One Country, One Election: ಇದು ದೀರ್ಘಾವಧಿ ಪ್ರಕ್ರಿಯೆ…
Team Udayavani, Sep 27, 2023, 11:44 PM IST
ಕೇಂದ್ರ ಸರಕಾರ ಒಂದು ದೇಶ, ಒಂದು ಚುನಾವಣೆ ನಿಯಮವನ್ನು ಜಾರಿಗೆ ತರಲು ಸಲುವಾಗಿ, ಸಾಧಕ-ಬಾಧಕಗಳ ಪರಿಶೀಲನೆ ನಡೆಸಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿದೆ. ಇತ್ತೀಚೆಗಷ್ಟೇ ಈ ಸಮಿತಿ ಸಭೆಯೊಂದನ್ನು ನಡೆಸಿ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಅಭಿಪ್ರಾಯವನ್ನು ಕೇಳಿದೆ. ಹಾಗಾದರೆ ಏನಿದು ಒಂದು ದೇಶ, ಒಂದು ಚುನಾವಣೆ?ಲೋಕಸಭೆ ಚುನಾವಣೆಗೂ ಮುನ್ನವೇ ಇದನ್ನು ಜಾರಿಗೆ ತರಬಹುದೇ? ಇಲ್ಲಿದೆ ಒಂದು ನೋಟ…
ಏನಿದು ಒಂದು ದೇಶ, ಒಂದು ಚುನಾವಣೆ?
ದೇಶಪೂರ್ತಿ ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸುವುದು. 1967ರವರೆಗೆ ದೇಶದಲ್ಲಿ ಇದೇ ರೀತಿಯಲ್ಲೇ ಚುನಾವಣೆಗಳು ನಡೆಯುತ್ತಿದ್ದವು. ಅನಂತರದಲ್ಲಿ ಮಧ್ಯಂತರ ಚುನಾವಣೆಗಳು ಮತ್ತು ರಾಜಕೀಯ ಅಸ್ಥಿರತೆಯ ಕಾರಣದಿಂದಾಗಿ ಚುನಾವಣೆಗಳ ಸಮಯ ಬೇರೆಯಾಗುತ್ತಾ ಹೋಯಿತು. ಕೇಂದ್ರ ಸರಕಾರ ಹೇಳುವ ಪ್ರಕಾರ, ಇಡೀ ದೇಶದಲ್ಲಿ ಒಮ್ಮೆಗೇ ಚುನಾವಣೆ ನಡೆಸಿದರೆ, ಖರ್ಚು ಉಳಿಯುತ್ತದೆ. ಅಭಿವೃದ್ದಿ ಕೆಲಸಗಳೂ ಆಗುತ್ತವೆ. ಅಲ್ಲದೆ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಪಕ್ಷವು, ಐದು ವರ್ಷವೂ ಒಂದಿಲ್ಲೊಂದು ಚುನಾವಣೆಗೆ ಓಡಾಡಬೇಕಾಗುತ್ತದೆ. ಚುನಾವಣ ನೀತಿ ಸಂಹಿತೆಯಿಂದಾಗಿಯೇ ಆಗಾಗ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತವೆ ಎನ್ನುತ್ತದೆ. ಆದರೆ ವಿಪಕ್ಷಗಳು ಇದನ್ನು ವಿರೋಧಿಸಿದ್ದು, ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳಿರುವಾಗ ಏಕೆ ಈ ಪ್ರಸ್ತಾವ ಮುನ್ನೆಲೆಗೆ ಬಂದಿದೆ ಎಂದು ಪ್ರಶ್ನಿಸಿವೆ.
ಐಡಿಯಾ ಮೊಳೆತದ್ದು ಹೇಗೆ?
1983ರಲ್ಲಿ ಆಗಿನ ಕೇಂದ್ರ ಚುನಾವಣ ಆಯೋಗ ಈ ಬಗ್ಗೆ ಸಲಹೆ ನೀಡಿತ್ತು. 2003ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಜತೆ ಈ ಬಗ್ಗೆ ಚರ್ಚೆ ನಡೆಸಿದ್ದರು. ಆಗಲೂ ಮುಂದಕ್ಕೆ ಹೋಗಿರಲಿಲ್ಲ. 2010ರಲ್ಲಿ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರು ಆಗಿನ ಪ್ರಧಾನಿ ಡಾ| ಮನಮೋಹನ್ ಸಿಂಗ್ ಅವರ ಜತೆ ಚರ್ಚೆ ಮಾಡಿದ್ದರು. ಈ ಬಗ್ಗೆ ಆಡ್ವಾಣಿ ಅವರೇ ಬರೆದುಕೊಂಡಿದ್ದರು. ಈಗ ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ, ಈ ಬಗ್ಗೆ ಆಗಾಗ್ಗೆ ಪ್ರಸ್ತಾವಿಸುತ್ತಲೇ ಇದ್ದರು. ಈಗ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಕ್ಕೆ ಇಟ್ಟಂತಾಗಿದೆ.
ರಾಜಕೀಯ ಸವಾಲುಗಳು
ಏಕಕಾಲಕ್ಕೆ ಚುನಾವಣೆ ನಡೆಸುವುದು, ಏಕಕಾಲಕ್ಕೆ ಅಧಿಕಾರಕ್ಕೆ ಬರುವುದು ಸರಿ. ಆದರೆ ಮಧ್ಯಂತರದಲ್ಲಿ ಶಾಸಕರ ಪಕ್ಷಾಂತರ, ಬಹುಮತ ಸಾಬೀತು ಮಾಡುವಲ್ಲಿ ವಿಫಲ, ಮಧ್ಯಂತರ ಚುನಾವಣೆ ಸ್ಥಿತಿ ಬಂದಾಗ ಏನು ಮಾಡಬೇಕು ಎಂಬ ಬಗ್ಗೆಯೂ ಅಧ್ಯಯನ ನಡೆಸಬೇಕಾಗಿದೆ. 2024ರ ಲೋಕಸಭೆ ಚುನಾವಣೆ ವೇಳೆ ಏಕಕಾಲದಲ್ಲೇ ದೇಶಾದ್ಯಂತ ಚುನಾವಣೆ ನಡೆಸಲು ಮುಂದಾದರೆ, 31 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 19 ರಾಜ್ಯಗಳ ವಿಧಾನಸಭೆಗಳನ್ನು ಅವಧಿಗಿಂತ ಮುಂಚೆ ಯೇ ವಿಸರ್ಜನೆ ಮಾಡಬೇಕಾಗುತ್ತದೆ. ಜತೆಗೆ ಇತ್ತೀಚೆಗಷ್ಟೇ ವಿಧಾನಸಭೆ ಚುನಾವಣೆ ಮುಗಿದಿರುವಂಥ ರಾಜ್ಯಗಳ ಅವಧಿಯನ್ನು ಹೆಚ್ಚಿಸಬೇಕಾಗುತ್ತದೆ. ಇವೆಲ್ಲವೂ ಸಾಂವಿಧಾನಿಕ ಬದಲಾವಣೆಗಳನ್ನು ಕೇಳುತ್ತವೆ ಎಂಬುದು ಮಹತ್ವದ್ದಾಗಿದೆ. ಸದ್ಯ ಆಂಧ್ರಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ, ಸಿಕ್ಕಿಂ ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯ ಜತೆಗೇ ವಿಧಾನಸಭೆಗಳಿಗೂ ಚುನಾವಣೆ ನಡೆಯುತ್ತದೆ.
ಏಕೆ ಬೇಕು?
ಚುನಾವಣ ವೆಚ್ಚ ಕಡಿಮೆಯಾಗುತ್ತದೆ.
ಮತದಾರ ಪ್ರಮಾಣ ಹೆಚ್ಚಳ, ಭ್ರಷ್ಟಾಚಾರ ಕಡಿಮೆ ಸಾಧ್ಯತೆ.
ಪದೇ ಪದೆ ಬರುವ ಚುನಾವಣೆಗಳಿಂದಾಗಿ ನೀತಿ ಸಂಹಿತೆಗೆ ಅಡ್ಡಿ. ಒಮ್ಮೆಗೆ ನಡೆದರೆ ಈ ಅಡ್ಡಿ ಮಾಯ.
ಸಮಯವೂ ಉಳಿತಾಯ. ಸರಕಾರಗಳು ಚುನಾವಣೆಗಿಂತ ಹೆಚ್ಚು ಅಭಿವೃದ್ಧಿ ಕಡೆಗೆ ಗಮನಹರಿಸಬಹುದು.
ಮನುಷ್ಯನ ಶ್ರಮವೂ ಉಳಿತಾಯವಾಗುತ್ತದೆ.
ಏಕೆ ಬೇಡ?
ಮತದಾರನ ಮನಸ್ಸಿನ ಮೇಲೆ ಪರಿಣಾಮ
ಸ್ಥಳೀಯ ವಿಚಾರಗಳು ಹಿಂದಕ್ಕೆ ಸರಿವ ಸಾಧ್ಯತೆ
ಭಾರತದಂಥ ಹೆಚ್ಚು ಜನಸಂಖ್ಯೆಯ ದೇಶದಲ್ಲಿ ಇದು ಸಾಧ್ಯವೇ ಎಂಬ ಪ್ರಶ್ನೆ.
ಎಲೆಕ್ಟ್ರಾನಿಕ್ ವೋಟಿಂಗ್ ಮೆಶಿನ್, ವಿವಿಪಿಎ ಪೇಪರ್ ವ್ಯವಸ್ಥೆ ಮಾಡುವ ಸಮಸ್ಯೆ.
ರಾಷ್ಟ್ರೀಯ ಮಟ್ಟದಲ್ಲಿರುವ ಪಕ್ಷಗಳಿಗೆ ಅನುಕೂಲ ಹೆಚ್ಚು. ಪ್ರಾದೇಶಿಕ ಪಕ್ಷಗಳಿಗೆ ಹಿನ್ನಡೆ ಸಾಧ್ಯತೆ.
ಸಂವಿಧಾನ ತಿದ್ದುಪಡಿ ಸವಾಲು
ಆರ್ಟಿಕಲ್ 83(2)
ಲೋಕಸಭೆಯ ಅವಧಿ ಬಗ್ಗೆ ತಿದ್ದುಪಡಿ ಮಾಡಬೇಕು.
ಆರ್ಟಿಕಲ್ 85(2)(ಬಿ)
ಇದರಲ್ಲಿ ಸಂಸತ್ ಮತ್ತು ವಿಧಾನಸಭೆಗಳ ವಿಸರ್ಜನಾಧಿಕಾರವಿದೆ. ಎರಡು ಅಧಿವೇಶನಗಳ ನಡುವೆ ವಿಸರ್ಜನೆ ಮಾಡುವಂತಿಲ್ಲ ಎಂಬ ಸೂಚನೆ ಇದೆ. ಈ ನಿಯಮಕ್ಕೂ ತಿದ್ದುಪಡಿ ತರಬೇಕಾಗುತ್ತದೆ.
ಆರ್ಟಿಕಲ್ 174(1)
ರಾಜ್ಯಗಳ ವಿಧಾನಸಭೆಗಳ ಅವಧಿಗೆ ತಿದ್ದುಪಡಿ
ಆರ್ಟಿಕಲ್ 174(2)(ಬಿ)
ವಿಧಾನಸಭೆ ವಿಸರ್ಜಿಸುವ ರಾಜ್ಯಪಾಲರ ಅಧಿಕಾರಕ್ಕೆ ತಿದ್ದುಪಡಿ
ಆರ್ಟಿಕಲ್ 356
ಇದರಲ್ಲಿ ರಾಜ್ಯಗಳ ವಿಧಾನಸಭೆಗಳನ್ನು ವಿಸರ್ಜನೆ ಮಾಡುವ ಕೇಂದ್ರ ಸರಕಾರದ ಅಧಿಕಾರದ ಬಗ್ಗೆ ಉಲ್ಲೇಖವಿದೆ. ಇದನ್ನೂ ತಿದ್ದುಪಡಿ ಮಾಡಬೇಕಾಗಬಹುದು.
ಜಾರಿಗೆ ಇರುವ ಸವಾಲುಗಳು
1951ರ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕು.
ಸಂಸತ್‌ನಲ್ಲಿ ಮೂರನೇ ಎರಡು ಬಹುಮತ ಬೇಕು.
ಶೇ.50 ರಾಜ್ಯಗಳ ವಿಧಾನಸಭೆಗಳಲ್ಲಿ ಪಾಸ್ ಆಗಬೇಕು.
ಒಮ್ಮೆ ಜಾರಿಯಾದರೆ, ಸಂಸತ್, ವಿಧಾನಸಭೆಗಳ ವಿಸರ್ಜನೆ ಮಾಡಬೇಕು.
ಬದಲಾಗಿದ್ದು ಹೇಗೆ?
1967ರ ವರೆಗೆ ಇಡೀ ದೇಶದಲ್ಲಿ ಇದ್ದದ್ದು ಬಹುತೇಕ ಕಾಂಗ್ರೆಸ್ ನೇತೃತ್ವದ ಸರಕಾರಗಳೇ. ಆಗ ಬದಲಿ ರಾಜಕೀಯ ಪಕ್ಷಗಳು ದೇಶದಲ್ಲಿ ಇರಲಿಲ್ಲ. ಆದರೆ 1967ರ ಅನಂತರ ಸಂಯುಕ್ತ ವಿಧಾಯಕ ದಳದ ಅಡಿಯಲ್ಲಿ ಬೇರೆ ಬೇರೆ ಪಕ್ಷಗಳ ಸರಕಾರಗಳು ಬಂದವು. ಅಂದರೆ, ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಲ, ಒಡಿಶಾ, ಮದ್ರಾಸ್ ರಾಜ್ಯಗಳಲ್ಲಿ ಸಂಯುಕ್ತ ವಿಧಾಯಕ ದಳದ ಅಡಿಯಲ್ಲಿನ ಭಾರತೀಯ ಕ್ರಾಂತಿ ದಳ, ಸಂಯುಕ್ತ ಸೋಶಿಯಲಿಸ್ಟ್ ಪಾರ್ಟಿ, ಪ್ರಜಾ ಸೋಶಿಯಲಿಸ್ಟ್ ಪಾರ್ಟಿ, ಸ್ವಂತತ್ರ ಪಾರ್ಟಿ, ಭಾರತೀಯ ಜನ ಸಂಘದ ರೀತಿಯ ಪಕ್ಷಗಳು ಆಡಳಿತ ಆರಂಭಿಸಿದವು. ಈ ಪಕ್ಷಗಳಲ್ಲಿ ಬಹುತೇಕರು ಕಾಂಗ್ರೆಸ್‌ನಿಂದ ಹೊರಬಂದು ಪಕ್ಷ ಕಟ್ಟಿದವರೇ ಆಗಿದ್ದರು.
ಸದ್ಯ ಕೆಲವೇ ದೇಶಗಳಲ್ಲಿ ಜಾರಿ
ಜಗತ್ತಿನಲ್ಲಿ ಕೆಲವೇ ಕೆಲವು ದೇಶಗಳಲ್ಲಿ ಮಾತ್ರ ಈ ಏಕಕಾಲದ ಚುನಾವಣ ನಿಯಮ ಜಾರಿಯಲ್ಲಿದೆ. ನೇಪಾಲದಲ್ಲಿ 2017ರಿಂದ ಈ ನಿಯಮ ತರಲಾಗಿದ್ದು, ರಾಜ್ಯಗಳು ಮತ್ತು ಸಂಸತ್‌ಗೆ ಒಮ್ಮೆಗೆ ಚುನಾವಣೆ ನಡೆಯುತ್ತದೆ. ಬೆಲ್ಜಿಯಂ, ಸ್ವೀಡನ್‌ನಲ್ಲೂ ಇಂಥ ನಿಯಮ ಜಾರಿಯಲ್ಲಿದೆ. ಸ್ವೀಡನ್‌ನಲ್ಲಿ ಸ್ಥಳೀಯ ಮಟ್ಟದಿಂದ ಹಿಡಿದು, ರಾಷ್ಟ್ರಮಟ್ಟದ ಎಲ್ಲ ಚುನಾವಣೆಗಳು ನಾಲ್ಕು ವರ್ಷಕ್ಕೊಮ್ಮೆ ಒಂದೇ ದಿನ ನಡೆಯತ್ತವೆ. ಆದರೆ ಈ ಎಲ್ಲ ದೇಶಗಳು ಚಿಕ್ಕಪುಟ್ಟವು ಆಗಿವೆ. ದಕ್ಷಿಣ ಆಫ್ರಿಕಾದಲ್ಲೂ ಏಕಕಾಲದ ಚುನಾವಣ ನಿಯಮವಿದೆ. ಆದರೆ ಅಲ್ಲಿನ ಮತದಾನ ವ್ಯವಸ್ಥೆ ಬೇರೆಯೇ ಇದೆ. ಹೀಗಾಗಿ ಭಾರತದ ಜತೆಗೆ ಇದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.