![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jun 3, 2020, 6:40 PM IST
ಸಾಂದರ್ಭಿಕ ಚಿತ್ರ.
“ದಿನದ 24 ಗಂಟೆ ಮೊಬೈಲ್ ಮೊಬೈಲ್ ಅಂತ ಅದನ್ನೇ ನೋಡ್ತಾ ಕೂತಿದ್ರೆ ಹೊಟ್ಟೆ ತುಂಬುತ್ತಾ. ಅದನ್ನು ಬದಿಗಿಟ್ಟು ಓದ್ಕೋ ಹೋಗು’ ಎಂಬ ಅಮ್ಮನ ರಾಗ ಅಡುಗೆ ಮನೆಯ ಪಾತ್ರೆಗಳ ಶಬ್ದದ ನಡುವೆಯೂ ಕಿವಿಗೆ ಅಪ್ಪಳಿಸುತ್ತಿತ್ತು. ಇನ್ನು ಅಪ್ಪನೋ ಸವಲತ್ತು ಮಾಡಿಕೊಟ್ಟಿದ್ದೀವಿ ಅಂತ ಮೂರು ಹೊತ್ತು ಆ ಫೋನ್‌ಗೆ ಅಂಟಿಕೊಂಡಿದ್ರೆ ಮುಂದೆ ಕಷ್ಟ ಇದೆ ಎಂಬ ಖಾರದ ಮಾತುಗಳು ಆಗಾಗ ಕೇಳುತ್ತಲೇ ಇತ್ತು.
ಆದರೆ ಈ ಕೋವಿಡ್ 19ನಿಂದ ತದ್ವಿರುದ್ಧವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಹಿಂದೆಂದೂ ಸಿಗದಂತಹ ದೊಡ್ಡ ಬ್ರೇಕ್ ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ಸಿಕ್ಕಿದೆ. ಮೊದ ಮೊದಲು ಕೆಲವು ದಿನಗಳಿಗಷ್ಟೇ ಸೀಮಿತವಾಗಿರುತ್ತೆ ಎಂದುಕೊಂಡಿದ್ದ ಲಾಕ್‌ಡೌನ್ ಸುದೀರ್ಘವಾಗಿ 2 ತಿಂಗಳನ್ನು ದಾಟಿ ಮುನ್ನುಗುತ್ತಿದ್ದು, ಶಾಲೆ-ಕಾಲೇಜುಗಳು ಬಂದ್ ಆಗಿವೆ.
ಈ ಮಧ್ಯೆಯೇ, ಕೆಲವು ಕಾಲೇಜುಗಳಲ್ಲಿ ಆನ್‌ಲೈನ್ ಮೂಲಕ ಪಾಠ ಹೇಳುವ ಕೆಲಸವೂ ಶುರುವಾಗಿದ್ದು, ಇಷ್ಟು ದಿನದವರೆಗೂ, ಮೊಬೈಲ್ ಇರುವುದು ಕೇವಲ ಕಾಲ್/ ಚಾಟ್ ಮಾಡಲಿಕಷ್ಟೇ ಸೀಮಿತವಾಗಿದ್ದ ಆ ಮೊಬೈಲ್ ಮೂಲಕವೇ ಶೈಕ್ಷಣಿಕ ಕ್ಷೇತ್ರವನ್ನು ನಡೆಸುವ ಪರಿಸ್ಥಿತಿ ಎದುರಾಗಿದೆ.
ಮೊಬೈಲ್ ನೋಡುವಾಗ ಬೈಯುತ್ತಿದ್ದ ಪೋಷಕರು ಈಗ ಸದ್ಯ ಹೋಗು ಕ್ಲಾಸ್ ಶುರುವಾಗುತ್ತೇ ಫೋನ್ ಚಾರ್ಜ್ ಮಾಡಿಕೊಂಡಿರು ಎನ್ನುತ್ತಿದ್ದಾರೆ. ಕೋವಿಡ್ 19ರ ಕಾರುಬಾರಿನಿಂದಾಗಿ ಹೆತ್ತವರ ಕೈನಲ್ಲಿದ್ದ ಸ್ಮಾರ್ಟ್‌ಫೋನ್‌ಗಳು ದಿನಪೂರ್ತಿ ಮಕ್ಕಳ ಕೈ ಸೇರಿವೆ. ಅನಿವಾರ್ಯವಾಗಿ ಆನ್‌ಲೈನ್ ತರಗತಿಗಳಿಗೆ ಪೋಷಕರು ತಲೆಬಾಗಬೇಕಾಗಿದೆ.
ಶಾಲಾ ಕಾಲೇಜು, ಟ್ಯೂಶನ್ ಕೋಚಿಂಗ್ ಕ್ಲಾಸ್ ಅಂತ ಸುಮಾರು ಒಂದು ದಿನದಲ್ಲಿ 1ರಿಂದ 12ಗಂಟೆಗಳ ಕಾಲ ಮೊಬೈಲ್‌ಗಳಿಂದ ದೂರವಿರುತಿದ್ದ ಮಕ್ಕಳು ಈಗ ಇಡೀ ದಿನ ಆಸೈನ್‌ಮೆಂಟ್, ವೀಡಿಯೋ ಕ್ಲಾಸ್ ಅಂತ ಮೊಬೈಲ್‌ನಲ್ಲಿಯೇ ಕಲಿಯುವ ಆಗಿದೆ. ಅದರಲ್ಲಂತೂ ಲಾಕ್‌ಡೌನ್ 3.0 ಅನಂತರ ಮಕ್ಕಳ ಮೊಬೈಲ್ ಬಳಕೆ ಪ್ರಮಾಣದಲ್ಲಿ ಹತ್ತು ಪಟ್ಟು ಹೆಚ್ಚಾಗಿದೆ.
ವಿದ್ಯಾರ್ಥಿಗಳ ಅಳಲು
ಐದು ಬೆರಳುಗಳು ಒಂದೇ ತರಹ ಇರುವುದಿಲ್ಲ. ಹಾಗೇ ಎಲ್ಲ ವಿದ್ಯಾರ್ಥಿಗಳು ಬುದ್ಧಿವಂತರೇ ಆಗಿರುವುದಿಲ್ಲ. ಕೆಲವರಿಗೆ ಒಮ್ಮೆ ಹೇಳಿದ್ದರೆ ಅರ್ಥವಾಗುವುದು ಮತ್ತೂ ಕೆಲವರಿಗೆ ಹತ್ತು ಬಾರಿ ಹೇಳಬೇಕಾಗುತ್ತದೆ. ಹೀಗಿರುವಾಗ ಟೀಚರ್ ಎಲ್ಲಿಯೋ ಕುಳಿತುಕೊಂಡು ವೀಡಿಯೋ ಮೂಲಕ ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸುತ್ತೇವೆ ಎನ್ನುವುದು ತಾತ್ಕಾಲಿಕ ಮಟ್ಟಕ್ಕೆ ಪರಿಹಾರ ಎನ್ನಿಸಿದ್ದರೂ, ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಲಿದೆ. “ತರಗತಿಯಲ್ಲಿ ಮಾಡಿದ ಪಾಠಗಳೇ ಅರ್ಥವಾಗದೇ ಇರುವಾಗ ಇನ್ನು ಆನ್‌ಲೈನ್ ಮೂಲಕ ಮಾಡಿದ ಪಾಠಗಳು ಅರ್ಥವಾಗಲು ಹೇಗೆ ಸಾಧ್ಯ’ ಎಂಬ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳುತ್ತಿದ್ದು, ಪ್ರಾಯೋಗಿಕ ತರಗತಿಗಳ ವಿಷಯಗಳ ತಲೆ ಬುಡ ಅರ್ಥವಾಗುತ್ತಿಲ್ಲ ಎಂಬುದು ಮತ್ತೊಂದು ವಾದ.
ಆರ್ಥಿಕವಾಗಿ ಹೊರೆ
ಇನ್ನು ಖಾಸಗಿ ಶಾಲೆಗಳ ವ್ಯಾಮೋಹದಿಂದ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಪೋಷಕರು ದಾಖಲಿಸಿದ್ದಾರೆ. ಇದೀಗ ಪೋಷಕರಿಗೆ ಲಾಕ್‌ಡೌನ್‌ನಿಂದಾಗಿ ಮಕ್ಕಳ ಕಲಿಕಾ ವೆಚ್ಚ ದುಪ್ಪಟ್ಟಾಗಿದ್ದು, ಅನೇಕ ಶಾಲೆಗಳು ದಿನಕ್ಕೆ 2ರಿಂದ 3 ಗಂಟೆಗಳ ಕಾಲ ಕಡ್ಡಾಯ ಆನ್‌ಲೈನ್ ತರಗತಿ ಆರಂಭಿಸಿವೆ. ಇದರಿಂದಾಗಿ ಪ್ರತಿ ತಿಂಗಳು 4ಜಿ ನೆಟ್‌ವರ್ಕ್ ಬಳಕೆಯಿಂದ 50ರಿಂದ 60 ಜಿಬಿ ಇಂಟರ್‌ನೆಟ್ ಖರ್ಚಾಗುತ್ತಿದೆ. ಇದರ ಜತೆಗೆ ಶಾಲೆಗೆ ಶುಲ್ಕವನ್ನೂ ಪೋಷಕರು ಪಾವತಿಸಬೇಕಿದೆ. ಇವೆಲ್ಲಾ ಕಾರಣಗಳಿಂದಾಗಿ ಕಲಿಕಾ ವೆಚ್ಚ ಜಾಸ್ತಿಯಾಗಿದ್ದು, ಪೋಷಕರಿಗೆ ಹೊರೆ ಹೆಚ್ಚು ಮಾಡಿದೆ. ಅಲ್ಲದೇ ಪ್ರಾಥಮಿಕ ಶಾಲೆಗಳ ಮಕ್ಕಳಿಗೂ ಆನ್‌ಲೈನ್ ಕ್ಲಾಸ್‌ಗಳನ್ನು ನಡೆಸುತ್ತಿದ್ದು, ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಿದ ಹೆತ್ತವರಿಗೆ ಈಗ ಮೊಬೈಲ್ ಹೊಂದಿಸುವ ಸಂಕಷ್ಟ ಎದುರಾಗಿದೆ. ಕೆಲವು ಕುಟುಂಬಗಳಲ್ಲಂತೂ ಮೊಬೈಲ್ ವಿಷಯಕ್ಕಾಗಿ ಕಲಹಗಳು ನಡೆದಿದೆ ಎನ್ನಲಾಗುತ್ತಿದೆ.
ಅಸಮಾನತೆಯ ಗಾಳಿ
ದೇಶದಲ್ಲಿ ಇನ್ನು ಕುಗ್ರಾಮಗಳಿದ್ದು, ಸರಿಯಾದ ನೆಟ್‌ವರ್ಕ್ ಸಿಗದಂತಹ ಹತ್ತು ಹಲವಾರು ಪ್ರದೇಶಗಳು ನಮ್ಮ ನಡುವೆ ಇದೆ. ಇಂತಹ ಪ್ರದೇಶಗಳ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣದ ಸಲುವಾಗಿ ನಗರದತ್ತ ಮುಖ ಮಾಡುತ್ತಾರೆ. ಆದರೆ ಈ ಆನ್‌ಲೈನ್ ಕ್ಲಾಸ್‌ಗಳಿಂದ ಪ್ರಮುಖವಾಗಿ ಇಂತಹ ಮಕ್ಕಳುಗಳಿಗೆ ಪೆಟ್ಟು ಬೀಳಲಿದ್ದು, ನೆಟ್‌ವರ್ಕ್ ಹುಡುಕಿಕೊಂಡು ಮರ ಏರಿದ ಸನ್ನಿವೇಶಗಳ ನಿದರ್ಶನವೂ ನಮ್ಮ ಮುಂದಿದೆ. ಇಂತಹ ಘಟನೆಗಳು ಅಸಮಾನತೆ ಗಾಳಿಯನ್ನು ಎಬ್ಬಿಸಲಿದ್ದು, ಅನುಕೂಲಕ್ಕಿಂತ ಅನಾನುಕೂಲವಾಗುವುದೇ ಹೆಚ್ಚು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
-ಸುಶ್ಮಿತಾ ಜೈನ್, ಉಜಿರೆ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.