“ಕಳ್ಳ ಕಿವಿ’ಗೆ ನೂರೆಂಟು ಮಾತು
Team Udayavani, Aug 16, 2019, 3:10 AM IST
ಈ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ನಡೆಯಿತೆನ್ನಲಾದ ಫೋನ್ ಕದ್ದಾಲಿಕೆ ಆರೋಪ ಈಗ ರಾಜಕೀಯವಾಗಿ ಬಹು ಚರ್ಚೆಗೊಳಗಾಗಿದೆ. ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕೆಂಬ ಆಗ್ರಹ ಬಿಜೆಪಿ ಸೇರಿ ಕಾಂಗ್ರೆಸ್ ಪಕ್ಷದ ಪ್ರಮುಖರಿಂದಲೂ ಕೇಳಿ ಬಂದಿದೆ. ಈ ನಡುವೆ “ಕುಮಾರಸ್ವಾಮಿ ಗಮನಕ್ಕೆ ಬಾರದೇ ದೂರವಾಣಿ ಕದ್ದಾಲಿಕೆ ನಡೆದಿರಲು ಸಾಧ್ಯವೇ ಇಲ್ಲ’ ಎಂಬ ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿಕೆ ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿಸಿದೆ.
ಫೋನ್ ಕದ್ದಾಲಿಕೆ ತನಿಖೆಯಾಗಲಿ: ಸಿದ್ದು
ಬೆಂಗಳೂರು: “ದೂರವಾಣಿ ಕದ್ದಾಲಿಕೆ ಬಗ್ಗೆ ತನಿಖೆಯಾಗಲಿ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಮಾಡಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಯಾರು ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಸರ್ಕಾರ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿ ಎಂದರು.
ಬಿಜೆಪಿ ನಾಯಕರ ಫೋನ್ ಟ್ಯಾಪಿಂಗ್ ಆಗಿದೆ ಎಂದು ಆರೋಪಿಸುತ್ತಿದ್ದಾರೆ. ಸರ್ಕಾರ ಅವರದೇ ಇದೆ. ದೂರವಾಣಿ ಕದ್ದಾಲಿಕೆ ಮಾಡಿದವರು ರಾಜಕಾರಣಿಗಳಾಗಲೀ, ಅಧಿಕಾರಿಗಳಾಗಲಿ ಯಾರೇ ಭಾಗಿಯಾಗಿದ್ದರೂ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು. ಇದೇ ವೇಳೆ, ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು ಅಧಿಕಾರಕ್ಕೆ ಬಂದಾಗ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪ್ರಜಾಪ್ರಭುತ್ವ ಉಳಿಸಲು ನಾವೆಲ್ಲರೂ ಪಣ ತೊಡಬೇಕೆಂದು ಹೇಳಿದರು.
“ಸಿಬಿಐ ಬೇಡ, ಉನ್ನತ ಮಟ್ಟದ ತನಿಖೆ ಆಗಲಿ’
ವಿಜಯಪುರ: ಫೋನ್ ಕದ್ದಾಲಿಕೆ ಪ್ರಕರಣ ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು, ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು. ಮೂರು ತಿಂಗಳ ಕಾಲಮಿತಿಯಲ್ಲಿ ತನಿಖೆ ಮುಗಿಸಿ ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಕ್ಕೆ ಸಹಮತವಿಲ್ಲ. ಸಿಬಿಐ ಮೇಲೆ ನಮಗೆ ನಂಬಿಕೆಯಿಲ್ಲ. ಈ ಹಿಂದೆ ರಾಮಕೃಷ್ಣ ಹೆಗಡೆ ಅವರ ಪ್ರಕರಣದಲ್ಲಿ ಏನಾಗಿದೆ ಎಂಬುದು ದೇಶದ ಜನರಿಗೆ ಗೊತ್ತಿದೆ. ಹೀಗಾಗಿ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕದ್ದಾಲಿಕೆ ಬಗ್ಗೆ ಮೊದಲೇ ಅನುಮಾನವಿತ್ತು
ಕೊಪ್ಪಳ: ಸ್ವತಃ ನನ್ನ ಹಾಗೂ ಆಪ್ತ ಸಹಾಯಕರ ಫೋನ್ ಕದ್ದಾಲಿಕೆಯಾದ ಬಗ್ಗೆ ನಮಗೆ ಸಂಶಯವಿದೆ. ಈ ಬಗ್ಗೆ ಎಸ್‌ಐಟಿ, ಸಿಬಿಐ ತನಿಖೆ ಮಾಡಲಿ. ಕೆಳ ಹಂತದ ಅಧಿಕಾರಿಗಳಿಂದ ತನಿಖೆ ಮಾಡಿದರೆ ಸಮರ್ಪಕ ತನಿಖೆ ನಡೆಯಲ್ಲ ಎಂದು ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಒತ್ತಾಯಿಸಿದರು. ಮುನಿರಾಬಾದ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಫೋನ್ ಕದ್ದಾಲಿಕೆ ಬಗ್ಗೆ ನಮಗೆ ಮೊದಲೇ ಅನುಮಾನವಿತ್ತು. ಪೊಲೀಸ್ ಇಲಾಖೆಯೇ ಈ ಕುರಿತು ಒಂದು ವರದಿ ಕೊಟ್ಟಿದೆ. ಇದರಲ್ಲಿ ರಾಜಕಾರಣಿ ಸೇರಿ ಅಧಿಕಾರಿಗಳಿರಬಹುದು. ಅವರ ಮೇಲೆ ಕಠಿಣ ಕ್ರಮವಾಗಬೇಕು. ಈ ಹಿಂದೆ ಕುಮಾರಸ್ವಾಮಿ ಅವರ ಸರ್ಕಾರವಿತ್ತು. ಸಹಜವಾಗಿ ಅದೇ ಸರ್ಕಾರವೇ ಫೋನ್ ಕದ್ದಾಲಿಸಿರುವ ಗುಮಾನಿ ಇದೆ ಎಂದರು.
ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ: ಎಚ್ಡಿಡಿ ಆಕ್ರೋಶ
ಬೆಂಗಳೂರು: “ದೂರವಾಣಿ ಕದ್ದಾಲಿಕೆ ವಿಚಾರದಲ್ಲಿ ಹಿಂದಿನ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, “ಫೋನ್ ಕದ್ದಾಲಿಕೆ ಮಾಡೋದು ಇರಲಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನೇ ಹೊತ್ತುಕೊಂಡು ಪರಾರಿಯಾದವರು ಬಿಜೆಪಿಯವರು. ಅವರಿಗೆ ಮಾನ ಮರ್ಯಾದೆ ಇದೆಯಾ’ ಎಂದು ಪ್ರಶ್ನಿಸಿದರು. ಯಾರ್ಯಾರ ಕಾಲದಲ್ಲಿ ಏನೆಲ್ಲಾ ಆಗಿದೆ ನನಗೆ ಗೊತ್ತಿದೆ. ಈ ಬಗ್ಗೆ ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ ಎಂದು ಹೇಳಿದರು.
ತನಿಖೆ ಮಾಡಿಕೊಳ್ಳಲಿ: ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ತಳಕು ಹಾಕಿಕೊಂಡಿದೆ ಎಂಬುದು ಗೊತ್ತಿಲ್ಲ. ಬಿಜೆಪಿಯವರಿಗೆ ಬೇಕಾದ ತನಿಖೆ ಮಾಡಿಕೊಳ್ಳಲಿ ಎಂದರು. ವಿಶ್ವನಾಥ್ ನನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ನಾನು ಪ್ರತಿಕ್ರಿಯಿಸಲ್ಲ ಒಂದು ವರ್ಷದಿಂದ ಯಾರು ಏನು ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ ಎಂದರು.
ನನ್ನ ಅನುಮಾನ ಈಗ ನಿಜವಾಗಿದೆ: ಸುಮಲತಾ
ಮಂಡ್ಯ/ಮದ್ದೂರು: “ದೂರವಾಣಿ ಕದ್ದಾಲಿಕೆ ನನಗೇನೂ ಹೊಸದು ಎಂಬಂತೆ ಕಾಣುತ್ತಿಲ್ಲ. ಲೋಕಸಭಾ ಚುನಾವಣೆ ವೇಳೆ ನನ್ನ ಹಾಗೂ ಆಪ್ತರ ಫೋನ್ ಕದ್ದಾಲಿಕೆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆ. ನನ್ನ ಅನುಮಾನ ಈಗ ನಿಜ ಎನಿಸುತ್ತಿದೆ’ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು. ಮದ್ದೂರು ಹೊರವಲಯ ಖಾಸಗಿ ಹೋಟೆಲ್‌ನಲ್ಲಿ ಪ್ರತಿಕ್ರಿಯಿಸಿ, ಲೋಕಸಭಾ ಚುನಾವಣೆ ವೇಳೆ ನನ್ನ ದೂರವಾಣಿ ಕದ್ದಾಲಿಕೆ ಅನುಮಾನ ಮೂಡಿಸಿತ್ತು. ಈಗ ಮತ್ತೆ ದೂರವಾಣಿ ಕದ್ದಾಲಿಕೆ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ನೋಡಿದಾಗ ಫೋನ್ ಕದ್ದಾಲಿಕೆ ನಿರಂತರವಾಗಿ ಮುಂದುವರಿದುಕೊಂಡು ಬಂದಿದೆ ಅನ್ನಿಸುತ್ತಿದೆ ಎಂದರು.
ಕಲ್ಲು ಗಣಿ ಬಗ್ಗೆ ಪ್ರಸ್ತಾಪ: ಕೆಆರ್‌ಎಸ್ ಸುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿ ಬಗ್ಗೆ ಇದುವರೆಗೂ ಯಾರೊಬ್ಬರೂ ಸಂಸತ್‌ನಲ್ಲಿ ಧ್ವನಿ ಎತ್ತಿರಲಿಲ್ಲ. ಗಣಿಯಿಂದ ಅಣೆಕಟ್ಟೆಗೆ ಗಂಡಾಂತರವಿರುವ ಬಗ್ಗೆ ಮೊದಲ ಬಾರಿಗೆ ಸಂಸತ್‌ನ ಗಮನಸೆಳೆದಿದ್ದೇನೆ. ಈ ವಿಷಯವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೂ ಚರ್ಚಿಸಿದ್ದೇನೆ ಎಂದರು.
ಫೋನ್ ಕದ್ದಾಲಿಕೆ ನಡೆದಿಲ್ಲ
ಮೈಸೂರು: “ಸಮ್ಮಿಶ್ರ ಸರ್ಕಾರದಲ್ಲಿ ದೂರವಾಣಿ ಕದ್ದಾಲಿಕೆ ನಡೆದಿಲ್ಲ. ಅನರ್ಹ ಶಾಸಕ ಎಚ್.ವಿಶ್ವನಾಥ್ ಮಾಡಿರುವ ಆರೋಪ ಸತ್ಯವಾಗಿದ್ದರೆ ಸಿಬಿಐ ತನಿಖೆಯನ್ನೇ ಮಾಡಲಿ’ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಒಂದು ವೇಳೆ ದೂರವಾಣಿ ಕದ್ದಾಲಿಕೆ ಆಗಿದ್ದರೆ ಸಮಗ್ರ ತನಿಖೆ ಆಗಲಿ ಎಂದರು. ದೇಶ-ರಾಜ್ಯಗಳ ಭದ್ರತೆ ದೃಷ್ಟಿಯಿಂದ ಆಯಾ ಸರ್ಕಾರಗಳಿಗೆ ದೂರವಾಣಿ ಕದ್ದಾಲಿಕೆಗೆ ಅವಕಾಶ ಇದೆ. ಆದರೆ, ಜನಪ್ರತಿನಿಧಿಗಳ ದೂರವಾಣಿ ಕದ್ದಾಲಿಕೆ ತಪ್ಪು ಎಂದು ಹೇಳಿದರು.
ಕದ್ದಾಲಿಕೆ ತನಿಖೆಯಾಗಲಿ
ಬೆಂಗಳೂರು: ಫೋನ್ ಕದ್ದಾಲಿಕೆಗೆ ಸಂಬಂಧಪಟ್ಟಂತೆ ಸತ್ಯಾಂಶ ಹೊರ ಬರಬೇಕಾದರೆ ಸೂಕ್ತ ತನಿಖೆಯಾಗಬೇಕೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಗ್ರಹಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಡಾಲರ್ ಕಾಲೋನಿ ನಿವಾಸದ ಬಳಿ ಗುರುವಾರ ಪ್ರತಿಕ್ರಿಯಿಸಿದ ಅವರು, ಫೋನ್ ಕದ್ದಾಲಿಕೆ ಮಾಡಲಾಗುತ್ತಿದ್ದ ಪಟ್ಟಿಯಲ್ಲಿ ನನ್ನ ಹೆಸರೂ ಇತ್ತು. ಮುಖ್ಯಮಂತ್ರಿಗಳು ದೆಹಲಿಯಿಂದ ಹಿಂತಿರುಗಿದ ಬಳಿಕ ಪ್ರಕರಣದ ತನಿಖೆ ಬಗ್ಗೆ ತೀರ್ಮಾನಿಸಬಹುದು. ರಾಜಕಾರಣಿಗಳು ಎಂದ ಮೇಲೆ ರಾಜಕೀಯ ಉದ್ದೇಶಕ್ಕೆ ಫೋನ್ ಕದ್ದಾಲಿಕೆ ಮಾಡಿರುತ್ತಾರೆ. ಹಾಗಾಗಿ ಸಮಗ್ರ ತನಿಖೆಯಾದರೆ ಸತ್ಯ ಬಯಲಾಗಲಿದೆ ಎಂದು ಹೇಳಿದರು.
ಖಾಸಗಿ ವಿಚಾರಗಳನ್ನು ಬಹಿರಂಗ ಮಾಡುವುದು ನೀಚತನದ ಕೆಲಸ. ಯಾರೇ ಮುಖ್ಯಮಂತ್ರಿಯಾದರೂ ಅವರ ಬಳಿ ಗುಪ್ತಚರ ಇಲಾಖೆ ಇರುತ್ತೆ. ಅದೇ ರೀತಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ಅವರ ಬಳಿ ಗುಪ್ತಚರ ಇಲಾಖೆ ಇತ್ತು. ಹಾಗಾಗಿ ಕುಮಾರಸ್ವಾಮಿ ಗಮನಕ್ಕೆ ಬಾರದೇ ದೂರವಾಣಿ ಕದ್ದಾಲಿಕೆ ನಡೆದಿರಲು ಸಾಧ್ಯವೇ ಇಲ್ಲ.
-ಎಚ್.ವಿಶ್ವನಾಥ್, ಮಾಜಿ ಸಚಿವ
ಆರು ತಿಂಗಳ ಹಿಂದೆ ನಾನು ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ಹೇಳಿದಾಗ ಎಲ್ಲರೂ ತಮಾಷೆ ಮಾಡುತ್ತಿದ್ದೇನೆ ಎಂದುಕೊಂಡಿದ್ದರು. ಅದೇ ವಿಚಾರ ಈಗ ದೊಡ್ಡದಾಗಿದೆ. ಭಾಸ್ಕರ್ ರಾವ್ ಅವರು ತಮ್ಮ ಫೋನ್ ಕದ್ದಾಲಿಕೆಯಾಗಿಲ್ಲ ಎಂದು ಹೇಳಿಬಿಟ್ಟರೆ ತನಿಖೆ ನಡೆಸುವುದೇ ಬೇಡ. ಅವರು ಫೋನ್ ಕದ್ದಾಲಿಕೆಯಾಗಿದೆ ಎಂದರೆ ತನಿಖೆಯಾಗಲೇಬೇಕು.
-ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕೇಳಿ ಬಂದಿರುವ ಫೋನ್ ಕದ್ದಾಲಿಕೆ ಆರೋಪದ ಕುರಿತು ಸಮಗ್ರ ತನಿಖೆಯಾಗಬೇಕು. ಮಾಜಿ ಸಚಿವ ಎಚ್. ವಿಶ್ವನಾಥ ಮಾಡಿರುವ ಆರೋಪ ಗಂಭೀರವಾಗಿದ್ದು, ಸಮರ್ಪಕ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
-ಜಗದೀಶ್ ಶೆಟ್ಟರ್, ಮಾಜಿ ಸಿಎಂ
ಫೋನ್ ಕದ್ದಾಲಿಕೆ ಪ್ರಕರಣವನ್ನು ಮುಖ್ಯಮಂತ್ರಿ ಸಿಬಿಐ ತನಿಖೆಗೆ ಒಪ್ಪಿಸಬೇಕು.ದೇಶದ್ರೋಹ ಸೇರಿ ವಿದ್ರೋಹ ಕೃತ್ಯದ ಸಂದರ್ಭದಲ್ಲಿ ಶಂಕಿತರ ಫೋನ್ ಕದ್ದಾಲಿಕೆ ಸಾಮಾನ್ಯ. ಆದರೆ ರಾಜ್ಯದಲ್ಲಿ ನಡೆದಿರುವ ಫೋನ್ ಕದ್ದಾಲಿಕೆ ಗಂಭೀರ ಸ್ವರೂಪದ್ದಾಗಿರುವ ಕಾರಣ ಸಿಬಿಐ ತನಿಖೆಯಿಂದ ಮಾತ್ರ ಸತ್ಯ ಹೊರ ಬರಲು ಸಾಧ್ಯ.
-ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.