ಅಂಜಿನಾದ್ರಿ ಅಭಿವೃದ್ಧಿಗೆ ಬಹುರೂಪಿ ಪ್ಲ್ಯಾನ್
300 ಕೋಟಿ ರೂ. ನಡಿ ಅಭಿವೃದ್ಧಿಗೆ ಪ್ರಸ್ತಾವನೆ
Team Udayavani, Jun 10, 2022, 3:00 PM IST
ಕೊಪ್ಪಳ: ಅಂತಾರಾಷ್ಟ್ರೀಯ ಪ್ರಸಿದ್ಧಿ ಪಡೆದ ಅಂಜಿನಾದ್ರಿಯ ಅಭಿವೃದ್ಧಿಗಾಗಿ ಜಿಲ್ಲಾಡಳಿತವು ಬಹುರೂಪಿ ಯೋಜನೆ ರೂಪಿಸಿದ್ದು, ಈಗಾಗಲೇ ಸರ್ಕಾರಕ್ಕೆ ಎಲ್ಲ ಪ್ರಸ್ತಾವನೆಗಳನ್ನು ಪ್ರತ್ಯೇಕವಾಗಿಯೇ ಸಿದ್ಧಪಡಿಸಿ ಕೆಲವನ್ನು ಸಲ್ಲಿಕೆ ಮಾಡಿದೆ. ಸಿಎಂ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ವಿಶೇಷ ಸಭೆ ನಡೆಯಲಿದ್ದು, ಅಂಜಿನಾದ್ರಿಯ ಕುರಿತು ಸಮಗ್ರ ಚರ್ಚೆಯಾಗಲಿದೆ.
ಹೌದು.. ಜಿಲ್ಲೆಯ ಕಿಷ್ಕಿಂದೆಯ ಹನುಮನ ಜನ್ಮಸ್ಥಳವಾದ ಅಂಜಿನಾದ್ರಿಯು ರಾಜ್ಯದ ದೊಡ್ಡ ಐಕಾನ್ ಆಗಿದೆ. ಈ ಪ್ರದೇಶ ಭಾರತೀಯರ ಭಕ್ತಿಯ ಹಾಗೂ ಶಕ್ತಿಯ ಕೇಂದ್ರವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದಕ್ಕೆ ದೊಡ್ಡ ಮನ್ನಣೆ ದೊರೆತು ಗಣ್ಯಾತೀತರು, ಸಂಶೋಧಕರು, ಇತಿಹಾಸ ತಜ್ಞರು ಸೇರಿ ಪ್ರವಾಸಿಗರ ದಂಡೇ ಇಲ್ಲಿಗೆ ಹರಿದು ಬರುತ್ತಿದೆ. ಈ ಪ್ರದೇಶವನ್ನು ಬಹು ಆಯಾಮದಲ್ಲಿ ಅಭಿವೃದ್ಧಿ ಮಾಡಲು ಜಿಲ್ಲಾಡಳಿತ ಈಗಾಗಲೇ ಹಲವು ಯೋಜನೆಗಳನ್ನು ರೂಪಿಸಿದೆ.
ಬೆಟ್ಟದ ಸುತ್ತಲೂ ಪ್ರದಕ್ಷಿಣೆ ಪಥ: ಅಂಜಿನಾದ್ರಿಯ ಬೆಟ್ಟದ ಕೆಳ ಭಾಗದಲ್ಲಿ ಪ್ರದಕ್ಷಿಣೆ ಪಥ ನಿರ್ಮಿಸಬೇಕೆನ್ನುವುದು ಇಲ್ಲಿನ ಸಹಸ್ರಾರು ಸಂಖ್ಯೆಯ ಭಕ್ತರ ಒತ್ತಾಯವಿದೆ. ಅಲ್ಲದೇ, ಭಾರತೀಯರ ನಂಬಿಕೆಯಂತೆ ಬೆಟ್ಟದ ಸುತ್ತಲೂ ಪ್ರದಕ್ಷಿಣೆ ಹಾಕಿದರೆ ನಮ್ಮೆಲ್ಲ ಸಂಕಲ್ಪಗಳು ಈಡೇರಲಿವೆ. ಬೆಟ್ಟದ ಮೇಲ್ಭಾಗಕ್ಕೆ ತೆರಳಲಾಗದವರಿಗೆ ಈ ಪಥವು ಅನುಕೂಲವಾಗಲಿದೆ ಎನ್ನುವ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬೆಟ್ಟದ ಸುತ್ತಲೂ ಪ್ರದಕ್ಷಿಣೆ ಪಥ ನಿರ್ಮಾಣಕ್ಕೆ ವಿಶೇಷ ಪ್ರಸ್ತಾವನೆಯನ್ನು ಪ್ರವಾಸೋದ್ಯಮ ಇಲಾಖೆ ಮೂಲಕ ಸಿದ್ಧಪಡಿಸಿದೆ.
ಯಾತ್ರಿ ನಿವಾಸ: ವರ್ಷದಿಂದ ವರ್ಷಕ್ಕೆ ಅಂಜಿನಾದ್ರಿಗೆ ಆಗಮಿಸುವ ಪ್ರವಾಸಿಗರ ಹಾಗೂ ಭಕ್ತರ ಸಂಖ್ಯೆ ದ್ವಿಗುಣವಾಗುತ್ತಿದೆ. ಆದರೆ ದೂರದ ಪ್ರದೇಶದಿಂದ ಆಗಮಿಸುವವರಿಗೆ ರಾತ್ರಿ ಉಳಿದುಕೊಳ್ಳಲು ಎಲ್ಲಿಯೂ ಯಾತ್ರಿ ನಿವಾಸ ಇಲ್ಲ. ಅಕ್ಕಪಕ್ಕ ವಾಸ್ತವ್ಯಕ್ಕೆ ಹೋಟೆಲ್ ವ್ಯವಸ್ಥೆಯೂ ಇಲ್ಲ. ಹೀಗಾಗಿ ಭಕ್ತರ ಅನುಕೂಲಕ್ಕೆ ಸಾವಿರಕ್ಕೂ ಹೆಚ್ಚು ಜನ ಉಳಿದುಕೊಳ್ಳಬಹುದಾದ ಯಾತ್ರಿ ನಿವಾಸ ನಿರ್ಮಾಣಕ್ಕೂ ಪ್ರಸ್ತಾವನೆ ಸಿದ್ಧಪಡಿಸಿದೆ.
ಅಂಜಿನಾದ್ರಿ ಸುತ್ತ ಜಮೀನು ಗುರುತು: ಅಂಜಿನಾದ್ರಿ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಜಮೀನುಗಳ ಕುರಿತು ಸರ್ವೇ ನಡೆಸಿದೆ. ಅಗತ್ಯಕ್ಕೆ ತಕ್ಕಂತೆ ಸ್ವಾ ಧೀನ ಮಾಡಿಕೊಳ್ಳುವ ಯೋಜನೆಯೂ ಜಿಲ್ಲಾಡಳಿತದ ಮುಂದಿದೆ. ಬೆಟ್ಟದ ಅಕ್ಕಪಕ್ಕದಲ್ಲಿನ ಜಮೀನು ಸ್ವಾಧೀನ ಮಾಡಿಕೊಂಡು ವಿವಿಧ ತಾಣಗಳಾಗಿ ಮಾರ್ಪಾಡು ಮಾಡಲು ಭೂ ಸ್ವಾ ಧೀನಕ್ಕೂ ವಿಶೇಷ ಪ್ರಸ್ತಾವನೆ ಸಿದ್ಧಪಡಿಸಿದೆ. ಅಂದಾಜು 700 ಎಕರೆ ಪ್ರದೇಶವನ್ನು ಪ್ರಾಥಮಿಕವಾಗಿ ಗುರುತು ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಸ್ತೆ ಅಗಲೀಕರಣಕ್ಕೆ ಯೋಜನೆ: ಕೊಪ್ಪಳ ಭಾಗದಿಂದ ಅಂಜಿನಾದ್ರಿಗೆ ತೆರಳಲು ಹಾಗೂ ಗಂಗಾವತಿ ಭಾಗದ ಕಡೆ ಬಾಗಿಲಿನಿಂದ ಅಂಜಿನಾದ್ರಿಗೆ ಪ್ರವೇಶ ಮಾಡಲು ರಸ್ತೆಗಳು ಇಕ್ಕಟ್ಟಾಗಿವೆ. ಪ್ರತಿ ವರ್ಷ ಹನುಮ ಮಾಲಾಧಾರಣೆ, ವಿಸರ್ಜನಾ ಸಮಯದಲ್ಲಿ ಭಾರಿ ಟ್ರಾμಕ್ ಸಮಸ್ಯೆ ಎದುರಾಗುತ್ತಿದೆ. ಹಾಗಾಗಿ ಹಿಟ್ನಾಳ ಟೋಲ್ ಹೆದ್ದಾರಿಯಿಂದ ಅಂಜಿನಾದ್ರಿಯ ಬೆಟ್ಟದ ಮಾರ್ಗವಾಗಿ ಕಡೆಬಾಗಿಲು, ಗಂಗಾವತಿಗೆ ಸಂಪರ್ಕ ಕಲ್ಪಿಸುವ ರಸ್ತೆವರೆಗೂ ಡಬಲಿಂಗ್ ಮಾಡಿ ಅಗಲೀಕರಣಕ್ಕೂ ಪ್ರಸ್ತಾವನೆ ಸಿದ್ಧಪಡಿಸಿದೆ. ಇದರಿಂದ ಭವಿಷ್ಯದ ದೃಷ್ಟಿಯಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
ರೂಪ್ ವೇ ನಿರ್ಮಾಣಕ್ಕೆ ಪ್ಲ್ಯಾನ್: ಅಂಜಿನಾದ್ರಿಯು ಬೆಟ್ಟದ ಮೇಲಿರುವುದರಿಂದ ವಯೋವೃದ್ಧರು, ವಿಕಲಚೇತನರು, ಗರ್ಭಿಣಿಯರು ಸೇರಿದಂತೆ ಮಕ್ಕಳು ಬೆಟ್ಟದ ಮೇಲ್ಭಾಗಕ್ಕೆ ತೆರಳಲು ಪ್ರಯಾಸ ಪಡಬೇಕಾಗುತ್ತದೆ. ಬೆಟ್ಟ ಹತ್ತುವ ಮನಸ್ಸಿದ್ದರೂ ಅವರಿಗೆ ಹತ್ತಲಾಗದವರಿಗೆ ಬೆಟ್ಟದಕ್ಕೆ ಮೇಲ್ಭಾಗಕ್ಕೆ ಕರೆದುಕೊಂಡು ಹೋಗಲು ರೂಪ್‌ವೇ ನಿರ್ಮಿಸುವ ಯೋಜನೆ ಜಿಲ್ಲಾಡಳಿತದ ಮುಂದಿದೆ. ಆದರೆ ರೂಪ್‌ವೇ ನಿರ್ಮಾಣದ ಬಳಿಕ ನಿರ್ವಹಿಸುವುದು ಹೇಗೆ? ತಾಂತ್ರಿಕ ತಂಡ ನಿಯೋಜನೆ ಸೇರಿದಂತೆ ಪಿಪಿಪಿ ಮಾದರಿಯಲ್ಲಿ ಇದನ್ನು ನಿರ್ವಹಿಸುವ ಯೋಜನೆಯಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಸ್ನಾನದ ತಟ, ಪಾರ್ಕ್: ಅಂಜಿನಾದ್ರಿಯ ತಟದಲ್ಲಿ ನದಿಯು ಹರಿದು ಹೋಗುವುದರಿಂದ ಅಲ್ಲಿ ಭಕ್ತರಿಗೆ ಸ್ನಾನದ ತಟ ನಿರ್ಮಿಸುವ ಯೋಜನೆಯೂ ಜಿಲ್ಲಾಡಳಿತದ ಮುಂದಿದೆ. ಇನ್ನು ಗ್ರೀನ್ ಪಾರ್ಕಿಂಗ್ ವ್ಯವಸ್ಥೆ ಮಾಡಿ ಕವಲು ರಸ್ತೆಗಳನ್ನು ನಿರ್ಮಿಸಿ ವಿವಿಧ ತಾಣಗಳಿಗೆ ತೆರಳುವ ರಸ್ತೆ ಫಲಕಗಳ ಅಳವಡಿಕೆಗೆ ಯೋಜನೆ ರೂಪಿಸಿದೆ.
ಒಟ್ಟಿನಲ್ಲಿ ಜಿಲ್ಲಾಡಳಿತವು ಅಂಜಿನಾದ್ರಿಯ ಅಭಿವೃದ್ಧಿಗೆ 200-300 ಕೋಟಿ ರೂ.ನಲ್ಲಿ ಬಹುರೂಪಿ ಯೋಜನೆ ರೂಪಿಸಿ ಪ್ರತ್ಯೇಕ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ 100 ಕೋಟಿ ರೂ. ಬಜೆಟ್‌ನಲ್ಲಿ ಘೋಷಣೆ ಮಾಡಿದೆ. ಈ ಮೊದಲು ಯಾತ್ರಿ ನಿವಾಸಕ್ಕೆ 20 ಕೋಟಿ ರೂ.ಗೆ ಸಮ್ಮತಿ ನೀಡಿತ್ತು. ಆದರೆ ಈ ಅನುದಾನ ಬರಬೇಕಿದೆ.
ಜಿಲ್ಲೆಯ ಅಂಜಿನಾದ್ರಿ ಸಮಗ್ರ ಅಭಿವೃದ್ಧಿಗೆ ಜಿಲ್ಲಾಡಳಿತದಿಂದ ಹಲವು ಪ್ರಸ್ತಾವನೆ ಸಿದ್ಧಪಡಿಸಿದ್ದೇವೆ. ಸರ್ಕಾರ ಈ ಮೊದಲು ಘೋಷಣೆ ಮಾಡಿದ 20 ಕೋಟಿ ರೂ. ಗೆ ಮಾತ್ರ ಪ್ರಸ್ತಾವನೆ ಸಲ್ಲಿಸಿದ್ದೇವೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ 100 ಕೋಟಿ ರೂ.ಗೆ ಪ್ರಸ್ತಾವನೆ ಸಿದ್ಧಪಡಿಸಿಟ್ಟುಕೊಂಡಿದ್ದು, ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದಾಕ್ಷಣ ಸಲ್ಲಿಕೆ ಮಾಡಲಿದ್ದೇವೆ. ಶೀಘ್ರದಲ್ಲೇ ಸಿಎಂ ನೇತೃತ್ವದಲ್ಲಿ ವಿಶೇಷ ಸಭೆಯಿದೆ ಎನ್ನುವ ಮಾಹಿತಿ ಬಂದಿಲ್ಲ. ಬಂದಾಕ್ಷಣ ಪ್ರಸ್ತಾವನೆಗಳ ಕುರಿತು ಸಿಎಂ ಗಮನಕ್ಕೆ ತರಲಿದ್ದೇವೆ. -ವಿಕಾಸ್ ಕಿಶೋರ್, ಜಿಲ್ಲಾಧಿಕಾರಿ
ಸಿಎಂ ಬೊಮ್ಮಾಯಿ ವಿಶೇಷ ಸಭೆ: ಅಂಜಿನಾದ್ರಿಯ ಅಭಿವೃದ್ಧಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ ವಿಶೇಷ ಸಭೆ ಕರೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಿದ್ದು, ಈ ಸಭೆಯಲ್ಲಿ ಅಂಜಿನಾದ್ರಿಯ ಅಭಿವೃದ್ಧಿಯ ರೂಪುರೇಷ ಚರ್ಚೆ ನಡೆಯಲಿವೆ. ಜಿಲ್ಲಾಡಳಿತವು ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಸರ್ಕಾರ ಕೇಳುವುದಕ್ಕೂ ಮೊದಲೇ ಕೆಲವು ಪ್ರಸ್ತಾವನೆಗಳನ್ನು ಸಲ್ಲಿಕೆ ಮಾಡಿದೆ. ಉಳಿದ ಪ್ರಸ್ತಾವನೆ ಸಲ್ಲಿಸುವ ಸಿದ್ಧತೆಯಲ್ಲಿದೆ. ರಾಜ್ಯ ಸರ್ಕಾರವು ಅಂಜಿನಾದ್ರಿಯ ಅಭಿವೃದ್ಧಿಗೆ ಆಸಕ್ತಿ ತೋರುತ್ತಿದ್ದು, ಅನುದಾನ ಬಿಡುಗಡೆ ಮಾಡುವುದು ಮಾತ್ರ ಬಾಕಿಯಿದೆ.
ಹನುಮ ಜನ್ಮಸ್ಥಳ ಘೋಷಣೆಯಾಗುತ್ತಾ? ಅಂಜಿನಾದ್ರಿಯಲ್ಲಿಯೇ ಹನುಮಂತನ ಜನಿಸಿದ್ದು ಎನ್ನುವುದು ಇತಿಹಾಸ, ಪುರಾಣಗಳಲ್ಲಿ ಉಲ್ಲೇಖವಿದೆ. ಹಲವು ಕುರುಗಳು ಇಲ್ಲಿ ಲಭ್ಯ ಇವೆ. ಬೇರೆಡೆ ಇಂತಹ ಯಾವುದೇ ಕುರುಹುಗಳಿಲ್ಲ. ಶೀಘ್ರದಲ್ಲೇ ಸಿಎಂ ನೇತೃತ್ವದಲ್ಲಿ ನಡೆಯುವ ವಿಶೇಷ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಅಧೀಕೃತ ಘೋಷಣೆ ಮಾಡಲಿದ್ದಾರಾ ಎನ್ನುವ ಪ್ರಶ್ನೆ ಶುರುವಾಗಿದೆ.
-ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.