ಹಳೆ ಪ್ರಸ್ತಾಪಕ್ಕೆ ಹೊಸ ರೂಪ; ಯಕ್ಷ ರಂಗಾಯಣದಲ್ಲೇ ಕಚೇರಿಗೆ ಚಿಂತನೆ
ಕಾರ್ಕಳಕ್ಕೆ ಯಕ್ಷಗಾನ ಅಕಾಡೆಮಿ ಸ್ಥಳಾಂತರ?
Team Udayavani, Jun 29, 2022, 10:14 AM IST
ಶಿರಸಿ: ರಾಜಧಾನಿ ಬೆಂಗಳೂರಿನಲ್ಲಿರುವ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿಯನ್ನು ದಕ್ಷಿಣ ಕನ್ನಡದ ಕಾರ್ಕಳಕ್ಕೆ ಸ್ಥಳಾಂತರಿಸುವ ಕುರಿತು ರಾಜ್ಯ ಸರಕಾರದ ಮುಂದೆ ಪ್ರಸ್ತಾವನೆ ಇದೆ.ರಾಜ್ಯ ಸರಕಾರ ನೂತನವಾಗಿ ಆರಂಭಿಸಿದ ಯಕ್ಷ ರಂಗಾಯಣದ ಜತೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿಯನ್ನೂ ನಡೆಸುವ ಚಿಂತನೆ ಇದಾಗಿದೆ. ಲಭ್ಯ ಮಾಹಿತಿಯ ಪ್ರಕಾರ ಕಳೆದ 24 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ಸಂಬಂಧದ ಪತ್ರ ಸರಕಾರಕ್ಕೂ ಸಲ್ಲಿಕೆಯಾಗಿ ಆದೇಶ ಅಧಿಕೃತಗೊಳ್ಳಬೇಕಿದೆ.
ಹಳೆ ಪ್ರಸ್ತಾಪ
ಇದೇ ಬಿಜೆಪಿ ಸರಕಾರ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಇಂದಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆಸಕ್ತಿಯಿಂದ ಬಯಲಾಟ ಯಾಗೂ ಯಕ್ಷಗಾನ ಜೊತೆಯಾಗಿರುವ ಅಕಾಡೆಮಿಯನ್ನು ಯಕ್ಷಗಾನಕ್ಕೇ ಪ್ರತ್ಯೇಕಗೊಳಿಸಿ ಕನ್ನಡದ ಕಲೆಯ ಮಹತ್ವಕ್ಕೆ ಒಂದು ಸ್ಪಷ್ಟ ಮಹತ್ವ ಕೊಡಿಸಿದ್ದರು. ಇದೀಗ ಯಕ್ಷ ರಂಗಾಯನವನ್ನೂ ಕಳೆದ ಬಜೆಟ್‌ನಲ್ಲಿ ಪ್ರಕಟಿಸಿ, ಸಚಿವ ಸುನೀಲ್ ಕುಮಾರ್ ಅವರ ವಿಶೇಷ ಆಸಕ್ತಿಯಿಂದ ಮುನ್ನಡೆ ಇಟ್ಟಿದೆ. ಕಾರ್ಕಳ ಕೇಂದ್ರವಾಗಿ ಯಕ್ಷ ರಂಗಾಯನ ಕೆಲಸ ಆರಂಭಿಸಿದೆ.ಆದರೆ, ಈಗ ಮತ್ತೆ ಅಕಾಡೆಮಿಯ ಸ್ಥಳಾಂತರ ಪ್ರಸ್ತಾಪ ಮುಂಚೂಣಿಗೆ ಬಂದಿದ್ದು, ಹಳೆ ಪ್ರಸ್ತಾವನೆ ಹೊಸ ರೂಪದಲ್ಲಿ ಮತ್ತೆ ತಲೆ ಎತ್ತಿದೆ. ಯಕ್ಷಗಾನ ಅಕಾಡೆಮಿ ಜನಿಸಿ ಇನ್ನೂ ಐದು ವರ್ಷ ಆಗಿಲ್ಲ. ಈಗಾಗಲೇ ಇದರ ಕೇಂದ್ರ ಸ್ಥಾನ ಎಲ್ಲಿ ಎಂಬ ಪ್ರಸ್ತಾಪ ಸರಕಾರದ ಮುಂದೆ ಎರಡು ಬಾರಿ ಬಂದಂತಾಗಿದೆ. ಹಿಂದೆ ಸಿ.ಟಿ.ರವಿ ಅವರು ಇಲಾಖೆಯ ಸಚಿವರಾಗಿದ್ದಾಗ ದಿ. ಪ್ರೋ. ಎಂ.ಎ.ಹೆಗಡೆ ಅವರು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದರು. ಆ ಅವಧಿಯಲ್ಲಿ ಬೆಂಗಳೂರೇ ಅಕಾಡೆಮಿಗಳಿಗೆ ಕೇಂದ್ರ ಕಚೇರಿ ಆಗಬೇಕು. ಮಂಗಳೂರಿಗೋ? ಶಿರಸಿಗೋ ಒಯ್ಯುವದು ಸರಿಯಲ್ಲ ಎಂದು ಹೆಗಡೆ ವಾದಿಸಿದ್ದರು. ಅಲ್ಲಿಗೆ ತಣ್ಣಗಾಗಿದ್ದ ಸ್ಥಳಾಂತರ ಪ್ರಸ್ತಾವ ಇದೀಗ ಮತ್ತೆ ಚಿಗುರೊಡೆದಿದೆ.
ಯಕ್ಷಗಾನ ಕರ್ನಾಟಕದ ಕಲೆ!
ಯಕ್ಷಗಾನ ಅಕಾಡೆಮಿ ಎಂದರೆ ಕೇವಲ ಯಕ್ಷಗಾನದ ತೆಂಕು ಬಡಗು ಮಾತ್ರವಲ್ಲ, ಕೇಳಿಕೆ, ಘಟ್ಟದ ಕೋರೆ, ಮೂಡಲಪಾಯಗಳೂ ಬರುತ್ತವೆ. ಅವುಗಳಿಗೆ ಕೂಡ ಕೇಂದ್ರ ಸ್ಥಾನ, ಕಚೇರಿ ವಹಿವಾಟು ದೃಷ್ಟಿಯಿಂದಲೂ ರಾಜಧಾನಿಯೇ ಸರಿ ಎಂಬುದು ಹಲವರ ವಾದ. ಯಕ್ಷಗಾನ ಅಕಾಡೆಮಿಗೆ ಇನ್ನಷ್ಟು ಬಲ ಕೊಡುವದು ಬಿಟ್ಟು ಅದನ್ನು ನಿಧಾನವಾಗಿ ಮುಗಿಸಿ, ರಂಗಾಯಣಕ್ಕೆ ಜೊತೆಯಾಗಿಸುವಲ್ಲಿ ಸರಕಾರ ಮುಂದಾಗಿದ್ದರೆ ಅದು ಸರಿಯಲ್ಲ ಎಂದೂ ಕಚೇರಿ ಸ್ಥಳಾಂತರದ ಜೊತೆ ವಿಷಯದ ಜೊತೆ ಕಲಾವಿದರೂ ಅಭಿಪ್ರಾಯ ಮುಂದೆ ಇಟ್ಟಿದ್ದಾರೆ. ಯಕ್ಷಗಾನ ಕರುನಾಡಿನ ಪ್ರಾತಿನಿಧಿಕ ಕಲೆ. ಅದು ರಾಜ್ಯದ ರಾಜಧಾನಿಯಲ್ಲಿದ್ದೇ ಶೋಭೆ. ಉಳಿದ ಕೆಲಸಗಳಿಗೆ ತೆರಳಿದವರು ಅಕಾಡೆಮಿ ಕೆಲಸ ಕೂಡ ಮುಗಿಸಿ ಬರಲು ಸಾಧ್ಯವಾಗುತ್ತದೆ ಎಂಬುದು ಕಲಾವಿದರ ವಾದ. ಈಗಿನ ಕನ್ನಡ ಭವನದಲ್ಲಿ ಸ್ಥಳದ ಕೊರತೆ ಆದರೆ, ಕಲಾಗ್ರಾಮದಲ್ಲೂ ಅಕಾಡೆಮಿ ಕಚೇರಿ ಮಾಡಬಹುದಲ್ಲ ಎಂಬ ಸಲಹೆ ಕೂಡ ಕಲಾ ಸಂಘಟನೆಗಳು ಸರಕಾರಕ್ಕೆ ನೀಡಲು ಮುಂದಾಗಿವೆ. ಈ ಮಧ್ಯೆ ಯಕ್ಷಗಾನ ಅಕಾಡೆಮಿಯ ಕೇಂದ್ರ ಕಚೇರಿ ಸ್ಥಳಾಂತರ ಕುರಿತು ಸರಕಾರವೇ ನೇಮಕಗೊಳಿಸಿದ ಅಕಾಡೆಮಿ ಅಧ್ಯಕ್ಷರನ್ನಾಗಲೀ, ಜನಪ್ರತಿನಿಧಿಗಳ ಅಭಿಪ್ರಾಯ ಕೇಳಿಲ್ಲ ಎಂಬ ಮಾತೂ ಕೇಳಿಬಂದಿದೆ.
ಬ್ಯಾರಿ, ಕೊಂಕಣಿ ಸೇರಿದಂತೆ ಉಳಿದ ಕೆಲ ಅಕಾಡೆಮಿಗಳು ಪ್ರಾದೇಶಿಕವಾಗಿಯೇ ಇದೆ. ಉಡುಪಿಯಲ್ಲಿ ಕೇಂದ್ರ ಕಚೇರಿ ಮಾಡಬೇಕು ಎಂಬ ಪ್ರೆಸ್ತಾವ ಇತ್ತು. ಆದರೆ, ಕಾರ್ಕಳದಲ್ಲಿ ರಂಗಾಯಣದ ಅಡಿಟೋರಿಯಂ, ಕಟ್ಟಡ ಎಲ್ಲ ನಿರ್ಮಾಣ ಆಗುತ್ತಿದ್ದು, ಅಲ್ಲೇ ಅಕಾಡೆಮಿಗೂ ಸ್ಥಳ ನೀಡುವ ಪ್ರಸ್ತಾವ ಇದೆ. ಸಾಧಕ ಬಾಧಕ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ.
ವಿ.ಸುನೀಲ್ ಕುಮಾರ್ , ಸಚಿವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಯಕ್ಷಗಾನವನ್ನು ವಿಸ್ತರಿಸುವ ದೃಷ್ಟಿಯಿಂದ ಅದು ನಾಡಿನ ಕೇಂದ್ರವಾದ ಬೆಂಗಳೂರಿನಲ್ಲಿ ಇರಬೇಕು. ಇದರಿಂದ ಕನ್ನಡ ಸಂಸ್ಕೃತಿಯ ವಿಸ್ತಾರಕ್ಕೂ ತುಂಬಾ ಅನುಕೂಲ.
ಡಾ.ಜಿ.ಎಲ್.ಹೆಗಡೆ, ಅಧ್ಯಕ್ಷರು ಯಕ್ಷಗಾನ ಅಕಾಡೆಮಿ
ರಾಘವೇಂದ್ರ ಬೆಟ್ಟಕೊಪ್ಪ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.