Naga Panchami 2024;ನಾಗರ ಪಂಚಮಿ ಸ್ವಚ್ಛ ಪಂಚಮಿ-ದಿಟ ನಾಗನಿಗೆ ನಮೋ…
ಶೇಷನ ಮೇಲೆ ಪವಡಿಸಿದ ಶ್ರೀಮನ್ನಾರಾಯಣನನ್ನು ಅನಂತಪದ್ಮನಾಭ ಎಂದು ಕರೆಯುವುದಿದೆ.
Team Udayavani, Aug 8, 2024, 10:06 AM IST
ಮಳೆಗಾಲದಲ್ಲಿ ಸಸ್ಯಶ್ಯಾಮಲೆ ಮೈದುಂಬಿಕೊಳ್ಳುವ ಕಾಲ. ಪ್ರಕೃತಿ ಫಲ ಕೊಡಲು ಗರ್ಭಾಂಕುರವಾಗುವ ಮಾಸ ಶ್ರಾವಣ. ಈ ಸಮೃದ್ಧಿಯ ಸಂಭ್ರಮಗಳು ಈಗ ಕಣ್ಮರೆಯಾಗಿ ಮಳೆಗಾಲವೆಂದರೆ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದರೂ ಅನಾಹುತಗಳ ಕಾಲ ಎಂದಾಗುತ್ತಿದೆ. ಏಕಿರಬಹುದು? ಶ್ರಾವಣ ಮಾಸದಿಂದ ಹಬ್ಬಹರಿದಿನಗಳ ಸರಣಿ ಆರಂಭಗೊಳ್ಳುತ್ತದೆ. ನಾಗನಿಗೆ ವಾರ್ಷಿಕ ಪೂಜೆ ಸಲ್ಲಿಸುವ ಮೂಲಕ ಹಬ್ಬಗಳ ಸರಣಿ ಆರಂಭವಾಗುವುದು ವಿಶೇಷ. ನಾಗನಿಗೆ ಪೂಜೆ ಅಂದ ಮೇಲೆ ಶೇಷನಿಗೋ, ವಾಸುಕಿಗೋ ಪೂಜೆ ಎಂದರ್ಥ.
ಶೇಷನ ಮೇಲೆ ಪವಡಿಸಿದ ಶ್ರೀಮನ್ನಾರಾಯಣನನ್ನು ಅನಂತಪದ್ಮನಾಭ ಎಂದು ಕರೆಯುವುದಿದೆ. ಶಿವನ ಕೊರಳಲ್ಲಿ ರಾರಾಜಿಸುತ್ತಿರುವುದು ಸರ್ಪ. ಪಾಂಡವರ ಮೊಮ್ಮಗ ಪರೀಕ್ಷಿತರಾಜ ಅಹಂಕಾರವನ್ನು ತೋರಿದಾಗ ಆತನನ್ನು ಕಚ್ಚಿದವ ತಕ್ಷಕ. ಈತ ಒಂದು ಜಾತಿಯ ಸರ್ಪ. ಅಹಂಕಾರ ನಿರ್ಮೂಲನ ತಕ್ಷಕನ ಸಂದೇಶ. ಸಮುದ್ರಮಥನ ಕಾಲದಲ್ಲಿ ಮಂದರ ಪರ್ವತವನ್ನು ಕಡೆಯುವಾಗ ಹಗ್ಗವಾಗಿ ಬಳಕೆಯಾದವ ವಾಸುಕಿ.
ನಳನಿಗೆ ನೆರವಾಗಲು ಕಚ್ಚಿದವ ಕಾರ್ಕೋಟಕ. ಕಚ್ಚಿದರೂ ನಳನಿಗೆ ಅನುಕೂಲವೇ ಆಯಿತು. ಪ್ರಕೃತಿಯಲ್ಲಿ ಸಮತೋಲನ ಕಾಪಾಡಲು ಎಲ್ಲ ಜೀವಿಗಳೂ ಅಗತ್ಯ. ಈಗ ನಾಗನಿಗೆ ಪೂಜೆ ವೈಭವದಿಂದ ಸಲ್ಲುತ್ತಿದ್ದರೂ ಅಪ್ಪಟ ನಾಗನೇ ನಿಸರ್ಗದಲ್ಲಿ
ಸ್ವಚ್ಚಂ ದವಾಗಿ ಬದುಕುವುದು ಕಷ್ಟವಾಗಿದೆ.
ಕಲ್ಲಿನಲ್ಲಿ ನಾಗನ ಪ್ರತೀಕ ಒಂದಾದರೆ ಹಾವಿನಲ್ಲಿ ನಾಗನ ಪ್ರತೀಕ ಇನ್ನೊಂದು ಬಗೆ. ನಾಗರ ಹಾವು ನಿಜನಾಗನಾದರೆ, ನಾಗನ ಕಲ್ಲು ನಿಜನಾಗನ ಪ್ರಾತಿನಿಧಿಕ ಸಂಕೇತವೆನ್ನಬಹುದು. ನಮಗೆ ವಾಸ್ತವಕ್ಕಿಂತಲೂ ಕಲ್ಪನೆ ಹೆಚ್ಚು ಖುಷಿ ಕೊಡುವುದಿದೆ. ಹೀಗಾಗಿಯೋ ಏನೋ ಮನುಷ್ಯನ ಆತ್ಮವಂಚನೆ ವರ್ತನೆ ಕಂಡು ಬಸವಣ್ಣನವರು “ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು| ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯಾ|| ಉಂಬ ಜಂಗಮ ಬಂದರೆ ನಡೆ ಎಂಬರು| ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ|| ಎಂದು ಹೇಳಿರಬಹುದು. ನಾವು ಹಾಗೆ ಮಾಡಿದ್ದರಿಂದ ಬಸವಣ್ಣನವರು ಟೀಕಿಸಿದರು. ಕಾಲ ಉರುಳಿದೆ, ನಾವು ಮತ್ತಷ್ಟು ಪಾಲಿಶ್ಡ್ ಆಗಿದ್ದೇವೆ.
ನಾಗನ ಕಟ್ಟೆ ಅಂದರೆ ಕಾಂಕ್ರೀಟ್ ಕಟ್ಟಡವೆಂಬರಯ್ಯ |
ದಿಟ ನಾಗನು ಬದುಕುವುದೋ ಎಂದರಿಯರಯ್ಯ||
ಎಂಬ ಸ್ಥಿತಿಗೆ ತಲುಪಿಯಾಗಿದೆ.
ನಾಗನ ಕಟ್ಟೆ ಅಂದರೆ ಗಿಡಮರಗಳಿರಲಯ್ಯ|
ದಿಟ ನಾಗನ ಸಂತತಿ ಬಂದು ಅಲ್ಲಿರಲಯ್ಯ||
ಎಂಬ ಸ್ಥಿತಿಗೆ ತಲುಪಬೇಕಾಗಿದೆ. ನಾಗನಲ್ಲಿ ಒಂದು ವೇಳೆ ವಿಷವನ್ನು ದೇವರು ಇಡದೆ ಇದ್ದಿದ್ದರೆ ನಾಗ ಸಂತತಿ ಇಷ್ಟು ಕಾಲ ಬದುಕಿ ಉಳಿಯುತ್ತಿತ್ತೋ? ಇಲ್ಲವೋ? ಹೇಳಲಾಗದು. ಈ ವಿಷವೇ ಹಲವು ಬಗೆಗಳಲ್ಲಿ ಔಷಧವಾಗಿ ಹೋಮಿಯೋಪತಿ ವೈದ್ಯ ಪದ್ಧತಿಯಲ್ಲಿ ಬಳಕೆಯಾಗುತ್ತಿದೆ. ಬಸವಣ್ಣನವರು ದಿಟ ನಾಗನ ಕಂಡರೆ ಎಂದಿದ್ದಾರೆ. ಕೆಲವು ವರ್ಷಗಳಲ್ಲಿ ಇದು ಕಂಡು
ಬರುವುದು ಕಷ್ಟಸಾಧ್ಯವೆ? ಪ್ರಯೋಗಾಲಯಗಳಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಮಾತ್ರ ನಾಗ ಸಿಗಬಹುದು.
ಪ್ರಾಣಿಶಾಸ್ತ್ರಜ್ಞರ ಪ್ರಕಾರ ಇರುವೆಯಂತಹ ಸಣ್ಣ ವರ್ಗವೂ ಇಡೀ ವಿಶ್ವವನ್ನು ಕಾಪಾಡಲು ಅತ್ಯಗತ್ಯ, ಕೇವಲ ಇರುವೆ ಅಂದಲ್ಲ,
ಎಲ್ಲವೂ… ಪ್ರಾಕೃತಿಕ (ವಿ)ಕೋಪ ಹೇಗೆ, ಯಾವ ದಿಕ್ಕಿನಿಂದ ಅಪ್ಪಳಿಸುತ್ತದೆ ಎಂದು ಹೇಳಲಾಗದು. ಈಗಲೇ ನಾಗರಪಂಚಮಿಯಂದು ದಿಟ ನಾಗನ ಉಳಿವಿಗಾಗಿ ಸಂಕಲ್ಪಿಸೋಣ!.
*ಸ್ವಾಮಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.