ಸಿಎಎಗೆ ವಿರೋಧ: ರಾಜ್ಯದ ಹಲವೆಡೆ ನಿಷೇಧಾಜ್ಞೆ
Team Udayavani, Dec 19, 2019, 3:10 AM IST
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಹಲವು ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬುಧವಾರದಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ರಾಜ್ಯದ ಹಲವೆಡೆ ವಿವಿಧ ಸಂಘಟನೆಗಳು ಪ್ರತಿಭಟನೆ, ಬಂದ್‌ಗೆ ಕರೆ ನೀಡಿದ್ದು ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬುಧವಾರ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ, ಗುಪ್ತಚರ ದಳ ಎಡಿಜಿಪಿ, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ಸುಧೀರ್ಘ ಸಭೆ ನಡೆಸಿದ ಡಿಜಿಪಿ ಅವರು, ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು ಎಂದು ಮೂಲಗಳು ತಿಳಿಸಿವೆ. ಡಿಜಿಪಿ ಸೂಚನೆ ಮೇರೆಗೆ ಆಯಾ ವಲಯ ಆಯುಕ್ತರು,ಐಜಿಪಿಗಳು, ಹಾಗೂ ಜಿಲ್ಲಾ ಎಸ್ಪಿಗಳು ಜಿಲ್ಲೆಗಳಲ್ಲಿ ಸೂಕ್ಷ್ಮ ಪರಿಸ್ಥಿತಿ ಅವಲೋಕಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಯಾದಗಿರಿ, ಶಿವಮೊಗ್ಗ, ಬೆಳಗಾವಿ, ಗದಗ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಡಿ.18ರ ಮಧ್ಯರಾತ್ರಿಯಿಂದ 21ರ ಮಧ್ಯರಾತ್ರಿಯವರೆಗೆ ಐಪಿಸಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಮದುವೆ ಧಾರ್ಮಿಕ ಕಾರ್ಯ, ಶವಸಂಸ್ಕಾರ ಹೊರತುಪಡಿಸಿ, ಐದು ಅಥವ ಐದಕ್ಕಿಂತ ಹೆಚ್ಚು ಜನ ಗುಂಪುಗೂಡುವುದು, ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿದೆ.
ವಿವಿಧೆಡೆ ಪ್ರತಿಭಟನೆ: ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂ ದೆಯನ್ನು ವಿರೋಧಿಸಿ ರಾಜ್ಯದ ಹಲವೆಡೆ ಬುಧವಾರವೂ ಪ್ರತಿಭಟನೆಗಳು ನಡೆದವು. ಹಾಸನದಲ್ಲಿ ಮುಸಲ್ಮಾನರು ಬುಧವಾರ ಕೆಲ ಕಾಲ ಅಂಗಡಿಗಳನ್ನು ಬಂದ್ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಮೆರವಣಿಗೆ ನಡೆಸಲು ಪೊಲೀಸರು ಅನುಮತಿ ನೀಡದಿದ್ದರಿಂದ ನಗರದ ವಲ್ಲಭಭಾಯಿ ರಸ್ತೆಯಲ್ಲಿರುವ ಅಮೀರ್ ಹುಸೇನ್ ಕಟ್ಟಡದಲ್ಲಿ ಸಭೆ ಸೇರಿ ಮಧ್ಯಾಹ್ನದವರೆಗೂ ಅಲ್ಲಿಯೇ ಕಪ್ಪುಪಟ್ಟಿ ಧರಿಸಿ ಸತ್ಯಾಗ್ರಹ ನಡೆಸಿದರು.
ಗುಂಡ್ಲುಪೇಟೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಕಾಯ್ದೆ ಜಾರಿ ವಿರೋಧಿಸಿ ಪ್ರತಿಭಟನೆ ನಡೆಸಿದರು. ಕಲಬುರಗಿಯಲ್ಲಿ ಗುಲಬರ್ಗಾ ವಿವಿ ವಿದ್ಯಾರ್ಥಿಗಳು ಪೌರತ್ವ ಕಾಯ್ದೆ ವಿರೋಧಿಸಿ ವಿವಿ ಕಾರ್ಯಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ವಿವಿಧ ಕಾಲೇಜಿನ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಾಮನಗರದ ಪರಿವೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಕೀಲರ ಸಂಘದ ಪದಾಧಿಕಾರಿ ಗಳು ಮಸೂದೆಯ ಪ್ರತಿಗಳನ್ನು ಹರಿದು ಕಸದ ಬುಟ್ಟಿಗೆ ಎಸೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಉಡುಪಿ, ಶಿವಮೊಗ್ಗ, ಭದ್ರಾವತಿ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದ ಬಗ್ಗೆ ವರದಿಯಾಗಿದೆ. ಈ ಮಧ್ಯೆ, ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಡಿ.19ರಂದು ಮೈಸೂರು ನಗರದಲ್ಲಿ ನಿಷೇದಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇದೇ ವೇಳೆ, ಮಸೂದೆ ವಿರೋಧಿಸಿ ಡಿ.20ರಂದು ರಾಮನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಪೌರತ್ವ ಕಾಯಿದೆ ಜಾರಿಗೆ ಅವಕಾಶ ನೀಡುವುದಿಲ್ಲ
ಮಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ದೇಶದ ಜನ ಆತಂಕಗೊಂಡಿದ್ದು, ಉತ್ತರ ಭಾರತ ಹೊತ್ತಿ ಉರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಅಥವಾ ಎನ್‌ಆರ್‌ಸಿಯನ್ನು ರಾಜ್ಯದಲ್ಲಿ ಜಾರಿಗೆ ತರಲು ಅವಕಾಶ ನೀಡುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎನ್‌ಆರ್‌ಸಿಯನ್ನು ಜಾರಿಗೊಳಿಸುವ ಪೂರ್ವಭಾವಿಯಾಗಿ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತರಲಾಗುತ್ತಿದೆ. ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ತಕರಾರಿಲ್ಲ. ಆದರೆ, ಇದರ ಹಿಂದೆ ಬಿಜೆಪಿ ಹೊಂದಿರುವ ಉದ್ದೇಶದ ಬಗ್ಗೆ ಆತಂಕವಿದೆ. ಜನರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಎಲ್ಲ ವರ್ಗದವರೊಂದಿಗೆ ಸಮಾಲೋಚನೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಶಾಂತಿ, ಸೌಹಾರ್ದತೆ ಇರುವ ರಾಜ್ಯದಲ್ಲಿ ಉತ್ತರ ಭಾರತದ ರೀತಿಯ ಹಿಂಸಾಚಾರಗಳು ನಡೆಯಬಾರದು ಎಂದು ಹೇಳಿದರು.
ಬಿಜೆಪಿಯ ಚುನಾವಣಾ ರಾಜಕೀಯ: ಪೌರತ್ವ ತಿದ್ದುಪಡಿ ಕಾಯಿದೆ ಬಿಜೆಪಿಯ ಚುನಾವಣಾ ರಾಜಕೀಯ. ಭಾವನಾತ್ಮಕವಾಗಿ ಮತಗಳನ್ನು ಸೆಳೆಯುವ ಬಿಜೆಪಿಯ ತಂತ್ರವಿದು. ಈಶಾನ್ಯ ರಾಜ್ಯಗಳಲ್ಲಿ 60-70 ವರ್ಷಗಳಲ್ಲಿ ಇದ್ದ ಶಾಂತಿಯನ್ನು ಕೇಂದ್ರ ಸರಕಾರ ಕದಡಿದೆ. ಸಂವಿಧಾನಕ್ಕೆ ವಿರುದ್ಧವಾಗಿ ಕಾಯಿದೆ ಜಾರಿಗೆ ತರುತ್ತಿದೆ. ಪಕ್ಕದ ಆಂಧ್ರ, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ಈ ಕಾಯಿದೆ ಜಾರಿಗೆ ಬಂದಿಲ್ಲ. ಹಾಗಾಗಿ, ಕರ್ನಾಟಕಕ್ಕೂ ಬೇಡ. ಮೊದಲು ಎಲ್ಲರೊಂದಿಗೆ ಚರ್ಚೆ ನಡೆಸಬೇಕು.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ಕಾಯಿದೆ ಜಾರಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ. ರಾಜ್ಯದಲ್ಲಿಯೂ ಎನ್‌ಆರ್‌ಸಿ ಜಾರಿಗೆ ತರುವ ಕುರಿತು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಇದು ಗೊಂದಲ ಮತ್ತು ಆತಂಕಕ್ಕೆ ಕಾರಣವಾಗಿದೆ. ಭಾರತ ದೇಶದವರಲ್ಲದ ಯಾರನ್ನು ಕೂಡ ನಾವು ಒಪ್ಪುವುದಿಲ್ಲ. ಧರ್ಮದ ಆಧಾರದಲ್ಲಿ ಪೌರತ್ವ ನೀಡಲು ಸಾಧ್ಯವಿಲ್ಲ. ಗೊಂದಲಗಳಿಂದ ಕೂಡಿದ ಕಾಯಿದೆಯನ್ನು ಒಪ್ಪುವುದಿಲ್ಲ ಎಂದು ಹೇಳಿದರು.
ಬಿಜೆಪಿಯಿಂದ ಪಾಕಿಸ್ತಾನಕ್ಕೆ ಸಂಪರ್ಕ: ಪಾಕಿಸ್ಥಾನಕ್ಕೆ ರೈಲು, ಬಸ್ ಸಂಪರ್ಕ, ಕಾರಿಡಾರ್ ನಿರ್ಮಾಣ ಮಾಡಿಕೊಟ್ಟವರು ಬಿಜೆಪಿಯವರೇ. ಅಲ್ಲದೆ, ಅಲ್ಲಿಗೆ ಹೋಗಿ ಊಟ ಮಾಡಿ ಬಂದವರು ಕೂಡ ಅವರೇ ಎಂದು ಖಾದರ್ ಇದೇ ವೇಳೆ ಟೀಕಿಸಿದರು.
“ಖಾದರ್ ನೆಂಟರಿಗೆಲ್ಲಾ ಪೌರತ್ವ ಕೊಡಲಾಗಲ್ಲ’
ಬೆಂಗಳೂರು: “ಮಾಜಿ ಸಚಿವ ಯು.ಟಿ.ಖಾದರ್ ಅವರು ಪಾಕಿಸ್ತಾನದಿಂದ ಕರೆತರುವ ನೆಂಟರಿಗೆಲ್ಲಾ ಇಲ್ಲಿನ ಪೌರತ್ವದ ಹಕ್ಕು ನೀಡಲು ಸಾಧ್ಯವಿಲ್ಲ’ ಎಂದು ಸಚಿವ ಸಿ.ಟಿ.ರವಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಗರದ ಹೋಟೆಲ್ ಅಶೋಕದಲ್ಲಿ ಬುಧವಾರ ಹಮ್ಮಿಕೊಂಡಿದ್ದ “ಪ್ರವಾ ಸೋದ್ಯಮ ನೀತಿ 2020- 25′ ಕುರಿತ ಕಾರ್ಯಾ ಗಾರದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
“ಯು.ಟಿ.ಖಾದರ್‌ಗೆ ಇಲ್ಲಿನ ಪೌರತ್ವದ ಹಕ್ಕು ನೀಡಲಾಗಿದೆ. ಹಾಗಂತ, ಪಾಕಿಸ್ತಾನದಿಂದ ಕರೆತರುವ ಅವರ ನೆಂಟರಿಗೂ ಅದೇ ರೀತಿಯ ಹಕ್ಕನ್ನು ನೀಡಲು ಆಗುವುದಿಲ್ಲ. ಭಾರತವನ್ನು ಪಾಕಿಸ್ತಾನ ಮಾಡುವ ಮನಃಸ್ಥಿತಿಯಲ್ಲಿ ಕೆಲವರು ಇದ್ದಾರೆ. ಅದರಲ್ಲಿ ಖಾದರ್ ಕೂಡ ಇರಬಹುದು. ಆದರೆ, ಹಾಗೆ ಮಾಡಲು ಅವಕಾಶ ನೀಡುವುದಿಲ್ಲ. ಬದಲಿಗೆ ಅಂತವರನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು’ ಎಂದು ಎಚ್ಚರಿಸಿದರು.
ಗೋಧ್ರಾ ಹತ್ಯಾಕಾಂಡದ ಪರಿಣಾಮ ನೆನಪಿಸಿಕೊಳ್ಳಲಿ: “ಹೊತ್ತಿ ಉರಿಯುವಂತೆ ಮಾಡುವಂತಹ ಖಾದರ್ ಮನಃಸ್ಥಿತಿಯೇ ಗುಜರಾತಿನ ಗೋಧ್ರಾದಲ್ಲಿ ಕರಸೇವಕರಿರುವ ರೈಲಿಗೆ ಬೆಂಕಿ ಹಾಕಿದ್ದು. ಆದರೆ, ಅದರ ನಂತರದ ಪರಿಣಾಮವನ್ನೂ ಖಾದರ್ ನೆನಪಿಸಿಕೊಳ್ಳಬೇಕು. ಜನ ರೊಚ್ಚಿಗೆದ್ದರೆ ಏನಾಗುತ್ತದೆ ಎಂಬುದು ಅರಿವಿರಲಿ. ಬಹುಸಂಖ್ಯಾತರು ತಾಳ್ಮೆ ವಹಿಸಿದ್ದಾರೆ ಎಂದಾಕ್ಷಣ ಎಲ್ಲ ಕಡೆ ಬೆಂಕಿ ಹಚ್ಚಬಹುದು ಎಂದು ತಿಳಿದಿದ್ದರೆ ಅದು ತಪ್ಪು.
ಬೆದರಿಕೆ ಹಾಕಿದ ತಕ್ಷಣ ಹೆದರಲು ಕಾಂಗ್ರೆಸ್ ಹೈಕಮಾಂಡ್ ಅಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಧಾರ್ಮಿಕ ನಿರಾಶ್ರಿತರಿಗೆ ಪೌರತ್ವದ ಹಕ್ಕು ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಅದನ್ನು ಮಾಡಿದೆ. ಅಖಂಡ ಭಾರತ ಎಂದು ಘೋಷಿಸಿದರೆ, ಪಾಕಿಸ್ತಾನದವರಿಗೂ ಪೌರತ್ವ ಕೊಡಲಾಗುವುದು. ಇದನ್ನು ವಿರೋಧಿಸುವುದು ಹಾಗೂ ಬೆದರಿಕೆ ಹಾಕುವುದು ಸಂವಿಧಾನ ವಿರೋಧಿ ಎಂದರು.
ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆ
ಬೆಂಗಳೂರು: ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂ ದೆಯನ್ನು ವಿರೋಧಿಸಿ ರಾಜ್ಯದ ಹಲವೆಡೆ ಬುಧವಾರವೂ ಪ್ರತಿಭಟನೆಗಳು ನಡೆದವು. ಹಾಸನದಲ್ಲಿ ಮುಸಲ್ಮಾನರು ಬುಧವಾರ ಕೆಲ ಕಾಲ ಅಂಗಡಿಗಳನ್ನು ಬಂದ್ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಮೆರವಣಿಗೆ ನಡೆಸಲು ಪೊಲೀಸರು ಅನುಮತಿ ನೀಡದಿದ್ದರಿಂದ ನಗರದ ವಲ್ಲಭಭಾಯಿ ರಸ್ತೆಯಲ್ಲಿರುವ ಅಮೀರ್ ಹುಸೇನ್ ಕಟ್ಟಡದಲ್ಲಿ ಸಭೆ ಸೇರಿ ಮಧ್ಯಾಹ್ನದವರೆಗೂ ಅಲ್ಲಿಯೇ ಕಪ್ಪುಪಟ್ಟಿ ಧರಿಸಿ ಸತ್ಯಾಗ್ರಹ ನಡೆಸಿದರು. ಗುಂಡ್ಲುಪೇಟೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಕಾಯ್ದೆ ಜಾರಿ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಕಲಬುರಗಿಯಲ್ಲಿ ಗುಲಬರ್ಗಾ ವಿವಿ ವಿದ್ಯಾರ್ಥಿಗಳು ಪೌರತ್ವ ಕಾಯ್ದೆ ವಿರೋಧಿಸಿ ವಿವಿ ಕಾರ್ಯಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ವಿವಿಧ ಕಾಲೇಜಿನ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಾಮನಗರದ ಪರಿವೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಕೀಲರ ಸಂಘದ ಪದಾಧಿಕಾರಿ ಗಳು ಮಸೂದೆಯ ಪ್ರತಿಗಳನ್ನು ಹರಿದು ಕಸದ ಬುಟ್ಟಿಗೆ ಎಸೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಉಡುಪಿ, ಶಿವಮೊಗ್ಗ, ಭದ್ರಾವತಿ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದ ಬಗ್ಗೆ ವರದಿಯಾಗಿದೆ. ಈ ಮಧ್ಯೆ, ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಡಿ.19ರಂದು ಮೈಸೂರು ನಗರದಲ್ಲಿ ನಿಷೇದಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇದೇ ವೇಳೆ, ಮಸೂದೆ ವಿರೋಧಿಸಿ ಡಿ.20ರಂದು ರಾಮನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಇಂದು ರಜೆ ಇಲ್ಲ: ಗುರುವಾರ ರಾಜ್ಯದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇರುವುದಿಲ್ಲ. ಎಂದಿನಂತೆ ತರಗತಿಗಳು ನಡೆಯುತ್ತವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ನಾಲ್ಕು ಬಾರಿ ಶಾಸಕರಾದವರು ಗೌರವದಿಂದ ಮಾತನಾಡ ಬೇಕಾಗುತ್ತದೆ. ಆದರೆ, ಅವರು ಈ ರೀತಿಯ ಹೇಳಿಕೆಗಳನ್ನು ನೀಡಿದರೆ ಅವರದ್ದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡಬೇಕಾಗುತ್ತದೆ. ತಾಕತ್ತಿದ್ದರೆ ಖಾದರ್ ಅವರು ಅಧಿವೇಶನದಲ್ಲಿ ಭಾಗವಹಿಸಲಿ. ಅಲ್ಲಿ ತಕ್ಕ ಉತ್ತರ ಕೊಡಲಾಗುವುದು.
-ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ
ಪೌರತ್ವ ತಿದ್ದುಪಡಿ ಕಾಯ್ದೆ ಸುವರ್ಣಾಕ್ಷರದ ಇತಿಹಾಸವಾಗಲಿದೆ. ಪೌರತ್ವ ಕಾಯ್ದೆಗೆ ವಿರೋಧ ಮಾಡುವವರು, ದೇಶದಲ್ಲಿ ಬೆಂಕಿ ಇಡುತ್ತಿರುವವರು, ದೇಶದ ಆಸ್ತಿಪಾಸ್ತಿ ನಾಶ ಮಾಡುತ್ತಿರುವವರು ದೇಶದ್ರೋಹಿಗಳಾಗಿದ್ದು, ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಕಾಯ್ದೆಯಿಂದ ಯಾವ ಧರ್ಮದವರಿಗೂ ತೊಂದರೆಯಾಗುವುದಿಲ್ಲ.
-ಪ್ರಮೋದ ಹೆಗಡೆ, ಬಿಜೆಪಿ ರಾಜ್ಯ ವಕ್ತಾರ