Neeraj Chopra: ನೀರಜ್ ಚೋಪ್ರಾ ಮುಂದಿನ ಗುರಿ 90 ಮೀ.!
ಭಾರತೀಯ ಆ್ಯತ್ಲೆಟಿಕ್ ರಂಗದ ಮಹಾನ್ ಸಾಧಕ ಈ ಛಲ ಬಿಡದ ತ್ರಿವಿಕ್ರಮ
Team Udayavani, Sep 17, 2023, 12:12 AM IST
ನಿರ್ದಿಷ್ಟ ಗುರಿ, ಕಠಿನ ಅಭ್ಯಾಸ, ಸಾಧಿಸುವ ಛಲವಿದ್ದರೆ ಯಶಸ್ಸು ಖಂಡಿತ ಎಂಬುದಕ್ಕೆ ವಿಶ್ವಖ್ಯಾತಿಯ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರೊಬ್ಬ ನಿದರ್ಶನ. ಛಲ ಬಿಡದ ತ್ರಿವಿಕ್ರಮನಂತೆ ಗುರಿಯ ಜತೆ ಹೋರಾಡಿ ಆತ್ಮವಿಶ್ವಾಸ ಬೆಳೆಸಿಕೊಂಡು ದಾಖಲೆಗಳ ಶಿಖರವೇರಿದರು. ಚಾಂಪಿಯನ್ನರ ಚಾಂಪಿಯನ್ಸ್ ಎನಿಸಿಕೊಂಡರು. ಜಾವೆಲಿನ್ ಕ್ರೀಡೆಗೆ ಮೀಸಲಿಟ್ಟ ಎಲ್ಲ ಪ್ರಮುಖ ಪ್ರಶಸ್ತಿಗಳನ್ನು ಕೊರಳಿಗೇರಿಸಿಕೊಂಡ ಧೀರ, ಒಲಿಂಪಿಕ್ಸ್ ಚಾಂಪಿಯನ್, ವಿಶ್ವ ಚಾಂಪಿಯನ್ ಪಟ್ಟವೇರಿದ ನೀರಜ್ ಚೋಪ್ರಾ ಅವರ ಜಾವೆಲಿನ್ ಕ್ರೀಡಾ ಬಾಳ್ವೆಯತ್ತ ಒಂದು ಇಣುಕು ನೋಟ.
ಜಾವೆಲಿನ್ ಎಂದರೆ ನೀರಜ್ ಚೋಪ್ರಾ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದ್ದಾರೆ. ಒಲಿಂಪಿಕ್ಸ್, ವಿಶ್ವ ಚಾಂಪಿಯನ್ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ನೀರಜ್ ಚೋಪ್ರಾ ಭಾರತೀಯ ಆ್ಯತ್ಲೆಟಿಕ್ ರಂಗದ ಮಹಾನ್ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ.
ನೀರಜ್ ಅವರಿಗೆ ಇದ್ದದ್ದು ಒಂದೇ ದೃಷ್ಟಿ, ಗುರಿ. ನಿನ್ನೆಗಿಂತ ಇಂದು ಉತ್ತಮ ನಿರ್ವಹಣೆ ನೀಡುವುದು ಅವರ ದೃಢ ಸಂಕಲ್ಪ ಆಗಿತ್ತು. ಅದರಂತೆ ಸಾಗಿದ ಅವರು ಸಾಧನೆಯ ಮೆಟ್ಟಿಲುಗಳನ್ನು ಏರುತ್ತ ಸಾಗಿದರು. 2013ರಲ್ಲಿ ಅಂತಾರಾಷ್ಟ್ರೀಯ ಬಾಳ್ವೆ ಆರಂಭಿಸಿದ ಬಳಿಕ ಜಾವೆಲಿನ್‌ನಲ್ಲಿ ಅಪ್ರತಿಮ ಸಾಧನೆ ಮಾಡಿದರು. “ಮುಟ್ಟಿದ್ದೆಲ್ಲವೂ ಚಿನ್ನ’ ಎಂಬಂತೆ ಸ್ಪರ್ಧಿಸಿದ ಪ್ರತಿಯೊಂದು ಕೂಟದಲ್ಲೂ ಪದಕ ಗೆದ್ದ ಹಿರಿಮೆ ಅವರದ್ದಾಯಿತು. ಜೂನಿಯರ್ ವಿಶ್ವಕಪ್‌ನಿಂದ ಅರಂಭಿಸಿ ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್, ಒಲಿಂಪಿಕ್ಸ್ ಮತ್ತು ಇದೀಗ ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಅಗ್ರ ಪ್ರಶಸ್ತಿ ಗೆದ್ದು ಮೋಡಿ ಮಾಡಿದ್ದಾರೆ.
90 ಮೀ. ಗುರಿ
ಜಾವೆಲಿನ್ ಅನ್ನು 90 ಮೀ. ದೂರಕ್ಕೆ ಎಸೆಯುವುದು ಅವರ ಬಹುಕಾಲದ ಕನಸಾಗಿತ್ತು. ಇದೀಗ ಅವರ ಮುಂದಿನ ಗುರಿ 90 ಮೀ. ಎಸೆಯುವುದು ಆಗಿದೆ. ಮುಂದಿನ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಈ ಗುರಿ ಈಡೇರಿಸುವ ಆತ್ಮವಿಶ್ವಾಸ ಹೊಂದಿದ್ದಾರೆ. ಕಳೆದ ವರ್ಷ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ 89.94 ಮೀ. ದೂರ ಎಸೆದಿರುವುದು ಅವರ ಈವರೆಗಿನ ವೈಯಕ್ತಿಕ ಶ್ರೇಷ್ಠ ಸಾಧನೆ ಆಗಿದೆ. ಉತ್ತಮ ಸಾಧನೆ ಮಾಡುವ ಹಸಿವು, ಅದ್ಭುತ ಕೌಶಲ, ಅಸಾಮಾನ್ಯ ಫಾರ್ಮ್ನಲ್ಲಿರುವ ನೀರಜ್ ಈ ಗುರಿ ಸಾಧಿಸುವುದರಲ್ಲಿ ಸಂಶಯವಿಲ್ಲ.
ನೀರಜ್ ಅವರ ಬಾಲ್ಯ
ಹರಿಯಾಣದ ಪಾಣಿಪತ್‌ನ ಖಂಡರ್ ಎಂಬ ಗ್ರಾಮದಲ್ಲಿ 1997ರ ಡಿ. 24ರಂದು ನೀರಜ್ ಅವರ ಜನನ. ತಂದೆ ಸತೀಶ್ ಕುಮಾರ್ ಕೃಷಿಕ. ತಾಯಿ ಸರೋಜಾ ದೇವಿ ಗೃಹಿಣಿ. ಬಾಲ್ಯದಲ್ಲಿ ತನ್ನಿಬ್ಬರು ಸಹೋದರಿಯರು ಹಾಗೂ ಸಹಪಾಠಿಗಳ ಜತೆ ಬೆಳೆದರು. 11ನೇ ವರ್ಷಕ್ಕೆ 80 ಕೆ.ಜಿ. ಭಾರ ಹೊಂದಿದ್ದ ಅವರನ್ನು ಸಹಪಾಠಿಗಳು ದೃಢಕಾಯ, ಸರ್‌ಪಂಚ್ ಎಂದು ಹೀಯಾಳಿಸುತ್ತಿದ್ದರು.
ಪುತ್ರನ ದೇಹಭಾರ ನಿಯಂತ್ರಣಕ್ಕೆ ಸಿಗದಿದ್ದಾಗ ಕುಟಂಬ ಸದಸ್ಯರು ಗದ್ದೆ ತೋಟದಲ್ಲಿ ಓಡುವಂತೆ ಪ್ರೇರೇಪಿಸಿದರಲ್ಲದೇ ಪಾಣಿಪತ್‌ನಲ್ಲಿರುವ ಜಿಮ್‌ಗೆ ಸೇರಿಸಿದರು. ಈ ವೇಳೆ ಕೆಲವರು ಜಾವೆಲಿನ್ ಎಸೆಯುವುದನ್ನು ನೋಡಿ ನೀರಜ್ ಕೂಡ ಅದಕ್ಕೆ ಆಕರ್ಷಿತರಾಗಿ ಅವರೊಂದಿಗೆ ಸೇರಿ ಎಸೆಯಲು ಆರಂಭಿಸಿದರು. ಯಾವುದೇ ಅಭ್ಯಾಸವಿಲ್ಲದೇ ಆಗಲೇ 40 ಮೀ. ದೂರ ಎಸೆಯುವುದನ್ನು ಗಮನಿಸಿದ ಜೈವೀರ್ ಚೌಧರಿ ಎನ್ನುವವರು ಆತನಿಗೆ ಮೊದಲ ಗುರು ಆಗಿ ಜಾವೆಲಿನ್‌ನ ಮೂಲ ಪಾಠ ಹೇಳಿಕೊಟ್ಟರು.
ವರ್ಷದ ಬಳಿಕ ಪಂಚಕುಲದಲ್ಲಿರುವ ದೇವಿಲಾಲ್ ಕ್ರೀಡಾ ಸಂಕೀರ್ಣಕ್ಕೆ ಸೇರ್ಪಡೆಗೊಂಡ ಬಳಿಕ ಪ್ರಸಿದ್ಧಿಗೆ ಬಂದರು. ಸ್ಪರ್ಧೆಗಳಲ್ಲಿ ಪದಕ ಗೆಲ್ಲುತ್ತ ಮುನ್ನಡೆದರು.
ಅಂತಾರಾಷ್ಟ್ರೀಯ ಸ್ಪರ್ಧೆಗೆ ಪ್ರವೇಶ
2013ರಲ್ಲಿ ನೀರಜ್ ಅಂತಾರಾಷ್ಟ್ರೀಯ ಸ್ಪರ್ಧೆಗೆ ಪ್ರವೇಶ ಪಡೆದರು. ಉಕ್ರೇನ್‌ನಲ್ಲಿ ನಡೆದ ವಿಶ್ವ ಯೂತ್ ಕೂಟದಲ್ಲಿ ಅವರು ಯಾವುದೇ ಪದಕ ಗೆಲ್ಲಲಿಲ್ಲ. ಆದರೆ ಬಹಳಷ್ಟು ವಿಷಯ ಕಲಿತರಲ್ಲದೇ ಅನುಭವ, ಎಸೆತದ ಸೂಕ್ಷ್ಮಗಳನ್ನು ಅರಿತುಕೊಂಡರು. ಮರುವರ್ಷ (2014) ನಡೆದ ಯೂತ್ ಒಲಿಂಪಿಕ್ಸ್ ಅರ್ಹತಾ ಕೂಟದಲ್ಲಿ ಪಾಲ್ಗೊಂಡ ಅವರು ಮೊದಲ ಪದಕ (ಬೆಳ್ಳಿ) ಗೆದ್ದರು.
2016ರಲ್ಲಿ ಪಟಿಯಾಲದ ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆಗೆ ಸೇರಿದರು. ಇದು ಅವರ ಜಾವೆಲಿನ್ ಬಾಳ್ವೆ ಮಹತ್ವದ ತಿರುವು ಪಡೆಯಲು ಕಾರಣವಾಯಿತು. ಅಲ್ಲಿನ ಉತ್ಕೃಷ್ಟ ಸೌಕರ್ಯ, ಗುಣಮಟ್ಟದ ಆಹಾರ ಪದ್ಧತಿ, ತರಬೇತಿಯಿಂದ ಸಾಧನೆಯ ಶಿಖರವೇರಲು ಸಹಕಾರಿಯಾಯಿತು.
ಅದೇ ವರ್ಷ ವಿಶ್ವ ಅಂಡರ್-20 ಕೂಟದಲ್ಲಿ ವಿಶ್ವದಾಖಲೆಯ ಸಾಧನೆ. ಈ ಸಾಧನೆ ಮಾಡಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆ ಸಂಪಾದನೆ. 2017ರಲ್ಲಿ ಏಷ್ಯನ್ ಆ್ಯತ್ಲೆಟಿಕ್ಸ್‌ನಲ್ಲಿ ಚಿನ್ನ. ಮರುವರ್ಷ ಜಕಾರ್ತ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದು ದಾಖಲೆ ನಿರ್ಮಿಸಿದರು. ಇದು ಜಾವೆಲಿನ್‌ನಲ್ಲಿ ಭಾರತಕ್ಕೆ ಲಭಿಸಿದ ಮೊಲ ಚಿನ್ನವೆಂಬ ಹೆಮ್ಮೆ.
2019ರಲ್ಲಿ ಎಲುಬಿನ ಶಸ್ತ್ರಚಿಕಿತ್ಸೆ
2019ರಲ್ಲಿ ಜಾವೆಲಿನ್ ಎಸೆಯುವ ಬಲ ಕೈಯ ಎಲುಬಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ಇದರಿಂದ 8 ತಿಂಗಳು ಸ್ಪರ್ಧೆಯಿಂಧ ಹೊರಗುಳಿಯಬೇಕಾಯಿತು. ಶಸ್ತ್ರಚಿಕಿತ್ಸೆ ಬಳಿಕ ಸಾಧನೆ ಮಾಡಬೇಕೆಂಬ ಅವರ ಉತ್ಸಾಹ ಸ್ವಲ್ಪವೂ ಕುಗ್ಗಲಿಲ್ಲ. ಚೇತರಿಸಿಕೊಂಡ ತತ್‌ಕ್ಷಣ ಸೈಕ್ಲಿಂಗ್ ಆರಂಭಿಸಿದ ಅವರು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಅಭ್ಯಾಸದ ಕಡೆಗೆ ಗಮನ ಹರಿಸಿದರು. ಕಠಿನ ಅಭ್ಯಾಸ ಮಾಡುತ್ತ ಶಕ್ತಿಯನ್ನು ಹೆಚ್ಚಿಸಿಕೊಂಡು ಮುಂದಿನ ಸ್ಪರ್ಧೆಗಳಿಗೆ ಅಣಿಯಾದರು. ಇದೇ ವೇಳೆ ಕೊರೊನಾ ಕಾರಣದಿಂದಾಗಿ ಯಾವುದೇ ಸ್ಪರ್ಧೆಗಳಿಲ್ಲದ ಕಾರಣ ತರಬೇತಿ, ಅಭ್ಯಾಸಕ್ಕೆ ತನ್ನೆಲ್ಲ ಸಮಯವನ್ನು ಮೀಸಲಿಟ್ಟರು. ಈ ನಡುವೆ ಜಾವೆಲಿನ್ ಕೋಚ್ ಯುವೆ ಹಾನ್ ಅವರಿಂದ ಮಾರ್ಗದರ್ಶನ ಪಡೆದ ಅವರು ಎಸೆತದ ತಂತ್ರಗಾರಿಕೆ ಹೆಚ್ಚಿಸುವತ್ತ ಗಮನ ಕೇಂದ್ರೀಕರಿಸಿದರು.
ಒಲಿಂಪಿಕ್ಸ್ ಬಳಿಕ ಸ್ವರ್ಣ ಯುಗ
ಕೋವಿಡ್ ಸಮಯದಲ್ಲಿ ಸಿಕ್ಕಿದ ಅವಿರತ ತರಬೇತಿಯಿಂದ ಅವರಲ್ಲಿದ್ದ ಆತ್ಮವಿಶ್ವಾಸ ಇನ್ನಷ್ಟು ಬೆಳೆಯಿತಲ್ಲದೇ ಇನ್ನಷ್ಟು ದೂರ ಎಸೆಯುವ ಉತ್ಸಾಹಕ್ಕೆ ಪ್ರೇರಣೆಯಾಯಿತು. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ನೀರಜ್ ಮತ್ತೆ ಹಿಂದಿರುಗಿ ನೋಡಿಲ್ಲ. ಸ್ವರ್ಣ ಯುಗದ ಪುಟ ತೆರೆದಿಟ್ಟರು. 2022ರಲ್ಲಿ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿ ಚಿನ್ನ ಗೆದ್ದರೆ ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಸಂಭ್ರಮ ಆಚರಿಸಿದರು. ಈ ವರ್ಷ ಲಾಸನ್ನೆ ಡೈಮಂಡ್ ಲೀಗ್‌ನಲ್ಲಿ ಮತ್ತೆ ಚಿನ್ನಕ್ಕೆ ಒಡೆಯರಾದರೆ ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದು ಅಸಾಮಾನ್ಯ ಸಾಧಕರಾಗಿ ಮೂಡಿ ಬಂದರು.
ಶಂಕರನಾರಾಯಣ ಪಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
Zakir Hussain; ನಾದಯೋಗಿಯ ನಿನಾದ ಸ್ತಬ್ಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.