ಮೈಸೂರು: ದಸರೆ ಗಜಪಡೆಯಲ್ಲೊಬ್ಬ ಪರಾಕ್ರಮಿ ವೀರ
ನೀರೆಂದರೆ ಇಷ್ಟ. ಎಲ್ಲಾ ಆನೆಗಳೊಂದಿಗೆ ಬೆರೆಯುವುದು ಮಹೇಂದ್ರ ಆನೆಯ ವೈಶಿಷ್ಟ್ಯ
Team Udayavani, Sep 29, 2022, 6:08 PM IST
ಮೈಸೂರು: ಒಂದು ಕಾಲದಲ್ಲಿ ಕಾಡಂಚಿನ ಭಾಗದ ರೈತರಿಗೆ ಉಪಟಳವಾಗಿದ್ದ, ಪುಂಡಾನೆಯಾಗಿ ಬೆಳೆ ಹಾನಿ ಮಾಡುತ್ತಿದ್ದ ಆನೆ ಇಂದು ವಿಧೇಯ ವಿದ್ಯಾರ್ಥಿ. ಗಜ ಗಾಂಭೀರ್ಯಕ್ಕೆ ಮತ್ತೂಂದು ಹೆಸರೇ ನಾನು ಎಂಬಂತೆ ಮತ್ತಿಗೂಡು ಆನೆ ಶಿಬಿರ ಮಹೇಂದ್ರ ಹೆಸರಿನಿಂದ ಬೆಳೆದುನಿಂತಿದೆ.
ಪುಂಡಾನೆ ಸೆರೆ ಕಾರ್ಯಾಚಣೆಯಲ್ಲಿ ಸೆರೆ ಸಿಕ್ಕ ಬಳಿಕ ಮೂರೆ ವರ್ಷದಲ್ಲಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಅರ್ಹತೆ ಗಿಟ್ಟಿಸಿಕೊಂಡಿರುವ 39 ವರ್ಷದ ಮಹೇಂದ್ರ ಆನೆಯ ಗಾಂಭೀರ್ಯತೆ ಹಾಗೂ ಪ್ರಬುದ್ಧತೆ ಇದಕ್ಕೆ ಸಾಕ್ಷಿಯಾಗಿದೆ.
ಯಾರಿದು ಮಹೇಂದ್ರ?: 2015-2016ರ ವೇಳೆಯಲ್ಲಿ ರಾಮನಗರದ ಭಾಗದ ಜನರಿಗೆ ತಲೆ ನೋವಾಗಿದ್ದ ಪುಂಡಾನೆಯನ್ನು ಸೆರೆ ಹಿಡಿಯಲು ಆ ಭಾಗದ ರೈತರಾದಿಯಾಗಿ ಜನಪ್ರತಿನಿಧಿಗಳಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ವಿಧಿಯಿಲ್ಲದೆ ತೋಟವೊಂದರಲ್ಲಿ ಯಾವುದೇ ಅಳುಕಿಲ್ಲದೇ ಬೀಡುಬಿಟ್ಟಿದ್ದ ಮಹೇಂದ್ರನನ್ನು ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಸೆರೆ ಹಿಡಿದು ನಾಗರಹೊಳೆಯ ಮತ್ತಿಗೋಡು ಶಿಬಿರಕ್ಕೆ ಕರೆತಂದು ಮಹೇಂದ್ರ ಎಂಬ ಹೆಸರಿಡಲಾಯಿತು.
ಆರಂಭದ ದಿನಗಳಲ್ಲಿ ರೋಷಾವೇಶದಿಂದ ವರ್ತಿಸುತ್ತಿದ್ದ ಮಹೇಂದ್ರ ದಿನಕಳೆದಂತೆ ಶಿಬಿರದ ವಾತಾವರಣಕ್ಕೆ ಒಗ್ಗಿದ. ಮೊದಲಿಗೆ ವಿನೋದ್ ರಾಜ್ ಎಂಬಾತ ನೀಡಿದ ಅತ್ಯುತ್ತಮ ತರಬೇತಿಯಿಂದಾಗಿ ಆರೇಳು ತಿಂಗಳಲ್ಲೇ ಮೃದು ಸ್ವಭಾದ ಆನೆಯಾಗಿ ಮಾರ್ಪಟ್ಟಿದ್ದು ವಿಶೇಷ. ಸದ್ಯಕ್ಕೆ 2.74 ಮೀಟರ್ ಎತ್ತರ, 4450 ಕೆಜಿ ತೂಕ ಇರುವ ಮಹೇಂದ್ರನನ್ನು ರಾಜಣ್ಣ ಎಂಬ ಮಾವುತರು ನೋಡಿಕೊಳ್ಳುತ್ತಿದ್ದಾನೆ.
ಎಷ್ಟು ಸೌಮ್ಯ ಸ್ವಭಾವವೋ ಅಷ್ಟೇ ಧೈರ್ಯಶಾಲಿ ಮತ್ತು ಧಿಟ್ಟ ಮನೋಭಾವ ಹೊಂದಿರುವ ಮಹೇಂದ್ರ, ಹೇಳಿದ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾನೆ. ಯಾರ ಬಳಿಗೂ ಒರಟಾಗಿ ನಡೆದುಕೊಳ್ಳುವುದಿಲ್ಲ. ನೀರೆಂದರೆ ಇಷ್ಟ. ಎಲ್ಲಾ ಆನೆಗಳೊಂದಿಗೆ ಬೆರೆಯುವುದು ಮಹೇಂದ್ರ ಆನೆಯ ವೈಶಿಷ್ಟ್ಯ.
ಹುಲಿ, ಆನೆ ಕಾರ್ಯಾಚರಣೆಯಲ್ಲಿ ಎತ್ತಿದ ಕೈ: ಪುಂಡಾನೆಯಾಗಿದ್ದ ಮಹೇಂದ್ರ ಇದೀಗ ಪಳಗಿದ ಮೇಲೆ ಬೇರೆ ಪುಂಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲೂ ಭಾಗವಹಿಸುತ್ತಿದ್ದಾನೆ. ಹುಲಿ ಹಾಗೂ ಕಾಡಾನೆಗಳ ಸೆರೆ ಕಾರ್ಯದಲ್ಲೂ ಇವನನ್ನು ಬಳಸಿಕೊಳ್ಳಲಾಗುತ್ತಿದೆ. ಕೂಬಿಂಗ್ ಸ್ಪೆಷಲಿಸ್ಟ್ ಎಂದೆ ಖ್ಯಾತಿ ಪಡೆದಿರುವ ಅಂಬಾರಿ ಆನೆ ಅಭಿಮನ್ಯು ಸ್ಥಾನವನ್ನು ಈ ಮಹೇಂದ್ರ ತುಂಬವ ಎಲ್ಲಾ ಲಕ್ಷಗಳನ್ನು ಹೊಂದಿದ್ದಾನೆ. ಕಾಡಾನೆ ಅಥವಾ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಒಂದಿಷ್ಟೂ ಅಂಜದೆ ಧೈರ್ಯದಿಂದ ಮುನ್ನುಗ್ಗಿ ಎದುರಾಳಿ ಒಡ್ಡುವ ಸವಾಲನ್ನು ಭೇದಿಸುವ ಚಾತಿಯನ್ನು ಕರಗತ ಮಾಡಿಕೊಂಡಿರುವ ಮಹೇಂದ್ರ ಗಜಪಡೆಗೆ ಪರಾಕ್ರಮಿ ಎಂದರೆ ತಪ್ಪಾಗಲಾರದು.
ಶ್ರೀರಂಗಪಟ್ಟಣ ದಸರಾ ಯಶಸ್ವಿಗೊಳಿಸಿದ ಮಹೇಂದ್ರ
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾದಲ್ಲಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಮಹೇಂದ್ರ ಯಶಸ್ವಿಯಾಗಿ ನಿಭಾಯಿಸಿದ್ದಾನೆ. ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಮಹೇಂದ್ರ ನಾಡಿನ ವಾತಾವರಣಕ್ಕೆ ಹೊಂದಿಕೊಂಡಿರುವುದಲ್ಲದೇ, ಮಾವುತ, ಕಾವಾಡಿಗಳ ಆಜ್ಞೆಯ ಪರಿಪಾಲಕನಾಗಿ, ತಾಲೀಮಿನ ವೇಳೆ ಆತ ತೋರಿದ ಪ್ರಬುದ್ಧ ನಡೆಯಿಂದಾಗಿ ಮೊದಲ ವರ್ಷದಲ್ಲೇ ಮಹತ್ತರವಾದ ಜವಾಬ್ದಾರಿ ನಿಬಾಯಿಸಿರುವುದು ವಿಶೇಷ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಒಳಪಡುವ ಮತ್ತಿಗೂಡು ಆನೆ ಶಿಬಿರದಲ್ಲಿ ವಾಸ್ತವ್ಯ ಹೂಡಿರುವ ಮಹೇಂದ್ರ ದಸರಾ ಗಜಪಡೆಯ ಮೊದಲ ತಂಡದಲ್ಲಿಯೇ ಸ್ಥಾನಗಿಟ್ಟಿಸಿಕೊಂಡು, ಆ.7ರಂದು ಗಜಪಯಣದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೈಸೂರಿಗೆ ಆಗಮಿಸಿತ್ತು.
ಮೈಸೂರಿಗೆ ಬಂದಾಗ 4250 ಕೆಜಿ ಹೊಂದಿತ್ತು. ಪೌಷ್ಟಿಕ ಆಹಾರ ನೀಡಿ ಆರೈಕೆ ಮಾಡಿದ್ದರಿಂದ ಮೈಸೂರು ಅರಮನೆಗೆ ಬಂದ ಒಂದೇ ತಿಂಗಳಲ್ಲಿ 200 ಕೆಜಿ ತೂಕ ಹೆಚ್ಚಿಸಿಕೊಂಡಿತ್ತು. ತಾಲೀಮಿನ ವೇಳೆ ಮರಳು ಮೂಟೆ ಹೊತ್ತು, ಮರದ ಅಂಬಾರಿ ಹೊತ್ತು ಸಾಗಿತ್ತು. ಸುಮಾರು 750 ಕೆಜಿ ಭಾರ ಹೊತ್ತು ಸರಾಗವಾಗಿ ಸಾಗಿದ್ದ ಮಹೇಂದ್ರ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ವಿಶ್ವಾಸ ಮೂಡಿಸಿತ್ತು. ವಾಹನ ಸಂಚಾರ, ಮಬ್ಬುಗತ್ತಲು, ಜನರ ಓಡಾಟದ ನಡುವೆಯೂ ಭಾರ ಹೊತ್ತು ಶಾಂತಿಯಿಂದ ಹೆಜ್ಜೆ ಹಾಕಿದ್ದ ಮಹೇಂದ್ರ ಈ ಬಾರಿ ಶ್ರೀರಂಗಪಟ್ಟಣದ ದಸರಾದಲ್ಲಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದಾನೆ.
*ಸತೀಶ್ ದೇಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.