ಬಿಜೆಪಿ ಟೀಕಿಸಲು ಪ್ರತಿಪಕ್ಷಗಳಿಗೆ ನೈತಿಕತೆ ಇಲ್ಲ
Team Udayavani, Jan 28, 2020, 3:10 AM IST
ಬೆಂಗಳೂರು: ಕೆಪಿಸಿಸಿಗೆ ಒಬ್ಬ ಅಧ್ಯಕ್ಷರನ್ನು ಆಯ್ಕೆ ಮಾಡಲು ಯೋಗ್ಯತೆ ಇಲ್ಲದವರಿಗೆ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ ಎಂದು ಹೇಳುವ ಶಕ್ತಿಯೂ ಇಲ್ಲ, ನೈತಿಕತೆಯೂ ಇಲ್ಲ. ಇನ್ನು, ಜೆಡಿಎಸ್‌ನವರನ್ನು ದೇವರೇ ಕಾಪಾಡಬೇಕು. ಎರಡೂ ಪಕ್ಷಗಳು ಹೆಸರಿಗಷ್ಟೇ ವಿರೋಧ ಪಕ್ಷದಂತಿವೆ. ಇನ್ನೊಂದು ವಾರದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಮುಂದಿನ ಮೂರು ವರ್ಷ ಉತ್ತಮ ಆಡಳಿತ ನೀಡುತ್ತೇವೆ… ಇದು ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದ ಪರಿ.
“ಉದಯವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ಸಂವಾದದಲ್ಲಿ ಪಾಲ್ಗೊಂಡ ಅವರು, ಸಂಪುಟ ವಿಸ್ತರಣೆ, ಪಕ್ಷ ಸಂಘಟನೆ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಸೇರಿ ಹಲವು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು.
ಪ್ರತಿಪಕ್ಷಗಳು ಎಲ್ಲಿವೆ?: ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರಬಹುದು. ಆದರೆ, ಪ್ರತಿಪಕ್ಷಗಳು ಎಲ್ಲಿವೆ. ಕಾಂಗ್ರೆಸ್‌ನವರಿಗೆ ಕೆಪಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ನಾಲ್ಕು ವಿಭಾಗಕ್ಕೆ ಒಬ್ಬ ಕಾರ್ಯಾಧ್ಯಕ್ಷರನ್ನು ನೇಮಕ ಮಾಡುವ ಚರ್ಚೆ ನಡೆದಿದೆ. ನನ್ನ ರಾಜಕೀಯ ಜೀವನದಲ್ಲಿ ರಾಜಕೀಯ ಪಕ್ಷವೊಂದರಲ್ಲಿ ಇಂತಹ ಗೊಂದಲ ನೋಡಿಲ್ಲ ಎಂದು ಟೀಕಿಸಿದರು. ಜಿಲ್ಲೆಗೊಬ್ಬ ಅಧ್ಯಕ್ಷರನ್ನು ಮಾಡಿ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿ ಎಂದು ವ್ಯಂಗ್ಯವಾಡಿದರು.
ಇಂತಹ ಪಕ್ಷವನ್ನು ಪ್ರತಿಪಕ್ಷ ಎನ್ನಬೇಕೆ?. ಜೋರಾಗಿ ಕೂಗಿದರೆ ಪ್ರತಿಪಕ್ಷವೇ?. ನಮ್ಮ ಪಕ್ಷದಲ್ಲಿ ಚರ್ಚಿಸಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಇತ್ತೀಚೆಗೆ ಅವರು ಚುನಾಯಿತರಾದರು. ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿಕೊಂಡು ಸುಸಂಘಟಿತವಾಗಿ ಪಕ್ಷ ಕಟ್ಟುತ್ತಿದ್ದೇವೆ. ಕಾಂಗ್ರೆಸ್‌ನವರಿಗೇನು ರೋಗ ಎಂದು ವಾಗ್ಧಾಳಿ ನಡೆಸಿದರು. ಇನ್ನು, ಜೆಡಿಎಸ್‌ನವರನ್ನು ಆ ದೇವರೇ ಕಾಪಾಡಬೇಕು. ಅವರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಹೀಗೆಯೇ ಸುಳ್ಳು ಹೇಳುತ್ತಾ ಹೋದರೆ ಖಂಡಿಸಲೇಬೇಕಾಗುತ್ತದೆ.
ಅವರು ಅಧಿಕಾರದಲ್ಲಿದ್ದಾಗ ಇದ್ದ ಪೊಲೀಸರೇ ಈಗಲೂ ಮಂಗಳೂರಿನಲ್ಲಿದ್ದಾರೆ. ಆದರೆ, ಪೊಲೀಸ್‌ನವರಿಗೇ ಅವಮಾನವಾಗುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ತನಿಖೆ ನಡೆಯುತ್ತಿದೆ. ರಾಜ್ಯದ ಭದ್ರತೆ ದೃಷ್ಟಿಯಿಂದ ಸರ್ಕಾರಕ್ಕೆ ಸಹಕಾರ ಕೊಡುವುದನ್ನು ಬಿಟ್ಟು ರಾಜಕೀಯ ಮಾಡುತ್ತಾ ಹೊರಟಿದ್ದಾರೆ. ಪ್ರತಿಪಕ್ಷದಲ್ಲಿದ್ದೇನೆ ಎಂಬುದನ್ನು ತಿಳಿಸಲು ತೋರಿಕೆಗೆ ಆರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಗ್ರಾಮಸಭೆಗಳ ಅಧಿಕಾರ ಮೊಟಕುಗೊಳಿಸಲ್ಲ: ವಸತಿ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ಅವ್ಯವಹಾರವಾಗಿದೆ ಎನ್ನುವ ಕಾರಣಕ್ಕೆ ಗ್ರಾಮಸಭೆಗಳ ಅಧಿಕಾರ ಮೊಟಕುಗೊಳಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. “ಉದಯವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಪಿಡಿಒಗಳು ಅವ್ಯವಹಾರ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸಲಾಗುತ್ತಿದೆ. ಫಲಾನುಭವಿಗಳ ಆಯ್ಕೆಗೆ ಗ್ರಾಮಸಭೆಗಿರುವ ಅಧಿಕಾರವನ್ನು ಮೊಟಕುಗೊಳಿಸಲು ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದರು. ಸಂವಾದದ ವೇಳೆ ಈ ಬಗ್ಗೆ ಸ್ಪಷ್ಟನೆ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಗ್ರಾಮಸಭೆಯ ಅಧಿಕಾರ ಮೊಟಕುಗೊಳಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ.
ಈ ಕುರಿತು ವಸತಿ ಸಚಿವ ವಿ.ಸೋಮಣ್ಣ ಅವರು ತಮ್ಮ ಜೊತೆಗೆ ಚರ್ಚಿಸಿಲ್ಲ ಎಂದರು. ಗ್ರಾಪಂ ಸದಸ್ಯರು ಹಾಗೂ ಪಿಡಿಒಗಳು ತಮ್ಮ ಗ್ರಾಮವನ್ನು ಅಭಿವೃದ್ಧಿ ಮಾಡಬೇಕೆಂದು ನಿರ್ಧರಿಸಿದರೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ. ಈಗ ಗ್ರಾಪಂ ಸದಸ್ಯರು ಹಾಗೂ ಪಿಡಿಒಗಳು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಭ್ರಷ್ಟಾಚಾರ ಮಾಡಬೇಕೆಂದು ಯಾರಾದರೂ ನಿರ್ಧರಿಸಿದರೆ, ಅವರಿಗೆ ಯಾವ ಕಾನೂನು ಜಾರಿಗೆ ತಂದರೂ ಅದನ್ನು ಬದಲಾಯಿಸಲು ಆಗುವುದಿಲ್ಲ. ಹೀಗಾಗಿ, ಕಾನೂನು ಬದಲಾವಣೆಗಿಂತ ಪಂಚಾಯ್ತಿ ವ್ಯವಸ್ಥೆ ಬಲಗೊಳಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಎಂಟು ಗಂಟೆ ಕಾರ್ಯ ನಿರ್ವಹಿಸಲು ಸೂಚನೆ: ಗ್ರಾಮ ಪಂಚಾಯತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಸೇರಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿರುವ ಸಂಬಂಧ ಕೇರಳ ಸೇರಿದಂತೆ ದೇಶದ ಹಲವು ರಾಜ್ಯಗಳಿಗೆ ಅಧಿಕಾರಿಗಳ ಸಹಿತ ಭೇಟಿ ನೀಡಿ ಅಧ್ಯಯನ ಮಾಡುತ್ತಿದ್ದೇನೆ. ಗ್ರಾಮೀಣ ಭಾಗದ ಗ್ರಂಥಾಲಯಗಳ ನಿರ್ವಹಣೆಯೂ ನಮ್ಮ ಇಲಾಖೆ ವ್ಯಾಪ್ತಿಗೆ ಬಂದಿರುವುದರಿಂದ ಗ್ರಂಥಾಲಯ ಮೇಲ್ವಿಚಾರಕರ ವೇತನವನ್ನು 13,500 ರೂ.ಗಳಿಗೆ ಏರಿಸಬೇಕು ಎಂಬ ಬೇಡಿಕೆ ಇದ್ದು, ಅದರ ಬಗ್ಗೆಯೂ ಸಕಾರಾತ್ಮಕವಾಗಿ ಸ್ಪಂದಿಸಿ, ಗ್ರಂಥಾಲಯಗಳು ಎಂಟು ಗಂಟೆ ಕಾಲ ಕಾರ್ಯ ನಿರ್ವಹಿಸುವ ಬಗ್ಗೆಯೂ ಸೂಚಿಸಲಾಗಿದೆ ಎಂದು ಈಶ್ವರಪ್ಪ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೊಣೆಗಾರಿಕೆ ಸಿಕ್ಕಿರುವುದು ನನ್ನ ಸೌಭಾಗ್ಯ. ನಾನೂ ಕಲಿಯವುದು ಸಾಕಷ್ಟಿದೆ. ಪ್ರತಿ ಗ್ರಾಮ ಪಂಚಾಯತಿಗೆ ಹೋದಾಗಲೂ ಕಲಿತಿದ್ದೇನೆ. ನಿರಂತರವಾಗಿ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆ, ಗ್ರಾಮ ಪಂಚಾಯತಿ ಪಿಡಿಒಗಳ ಸಭೆ ನಡೆಸಿ ಯೋಜನೆಗಳ ಅನುಷ್ಟಾನದ ಬಗ್ಗೆ ಚರ್ಚೆ ನಡೆಸುತ್ತಿದ್ದೇನೆ ಎಂದರು.
ಸ್ವಯಂ ಪ್ರೇರಿತ: ರಾಜ್ಯದ 6,021 ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಸೋಲಾರ್ ಅಳವಡಿಕೆ ಹಾಗೂ ಸ್ವತ್ಛ ಭಾರತ್ ಅಭಿಯಾನದಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಇಲಾಖೆ ಮುಂದಾಗಿದೆ. ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ 20 ಲಕ್ಷ ರೂ.,ಸೋಲಾರ್ ಅಳವಡಿಕೆಗೆ 2.50 ಲಕ್ಷ ರೂ.ನಿಂದ 4.50 ಲಕ್ಷ ರೂವರೆಗೆ ಅನುದಾನ ಸಿಗಲಿದೆ. ಇದಕ್ಕೆ ಸಾಕಷ್ಟು ಗ್ರಾಮ ಪಂಚಾಯತಿಗಳು ಸ್ವಯಂ ಪ್ರೇರಿತವಾಗಿ ಮುಂದೆ ಬಂದಿವೆ ಎಂದು ಹೇಳಿದರು.
ಬೀದರ್ ಜಿಲ್ಲೆ ಔರಾದ್ ತಾಲೂಕಿನ ಗ್ರಾಮ ಪಂಚಾಯತಿಯಲ್ಲಿ ಸೋಲಾರ್ ಅಳವಡಿಕೆ ಹಾಗೂ ಬೆಂಗಳೂರು ನಗರ ಜಿಲ್ಲೆಯ ರಾಜಾನುಕುಂಟೆ ಗ್ರಾಮ ಪಂಚಾಯತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಅಳವಡಿಕೆಗಳು ಮಾದರಿಯಾಗಿವೆ. ಕೆಲವೆಡೆ, ಹಲವು ಗ್ರಾಮ ಪಂಚಾಯತಿಗಳು ಸೇರಿ ಒಟ್ಟಿಗೆ ದೊಡ್ಡ ಪ್ರಮಾಣದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿಕೊಳ್ಳಲು ಯೋಜನೆ ರೂಪಿಸಿಕೊಂಡಿವೆ ಎಂದು ಈಶ್ವರಪ್ಪ ತಿಳಿಸಿದರು. ಔರಾದ್ ತಾಲೂಕಿನ ಗ್ರಾಮ ಪಂಚಾಯತಿ ವಾರ್ಷಿಕ 12 ಲಕ್ಷ ರೂ.ವಿದ್ಯುತ್ ಶುಲ್ಕ ಪಾವತಿಸುತ್ತಿದ್ದ ಪಂಚಾಯತಿ. ಈಗ ಒಂದು ವರ್ಷದಲ್ಲಿ 4 ಲಕ್ಷ ರೂ.ಮಾತ್ರ ಪಾವತಿಸುವ ಹಂತಕ್ಕೆ ಬಂದಿದೆ. ಇನ್ನೊಂದು ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಶುಲ್ಕ ಪಾವತಿ ನಿಲ್ಲಲಿದೆ ಎಂದು ಹೇಳಿದರು.
ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ: ಈಶ್ವರಪ್ಪ
* ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ದರೆ ಈ ರೀತಿಯ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಕಾಂಗ್ರೆಸ್, ಜೆಡಿಎಸ್‌ನಿಂದ ಬಂದವರಿಂದ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಅವರ ಋಣ ತೀರಿಸಬೇಕಿದೆ. ಎಷ್ಟು ಮಂದಿಗೆ ಸಚಿವ ಸ್ಥಾನ, ಪ್ರಭಾವಿ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಸಿಗುವುದೋ ಗೊತ್ತಿಲ್ಲ.
* ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಬೇಕಿದೆ. ಮಾಜಿ ಸಚಿವ ಆರ್.ಶಂಕರ್‌ಗೂ ಸಚಿವ ಸ್ಥಾನ ನೀಡಬೇಕಾಗುತ್ತದೆ. ಪಕ್ಷ ಹಾಗೂ ಮುಖ್ಯಮಂತ್ರಿಯವರು ಈ ಬಗ್ಗೆ ಚರ್ಚಿಸಿ, ತೀರ್ಮಾನಿಸುತ್ತಾರೆ. ಸದ್ಯದಲ್ಲೇ ಸಂಪುಟ ವಿಸ್ತರಣೆಯಾಗಲಿದೆ.
* ಸರ್ಕಾರಕ್ಕಾಗಿ ನಾನು ಸೇರಿ ಹಲವರು ಸ್ವಯಂಪ್ರೇರಿತವಾಗಿ ಸಚಿವ ಸ್ಥಾನ ತೊರೆಯಲು ಸಿದ್ಧರಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿಗಳು ಪ್ರಸ್ತಾಪಿಸಿಲ್ಲ, ಚರ್ಚಿಸಿಲ್ಲ. ಸರ್ಕಾರಕ್ಕಾಗಿ ನಾವೇ ಪದವಿ ತ್ಯಾಗಕ್ಕೆ ಸಿದ್ಧರಿದ್ದೇವೆ.
* ಅನರ್ಹರಾದವರು ವಿಧಾನಸಭೆ, ವಿಧಾನ ಪರಿಷತ್‌ಗೆ ಆಯ್ಕೆಯಾಗಿ ಅಧಿಕಾರ ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಸದ್ಯದ ಸಂದರ್ಭದಲ್ಲಿ ಸೋತವರನ್ನು ಸಚಿವರನ್ನಾಗಿ ಮಾಡಲು ಸಾಧ್ಯವಾಗಲಿಕ್ಕಿಲ್ಲ. ಮೇ ಹೊತ್ತಿಗೆ ಈ ವಿಚಾರ ಚರ್ಚೆಗೆ ಬರಬಹುದು.
* ಕಾಂಗ್ರೆಸ್, ಜೆಡಿಎಸ್‌ನವರು ಯಾವುದಾದರೂ ಆಸೆ ಇಟ್ಟುಕೊಂಡೇ ಪಕ್ಷಕ್ಕೆ ಬಂದಿರುತ್ತಾರೆ. ಅವರೇನು ಬಿಜೆಪಿ, ಸಂಘಟನೆ ಕಟ್ಟಲು ಬರುತ್ತಿಲ್ಲ. ಬಂದ ಮೇಲೆ ಪಕ್ಷ ಕಟ್ಟಬಹುದು. ಅವರು ಅಧಿಕಾರಕ್ಕಾಗಿಯೇ ಪಕ್ಷಕ್ಕೆ ಬಂದಿರಬಹುದು. ಬಂದ ನಂತರ ನಿಷ್ಟರಾಗಿರುತ್ತಾರೆ. ಅಧಿಕಾರಕ್ಕಾಗಿ ಪಕ್ಷ ಸೇರುವುದು ತಪ್ಪಲ್ಲ.
* ಸೋತವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ವರಿಷ್ಠರ ನಿರ್ಧಾರವನ್ನು ಪ್ರಶ್ನಿಸಲಾಗದು. ಈ ವಿಚಾರದಲ್ಲಿ ಸರಿ-ತಪ್ಪಿನ ಚರ್ಚೆ ಮಾಡುವ ಅಧಿಕಾರ ನನಗಿಲ್ಲ. ಅದು ಪಕ್ಷದ ಆಂತರಿಕ ವಿಚಾರ.
* 11 ಮಂದಿ ಉಪಚುನಾವಣೆಯಲ್ಲಿ ಗೆಲ್ಲದಿದ್ದರೆ ಬಿಜೆಪಿಯಿಂದ ಮುಖ್ಯಮಂತ್ರಿ ಇರುತ್ತಿರಲಿಲ್ಲ. ನಾವ್ಯಾರೂ ಮಂತ್ರಿ ಕೂಡ ಆಗುತ್ತಿರಲಿಲ್ಲ. ಹಾಗೆಂದು ಮೂಲ-ವಲಸಿಗ ಬಿಜೆಪಿಗರೆಂಬ ಸಂಘರ್ಷವಿಲ್ಲ. ಬಿಜೆಪಿಯವರು ಹಾಲು ಸಕ್ಕರೆ ಇದ್ದಂತೆ. ಮುಂಚಿನಿಂದ ಪಕ್ಷದಲ್ಲಿದ್ದವರು ಹಾಲಿನಂತೆ. ಹೊಸದಾಗಿ ಬಂದವರು ಸಕ್ಕರೆ ಇದ್ದಂತೆ. ಎರಡನ್ನೂ ಸೇರಿಸಿಯೇ ಜನ ಖುಷಿಯಿಂದ ಕುಡಿಯುತ್ತಾರೆ.
* ಮುಂದಿನ ಮೂರು ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ.
ಬಿಜೆಪಿಯಲ್ಲಿ ಪಕ್ಷವೇ ಮುಖ್ಯ
* ಬಿಜೆಪಿ, ಸಂಘಟನೆ ಆಧಾರಿತ ಪಕ್ಷವೇ ಹೊರತು ನಾಯಕ ಆಧಾರಿತ ಪಕ್ಷವಲ್ಲ. ನಮ್ಮ ಕೇಡರ್, ನಮ್ಮ ಲೀಡರ್ ಏನು ಮಾಡುತ್ತಾರೆ ಎಂದು ನೋಡುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜನ ಅಭ್ಯರ್ಥಿಗಿಂತ ಪಕ್ಷಕ್ಕೆ ಓಟು ಕೊಟ್ಟಿದ್ದಾರೆ. ನಮಗೆ ಪೇಜ್ ಪ್ರಮುಖರು, ಬೂತ್ ಮಟ್ಟದ ಕಾರ್ಯಕರ್ತರೇ ಮುಖ್ಯ.
* ನಮ್ಮಲ್ಲಿ ನಾನು ಎನ್ನುವುದಕ್ಕೆ ಖಂಡಿತ ಬೆಲೆ ಇಲ್ಲ. ನಮ್ಮಲ್ಲಿ ಯಾವುದೇ ವ್ಯಕ್ತಿ ಹೋಗುವುದಾಗಿ ಹೇಳಿದರೆ ಹೋಗು ಎನ್ನಲಾಗುತ್ತದೆ. ಇಲ್ಲಿಂದ ಹೋಗಿ ಉದ್ದಾರವಾಗಿರುವ ಒಬ್ಬರ ಹೆಸರು ಹೇಳಿ ನೋಡೋಣ. ಪಕ್ಷಕ್ಕೆ ಬಂದು ಹೊಂದಿಕೊಂಡವರು ಉದ್ದಾರವಾಗಿದ್ದಾರೆ. ಇಲ್ಲವೇ ಬಿಟ್ಟು ಹೋದರೆ ಮತ್ತೆ ಹಾಳಾಗಿ ಹೋಗಿದ್ದಾರೆ. ನಮಗೆ, ವ್ಯಕ್ತಿ ಮುಖ್ಯವೇ ಅಲ್ಲ. ಸಂಘಟನೆಯೇ ಮುಖ್ಯ.
* ನಮ್ಮಲ್ಲಿ 153 ಸಂಘಟನೆಗಳಿವೆ. ಅವರ್ಯಾರು ಗ್ರಾಮ ಪಂಚಾಯ್ತಿ ಸದಸ್ಯರಾಗಲು ಕೂಡ ಬಯಸುವುದಿಲ್ಲ.
* ನಮ್ಮ ಲಕ್ಷಾಂತರ ಕಾರ್ಯಕರ್ತರು ಒಂದು ಹುದ್ದೆಯನ್ನೂ ಬಯಸುವುದಿಲ್ಲ. ಒಳ್ಳೆಯ ಆಡಳಿತ ಕೊಡಿ ಎಂದಷ್ಟೇ ಬಯಸುತ್ತಾರೆ. ಅಧಿಕಾರಕ್ಕೆ ಬಂದಾಗ ಜಾತಿ ವಾದ, ಭ್ರಷ್ಟಾಚಾರ ಮಾಡಬಾರದು ಎಂಬ ನೀತಿ ಪಾಲಿಸಬೇಕು. ಹೊಸಬರಿಗೂ ಇದನ್ನೇ ಹೇಳಲಾಗುತ್ತದೆ. ನರೇಂದ್ರ ಮೋದಿಯವರು ಪೂರ್ಣಾವಧಿ ಕಾರ್ಯಕರ್ತರಾಗಿದ್ದರು. ಇಂದು ಪ್ರಧಾನಿಯಾಗಿದ್ದಾರೆ. ಸಂಘಟನೆಯಿಂದ ಬಂದು ವ್ಯಕ್ತಿತ್ವ ರೂಪಿಸಿಕೊಂಡ ಅವರ ವಿರುದ್ಧ ಭ್ರಷ್ಟಾಚಾರದ ಒಂದು ಆರೋಪವೂ ಇಲ್ಲ.
* ನಾವು ಇಂದು ಒಂದು ಸ್ಥಾನಕ್ಕೆ ಬಂದಿದ್ದೇವೆ ಎಂದು ಸಂಘಟನೆಯ ಶ್ರಮ, ಬೆವರನ್ನು ಮರೆತರೆ ಸಂಘಟನೆಗೆ ದ್ರೋಹ ಬಗೆದಂತೆ.
ರಾಜ್ಯದಲ್ಲಿ ಇತ್ತೀಚೆಗೆ ಪ್ರವಾಹ ಬಂದು ಗ್ರಾಮೀಣ ಭಾಗದ ರಸ್ತೆಗಳು ಸಾಕಷ್ಟು ಕಡೆ ಹಾನಿಯಾಗಿವೆ. ರಸ್ತೆಗಳ ನಿರ್ಮಾಣಕ್ಕೆ 1,500 ಕೋಟಿ ರೂ.ಒದಗಿಸಲಾಗಿದೆ. 103 ತಾಲೂಕುಗಳಲ್ಲಿ ರಸ್ತೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರಿಂದಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನತೆ ಎದುರಿಸುತ್ತಿದ್ದ ಸಮಸ್ಯೆ ನಿವಾರಣೆಯಾಗಲಿದೆ.
-ಕೆ.ಎಸ್.ಈಶ್ವರಪ್ಪ, ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.