Environment: ನಮ್ಮ ಪರಿಸರ ನಮ್ಮ ಭವಿಷ್ಯ
Team Udayavani, Sep 14, 2023, 1:08 AM IST
ವನಮಹೋತ್ಸವ ಸಪ್ತಾಹದ ಹಿನ್ನೆಲೆಯಲ್ಲಿ “ಉದಯವಾಣಿ’ಯು “ನಮ್ಮ ಪರಿಸರ, ನಮ್ಮ ಭವಿಷ್ಯ’ ವಿಷಯದ ಕುರಿತಂತೆ ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಲೇಖನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಮತ್ತು ಮೆಚ್ಚುಗೆ ಗಳಿಸಿದ ಲೇಖನಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ಪರಿಸರದ ಉಳಿವಿನ ಮೇಲೆ ನಿಂತಿದೆ ನಮ್ಮ ಭವಿಷ್ಯ
ಮಾನವನು ತನಗೆ ಬೇಕಾದ ಎಲ್ಲವನ್ನೂ ಪರಿಸರದಿಂದಲೇ ಪಡೆಯುತ್ತಾನೆ. ಹೀಗಾಗಿ ಪರಿಸರವನ್ನು ಪ್ರಕೃತಿ ಮಾತೆ ಎಂದು ಕರೆಯುತ್ತೇವೆ. ಆದರೆ ಮಹಾಸ್ವಾರ್ಥಿಯಾದ ಮಾನವನಿಂದ ಇಂದು ಸಂಪೂರ್ಣ ಪರಿಸರ ಮಲಿನವಾಗಿದೆ. ಪ್ರಕೃತಿಯ ಗರ್ಭದಲ್ಲಿ ಬೆಳೆಯುತ್ತಿರುವ ಮಾನವನು ತನ್ನ ಕರುಳ ಬಳ್ಳಿಯನ್ನೇ ಕತ್ತರಿಸಿಕೊಳ್ಳುತ್ತಿದ್ದಾನೆ. ಇಂತಹ ಪರಿಸ್ಥಿತಿ ಮುಂದುವರಿದರೆ ನಮ್ಮ ಸರ್ವನಾಶ ಶತಃಸಿದ್ಧ. ಈ ವಿನಾಶದಿಂದ ಪಾರಾಗಲು ನಾವೆಲ್ಲರೂ ಪರಿಸರ ರಕ್ಷಣೆಯ ಪಣವನ್ನು ತೊಡಬೇಕಿದೆ.
ಪ್ರಕೃತಿಗೂ ಮಾನವನಿಗೂ ಗಾಢವಾದ ಸಂಬಂಧವಿದೆ. ನಾವು ಹುಟ್ಟಿ, ಸಾಯುವವರೆಗೂ ಪ್ರಕೃತಿಯ ಮಡಿಲಿನ ಆಸರೆ ನಮಗೆ ಅನಿವಾರ್ಯ. ಆದರೆ ಆಧುನಿಕತೆ, ನಗರೀಕರಣ, ಕೈಗಾರಿಕೀಕರಣ, ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿ… ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ.
ಪರಿಸರ ಎಂಬ ಈ ಜೀವಜಾಲದಲ್ಲಿ ಎಲ್ಲ ಜೀವಿಗಳು ಒಂದಕ್ಕೊಂದು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅವಲಂಬಿಸಿಕೊಂಡಿದ್ದು ಪರಿಸರದ ಮೇಲೆ ಪ್ರಭಾವ ಬೀರುತ್ತದೆ. ಭೂಮಿಯ ಮೇಲಣ ಜೀವಜಾಲವನ್ನು ಉಳಿಸಿಕೊಳ್ಳುವುದರ ಜತೆಯಲ್ಲಿ ಪರಿಸರ ಸಂರಕ್ಷಣೆಗೆ ನಾವು ಮುಂದಾಗಬೇಕಿದೆ. ಈ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವ ಅಥವಾ ಅನುಸರಿಸುವ ಮೂಲಕ ಪರಿಸರ ಮಾಲಿನ್ಯವನ್ನು ತಪ್ಪಿಸಬಹುದಾಗಿದೆ.
1. ಸುತ್ತಮುತ್ತಲೂ ಹಸುರು ಹೆಚ್ಚುವಂತೆ ಗಿಡಗಳನ್ನು ನೆಟ್ಟು, ಪೋಷಿಸುವುದು.
2. ತ್ಯಾಜ್ಯಗಳ ಸಮರ್ಪಕ ವಿಲೇವಾರಿ.
3. ಮಳೆ ನೀರನ್ನು ಇಂಗಿಸಲು ಪ್ರತೀ ಮನೆಯ ಆವರಣದಲ್ಲೂ ಇಂಗುಗುಂಡಿಗಳ ನಿರ್ಮಾಣ.
4. ಕಡಿಮೆ ದೂರದ ಪ್ರಯಾಣಕ್ಕೆ ಕಾಲ್ನಡಿಗೆ ಅಥವಾ ಸೈಕಲ್, ಎಲೆಕ್ಟ್ರಿಕ್ ವಾಹನಗಳಂತಹ ಪರಿಸರಸ್ನೇಹಿ ವಾಹನಗಳನ್ನು ಬಳಸುವುದು ಮತ್ತು ದೂರದ ಪ್ರಯಾಣಕ್ಕಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಹೆಚ್ಚಾಗಿ ಬಳಸುವುದು.
5. ಕಟ್ಟಿಗೆ ಸುಡುವುದನ್ನು ಮತ್ತು ಸೀಮೆಎಣ್ಣೆ ಬಳಕೆಯನ್ನು ಕಡಿಮೆ ಮಾಡುವುದು.
6. ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಮತ್ತು ಮರುಬಳಕೆಯೋಗ್ಯ ವಸ್ತುಗಳನ್ನು ಬಳಸುವುದು.
7. ರಾಸಾಯನಿಕ ಮುಕ್ತ, ಸಾವಯವ ಹಾಗೂ ಸಸ್ಯಮೂಲದ ಆಹಾರ ಪದಾರ್ಥಗಳ ಸೇವನೆ.
8. ಕಾರ್ಖಾನೆಗಳು ಹೊರಸೂಸುವ ವಿಷಾನಿಲಗಳಿಗೆ ಕಡಿವಾಣ ಮತ್ತು ಕಾರ್ಖಾನೆಗಳ ತ್ಯಾಜ್ಯ ನೀರನ್ನು ನೇರವಾಗಿ ಜಲಮೂಲಗಳಿಗೆ ಬಿಡದಿರುವುದು.
9. ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆ.
ಪರಿಸರವೇ ಸೃಷ್ಟಿಯ ಪ್ರತಿಯೊಂದು ಜೀವಿಯ ಆಗರ. ಆದ್ದರಿಂದ ನಮ್ಮ ವಂಶ ಬೆಳಗಲು ಪರಿಸರವನ್ನು ಸಂರಕ್ಷಿಸೋಣ. “ಗಿಡ ನಕ್ಕರೆ ಜಗ ನಗುವುದು, ಗಿಡ ಅಳಿದರೆ ಜಗ ಅಳಿಯುವುದು’ ಎಂಬ ಮಾತನ್ನು ಗಮನದಲ್ಲಿರಿಸಿಕೊಂಡು ಅದಕ್ಕಾಗಿ ನಾವೆಲ್ಲರೂ ಸಾಲುಮರದ ತಿಮ್ಮಕ್ಕ ಅವರನ್ನು ಮಾದರಿಯಾಗಿರಿಸಿಕೊಂಡು ಪರಿಸರ ಸಂರಕ್ಷಣೆಗೆ ಕೈ ಜೋಡಿಸೋಣ.
ಸಾನ್ವಿ ಎಸ್. ಆಚಾರ್ಯ , 8ನೇ ತರಗತಿ , ದುರ್ಗಾ ಆಂಗ್ಲ ಮಾಧ್ಯಮ ಶಾಲೆ ಕೊಕ್ಕರ್ಣೆ
ಪರಿಸರ ರಕ್ಷಿಸಿ ನಮ್ಮ ಭವಿಷ್ಯ ಉಜ್ವಲವಾಗಿಸೋಣ
“ಉಸಿರಿಗೆ ಹಸುರು ಬೇಕು. ಹಸುರಿಗೆ ಕಾಳಜಿ ಬೇಕು’ ಹೀಗಾಗಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಈ ಭೂಮಿಯ ಮೇಲೆ ಮನುಷ್ಯ ಮಾತ್ರವಲ್ಲದೇ ಅನೇಕ ಜೀವ ಸಂಕುಲಗಳು ವಾಸಿಸುತ್ತವೆ. ಎಲ್ಲ ಜೀವಿಗಳೂ ವಾಸಿಸಲು ಮುಖ್ಯವಾಗಿ ಬೇಕಾಗಿರುವುದು ಪರಿಸರ. ಹಾಗಾಗಿ ನಾವು ಗಿಡ ಮರಗಳನ್ನು ಬೆಳೆಸಿದರೆ, ಪರಿಸರವೂ ಶುದ್ಧವಾಗಿರುವುದರ ಜತೆಗೆ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ನಮ್ಮ ಭವಿಷ್ಯದ ಜೀವನವನ್ನು ಸುಗಮಗೊಳಿಸುತ್ತದೆ.
ಅಧುನಿಕ ಪ್ರಪಂಚದಲ್ಲಿ ದಿನದಿಂದ ದಿನಕ್ಕೆ ಮನುಷ್ಯನ ಬೇಡಿಕೆಗಳು ಹೆಚ್ಚುತ್ತಿವೆ. ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಬಹುಬೇಗ ಪ್ರಗತಿ ಹೊಂದುತ್ತಿರುವ ಮಾನವ, ಇಂದು ತನ್ನ ಜೀವನಶೈಲಿಯಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಪರಿಸರದ ಮೇಲೆ ಹೆಚ್ಚಿನ ಒತ್ತಡವನ್ನು ಹೇರುತ್ತಿದ್ದಾನೆ. ಇದರಿಂದ ನಮ್ಮ ಸುತ್ತಮುತ್ತಲಿನ ವಾತಾವರಣ ಬಹಳಷ್ಟು ಕಲುಷಿತಗೊಳ್ಳುತ್ತಿದೆ. ಆದರೆ “ಪರಿಸರವಿಲ್ಲದೆ ಯಾವ ಜೀವಿಗಳೂ ಬದುಕಲು ಸಾಧ್ಯವಿಲ್ಲ’ ಎನ್ನುವ ಸತ್ಯವನ್ನು ಮರೆತು ಬಿಟ್ಟಿದ್ದಾನೆ. ಹಾಗಾಗಿ ಮನುಷ್ಯನಾದವನು ಏನೇ ಮಾಡಿದರೂ ಸಹ ಅವನು ಪರಿಸರದ ಮುಂದೆ ಕೂಸು.
ಮಾನವ ಕೇವಲ ತನ್ನ ಸುಖ, ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡುತ್ತಾ ಸಾಗಿದರೆ, ಭವಿಷ್ಯದ ದಿನಗಳಲ್ಲಿ ಅದೆಷ್ಟೋ ಸಂಪನ್ಮೂಲಗಳು ಬರಿದಾಗಿ ನಮ್ಮ ಮತ್ತು ಮುಂದಿನ ಪೀಳಿಗೆಯ ಬದುಕು ಬರಡಾಗುತ್ತದೆ. ನಮ್ಮ ಜೀವನಕ್ಕೆ ಅತೀಮುಖ್ಯವಾಗಿರುವ ಶುದ್ಧ ವಾತಾವರಣ, ಶುದ್ಧ ಗಾಳಿ, ಕುಡಿಯುವ ನೀರು ಇವೆಲ್ಲವುಗಳನ್ನೂ ನಮಗೆ ಪರಿಸರವೇ ನೀಡುತ್ತದೆ. ಇದನ್ನು ಕಲುಷಿತಗೊಳಿಸಿದೇ ಕಾಪಾಡಿಕೊಂಡು ಬರಬೇಕು. ಇಲ್ಲವಾದರೆ ನಮ್ಮ ಜೀವನ ಕಷ್ಟವಾಗುತ್ತದೆ.
“ಮನೆಗೆ ಮಕ್ಕಳಿರಬೇಕು’ ಎಂಬ ಆಶಯ ಹೇಗೋ ಹಾಗೆಯೇ “ಮನೆಗೊಂದು ಗಿಡ, ಊರಿಗೊಂದು ಮರ’ ಎಂಬ ಸಂಕಲ್ಪ ನಮ್ಮದಾಗಿರಬೇಕು. ಇಂದು ಅದೆಷ್ಟು ಜೀವ ಸಂಕುಲಗಳು ನಾಶ ಹೊಂದಲು ಪರಿಸರ ನಾಶವೇ ಕಾರಣ. ಪರಿಸರ ಪ್ರೇಮವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ನಮ್ಮ ಹಿರಿಯರು ಅಗತ್ಯಗಳಿಗಷ್ಟೇ ಸಂಪನ್ಮೂಲಗಳನ್ನು ಬಳಸಿ, ನಮಗಾಗಿ ಉಳಿಸಿದ್ದಾರೆ. ಇದೇ ಮಾದರಿಯನ್ನು ನಾವು ಅನುಸರಿಸಿ, ನಮ್ಮ ಬದುಕನ್ನು ಪರಿಸರ ಸ್ನೇಹಿಯಾಗಿಸುವ ಪ್ರತಿಜ್ಞೆ ಮಾಡೋಣ. ನಮ್ಮ ಪರಿಸರವನ್ನು ರಕ್ಷಿಸಿ ನಮ್ಮ ಭವಿಷ್ಯವನ್ನು ಉಜ್ವಲವಾಗಿಸೋಣ. ಭವಿಷ್ಯದ ಪೀಳಿಗೆಗೂ ಪರಿಸರವನ್ನು ಉಳಿಸೋಣ. “ನಮ್ಮ ಪರಿಸರ ಸ್ವತ್ಛ ಪರಿಸರ’, “ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂಬ ಧ್ಯೇಯ ವಾಕ್ಯವನ್ನು ಪಾಲಿಸೋಣ.
ಜಿತೇಶ್, 10ನೇ ತರಗತಿ ಸರಕಾರಿ ಪ್ರೌಢಶಾಲೆ ಕಾವಳಕಟ್ಟೆ
ನಮ್ಮ ಬದುಕು ಪರಿಸರ ಸ್ನೇಹಿಯಾಗಿರಲಿ
ಪರಿಸರ ಮನುಷ್ಯನ ಜೀವನಕ್ಕೆ ಎಲ್ಲವನ್ನು ಕೊಟ್ಟಿದೆ. ಆದರೆ ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರದ ಮೇಲೆ ಪ್ರತೀಕ್ಷಣ ಎಂಬಂತೆ ದೌರ್ಜನ್ಯ ಎಸಗುತ್ತಲೇ ಇದ್ದಾನೆ. ಇದರಿಂದಾಗಿ ಪ್ರಕೃತಿ ಮುನಿಸಿಕೊಂಡು ಪದೇಪದೆ ಮೈಕೊಡವಿ ಮಾನವರಿಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ. ಆದರೆ ಇವ್ಯಾವುಗಳಿಂದಲೂ ಪಾಠ ಕಲಿಯದ ಮನುಷ್ಯ ಎಗ್ಗಿಲ್ಲದೆ ಪರಿಸರದ ಮೇಲೆ ಸವಾರಿ ಮಾಡುತ್ತಲೇ ಇದ್ದಾನೆ. ಇದು ಮುಂದುವರಿದದ್ದೇ ಆದಲ್ಲಿ ಕೇವಲ ಮನುಷ್ಯ ಮಾತ್ರವಲ್ಲ, ಭೂಮಿಯ ಮೇಲಣ ಜೀವರಾಶಿಗೆ ಅಪಾಯ ಕಟ್ಟಿಟ್ಟಬುತ್ತಿ. ಹೀಗಾಗಿ ಪರಿಸರ ರಕ್ಷಣೆ ಪ್ರತಿಯೊಬ್ಬರ ದೈನಂದಿನ ಕರ್ತವ್ಯವಾಗಿ ಮಾರ್ಪಟ್ಟಿದ್ದು ಪರಿಸರವನ್ನು ಉಳಿಸಲು ನಾವು ಮಾಡುವ ಪ್ರತಿಯೊಂದೂ ಕೆಲಸವೂ ನಮ್ಮ ಸ್ವರಕ್ಷಣೆಗಾಗಿಯೇ ಇದೆ ಎಂಬುದನ್ನು ನಾವೆಲ್ಲರೂ ಮೊದಲು ಅರ್ಥೈಸಿಕೊಳ್ಳಬೇಕಿದೆ.
ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಪರಿಸರ ಎನ್ನುತ್ತೇವೆ. ಪ್ರಕೃತಿಗೂ ಮಾನ ವನಿಗೂ ಗಾಢವಾದ ಸಂಬಂ ಧವಿದೆ. ಆದರೆ ಇತ್ತೀಚಿನ ದಿನ ಗಳಲ್ಲಿ ಆಧುನಿಕತೆ, ನಗರೀ ಕರಣ, ಕೈಗಾರೀಕರಣ, ವಿಜ್ಞಾನ, ತಂತ್ರಜ್ಞಾನ, ಅಭಿವೃದ್ಧಿ ಯೋ ಜನೆಗಳು… ಹೀಗೆ ಹಲವಾರು ಕಾರಣಗಳಿಂದಾಗಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆಯಲ್ಲದೆ ಹವಾಮಾನ ವೈಪರೀತ್ಯಗಳು ಸಂಭವಿಸುತ್ತಿವೆ. ಅಲ್ಲದೇ ಹೆಚ್ಚು ತ್ತಿರುವ ಜನಸಂಖ್ಯೆ, ವಸತಿ ಸಮುಚ್ಚಯಗಳು, ಹೊಗೆ ಉಗುಳುವ ವಾಹನಗಳು, ಪ್ಲಾಸ್ಟಿಕ್ ಸಾಮ್ರಾಜ್ಯ ಇತ್ಯಾದಿಗಳಿಂದಾಗಿ ನಮ್ಮ ಪರಿಸರವು ಹಾಳಾಗುತ್ತಿದೆ.
ಮಾನವ ಕೇವಲ ತನ್ನ ಸುಖ, ಸ್ವಾರ್ಥಕ್ಕಾಗಿ ಪರಿಪೂರ್ಣ ಪರಿಸರವನ್ನು ನಾಶ ಮಾಡುತ್ತಾ ಸಾಗಿದರೆ ಮುಂದೊಂದು ದಿನ ಅದೆಷ್ಟೋ ಸಂಪನ್ಮೂಲಗಳು ಬರಿದಾಗಿ ನಮ್ಮ ಮುಂದಿನ ಪೀಳಿಗೆಗೆ ಇವು ಸಿಗದಾಗುತ್ತವೆ. ಅಷ್ಟು ಮಾತ್ರವಲ್ಲದೆ ಪರಿಸರದಲ್ಲಿ ಅಸಮತೋಲನ ಸೃಷ್ಟಿ ಯಾಗುತ್ತದೆ. ಇದನ್ನು ತಪ್ಪಿಸಲು ನಾವು ಪರಿಸರವನ್ನು ರಕ್ಷಿಸಬೇಕು. ಪರಿಸರ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ.
ಪರಿಸರ ನಾಶದ ಕಾರಣದಿಂದಾಗಿ ಇಂದು ಅದೆಷ್ಟೋ ಜೀವಸಂಕುಲಗಳು ನಾಶ ಹೊಂದುತ್ತಾ ಸಾಗಿವೆ. ಆದ್ದರಿಂದ ಪರಿಸರ ಪ್ರೇಮವನ್ನು ನಾವೆಲ್ಲರೂ ರೂಢಿಸಿ ಕೊಳ್ಳಬೇಕು. ಪರಿಸರ ಸ್ನೇಹಿ ಇಂಧನ ಬಳಕೆ, ಪರಿಸರ ಸ್ನೇಹಿ ಜೀವನ ಶೈಲಿ ರೂಢಿಸಿ ಕೊಳ್ಳುವುದು, ಶಾಲಾ ಕಾಲೇಜುಗಳ ಪಠ್ಯ ಕ್ರಮದಲ್ಲಿ ಪರಿಸರ ಜಾಗೃತಿ ಮೂಡಿಸುವ ಪಠ್ಯಗಳ ಸೇರ್ಪಡೆಯಿಂದ ಎಳವೆಯಲ್ಲಿಯೇ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಬಗೆಗೆ ಅರಿವು ಮೂಡಿಸಲು ಸಾಧ್ಯ.
ಅಗತ್ಯಕ್ಕೆ ತಕ್ಕಷ್ಟೇ ಸಂಪನ್ಮೂಲಗಳನ್ನು ಬಳಸಿ, ಅವನ್ನು ಭವಿಷ್ಯದ ಪೀಳಿಗೆಗೂ ಕಾಪಿಡುವುದು ನಮ್ಮ ಹಿರಿಯರು ಪಾಲಿಸಿದ ಆಚರಣೆ. ನಾವು ಅದನ್ನೇ ಅನುಸರಿಸಿಕೊಂಡು ನಮ್ಮ ಬದುಕನ್ನು ಪರಿಸರಸ್ನೇಹಿಯಾಗಿಸುವ ಪ್ರತಿಜ್ಞೆ ಮಾಡೋಣ.
ಚೈತ್ರಿಕಾ, ದ್ವಿತೀಯ ಪಿಯುಸಿ ಸಂತ ಮೇರಿ ಪ.ಪೂ. ಕಾಲೇಜು ಶಿರ್ವ
ಸುಸ್ಥಿರ ಪರಿಸರ ನಿರ್ಮಾಣ ನಮ್ಮೆಲ್ಲರ ಕರ್ತವ್ಯ
ನಮ್ಮ ಜೀವನಕ್ಕೆ ಎಲ್ಲವನ್ನೂ ಕೊಟ್ಟಿರುವ ಪರಿಸರದ ಮೇಲೆ ನಾವು ನಿರಂತರವಾಗಿ ದಾಳಿ ನಡೆಸುತ್ತಿದ್ದೇವೆ. ಇದು ಹೀಗೇ ಮುಂದುವರಿದರೆ ಭೂಮಿಯ ಮೇಲಣ ಪ್ರತಿಯೊಂದೂ ಜೀವಜಂತೂ ನಿರ್ನಾಮವಾಗಲಿದೆ. ಈ ವಾಸ್ತವವನ್ನು ಅರಿತುಕೊಂಡು ನಾವು ಇನ್ನಾದರೂ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗಬೇಕಿದೆ.
ಇಂದಿನ ಆಧುನಿಕ ಮತ್ತು ಯಾಂತ್ರಿಕ ಬದುಕಿನಲ್ಲಿ ಬದುಕಿನಲ್ಲಿ ಮಾನವನಿಗೆ ಗಳಿಕೆಯೊಂದೇ ಮುಖ್ಯವಾಗಿದ್ದು ತನ್ನ ಸುತ್ತಮುತ್ತಲಿನ ಪರಿಸರದತ್ತ ಕ್ಷಣಕಾಲ ಗಮನ ಹರಿಸಲೂ ಪುರುಸೊತ್ತಿಲ್ಲದಂತಾಗಿದೆ. ನಾವೆಲ್ಲರೂ ಪ್ರಕೃತಿಯ ಭಾಗವಾಗಿದ್ದುಕೊಂಡು ಅದನ್ನು ಸಂರಕ್ಷಿಸಿ, ನಮ್ಮ ಮತ್ತು ಮುಂದಿನ ಪೀಳಿಗೆಗಾಗಿ ಅದನ್ನು ಕಾಪಿಡಲು ಇನ್ನಾದರೂ ಕಾರ್ಯೋನ್ಮುಖವಾಗಬೇಕಿದೆ.
ಸುಸ್ಥಿರ ಪರಿಸರ ನಿರ್ಮಾಣದ ದಿಸೆಯಲ್ಲಿ ನಾವೆಲ್ಲರೂ ಈ ಅಂಶಗಳನ್ನು ಗಮನಿಸಬೇಕು. ಜನಸಂಖ್ಯೆ ಹೆಚ್ಚಳ, ಕೃಷಿಯಲ್ಲಿ ಕೀಟನಾಶಕಗಳ ಬಳಕೆ, ಪರಿಸರಕ್ಕೆ ಜನರು, ಸಂಘ, ಸಂಸ್ಥೆಗಳ ಕೊಡುಗೆ ಮತ್ತು ಪಾತ್ರ, ತ್ಯಾಜ್ಯ ಉತ್ಪಾದನೆ, ವಿಲೇವಾರಿ, ನೀರಿನ ಬಳಕೆ, ಮಳೆನೀರು ಇಂಗುವಿಕೆ ಮತ್ತು ಜಲಮೂಲಗಳ ಸ್ಥಿತಿಗತಿ, ಸ್ಥಳೀಯ ಸಂಸ್ಕೃತಿ, ಹಿರಿಯರ ಜೀವನ ಕ್ರಮ, ಇಂಧನ ಮತ್ತು ಶಕ್ತಿಯ ಬಳಕೆಯ ಪ್ರಮಾಣ, ಕಾಡು ಕೃಷಿ ಭೂಮಿಯಾಗುವುದು ಮತ್ತು ಕೃಷಿ ಭೂಮಿ ನಿವೇಶನಗಳಾಗುವುದು, ಆರ್ಥಿಕತೆಯ ಏರಿಳಿತದಿಂದ ಜನರ ಜೀವನ ಶೈಲಿ, ಅವರ ಬೇಡಿಕೆಗಳು, ಜೀವಸಂಕುಲದ ಜೀವನ ಕ್ರಮ, ಅವುಗಳ ಉಳಿವಿಗೆ ಆವಶ್ಯಕವಾದ ಪರಿಸರ.
ಪರಿಸರ ಸ್ನೇಹಿ ಮತ್ತು ಪುನರ್ ಬಳಕೆ ವಸ್ತುಗಳ ಬಳಕೆ, ಜೈವಿಕ ಹಸಿ ತ್ಯಾಜ್ಯಗಳನ್ನು ಸಂಸ್ಕರಣೆ ಮಾಡಿ ಅದನ್ನು ಬಳಸಿ ಮನೆಯಲ್ಲಿಯೇ ಪರ್ಯಾಯ ಇಂಧನ ಅಥವಾ ಗೊಬ್ಬರವನ್ನು ತಯಾರಿಸಬಹುದು, ಸಂಚಾರದ ವೇಳೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಳಕೆ, ಹಗಲಿನಲ್ಲಿ ಕಿಟಿಕಿ ಬಾಗಿಲುಗಳನ್ನು ತೆರೆದಿಟ್ಟು ಮನೆಯೊಳಗೆ ಉತ್ತಮ ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳುವುದರಿಂದ ವಿದ್ಯುತ್ ಬಳಕೆ ಕಡಿಮೆ ಮಾಡಲು ಸಾಧ್ಯ ಮಾತ್ರವಲ್ಲ ಸೌರಶಕ್ತಿ ಅಥವಾ ನವೀಕರಿಸಬಹುದಾದ ಇಂಧನಗಳ ಬಳಕೆಯನ್ನು ಹೆಚ್ಚಿಸುವುದು, ರಾಸಾಯನಿಕ ಮುಕ್ತ ಸಾವಯವ ಹಾಗೂ ಸಸ್ಯಮೂಲದ ಆಹಾರ ಪದಾರ್ಥಗಳ ಸೇವನೆ, ಹುಟ್ಟುಹಬ್ಬ ಸಹಿತ ಇತರ ವಿಶೇಷ ದಿನಗಳಂದು ಗಿಡಗಳನ್ನು ಉಡುಗೊರೆಯಾಗಿ ಕೊಡುವುದು, ನೆಡುವ ಅಭ್ಯಾಸವನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು ಮತ್ತು ಹೀಗೆ ನೆಟ್ಟ ಗಿಡಗಳನ್ನು ನೀರೆರೆದು ಪೋಷಿಸಬೇಕು. ಮನೆಯ ಆವರಣದಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿ ಮಳೆ ನೀರು ಇಂಗುವಂತೆ ಮಾಡಿ ಅಂತರ್ಜಲವನ್ನು ಹೆಚ್ಚಿಸಬಹುದು.
ನಿಹಾಲ, 8ನೇ ತರಗತಿ ಹೋಲಿ ಫ್ಯಾಮಿಲಿ ಪ್ರೌಢ ಶಾಲೆ ಬಜಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋಗಳಿವು..
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅತ್ಯಗತ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Onion Price; ಈರುಳ್ಳಿ ಬೆಲೆ ಇಳಿಕೆ: ಹರಾಜು ನಿಲ್ಲಿಸಿ ರೈತರ ಪ್ರತಿಭಟನೆ
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.