ಲಕ್ಷಾಂತರ ರೂ. ವೆಚ್ಚದಲ್ಲಿ ಹೂಸಿಂಗಾರದ ದರ್ಬಾರ್; ಗರಿಷ್ಠ 500 ಮಂದಿಗಷ್ಟೇ ಅವಕಾಶ
Team Udayavani, Jan 18, 2022, 6:00 AM IST
ಉಡುಪಿ: ಇಂದು (ಮಂಗಳವಾರ) ಮುಂಜಾನೆ ನಡೆಯುವ ಪರ್ಯಾಯ ದರ್ಬಾರ್‌ಗೂ ಈ ಬಾರಿ ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಸಾಕಷ್ಟು ವ್ಯವಸ್ಥಿತ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಗೊಂಡೆ, ಜೀನಿಯಾ, ಪೀತಾಂಬರಿ ಸಹಿತ ಸುಮಾರು 15ರಿಂದ 16 ಬಗೆಯ ಹೂವುಗಳನ್ನು ಸಿಂಗಾರಕ್ಕೆ ಬಳಸಿಕೊಳ್ಳಲಾಗಿದೆ. ಇವಿಷ್ಟೇ ಅಲ್ಲದೆ 300 ಗೆಂದಾಳಿ ಸೀಯಾಳ, ಅಡಿಕೆ ಕಂಬ, ಮಾವಿನ ಎಲೆಯ ತೋರಣ, ಬಿದಿರ ಕೋಲು, ಪ್ಲೈವುಡ್ ಗಳನ್ನು ಅಂದಕ್ಕೆ ಬಳಸಲಾಗಿದೆ.
ಕೋವಿಡ್ ನಿಯಮದಂತೆ ಆಸನ ವ್ಯವಸ್ಥೆ
ಕೋವಿಡ್ ನಿಯಮಾವಳಿಯಂತೆ ಪರ್ಯಾಯ ದರ್ಬಾರ್ ನಡೆಯಲಿದ್ದು, 3 ಅಡಿ ಅಂತರದಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ರಾಜಾಂಗಣದ ಒಳಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಬಾಲ್ಕನಿಯಲ್ಲಿಯೂ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿಂದೆ ದರ್ಬಾರ್‌ಗೆ ಸಾವಿರಾರು ಮಂದಿ ಸೇರುತ್ತಿದ್ದರು. ಆದರೆ ಈ ಬಾರಿ ಗರಿಷ್ಠ 500 ಮಂದಿಗಷ್ಟೇ ಅವಕಾಶ. ಭಾವಹಿಸುವ ಎಲ್ಲರೂ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಈಗಾಗಲೇ ಸೂಚನೆಯನ್ನು ನೀಡಲಾಗಿದೆ.
ತಪಾಸಣೆ
ದರ್ಬಾರ್ ಒಳಪ್ರವೇಶಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿದೆ. ಅಲ್ಲದೆ ಎರಡೂ ಡೋಸ್ ಲಸಿಕೆ ಪಡೆದಿರಬೇಕಾಗುತ್ತದೆ. ಪಾಸ್ ಇದ್ದವರಿಗೆ ಮಾತ್ರ ಒಳಪ್ರವೇಶಿಸಲು ಅನುಮತಿ ಕಲ್ಪಿಸಲಾಗಿದೆ. ಪ್ರವೇಶ ದ್ವಾರದ ಬಳಿ ಪೊಲೀಸರು ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದಾರೆ.
ದರ್ಬಾರ್‌ನಲ್ಲಿ
ಭಾಗವಹಿಸುವ ಗಣ್ಯರು
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಗೋವಿಂದ ಕಾರಜೋಳ, ಬಿ.ಸಿ. ನಾಗೇಶ್, ವಿ. ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಶ್ರೀರಾಮುಲು, ಮಾಜಿ ಉಪಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮೊದಲಾದವರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಮುದ್ರಿತವಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ, ಸಚಿವ ಸುನಿಲ್ ಕುಮಾರ್ ಕೋವಿಡ್ ಪಾಸಿಟಿವ್ ಆಗಿರುವುದರಿಂದ ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ. ಹಾಗೆಯೇ ಕೊರೊನಾ ನಿರ್ಬಂಧ ಹೆಚ್ಚಿರುವುದರಿಂದ ಗಣ್ಯರಲ್ಲಿ ಕೆಲವರು ಭಾಗವಹಿಸುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.
ಪರ್ಯಾಯ ದರ್ಬಾರ್‌ನಲ್ಲಿ ಸಮ್ಮಾನಗೊಳ್ಳಲಿರುವ ಸಾಧಕರು
ಉಡುಪಿ: ಪರ್ಯಾಯ ದರ್ಬಾರ್‌ನಲ್ಲಿ ವೇದಾಂತ, ವೈದ್ಯಕೀಯ, ಶಿಕ್ಷಣ ಹಾಗೂ ಸಮಾಜ ಸೇವಾ ವಿಭಾಗದ ಸಾಧಕರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಸಮ್ಮಾನಿಸಲಾಗುತ್ತದೆ.
ವೇದಾಂತ: ದಿ| ವ್ಯಾಸ ಆಚಾರ್ಯ ಪರವಾಗಿ ವೃಜನಾಥ ಆಚಾರ್ಯ ಮತ್ತು ವಿದ್ವಾನ್ ಕೆ. ಹರಿದಾಸ ಉಪಾಧ್ಯಾಯ. ವೈದ್ಯಕೀಯ: ಡಾ| ಶಶಿಕಿರಣ್ ಉಮಾಕಾಂತ್, ಶಿಕ್ಷಣ ಕ್ಷೇತ್ರ: ಡಾ| ಕೆ. ವಿನಯ ಹೆಗ್ಡೆ, ಸಮಾಜ ಸೇವೆ: ನೇರಂಬಳ್ಳಿ ರಾಘವೇಂದ್ರ ರಾವ್ ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಸಮ್ಮಾನಸಲಾಗುವುದು.
ರಾಜಾಂಗಣದಲ್ಲಿ
ಸಾಂಸ್ಕೃತಿಕ ಕಾರ್ಯಕ್ರಮ
ಕೃಷ್ಣಾಪುರ ಶ್ರೀಗಳ ಪರ್ಯಾಯ ಮಹೋತ್ಸವದ ಅಂಗವಾಗಿ ಜ.18ರಿಂದ ಮೊದಲ್ಗೊಂಡು ಜ. 22ರ ವರೆಗೆ ವಿವಿಧ ಕಲಾವಿದರ ಪಾಲ್ಗೊಳ್ಳುವಿಕೆಯೊಂದಿಗೆ ರಾಜಾಂ ಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.
ಜ. 18ರಂದು ಪ್ರಾತಃಕಾಲ 3ರಿಂದ 4ರವರೆಗೆ ಪಂಚವೀಣಾವಾದನ, 4ರಿಂದ 5ರವರೆಗೆ ವೇಣುವಾದನ, ಸಂಜೆ 5ರಿಂದ 6.45ರ ವರೆಗೆ ನಾದಸ್ವರ ಕಛೇರಿ, ರಾತ್ರಿ 7ರಿಂದ 9.30ರ ವರೆಗೆ ವೇಣುಗಾನ ವೈವಿಧ್ಯ. ಜ. 19ರಂದು ರಾತ್ರಿ 7ರಿಂದ 9.30ರವರೆಗೆ ಕರ್ಣಾಟಕ ಶಾಸ್ತ್ರೀಯ ಸಂಗೀತ, ಜ. 20ರಂದು ರಾತ್ರಿ 7ರಿಂದ 9.30ರ ವರೆಗೆ ಮಹಾರಾಷ್ಟ್ರ ಸಂತ ಸಾಹಿತ್ಯ ಜಾನಪದ ಭಕ್ತಿ ಸಂಗೀತ, ಜ. 21ರ ರಾತ್ರಿ 7ಕ್ಕೆ ನಾರಸಿಂಹ-ಒಳಿತಿನ ವಿಜಯದ ಕಥನ ನೃತ್ಯರೂಪಕ, ಜ. 22ರ ರಾತ್ರಿ 7ರಿಂದ 9.30ರ ವರೆಗೆ ಆಳ್ವಾಸ್ ಸಾಂಸ್ಕೃತಿ ವೈಭವ ಜರಗಲಿದೆ.
ವಿವಿಧ ಹೂವಿನ ಅಲಂಕಾರ
ರಥಬೀದಿ ಕೃಷ್ಣಾಪುರ ಮಠ, ಶ್ರೀಕೃಷ್ಣ ಮಠ ಹೂವಿನ ಅಲಂಕಾರದಿಂದ ಕಣ್ಮನ ಸೆಳೆಯುತ್ತಿದೆ, ಚೆಂಡುಹೂ, ಜಿನಿಯ, ಕನಕಾಂಬರ, ಸೇವಂತಿಗೆ ಹೂವುಗಳಿಂದ ಮಠಗಳನ್ನು ಅಲಂಕರಿಸಲಾಗಿದೆ. ಶ್ರೀ ಕೃಷ್ಣಮಠ ಮುಖ್ಯದ್ವಾರ, ಕನಕನ ಕಿಂಡಿ ಬಳಿ, ಬಡಗು ಮಾಳಿಗೆ, ಶೃಕೃಷ್ಣ ದೇವರ ಗರ್ಭಗುಡಿ ಸುತ್ತಲೂ ವಿವಿಧ ಹೂವುಗಳ ಅಲಂಕಾರ ವಿಶೇಷವಾಗಿತ್ತು. ಕೃಷ್ಣಾಪುರ ಮಠದ ಮುಖ್ಯದ್ವಾರ, ಸಭಾಂಗಣ, ಛಾವಡಿ, ಆವರಣ ವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿದೆ.
ವ್ಯವಸ್ಥೆ , ಜವಾಬ್ದಾರಿಯಲ್ಲೂ ಬದಲಾವಣೆ
ಶ್ರೀ ಅದಮಾರು ಮಠದ ಪರ್ಯಾಯ ಪೂರ್ಣಗೊಂಡು, ಶ್ರೀಕೃಷ್ಣಾಪುರ ಮಠದ ಪರ್ಯಾಯ ಆರಂಭವಾಗುತ್ತಿದ್ದಂತೆ ಆಡಳಿತಾತ್ಮಕ ವ್ಯವಸ್ಥೆ, ಜವಾಬ್ದಾರಿಯಲ್ಲೂ ಕೆಲವು ಬದಲಾವಣೆಯಾಗಲಿದೆ.
ದಿನಾವರು, ವ್ಯವಸ್ಥಾಪಕರು, ಕೊಟ್ಟಾರಿ, ಭಂಡಾರಿ, ಪಾರುಪತ್ಯಗಾರರು, ಆಸ್ತಾನ ವಿದ್ವಾಂಸರು, ಸಿಂಹಾನದ ವ್ಯವಸ್ಥೆ(ಸರ್ವಜ್ಞಪೀಠ) ನೋಡಿಕೊಳ್ಳುವವರು, ದೇವರ ಸೇವೆ, ಅಸ್ತಿಕೆ ಮತ್ತು ಉರಳಿ ಸೇವೆ ಇತ್ಯಾದಿಗಳಲ್ಲಿ ಜವಾಬ್ದಾರಿಗಳು ಪರ್ಯಾಯದ ಮಠದಿಂದ ಹಂಚಿಕೆ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಹುದ್ದೆಗಳಿಗೆ ವ್ಯಕ್ತಿಗಳ ಹೆಸರಿನ ಘೋಷಣೆ ಪರ್ಯಾಯ ದರ್ಬಾರ್‌ನಲ್ಲಿ ನಡೆಯಲಿದೆ. ಸಿಬಂದಿ ವರ್ಗದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಆದರೆ, ಪ್ರತಿ ಪರ್ಯಾಯದಲ್ಲೂ ಸಿಬಂದಿ ವೇತನ ಹೆಚ್ಚಳಕ್ಕೆ ಕ್ರಮವಾಗುತ್ತದೆ. ಸರಕಾರದ ನಿಯಮದಂತೆ ಭವಿಷ್ಯ ನಿಧಿ ಸೌಲಭ್ಯವನ್ನು ಸಿಬಂದಿ ವರ್ಗಕ್ಕೆ ನೀಡಲಾಗುತ್ತಿದೆ. ಇದೇ ವ್ಯವಸ್ಥೆ ಮುಂದುವರಿಯಲಿದೆ ಎಂದು ವಾಸುದೇವ ಭಟ್ ಪೆರಂಪಳ್ಳಿ ಮಾಹಿತಿ ನೀಡಿದರು.
ಎಲ್ಲೆಲ್ಲೂ ಸ್ವಚ್ಛತೆ
ಪರ್ಯಾಯದ ಸಂದರ್ಭ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ನಗರ ಸಭೆಯ ವತಿಯಿಂದ ಹೆಚ್ಚುವರಿ ಸಿಬಂದಿಯನ್ನು ನಿಯೋಜಿಸಲಾಗಿತ್ತು. ಸ್ವಯಂ ಸೇವಕರೂ ಕೈ ಜೋಡಿಸಿದ್ದರಿಂದ ಕೃಷ್ಣ ಮಠ ಪರಿಸರ ಸೋಮವಾರ ಸ್ಪಚ್ಛವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.