಮಂಗಳೂರು: ಮುಂಗಾರು ಋತು ಪೂರ್ಣಗೊಂಡಿದ್ದು, ಕರಾವಳಿ ಮತ್ತು ಮಲೆನಾಡಿನ ಎಲ್ಲ ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಇದರೊಂದಿಗೆ ಕಳೆದ ಮೂರು ವರ್ಷಗಳ ಬಳಿಕ ಕರಾವಳಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ಈ ಬಾರಿ ರಾಜ್ಯ ಕರಾವಳಿ ಭಾಗಕ್ಕೆ ಜೂನ್ 4ರಂದು ಮುಂಗಾರು ಮಾರುತ ಅಪ್ಪಳಿಸಿತ್ತು. ಬಳಿಕ ಒಂದು ವಾರ ಕಾಲ ಉತ್ತಮ ಮಳೆಯಾಗಿ ಮುಂಗಾರು ಕ್ಷೀಣಿಸಿತ್ತು. ಬಳಿಕ ಆಗಾಗ ಮಳೆಯಾಗಿತ್ತೇ ವಿನಾ ದೊಡ್ಡ ಪ್ರಮಾಣದಲ್ಲಿ ಸುರಿದಿಲ್ಲ. ಇದೇ ಕಾರಣಕ್ಕೆ ಸೆಪ್ಟಂಬರ್ ಕೊನೆಗೆ ಮುಂಗಾರು ಪೂರ್ಣಗೊಳ್ಳುವ ವೇಳೆಗೆ ರಾಜ್ಯ ಕರಾವಳಿಯಲ್ಲಿ ಶೇ. 13 ಮತ್ತು ಮಲೆನಾಡಿನಲ್ಲಿ ಶೇ. 18ರಷ್ಟು ಮಳೆ ಕೊರತೆ ದಾಖಲಾಗಿದೆ.
3 ವರ್ಷ ಹೆಚ್ಚು ಮಳೆಯಾಗಿತ್ತು
ಕರಾವಳಿ, ಮಲೆನಾಡು ಅಂದರೆ ಮುಂಗಾರಿನಲ್ಲಿ ಹೆಚ್ಚಿನ ಮಳೆ ಸಾಮಾನ್ಯ. ಕಳೆದ ಮೂರು ವರ್ಷಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯೂ ಸುದಿತ್ತು. ಕರಾವಳಿಲ್ಲಿ 2018ರಲ್ಲಿ ಶೇ. 0, 2019ರಲ್ಲಿ ಶೇ. 20 ಮತ್ತು 2020ರಲ್ಲಿ ಶೇ. 12ರಷ್ಟು ಮಳೆ ಪ್ರಮಾಣ ಏರಿಕೆ ಕಂಡಿತ್ತು. ಈ ಬಾರಿ ಶೇ. 13ರಷ್ಟು ಮಳೆ ಕೊರತೆಯಾಗಿದೆ. ಮಲೆನಾಡಿನಲ್ಲಿ 2018ರಲ್ಲಿ ಶೇ.19, 2019ರಲ್ಲಿ ಶೇ. 18ರಷ್ಟು ಮಳೆ ಹೆಚ್ಚಳವಾಗಿತ್ತು. 2020ರಲ್ಲಿ ಶೇ. 7ರಷ್ಟು ಮಳೆ ಕೊರತೆಯಾಗಿದ್ದು, ಈ ಬಾರಿ ಶೇ. 18ರಷ್ಟು ಮಳೆ ಕಡಿಮೆ ಸುರಿದಿದೆ.
ಇದನ್ನೂ ಓದಿ:ಕಾಂಗ್ರೆಸ್ ಸೋಲಿಸಲು ಜೆಡಿಎಸ್‌ನಿಂದ ಮುಸ್ಲಿಂ ಅಭ್ಯರ್ಥಿ: ಸಿದ್ದು
ಈ ಬಾರಿಯ ಮುಂಗಾರು ಅವಧಿಯಲ್ಲಿ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 27, ಉಡುಪಿ ಜಿಲ್ಲೆಯಲ್ಲಿ ಶೇ. 14 ಮತ್ತು ಉತ್ತರ ಕನ್ನಡದಲ್ಲಿ ಶೇ. 4ರಷ್ಟು ಮಳೆ ಕೊರತೆಯಾಗಿದೆ. ಮಲೆನಾಡು ವಿಭಾಗದ ಶಿವಮೊಗ್ಗ ಜಿಲ್ಲೆಯಲ್ಲಿ ಶೇ. 15, ಹಾಸನದಲ್ಲಿ ಶೇ. 16, ಚಿಕ್ಕಮಗಳೂರಿನಲ್ಲಿ ಶೇ. 18, ಕೊಡಗಿನಲ್ಲಿ ಶೇ. 23ರಷ್ಟು ಮಳೆ ಕೊರತೆ ಉಂಟಾಗಿದೆ. ಒಟ್ಟಾರೆ ಮಲೆನಾಡಿನಲ್ಲಿ ಶೇ. 18 ಮತ್ತು ಕರಾವಳಿ ಭಾಗದಲ್ಲಿ ಶೇ. 13ರಷ್ಟು ಮಳೆ ಕೊರತೆಯಾಗಿದೆ.
ಹಿಂಗಾರಿನ ಮೇಲೆ ನಿರೀಕ್ಷೆ
ಹಿಂಗಾರು ಆರಂಭವಾಗಿದ್ದು, ಈ ಬಾರಿಯ ಹಿಂಗಾರು ವೇಳೆ ಯಾವ ಪ್ರಮಾಣದಲ್ಲಿ ಮಳೆಯಾಗಬಹುದು ಎಂಬ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಕೆಲವೇ ದಿನಗಳಲ್ಲಿ ಲೆಕ್ಕಾಚಾರ ನೀಡಲಿದೆ. ಕರಾವಳಿ ಭಾಗದಲ್ಲಿ ಕಳೆದ ಎರಡು ವರ್ಷಗಳಲ್ಲಿ ಉತ್ತಮ ಹಿಂಗಾರು ಮಳೆ ಸುರಿದಿತ್ತು. ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್ ಅಂತ್ಯದವರೆಗೆ 259 ಮಿ.ಮೀ. ವಾಡಿಕೆ ಮಳೆ ಸುರಿಯಬೇಕು. ಕರಾವಳಿಯಲ್ಲಿ 2019ರಲ್ಲಿ ಶೇ. 124 ಮತ್ತು 2020ರಲ್ಲಿ ಶೇ. 28ರಷ್ಟು ಹೆಚ್ಚು ಮಳೆಯಾಗಿತ್ತು. ಈ ಬಾರಿ ಮುಂಗಾರು ಪೂರ್ಣಗೊಂಡ ಬಳಿಕ ಸದ್ಯ ಉತ್ತಮ ಮಳೆ ಸುರಿಯುತ್ತಿದ್ದು, ಹಿಂಗಾರು ಕೂಡ ಉತ್ತಮವಾಗಿರಬಹುದು ಎಂಬ ನಿರೀಕ್ಷೆ ಇದೆ.
ಕರಾವಳಿ ಭಾಗದಲ್ಲಿ ಈ ಬಾರಿ ನಿರೀಕ್ಷಿತ ಮುಂಗಾರು ಮಳೆ ಸುರಿದಿಲ್ಲ. ಮುಂಗಾರು ಆರಂಭದಲ್ಲೇ ಕ್ಷೀಣಿಸಿ ಮತ್ತೆ ಚುರುಕುಗೊಂಡಿತ್ತು. ಬಳಿಕ ಮಳೆ ಮೋಡಗಳು ಬೇರೆಡೆ ಚಲಿಸಿದ್ದರಿಂದ ಮುಂಗಾರು ಕ್ಷೀಣಿಸಿತ್ತು. ಪರಿಣಾಮ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಚಂಡಮಾರುತ ಪರಿಣಾಮ ಬೀರಿದರೆ ಹಿಂಗಾರು ವೇಳೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
– ಸುನಿಲ್ ಗವಾಸ್ಕರ್, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ
You seem to have an Ad Blocker on.
To continue reading, please turn it off or whitelist Udayavani.