ಕೆಲವನ್ನು ಅನುಭವಿಸಿ ಮಾತ್ರವೇ ತಿಳಿಯಬೇಕು
Team Udayavani, Mar 19, 2021, 6:10 AM IST
ಬುದ್ಧನಿಗೂ ವೃಕ್ಷಗಳಿಗೂ ಅವಿನಾಭಾವ ಸಂಬಂಧ. ಬುದ್ಧನಿಗೆ ಮರಗಳೆಂದರೆ ಅಪಾರ ಪ್ರೀತಿಯಿದ್ದಿರಬೇಕು. ಬುದ್ಧ ಎಂದಾಕ್ಷಣ ನಮ್ಮ ಕಣ್ಣೆದುರು ಬರು ವುದು ಮರದ ಬುಡದಲ್ಲಿ ಸ್ನಿಗ್ಧ ನಗುವಿನೊಂದಿಗೆ ಪದ್ಮಾಸನದಲ್ಲಿ ಕುಳಿತ ಮೂರ್ತಿ. ಬುದ್ಧನಿಗೆ ಮರದ ಕೆಳಗಡೆ ಜ್ಞಾನೋದಯವಾದದ್ದು ನಿಜ; ಅನೇಕರಿಗೆ ಹಾಗಾಗಿದೆ. ಆದರೆ ಬುದ್ಧನದ್ದು ವಿಶೇಷ – ಅವನು ಜನಿಸಿದ್ದು ಮರದ ಬುಡದಲ್ಲಿ, ಜ್ಞಾನೋದಯ ಪಡೆದದ್ದು ಅಲ್ಲಿ, ನಿರ್ವಾಣ ಹೊಂದಿದ್ದು ಕೂಡ ಅಲ್ಲೇ.
ಯಶೋಧರನು ಶುದೊಧನನ ಮಗ ನಾದರೂ ಅರಮನೆ ಯಲ್ಲಿ ಜನಿಸಿದ್ದಲ್ಲ. ಅವನ ತಾಯಿ ಪ್ರವಾಸ ಕೈಗೊಳ್ಳುತ್ತಿದ್ದಾಗ ಹೆರಿಗೆ ಬೇನೆ ಕಾಣಿಸಿ ಕೊಂಡಿ ತಂತೆ. ಮುಂದಕ್ಕೆ ಹೋಗುವುದು ಸಾಧ್ಯವಿಲ್ಲ ಎನಿಸಿದಾಗ ಆಕೆ ಒಂದು ಮರದ ಬುಡದಲ್ಲಿ ನಿಂತು ಕೊಂಡಳು. ಅಲ್ಲೇ, ನಿಂತ ಭಂಗಿಯಲ್ಲೇ ಆಕೆಗೆ ಪ್ರಸವವಾಯಿತು. ಬುದ್ಧ ಜನಿಸಿದ್ದು ಹೀಗೆ.
ಬುದ್ಧನಿಗೂ ಮರಗಳಿಗೂ ಹೀಗೆ ಕರುಳುಬಳ್ಳಿಯ ಸಂಬಂಧ. ವೃಕ್ಷವು ಜ್ಞಾನೋದಯದ ಸಂಕೇತವೂ ಆಗಿರುವುದು ಹೀಗೆ. ಮರ ಇದ್ದ ಹಾಗೆಯೇ ಇರುವುದಿಲ್ಲ; ಬೆಳೆಯುತ್ತದೆ. ಜ್ಞಾನವೂ ಹಾಗೆ.
ಬುದ್ಧನಿಗೆ ವಯಸ್ಸಾಗಿ ನಿರ್ವಾಣಕ್ಕೆ ಹತ್ತಿರವಾಗುತ್ತಿದ್ದ ಕಾಲ. ಆಗಲೂ ಆತ ವೃಕ್ಷವೊಂದರ ಕೆಳಗೆ ಕುಳಿತಿದ್ದ. ಆತನನ್ನು ಕಾಣಲು ಬಂದಿದ್ದ ಮೇಧಾವಿಯೊಬ್ಬರು ಕೇಳಿದರು, “ಭಗವಾನ್, ನೀವು ತಿಳಿದಿರುವುದನ್ನೆಲ್ಲ ಉಪದೇಶಿಸಿರುವಿರಿ ಅಲ್ಲವೇ?’
ಬುದ್ಧ ತಾನು ಕುಳಿತಲ್ಲಿಂದಲೇ ಕೆಲವು ಒಣ ಎಲೆಗಳನ್ನು ಕೈಗಳಲ್ಲಿ ಎತ್ತಿಕೊಂಡರು. ಅದನ್ನು ಪಂಡಿತರಿಗೆ ತೋರಿಸಿ, “ನನ್ನ ಕೈಯಲ್ಲಿ ಎಷ್ಟು ಎಲೆಗಳಿವೆ ಸ್ವಾಮಿ? ಈ ಅರಣ್ಯದಲ್ಲಿ ಹೆಚ್ಚು ಎಲೆಗಳಿರಬಹುದೇ ಅಥವಾ ನನ್ನ ಕೈಯಲ್ಲೇ?’ ಎಂದು ಪ್ರಶ್ನಿಸಿದರು.
ಕಾಡಿನ ಕಾಲುದಾರಿ, ಕಾಡು – ಎಲ್ಲೆಲ್ಲೂ ಒಣ ತರಗೆಲೆಗಳು ಬಿದ್ದಿದ್ದವು. ಗಾಳಿ ಬೀಸುತ್ತಿತ್ತು, ಇನ್ನಷ್ಟು ಒಣ ಎಲೆಗಳು ಉದುರುತ್ತಿದ್ದವು. ಉದುರಿದ ಎಲೆಗಳು ಅತ್ತಿಂದಿತ್ತ ಹಾರಿ ಹೋಗಿ ಬೀಳುತ್ತಿದ್ದವು. ಎಲ್ಲೆಲ್ಲೂ ತರಗಲೆಗಳದೇ ಸರಬರ.
ಪಂಡಿತರು ಬುದ್ಧ ನನ್ನೊಮ್ಮೆ ನಿರುಕಿಸಿ ಹೇಳಿದರು, “ಸ್ವಾಮೀ ಇದೆಂಥ ಪ್ರಶ್ನೆ! ನಿಮ್ಮ ಮುಷ್ಠಿಯಲ್ಲಿ ಹೆಚ್ಚೆಂದರೆ ಹತ್ತಿಪ್ಪತ್ತು ತರಗೆಲೆಗಳು ಇರಬಹುದು. ಈ ಅರಣ್ಯದಲ್ಲಿ ಕೋಟ್ಯಂತರ ಒಣ ಎಲೆಗಳು ಬಿದ್ದಿವೆಯಲ್ಲ…’
“ನೀವು ಕೇಳಿದ ಪ್ರಶ್ನೆಗೂ ಇದೇ ಉತ್ತರ. ನಾನು ಉಪದೇಶಿಸಿರುವುದು ನನ್ನ ಕೈಯಲ್ಲಿರುವ ಒಣ ಎಲೆಗಳಷ್ಟು ಮಾತ್ರ. ಉಪದೇಶಿಸದೆ ಇರುವುದೇ ಹೆಚ್ಚು…’
ಪಂಡಿತರು ಇನ್ನೂ ಒಂದು ಪ್ರಶ್ನೆ ಕೇಳಿದರು, “ಹೇಳದೆ ಇರುವುದಕ್ಕೆ ಕಾರಣವೇನು?’
“ಅದು ಮೋಕ್ಷ ಸಾಧನೆಗೆ ಅಗತ್ಯ ವಾದುದಲ್ಲ. ಅದು ಧ್ಯಾನ ಮಾಡುವು ದಕ್ಕೆ, ಸಮಾಧಿ ಹೊಂದುವುದಕ್ಕೆ ಅಗತ್ಯ ವಾದುದಲ್ಲ. ಹಾಗಾಗಿ ನಾನು ಉಪದೇಶಿ ಸಿಲ್ಲ. ಅಲ್ಲದೆ, ಅದನ್ನು ಉಪದೇಶಿಸುವು ದಕ್ಕೆ ಸಾಧ್ಯವೂ ಇಲ್ಲ. ನಾನು ಹೇಳ ಬೇಕೆಂದು ಬಯಸಿದರೂ ಅದು ಶಬ್ದ ಗಳಲ್ಲಿ ಹೇಳುವಂಥದ್ದಲ್ಲ. ಅದು ಅನು ಭವಿಸಿ ತಿಳಿಯಬೇಕಾದದ್ದು. ಅದು ಅನುಭವಾತ್ಮಕವಾದದ್ದು…’
ಆಧ್ಯಾತ್ಮಿಕ, ಅನುಭಾವಗಳ ಲೋಕ ದಲ್ಲಿ ಅನುಭವಕ್ಕೆ ಮಾತ್ರ ನಿಲುಕುವಂಥ ವಿಷಯಗಳು ಹಲವಾರಿವೆ. ಅವುಗಳನ್ನು ಭಾಷೆಯಲ್ಲಿ ಕಟ್ಟಿಕೊಡಲಾಗದು. ಅಧ್ಯಾತ್ಮ, ಅನುಭಾವಗಳಷ್ಟು ದೂರ ಹೋಗುವುದು ಬೇಡ. ಪ್ರೀತಿ, ಒಲುಮೆ, ಖುಷಿಯಂತಹ ಭಾವನೆಗಳ ವಿಚಾರ ದಲ್ಲಿಯೂ ಈ ಮಾತು ನಿಜ. ಅನುಭವ ವೇದ್ಯವಾದುದೇ ನಿಜ, ಅದಷ್ಟೇ ಸಂಪೂರ್ಣ. ಅದನ್ನು ಭಾಷೆಯಲ್ಲಿ ವರ್ಣಿಸಲು ಹೊರಟರೆ ಅದು ಕುಂದು ತ್ತದೆ, ಬಣ್ಣಗೆಡುತ್ತದೆ, ಸುಳ್ಳಾಗುತ್ತದೆ.
( ಸಾರ ಸಂಗ್ರಹ)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.