“ಕೇಂದ್ರದ ಹಣ ತಡವಾಗಿ ಬಂದರೂ ಸಮಸ್ಯೆ ಇಲ್ಲ’
Team Udayavani, Oct 3, 2019, 3:05 AM IST
ಬೆಂಗಳೂರು: ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ಬಿಡುಗಡೆ ವಿಳಂಬವಾಯಿತು ಎಂಬುದು ದೊಡ್ಡ ವಿಚಾರವಲ್ಲ. ನಾವು ಕೇಂದ್ರ ಸರ್ಕಾರದ ಪರಿಹಾರಕ್ಕೆ ಕಾದು ಕುಳಿತಿಲ್ಲ. ಕೇಂದ್ರದಿಂದ ಹಣ ತಡವಾಗಿ ಬಂದರೂ ಸಮಸ್ಯೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.
“ಇಂಡಿಯಾನ- ಇಂಡಿಯಾ ಬಿಸಿನೆಸ್ ಮೀಟ್’ನಲ್ಲಿ ಪಾಲ್ಗೊಳ್ಳಲು ಬುಧವಾರ ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಹಾರದ ನೆರೆ ವಿಚಾರದಲ್ಲಿ ಪ್ರಧಾನಿಯವರು ಟ್ವೀಟ್ ಮಾಡಿದ್ದನ್ನು ಮಾನವೀಯತೆಯಡಿ ನೋಡಬೇಕು. ನೆರೆಪೀಡಿತ ಪ್ರದೇಶದಲ್ಲಿ ರಾಜ್ಯ ಸರ್ಕಾರದಿಂದ ಪರಿಹಾರ ಕಾರ್ಯ ಆರಂಭಿಸಿದ್ದೇವೆ.
ಕೇಂದ್ರದಿಂದ ದೊಡ್ಡ ಮೊತ್ತದ ಹಣ ಬರಬೇಕಿದೆ. ರಾಜ್ಯಕ್ಕೆ ಸಿಗಬೇಕಾದ ಪರಿಹಾರ ಸಿಕ್ಕೇ ಸಿಗುತ್ತದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದ ಹಣಕ್ಕಾಗಿ ಕಾದು ಕುಳಿತುಕೊಳ್ಳಬೇಕಾದ ಅಗತ್ಯವಿಲ್ಲ. ಈ ಹಿಂದೆ ಮನೆ ಕುಸಿದಾಗ ಒಂದು ಲಕ್ಷ ರೂ.ಪರಿಹಾರ ನೀಡಲಾಗುತ್ತಿತ್ತು. ಈಗ ತಲಾ ಐದು ಲಕ್ಷ ರೂ.ಪರಿಹಾರ ಘೋಷಿಸಲಾಗಿದೆ.
ಈಗಾಗಲೇ ಮನೆ ನಿರ್ಮಾಣ ಆರಂಭಿಕ ಕಾಮಗಾರಿಗೆ ಒಂದು ಲಕ್ಷ ರೂ.ವಿತರಣೆಗೆ ಸೂಚಿಸಲಾಗಿದೆ. ಕೇಂದ್ರ ಗೃಹ ಸಚಿವರು, ಹಣಕಾಸು ಸಚಿವರು ರಾಜ್ಯದ ಪರಿಸ್ಥಿತಿ ಅವಲೋಕಿಸಿದ್ದಾರೆ. ಕೇಂದ್ರ ತಂಡ ಕೂಡ ಅಧ್ಯಯನ ನಡೆಸಿ ವರದಿ ನೀಡಿದೆ. ಗುರುವಾರ ಸಭೆ ನಡೆಯಲಿದ್ದು, ಹಣ ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೆರಡು ದಿನದಲ್ಲಿ ಕೇಂದ್ರದಿಂದ ಪರಿಹಾರ
ಮೈಸೂರು: ರಾಜ್ಯದ ನೆರೆ ಪರಿಹಾರಕ್ಕೆ 2-3 ದಿನಗಳಲ್ಲಿ ಕೇಂದ್ರದಿಂದ ಅನುದಾನ ಘೋಷಣೆ ಯಾಗುವ ಭರವಸೆ ಇದೆ. ಈ ಬಗ್ಗೆ ಯಾವುದೇ ಪಕ್ಷದವರು ಗೊಂದಲ ಉಂಟು ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿಯವರು ವಿದೇಶ ಪ್ರವಾಸ ಮುಗಿಸಿ ಈಗಷ್ಟೇ ಭಾರತಕ್ಕೆ ವಾಪಸ್ಸಾಗಿದ್ದಾರೆ.
ದೇಶದಲ್ಲಿ ಪ್ರವಾಹ ಪೀಡಿತ ಯಾವುದೇ ರಾಜ್ಯಗಳಿಗೂ ಇನ್ನೂ ಕೇಂದ್ರದಿಂದ ಪರಿಹಾರ ಧನ ಬಿಡುಗಡೆ ಮಾಡಿಲ್ಲ. ಮೋದಿ ಬುದ್ಧಿವಂತರಿದ್ದಾರೆ. ಅವರಿಗೆ ಎಲ್ಲಾ ರಾಜ್ಯಗಳ ಪರಿಸ್ಥಿತಿಯೂ ಗೊತ್ತಿದೆ. ಕರ್ನಾಟಕಕ್ಕೆ ಶೀಘ್ರ ಪರಿಹಾರ ಘೋಷಣೆ ಮಾಡುತ್ತಾರೆ. ಇದಕ್ಕಾಗಿ ಯಾರೂ ದೆಹಲಿಗೆ ಹೋಗಬೇಕಾಗಿಲ್ಲ. ನೆರೆ ಪರಿಹಾರಕ್ಕೆ ಯಾರ ಶಿಫಾರಸು ಬೇಕಿಲ್ಲ ಎಂದರು.
ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಜನರ ಜೀವನವೇ ಕೊಚ್ಚಿಕೊಂಡು ಹೋಗಿದೆ. ಆದರೆ, ಮೋದಿ ಇತ್ತ ತಿರುಗಿಯೂ ನೋಡಿಲ್ಲ. ಒಂದು ಟ್ವೀಟ್ ಸಹ ಮಾಡಿಲ್ಲ. ಕೇಂದ್ರದಿಂದ ಪರಿಹಾರ ತರಲು ಆಗುವುದಿಲ್ಲವೆಂದರೆ ಬಿಜೆಪಿ ಸಂಸದರು ಬಳೆ, ಸೀರೆ ತೊಟ್ಟು ಕುಳಿತುಕೊಳ್ಳಲಿ.
-ಶಿವರಾಜ ತಂಗಡಗಿ, ಮಾಜಿ ಸಚಿವ
ಬಿಹಾರ ನೆರೆ ವಿಚಾರವಾಗಿ ಮೋದಿ ಟ್ವೀಟ್ ಗಮನಿಸಿದ್ದೇನೆ. ಬಿಹಾರದಲ್ಲಿ ಮೈತ್ರಿ ಸರ್ಕಾರವಿದ್ದು, ಮುಂದಿನ ಬಾರಿ ಬಹುಮತ ಪಡೆಯಬಹುದು. ಆ ಕಾರಣಕ್ಕೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಮಹಾರಾಷ್ಟ್ರ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಇದೆ.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಮಳೆಯಿಂದಾಗಿ ಸಂಪೂರ್ಣ ಮನೆ ಬಿದ್ದವರಿಗೆ 5 ಲಕ್ಷ ಹಾಗೂ ಭಾಗಶ: ಮನೆ ಬಿದ್ದವರಿಗೆ 1 ಲಕ್ಷ ಪರಿಹಾರ ನೀಡಲಾಗುತ್ತಿದೆ. ಮನೆಯಲ್ಲಿನ ಮಹಿಳೆಯರ ಖಾತೆಗೆ ಹಣ ಜಮಾ ಮಾಡಲು ನಿರ್ಧರಿಸಲಾಗಿದೆ.
-ಜಗದೀಶ ಶೆಟ್ಟರ್, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.