Panchayat Raj Act: ಸೂಕ್ತ ನಿಯಮ ರೂಪಿಸಲು ಮಂಜುನಾಥ ಭಂಡಾರಿ ಆಗ್ರಹ
Team Udayavani, Dec 5, 2023, 10:56 PM IST
ಬೆಳಗಾವಿ: ರಾಜ್ಯ ಸರಕಾರ ಜಾರಿಗೊಳಿಸಿರುವ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿಯಾಗಿ ಏಳು ವರ್ಷಗಳಾಗಿರುವುದರಿಂದ ಸೂಕ್ತ ನಿಯಮಗಳನ್ನು ರೂಪಿಸುವಂತೆ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಆಗ್ರಹಿಸಿದರು.
ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಅವರು, 2016ರಲ್ಲೇ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿಯಾಗಿದೆ. ಆದರೆ ಅದನ್ನು ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ನಿಯಮಗಳನ್ನು ರೂಪಿಸಿಲ್ಲ. ಇದರಿಂದಾಗಿ ಈಗಲೂ ಪಂಚಾಯಿತಿಗಳು ಗ್ರಾಮ ಸ್ವರಾಜ್ಯದ ಕನಸು ನನಸಾಗಿಸುವಲ್ಲಿ ವಿಫಲವಾಗುತ್ತಿವೆ. ಆದ್ದರಿಂದ ಆದಷ್ಟು ಬೇಗ ನಿಯಮಗಳನ್ನು ರೂಪಿಸುವಂತೆ ಅವರು ಒತ್ತಾಯಿಸಿದರು.
ರಾಜ್ಯದಲ್ಲಿ 1993 ರಲ್ಲಿ ಕಾಯ್ದೆ ಜಾರಿಯಾದರೂ ಸ್ಥಳೀಯ ಸಂಸ್ಥೆಗಳಿಗೆ ಅಗತ್ಯವಿದ್ದ ಜವಾಬ್ದಾರಿ, ಜತೆಗೆ ಹಣಕಾಸು, ಅಧಿಕಾರ ಮತ್ತು ಮಾನವ ಸಂಪನ್ಮೂಲವನ್ನು ಸಮಪರ್ಕವಾಗಿ ನೀಡಿಲ್ಲ. ಆಯಾ ಸ್ಥಳೀಯ ಸಂಸ್ಥೆಗಳ ಅಧೀನಕ್ಕೆ ಇಲಾಖೆಗಳನ್ನು ನೀಡಲಿಲ್ಲ. ಪರಿಣಾಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕಲ್ಪನೆ ಸಕಾರಕ್ಕೆ 2016ರಲ್ಲಿ ತಿದ್ದುಪಡಿ ತರಲಾಯಿತು. ಆದರೆ ನಿಯಮಗಳನ್ನು ರೂಪಿಸಿಲ್ಲ. ಕೂಡಲೇ ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸುವಂತೆ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಭಾನಾಯಕ ಬೋಸರಾಜು, ಸಂಬಂಧಪಟ್ಟ ಸಚಿವರಿಂದ ಮಾಹಿತಿ ಪಡೆದು ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.