ನರೇಗಾ ಯೋಜನೆ ಗುರಿ: ಗ್ರಾಮ ಪಂಚಾಯತ್ ಗಳಿಗೆ ಸಾಧನೆ ಗರಿ
Team Udayavani, Feb 19, 2022, 11:38 AM IST
ಉಡುಪಿ ತಾ|: ನಗರಛಾಯೆಯ 80 ಬಡಗಬೆಟ್ಟು
ಉಡುಪಿ : ಇಡೀ ಗ್ರಾಮದಲ್ಲಿ ನಗರದ್ದೇ ಛಾಯೆಯಿದ್ದೂ ನರೇಗಾ ಕಾಮಗಾರಿ ಅನುಷ್ಠಾನ, ಸಾಧನೆಯಲ್ಲಿ ತಾ|ಗೆ ಮೊದಲಿದೆ. ಉಡುಪಿ ನಗರಸಭೆ ವ್ಯಾಪ್ತಿಗೆ ಹೊಂದಿಕೊಂಡಿರುವ 80 ಬಡಗಬೆಟ್ಟು ಗ್ರಾ.ಪಂ. ಪ್ರಸಕ್ತ ಸಾಲಿನ ನರೇಗಾ ಯೋಜನೆಯಲ್ಲಿ ಶೇ. 100ರಷ್ಟು ಗುರಿ ಸಾಧಿಸಿ ತಾ|ನ ಅಭಿವೃದ್ಧಿ ಕಾರ್ಯದಲ್ಲಿ ಮುಂದಿದೆ. ನರೇಗಾ ಯೋಜನೆಯಡಿ ಈ ವರೆಗೆ 64 ಕಾಮ ಗಾರಿ ಕೈಗೆತ್ತಿಕೊಂಡು, ಪೂರ್ಣಗೊಳಿಸಲಾಗಿದೆ. ಇದರಲ್ಲಿ ಬಾವಿ, ಸೋಕ್‌ಪಿಟ್, ಹೂಳೆತ್ತುವುದು, ಶಾಲಾ ಆವರಣ ನಿರ್ಮಾಣ, ಎರೆಹುಳ ತೊಟ್ಟಿ ನಿರ್ಮಾಣ, ಗೊಬ್ಬರ ಗುಂಡಿ, ಕೋಳಿ ಗೂಡು ನಿರ್ಮಾಣ, ಶಾಲೆಗಳಲ್ಲಿ ಪೌಷ್ಟಿಕ ತೋಟ ನಿರ್ಮಾಣ ಸಹಿತ ವೈಯಕ್ತಿಕ ಕಾಮಗಾರಿಗಳಿಗೂ ಆದ್ಯತೆ ನೀಡಲಾಗಿದೆ.
ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಟುಂಬ ಸದಸ್ಯರ ಉದ್ಯೋಗ ಚೀಟಿ, ವೈಯಕ್ತಿಕ ಉದ್ಯೋಗ ಚೀಟಿ ಅರ್ಹರಿಗೆ ನೀಡಿದ್ದೇವೆ. ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳನ್ನು ಖಾಸಗಿ ಮಾಲಕತ್ವದ ಜಮೀನಿನಲ್ಲಿ ಮಾಡಿಕೊಳ್ಳಲು ಅವಕಾಶವಿದೆ. ಸರ ಕಾರದ ನಿಯಮಾನುಸಾರ ಯಾವೆಲ್ಲ ಕಾಮಗಾರಿಗೆ ಅವಕಾಶವಿದೆಯೇ ಅದೆಲ್ಲವನ್ನು ಗ್ರಾ.ಪಂ.ನಿಂದ ಒದಗಿಸುತ್ತಿದ್ದೇವೆ. ವೈಯಕ್ತಿಕ ಅಥವಾ ಸಾರ್ವಜನಿಕ ಹಿತಾಸಕ್ತಿಯ ಕಾಮಗಾರಿಗಳಿಗೆ ಬಂದಿರುವ ಪ್ರಸ್ತಾವನೆ ಅಥವಾ ಅರ್ಜಿಯ ಆಧಾರದಲ್ಲಿ ಮಂಜೂರಾತಿಗೆ ಕಳುಹಿಸುತ್ತೇವೆ. ಕೇಂದ್ರದಿಂದ ಮಂಜೂರಾತಿ ಸಿಕ್ಕ ತತ್‌ಕ್ಷಣದಿಂದಲೇ ಕಾಮಗಾರಿ ಆರಂಭಿಸುತ್ತೇವೆ. ಅನುದಾನವು (ನಿತ್ಯದ ದುಡಿಮೆ) ನೇರ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸೇರುತ್ತದೆ ಎನ್ನುತ್ತಾರೆ ಪಿಡಿಒ ಅಶೋಕ್ ಕುಮಾರ್.
ಗ್ರಾಮ ಪಂಚಾಯ ತ್ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರ ಜನಸಂಖ್ಯೆಯಿದೆ. 2,500 ಮನೆ ಹಾಗೂ 180 ವಾಣಿಜ್ಯ ಸಂಕೀರ್ಣದಿಂದ ಕಸ ಸಂಗ್ರಹಣೆ ಮಾಡಲಾಗುತ್ತಿದೆ. ನರೇಗಾ ಯೋಜನೆ ಯಡಿ ವಿಶೇಷ ಒತ್ತು ನೀಡಿ ಸರಕಾರಿ ಶಾಲಾ ಆವರಣ ನಿರ್ಮಾಣ, ಅಂತರ್ಜಲ ಹೆಚ್ಚಿಸಲು ತೋಡುಗಳ ಹೂಳೆತ್ತುವ ಕಾರ್ಯ ಮಾಡಿದ್ದೇವೆ ಎಂದು ಪಿಡಿಒ ತಿಳಿಸಿದರು.
ನರೇಗಾ ಯೋಜನೆಯಡಿ ಗ್ರಾ.ಪಂ.ನಲ್ಲಿ ಎಷ್ಟು ಕಾಮಗಾರಿ ಗಳನ್ನು ಮಾಡಬಹುದೋ ಅಷ್ಟನ್ನು ಮಾಡಿದ್ದೇವೆ. ಅರ್ಹರಿಗೆ ಜಾಬ್ ಕಾರ್ಡ್‌ಗಳನ್ನು ನೀಡಿದ್ದೇವೆ.
– ಮಾಧವಿ ಎಸ್. ಆಚಾರ್ಯ, ಅಧ್ಯಕ್ಷೆ, 80 ಬಡಗಬೆಟ್ಟು ಗ್ರಾ.ಪಂ.
ಗ್ರಾ.ಪಂ. ವ್ಯಾಪ್ತಿಯಲ್ಲಿ ಕೃಷಿ ಭೂಮಿ ಕಡಿಮೆ ಯಿದೆ. ಇಲ್ಲಿನ ಬಹುತೇಕರು ಮಣಿಪಾಲ ದಲ್ಲಿ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗಿ ಗಳಾಗಿದ್ದಾರೆ. ನಮ್ಮಲ್ಲಿ 8 ವಾರ್ಡ್‌ಗಳಿದ್ದು ಆತ್ರಾಡಿ, ಕೊಡಿಬೆಟ್ಟು, ಅಲೆವೂರು ಪಂಚಾಯತ್ ಗಡಿಯಾಗಿದ್ದು ನಗರಸಭೆಗೆ ಹೊಂದಿಕೊಂಡಿದೆ. ನರೇಗಾ ಗುರಿ ಸಾಧನೆಯನ್ನು ನಿರ್ದಿಷ್ಟ ಕಾಲಮಿತಿಗಿಂತ 2 ತಿಂಗಳ ಮೊದಲೇ ಪೂರ್ಣಗೊಳಿಸಿ, ತಾಲೂಕಿಗೆ ಮೊದಲಿದ್ದೇವೆ.
-ಅಶೋಕ್ ಕುಮಾರ್, ಪಿಡಿಒ, 80 ಬಡಗಬೆಟ್ಟು ಗ್ರಾ.ಪಂ.
ಇದನ್ನೂ ಓದಿ : ಸ್ಪೀಕರ್ ಪ್ರಸ್ತಾಪದ ಬಳಿಕ ಉತ್ತರ ಕನ್ನಡದಲ್ಲಿಅಡಿಕೆ ದೋಟಿ ಸಬ್ಸಿಡಿ ಒತ್ತಡ
**
ಬ್ರಹ್ಮಾವರ ತಾ|: ಬಿಲ್ಲಾಡಿ ಜಿಲ್ಲೆಗೆ ದ್ವಿತೀಯ
ಕೋಟ: ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 2021-22ನೇ ಸಾಲಿನ ಅನುಷ್ಠಾನದಲ್ಲಿ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾ.ಪಂ. ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಬಿಲ್ಲಾಡಿ ಗ್ರಾ.ಪಂ. 16,106 ಮಾನವ ದಿನಗಳ ದಿನ ಸೃಜನೆ ಮೂಲಕ ದ್ವಿತೀಯ ಸ್ಥಾನದಲ್ಲಿದೆ.
ಬಿಲ್ಲಾಡಿ ಗ್ರಾ.ಪಂ. ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಕೃಷಿ ಬಾವಿ ನಿರ್ಮಾಣ, ಮದಗ ಅಭಿವೃದ್ಧಿ, ಇಂಗುಗುಂಡಿ ನಿರ್ಮಾಣಕ್ಕೆ ಒತ್ತು ನೀಡುವ ಮೂಲಕ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುವ ಹಲವಾರು ಕಾರ್ಯ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ.
ಯೋಜನೆಯಡಿ 24 ಹೊಸ ಕೃಷಿ ಬಾವಿಗಳ ನಿರ್ಮಾಣ, 11 ತೋಡು ಹೂಳೆತ್ತುವ ಕಾರ್ಯ, 1 ಮದಗ ಅಭಿವೃದ್ಧಿ, 18 ಇಂಗು ಗುಂಡಿ ನಿರ್ಮಾಣ ಮಾಡಲಾಗಿದ್ದು. ಇದರಿಂದಾಗಿ ಅಂತರ್ಜಲ ವೃದ್ಧಿಗೆ ಸಾಕಷ್ಟು ಸಹಕಾರಿಯಾಗಿದೆ. ಜತೆಗೆ 3 ಗೊಬ್ಬರ ತೊಟ್ಟಿ, 1 ಮನೆ, 7 ದನದ ಕೊಟ್ಟಿಗೆ, 2 ಕೋಳಿಗೂಡು ನಿರ್ಮಾಣ ಕೂಡ ನಡೆಸಲಾಗಿದೆ. ಸಾಮಗ್ರಿ ಸಹಿತ 51.52 ಲ.ರೂ. ಕಾಮಗಾರಿಗಳಿಗಾಗಿ ವ್ಯಯಿಸಲಾಗಿದೆ.
764 ಮಾನವ ದಿನಗಳನ್ನು ವ್ಯಯಿಸಿ 2.28 ಲ.ರೂ. ವೆಚ್ಚದಲ್ಲಿ ಸ್ಥಳೀಯ ಕಬ್ಬಿನಹಿತ್ಲು ಮದಗ ದುರಸ್ತಿಗೊಳಿಸಲಾಗಿದ್ದು ಇದರಿಂದ ಕೆಸರು ತುಂಬಿಕೊಂಡು ಮುಚ್ಚಿ ಹೋಗುವ ಸ್ಥಿತಿಯಲ್ಲಿದ್ದ ಮದಗದಲ್ಲಿ ಜೀವ ಜಲ ವೃದ್ಧಿಸಿದೆ ಹಾಗೂ 11 ತೋಡುಗಳನ್ನು ಹೂಳೆತ್ತುವ ಮೂಲಕ ಕೃಷಿ ನೀರಾವರಿಗೆ ಸಾಕಷ್ಟು ಅನುಕೂಲವಾಗಿದೆ. 24 ಮನೆಗಳಲ್ಲಿ ಹೊಸ ಬಾವಿಗಳನ್ನು ನಿರ್ಮಿಸಿದ್ದು ಇದರಿಂದಾಗಿ ಕೃಷಿ ಹಾಗೂ ಕುಡಿಯುವ ನೀರಿಗೆ ಸಾಕಷ್ಟು ಅನುಕೂಲವಾಗಿದೆ.
ರಾಜ್ಯ ತಂಡದಿಂದಲೂ ಶ್ಲಾಘನೆ
ಉದ್ಯೋಗ ಖಾತ್ರಿ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿರುವ ಗ್ರಾ.ಪಂ.ಗಳಿಗೆ ರಾಜ್ಯ ಪರಿಶೀಲನ ತಂಡ ಭೇಟಿ ನೀಡಿ ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸುತ್ತದೆ. ಬಿಲ್ಲಾಡಿ ಗ್ರಾ.ಪಂ.ಗೆ ಭೇಟಿ ನೀಡಿದ ತಂಡ ಯೋಜನೆ ಅನುಷ್ಠಾನದ ಕುರಿತು ಮೆಚ್ಚುಗೆಯ ಮಾತನಾಡಿದೆ.
ಉದ್ಯೋಗ ಖಾತ್ರಿ ಯೋಜನೆ ಯಿಂದ ಗ್ರಾ.ಪಂ. ವ್ಯಾಪ್ತಿಯ ನೂರಾರು ಕುಟುಂಬಗಳಿಗೆ ಉದ್ಯೋಗ ದೊರೆಯುವುದರ ಜತೆಯಲ್ಲಿ, ಆವಶ್ಯಕ ಕಾಮಗಾರಿಗಳು ನೆರವೇರಿದ ತೃಪ್ತಿ ಇದೆ. ಈ ಸಾಧನೆಯನ್ನು ನಿರಂತರವಾಗಿರಿಸಲು ಪ್ರಯತ್ನಿಸಲಾಗುವುದು.
-ರತ್ನಾ, ಅಧ್ಯಕ್ಷೆ, ಬಿಲ್ಲಾಡಿ ಗ್ರಾ.ಪಂ.
ನರೇಗಾ ಅನು ಷ್ಠಾನದಲ್ಲಿ ನಮ್ಮ ಗ್ರಾ.ಪಂ. ಜಿಲ್ಲೆಗೆ ದ್ವಿತೀಯ ಸ್ಥಾನದಲ್ಲಿರು ವುದು ಅತ್ಯಂತ ಖುಷಿಯ ವಿಚಾರ. ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಸಿಬಂದಿ, ಹಿರಿಯ ಅಧಿಕಾರಿ ಗಳು, ಗ್ರಾಮಸ್ಥರ ಸಹಕಾರದಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಯೋಜನೆಯಿಂದ ಅಂತರ್ಜಲ ವೃದ್ಧಿ ಹಾಗೂ ಕೃಷಿಗೆ ಸಹಕಾರಿಯಾಗಿರುವ ಬಗ್ಗೆ ತೃಪ್ತಿ ಇದೆ.
-ಪ್ರಶಾಂತ್, ಪಿಡಿಒ, ಬಿಲ್ಲಾಡಿ ಗ್ರಾ.ಪಂ.
**
ಕಾಪು ತಾಲೂಕಿ ಗೆ ಪಡುಬಿದ್ರಿ ಪ್ರಥಮ
ಪಡುಬಿದ್ರಿ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ 2021-22 ಸಾಲಿನಲ್ಲಿ ಕಾಪು ತಾಲೂಕಿಗೆ ಸರ್ವ ಪ್ರಥಮ ಸ್ಥಾನದಲ್ಲಿರುವ ದಾಖಲೆಯನ್ನು ಪಡುಬಿದ್ರಿ ಗ್ರಾ. ಪಂ. ಸಾಧಿಸಿದೆ.
30.54 ಲಕ್ಷ ರೂ. ಗಳನ್ನು 10,853 ಮಾನವ ದಿನದ ಕೂಲಿಗಾಗಿ ಪಡು ಬಿದ್ರಿ ಗ್ರಾ.ಪಂ.ನಿಂದ ನೀಡಲಾಗಿದೆ. ಸುಮಾರು 5.36 ಲಕ್ಷ ರೂ.ಗಳನ್ನು ಅದರ ಸಾಮಗ್ರಿ ವೆಚ್ಚಗಳಿಗಾಗಿ ನರೇಗಾ ಕಾರ್ಡ್‌ದಾರರಿಗೆ ಆನ್‌ಲೈನ್ ಮೂಲಕ ಹಂಚಿಕೆಯಾಗಿದೆ.
ಈ ಯೋಜನೆಯ ಕಾಮಗಾರಿ ಗಳನ್ನು ಜಿ.ಪಂ. ಸಿಇಒ ಡಾ| ವೈ. ನವೀನ್ ಭಟ್ ಇತ್ತೀಚೆಗೆ ಪರಿಶೀಲನೆ ಮಾಡಿ ಪಡುಬಿದ್ರಿ ಗ್ರಾ.ಪಂ. ಕಾಪು ತಾಲೂಕಿನಲ್ಲಿಯೇ ಪ್ರಥಮ ಸ್ಥಾನಕ್ಕೆ ಸಾಧನೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ. ಈ ಯೋಜನೆಯಲ್ಲಿ ಪೂವಪ್ಪ ಪೂಜಾರಿ ಪಾದೆಬೆಟ್ಟು ಎರೆಹುಳು ಗೊಬ್ಬರ ಗುಂಡಿ ಮಾಡಿದ್ದಕ್ಕೆ ಜಿ. ಪಂ. ಸಿಇಒ ಪ್ರಶಂಸಿಸಿದ್ದಾರೆ.
ಯೋಜನೆಯಲ್ಲಿ ಒಟ್ಟು 14 ಸರಕಾರಿ ತೋಡು, 25 ವೈಯಕ್ತಿಕ ತೆರೆದ ಬಾವಿ ಮತ್ತು 7 ಕೊಳವೆ ಬಾವಿಗಳ ರೀಚಾರ್ಜ್, 6 ದನದ ಹಟ್ಟಿ, 4 ಕೋಳಿಗೂಡು, 53 ಬಚ್ಚಲು ಗುಂಡಿ, 2 ಎರೆಹುಳು ಗೊಬ್ಬರ ಗುಂಡಿ, 24 ಐ.ಟಿ.ಡಿ.ಪಿ. ಮನೆಗಳನ್ನು ರಚಿಸಲಾಗಿದೆ. ಸರಕಾರಿ ತೋಡು, ಕೊಳವೆ ಬಾವಿಗಳ ರೀಚಾರ್ಜ್ ಮಾಡಿರುವುದು ಸಾರ್ವಜನಿಕರಿಗೆ ಅನುಕೂಲವಾದರೆ, ವೈಯಕ್ತಿಕ ತೆರೆದ ಬಾವಿ, ಕೋಳಿಗೂಡು, ಬಚ್ಚಲು ಗುಂಡಿ, ಎರೆಹುಳು ಗೊಬ್ಬರ ಗುಂಡಿ, ಐಟಿಡಿಪಿ ಮನೆಗಳಿಂದ ವೈಯಕ್ತಿಕ ಫಲಾನುಭವಿಗಳಿಗೆ ಅನುಕೂಲವಾಗಿದೆ. ಇದರಲ್ಲಿ ವ್ಯಕ್ತಿಗತ ವೇತನ ಸಿಗುವುದರ ಜತೆ ಅವರಿಗೇ ಅದರ ಲಾಭ ಸಿಗುತ್ತದೆ. ಸರಕಾರದ ಈ ಯೋಜನೆಯನ್ನು ಸಾಧ್ಯವಾದಷ್ಟು ಫಲಾನುಭವಿಗಳು ಬಳಸಿಕೊಳ್ಳುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪಿಡಿಒ ಸಹಿತ ಸಂಬಂಧಪಟ್ಟ ಅಧಿಕಾರಿಗಳು, ಕಂಪ್ಯೂಟರ್ ವರ್ಕರ್ ಹಾಗೂ ಗ್ರಾ. ಪಂ. ಸದಸ್ಯರ ಸಾಂಘಿಕ, ಸಾಮೂಹಿಕ ಪ್ರಯತ್ನಗಳಿಗೆ ಈ ಸಾಧನೆಯು ಸಂದ ಗೌರವವಾಗಿದೆ. ನಮ್ಮಲ್ಲಿ ಅತೀ ಹೆಚ್ಚು ನರೇಗಾ ಕಾರ್ಡ್‌ದಾರರಿದ್ದು, ಯೋಜನೆಯನ್ನು ಭ್ರಷ್ಟಾಚಾರ ರಹಿತವಾಗಿ ನಿರ್ವಹಿಸಲಾಗಿದೆ.
– ರವಿ ಶೆಟ್ಟಿ ಪಾದೆಬೆಟ್ಟು, ಗ್ರಾ.ಪಂ. ಅಧ್ಯಕ್ಷ, ಪಡುಬಿದ್ರಿ
ತಾಲೂಕು ಮಟ್ಟದ ಸಾಧನೆಗೆ ಸರ್ವರ ಸಹಕಾರ ಕಾರಣ. ಸಾಮುದಾಯಿಕ ಮತ್ತು ವೈಯಕ್ತಿಕ ಎರಡೂ ಕಡೆ ಗಳಿಂದ ಈ ಯೋಜನೆಯ ಲಾಭ ಸಿಗುತ್ತದೆ.
– ಪಂಚಾಕ್ಷರೀ ಸ್ವಾಮಿ, ಗ್ರಾ. ಪಂ. ಪಿಡಿಒ, ಪಡುಬಿದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.