“ಕಲ್ಯಾಣ’ ಆಗಿಲ್ಲ; “ಕಿತ್ತೂರು’ ರಚನೆಯಾಗಿಲ್ಲ!
Team Udayavani, Mar 1, 2020, 3:10 AM IST
ಬೆಂಗಳೂರು: ಹೈದರಾಬಾದ್ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ “ಕಲ್ಯಾಣ ಕರ್ನಾಟಕ’ ಹೆಸರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಘೋಷಣೆ ಮಾಡಿದರು. ಹೈದರಾಬಾದ್ ಕರ್ನಾಟಕ ಪ್ರದೇಶ ಕಲ್ಯಾಣ ಕರ್ನಾಟಕವಾಗಿ ಬದಲಾಯಿತು. ಆದರೆ, ಮುಂಬೈ ಕರ್ನಾಟಕ ಭಾಗವನ್ನು “ಕಿತ್ತೂರು ಕರ್ನಾಟಕ’ ಎಂದು ಘೋಷಣೆ ಮಾಡದೇ ಹಾಗೆ ಉಳಿಸಿಕೊಳ್ಳಲಾಯಿತು.
ಆದರೆ, ಕಲ್ಯಾಣ ಕರ್ನಾಟಕ ಮತ್ತು ಉದ್ದೇಶಿತ ಕಿತ್ತೂರು ಕರ್ನಾಟಕ ಭಾಗಗಳ ಜನರ ಬೇಡಿಕೆ ಈ ಬಜೆಟ್‌ನಲ್ಲಿ ನೀಗಬಹುದೆಂಬ ನಿರೀಕ್ಷೆಯಂತೂ ಇದ್ದೇ ಇದೆ. ಕಲ್ಯಾಣ ಕರ್ನಾಟಕ ಮರುನಾಮಕರಣಗೊಂಡ ನಂತರ ಆ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಸೇರಿ ಆರು ಜಿಲ್ಲೆಗಳಿಗೆ ರಾಜ್ಯ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆಯಾಗುತ್ತದೆಂಬ ನಿರೀಕ್ಷೆಯಿತ್ತು.
ಆದರೆ, ಕಲ್ಯಾಣದ ಹೆಸರು ಬದಲಾದಂತೆ ಅನುದಾನ ಬರಲಿಲ್ಲ ಎಂಬ ಬೇಸರ ಆ ಭಾಗದ ಜನರಲ್ಲಿದೆ. ಮುಂಬರುವ ಬಜೆಟ್‌ನಲ್ಲಿ ಸುಮಾರು 2 ಸಾವಿರ ಕೋಟಿ ರೂ. ಅನುದಾನ ಮೀಸಲಿಡುವ ನಿರೀಕ್ಷೆಯಲ್ಲಿ ಆ ಭಾಗದ ಜನರಿದ್ದಾರೆ. ಇನ್ನು, ಆರು ಜಿಲ್ಲೆಗಳಿಗೆ ಸೇರಿ ಕೇವಲ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿರುವುದು ಆ ಭಾಗಕ್ಕೆ ನಿರೀ ಕ್ಷಿತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಭಾವನೆ ಆ ಭಾಗದ ರಾಜಕೀಯ ನಾಯಕರಲ್ಲಿ ಮೂಡಲು ಕಾರಣವಾಗಿದೆ.
ನೇಮಕವಾಗದ ಅಧ್ಯಕ್ಷರು: ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಅಭಿ ವೃದ್ಧಿ ಮಂಡಳಿಯ ಹೆಸರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣಗೊಂಡಿದ್ದರೂ, ಆ ಮಂಡಳಿಗೆ ಇದುವರೆಗೂ ಅಧ್ಯಕ್ಷರನ್ನು ನೇಮಕ ಮಾಡದಿರುವುದು ಮಂಡಳಿ ಇದ್ದೂ ಇಲ್ಲದಂತಾಗಿದೆ. ಅಲ್ಲದೇ, ಮಂಡಳಿಗೆ ಸಂಪುಟ ದರ್ಜೆಯ ಸಚಿವರನ್ನೇ ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ನಿಯಮವನ್ನು ಬದಲಾಯಿಸಿ ಸಚಿವಾಕಾಂಕ್ಷಿಗಳಾಗಿರುವ ಶಾಸಕರಿಗೆ ಹುದ್ದೆ ಕಲ್ಪಿಸುವ ನಿಟ್ಟಿನಲ್ಲಿ ಶಾಸಕರನ್ನೂ ಅಧ್ಯಕ್ಷರನ್ನಾಗಿ ಮಾಡಬಹುದೆಂದು ತಿದ್ದುಪಡಿ ಮಾಡಲಾಗಿದೆ. ಇದು ಮಂಡಳಿಯ ಉದ್ದೇಶವನ್ನೇ ತಲೆಕೆಳಗಾಗುವಂತೆ ಮಾಡಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿರುವುದರಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿಯೂ ಮೀಸಲಾತಿ ನೀಡಲಾಗಿದೆ. ಅಲ್ಲದೇ, ಹೆಚ್ಚಿನ ಅನುದಾನ ಹಾಗೂ ಪ್ರಮುಖ ನಿರ್ಣಯ ಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಸಂಪುಟ ದರ್ಜೆಯ ಸಚಿವರು ಅಧ್ಯಕ್ಷರಾಗಿದ್ದರೆ, ಅವರು ನೇರ ವಾಗಿ ಸಂಪುಟದಲ್ಲಿ ಚರ್ಚಿಸಿ ಸಮಸ್ಯೆ ಪರಿಹರಿಸಿ ಕೊಳ್ಳಲು ಅವಕಾಶ ಕಲ್ಪಿಸಿದಂತಾಗಿತ್ತು. ಆದರೆ, ಶಾಸಕ ರಿಗೆ ಅಧ್ಯಕ್ಷರನ್ನಾಗಿ ಮಾಡಿರುವುದರಿಂದ ಅವರು ಸಂಪುಟ ಸಭೆಗೆ ಹೋಗಲು ಅವಕಾಶವಿಲ್ಲದ ಕಾರಣ ಬೇಡಿಕೆಗಳಿಗೆ “ಶಿಫಾರಸು’ ಉತ್ತರ ನೀಡಿ ಕೈ ತೊಳೆದು ಕೊಳ್ಳುವುದಕ್ಕಷ್ಟೇ ಸಮಾಧಾನ ಪಟ್ಟುಕೊಳ್ಳಬೇಕಾಗುತ್ತದೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಹೆಚ್ಚಾಗದ ಅನುದಾನ: ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸಿದ್ದರಾಮಯ್ಯ ಅವಧಿಯಲ್ಲಿ 1,500 ಕೋಟಿ ರೂ. ಮೀಸಲಿಡಲಾಗಿತ್ತು. ಆ ನಂತರ ಅಧಿಕಾರಕ್ಕೆ ಬಂದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಅವಧಿಯಲ್ಲಿ ಕಲ್ಯಾಣ ಕರ್ನಾಟಕ (ಅಂದಿನ ಹೈದರಾಬಾದ್ ಕರ್ನಾಟಕ) ಅಭಿವೃದ್ಧಿಗೆ 1 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡುವಂತೆ ಆ ಭಾಗದ ಎಲ್ಲ ಶಾಸಕರು ಪಕ್ಷ ಭೇದ ಮರೆತು ಮನವಿ ಸಲ್ಲಿಸಿದ್ದರು. ಅವರ ಮನವಿಯಂತೆ ವಿಶೇಷ ಪ್ಯಾಕೇಜ್ ನೀಡಲು ಯೋಜನೆಗಳ ನೀಲನಕ್ಷೆ ಸಿದ್ದಪಡಿ ಸುವಂತೆಯೂ ಕುಮಾರಸ್ವಾಮಿ ಸೂಚಿಸಿದ್ದರು. ಆದರೆ, ಮೈತ್ರಿ ಸರ್ಕಾರ ಪತನಗೊಂಡ ನಂತರ 1 ಸಾವಿರ ಕೋಟಿಯ ವಿಶೇಷ ಯೋಜನೆ ಸ್ಥಗಿತಗೊಂಡಿದೆ.
2 ಸಾವಿರ ಕೋಟಿಗೆ ಬೇಡಿಕೆ: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ 2 ಸಾವಿರ ಕೋಟಿ ಅನುದಾನ ನೀಡುವಂತೆ ಆ ಭಾಗದ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದು, ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಘೋಷಣೆ ಮಾಡುತ್ತಾರೆಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ಮೂಲಕ ಆ ಭಾಗದ ಪ್ರಮುಖ ಬೇಡಿಕೆಗಳಾದ ಯಾದಗಿರಿಯಲ್ಲಿ ಜವಳಿ ಪಾರ್ಕ್, ಕಲಬುರಗಿ ರೈಲ್ವೆ ವಲಯ ಸ್ಥಾಪನೆ, ಕಾರಂಜಾ ಏತ ನೀರಾವರಿ ಯೋಜನೆ ಜಾರಿ ಮಾಡುವ ಮೂಲಕ ಕೆರೆ ತುಂಬಿಸುವ ಯೋಜನೆಗಳು, ಕೊಪ್ಪಳ ಎಂಜಿನಿಯ ರಿಂಗ್ ಕಾಲೇಜು ಹಾಗೂ ಬೀದರ್ ರಿಂಗ್ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ದೊರೆಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಮುಂಬೈ -ಕಿತ್ತೂರು ಕರ್ನಾಟಕವಾಗುವ ನಿರೀಕ್ಷೆ: ಕರ್ನಾಟಕ ಏಕೀಕರಣವಾದ ನಂತರ ಮುಂಬೈ ಹಾಗೂ ಹೈದರಾಬಾದ್ ಪ್ರಾಂತ್ಯಗಳಿಗೆ ಸೇರಿದ ಪ್ರದೇಶಗಳನ್ನು ಅದೇ ಹೆಸರಿನಿಂದ ಕರೆಯುವ ಪ್ರವೃತ್ತಿ ಮುಂದುವರಿ ದಿತ್ತು. ಆ ಹೆಸರುಗಳನ್ನು ಬದಲಾಯಿಸುವಂತೆ ಸಂಶೋಧಕ ದಿವಂಗತ ಎಂ.ಚಿದಾನಂದ ಮೂರ್ತಿ ಸರ್ಕಾರಕ್ಕೆ ಆಗ್ರಹಿಸಿದ್ದರು. ಕಳೆದ ಬಾರಿಯೇ, ಕಿತ್ತೂರು ಉತ್ಸವದ ಸಂದರ್ಭ ದಲ್ಲಿಯೇ ಯಡಿಯೂರಪ್ಪನವರು ಈ ಭಾಗಕ್ಕೆ “ಕಿತ್ತೂರು ಕರ್ನಾಟಕ’ ಎಂದು ಮರುನಾಮಕರಣದ ಘೋಷಣೆ ಮಾಡುತ್ತಾರೆಂದು ಹೇಳಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಅವರು ಘೋಷಣೆ ಮಾಡಲಿಲ್ಲ.
ಮುಂಬರುವ ಬಜೆಟ್‌ನಲ್ಲಿಯಾದರೂ ಘೋಷಣೆ ಯಾಗ ಬಹುದೆಂಬ ಆಶಾಭಾವನೆಯಲ್ಲಿ ಮುಂಬೈ ಕರ್ನಾಟಕ ಭಾಗದ ಜನರಿದ್ದಾರೆ. ಪ್ರಮುಖವಾಗಿ ಈ ಭಾಗದಲ್ಲಿ ನೆರೆಯಿಂದ ಸಾವಿರಾರು ಕೋಟಿ ರೂ.ಗಳ ರಸ್ತೆ ಹಾಳಾಗಿದ್ದು, ರಸ್ತೆ ಅಭಿವೃದ್ಧಿ, ಮಹದಾಯಿ ಯೋಜನೆಗೆ 2 ಸಾವಿರ ಕೋಟಿ ರೂ. ಮೀಸಲು, ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ, ಧಾರವಾಡ ಜಿಲ್ಲೆಗೆ ಪ್ರತಿ ಗ್ರಾಮಕ್ಕೂ ಕುಡಿಯುವ ನೀರಿನ ಯೋಜನೆ, ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿ ಸುವುದು, ಬೆಳಗಾವಿಯನ್ನು ಉತ್ತರ ಕರ್ನಾಟಕದ ಐಟಿ ಕೇಂದ್ರವನ್ನಾಗಿ ಮಾಡಬೇಕೆನ್ನುವ ಬೇಡಿಕೆಗೆ ಬಜೆಟ್‌ನಲ್ಲಿ ಸ್ಪಂದನೆ ಸಿಗುವ ಬಗ್ಗೆ ಜನರು ನಿರೀಕ್ಷೆಯಲ್ಲಿದ್ದಾರೆ.
ನಿರೀಕ್ಷೆಗಳು ಏನೇನು?
– ಯಾದಗಿರಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ.
– ಕಲಬುರಗಿಯಲ್ಲಿ ರೈಲ್ವೆ ವಲಯ ಸ್ಥಾಪನೆ.
– ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
– ಬೆಂಬಲ ಬೆಲೆಯಲ್ಲಿ 20 ಕ್ವಿಂಟಾಲ್ ತೊಗರಿ ಖರೀದಿ.
– ಕಾರಂಜಾ ಏತ ನೀರಾವರಿ ಯೋಜನೆ ಜಾರಿ.
– ಈ ಭಾಗದ ಕೆರೆ ತುಂಬಿಸುವ ಯೋಜನೆಗಳ ಜಾರಿ.
– ಕೊಪ್ಪಳ ಎಂಜಿನಿಯರಿಂಗ್ ಕಾಲೇಜು.
– ಬೀದರ್‌ನಲ್ಲಿ ರಿಂಗ್ ರಸ್ತೆ ನಿರ್ಮಾಣ .
– ಮಹದಾಯಿ ಯೋಜನೆಗೆ 2 ಸಾವಿರ ಕೋಟಿ.
– ಬೆಳಗಾವಿ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೆ.
– ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ.
– ಧಾರವಾಡ ಜಿಲ್ಲೆಯ ಪ್ರತಿ ಗ್ರಾಮಕ್ಕೂ ಕುಡಿಯುವ ನೀರು ಯೋಜನೆ.
– ಉತ್ತರ ಕರ್ನಾಟಕದ ಐಟಿ ಕೇಂದ್ರವಾಗಿ ಬೆಳಗಾವಿ ಅಭಿವೃದ್ಧಿ.
* ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.