ಪೀಕ್ ಅವರ್ ವಿದ್ಯುತ್ ದುಬಾರಿ
Team Udayavani, May 31, 2019, 3:08 AM IST
ಬೆಂಗಳೂರು: ಎಲ್ಲ ಎಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರ ಸರಾಸರಿ 33 ಪೈಸೆ ಹೆಚ್ಚಳವಾಗಿದ್ದು, ವಿದ್ಯುತ್ ಬಳಕೆದಾರರಿಗೆ ಶಾಕ್ ನೀಡಿದಂತಾಗಿದೆ. ಪರಿಷ್ಕೃತ ದರಗಳು ಏ.1ರಿಂದಲೇ ಪೂರ್ವಾನ್ವಯವಾಗಲಿವೆ.
ಬೆಸ್ಕಾಂ ಸೇರಿ ಎಲ್ಲ ಐದು ಎಸ್ಕಾಂಗಳು ಪ್ರತಿ ಯೂನಿಟ್ ದರ ಸರಾಸರಿ 1.20 ರೂ. (ಶೇ.17.37) ಹೆಚ್ಚಳಕ್ಕೆ ಸಲ್ಲಿಸಿದ್ದ ಪ್ರಸ್ತಾವಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಸರಾಸರಿ 33 ಪೈಸೆ (ಶೇ. 4.8) ಏರಿಕೆ ಮಾಡಿ ಗುರುವಾರ ಆದೇಶ ಹೊರಡಿಸಿದೆ. ಕಳೆದ ವರ್ಷ ಪ್ರತಿ ಯೂನಿಟ್ ದರ 34 ಪೈಸೆ ಹೆಚ್ಚಳವಾಗಿತ್ತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯೋಗದ ಅಧ್ಯಕ್ಷ ಶಂಭುದಯಾಳ್ ಮೀನಾ, ಕಳೆದ 2018ರಲ್ಲಿ ಆಯೋಗ ಜಾರಿಗೊಳಿಸಿದ್ದ ವಿಶೇಷ ಪ್ರೋತ್ಸಾಹ ಯೋಜನೆಯನ್ನು ಈ ಬಾರಿಯೂ ಮುಂದುವರಿಸಿದೆ. ಎಚ್.ಟಿ. ವಿದ್ಯುತ್ ಬಳಕೆದಾರರು ದಿನದಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಬಳಸುವ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ ಒಂದು ರೂ.ಪ್ರೋತ್ಸಾಹ ಧನ
-ಹಾಗೂ ರಾತ್ರಿ 10ರಿಂದ ಮರುದಿನ ಬೆಳಗ್ಗೆ 6 ಗಂಟೆವರೆಗೆ ಬಳಸುವ ಪ್ರತಿ ಯೂನಿಟ್ ವಿದ್ಯುತ್ ದರಕ್ಕೆ 2 ರೂ. ಪ್ರೋತ್ಸಾಹ ಧನ ನೀಡಲಿದೆ. ಆದರೆ, ಬೆಳಗ್ಗೆ 6ರಿಂದ ಬೆಳಗ್ಗೆ 10ರವರೆಗೆ ಹಾಗೂ ಸಂಜೆ 6ರಿಂದ ರಾತ್ರಿ 10ರವರೆಗೆ ಪೀಕ್ ಅವರ್‌ನಲ್ಲಿ ಬಳಸುವ ವಿದ್ಯುತ್‌ಗೆ “ಟೈಮ್ ಆಫ್ ಡೇ’ ದರವನ್ನು ಯೂನಿಟ್‌ಗೆ ಒಂದು ರೂ.ನಂತೆ ದಂಡ ವಿಧಿಸುವುದನ್ನು ಮುಂದುವರಿಸಲಾಗುವುದು ಎಂದರು.
ಮುಂದಿನ ಆರ್ಥಿಕ ವರ್ಷ 2020, 2021 ಹಾಗೂ 2022ಕ್ಕೆ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ ಕ್ರಮವಾಗಿ 44.14 ಕೋಟಿ ರೂ., 48.53 ಕೋಟಿ ರೂ. ಹಾಗೂ 51.19 ಕೋಟಿ ರೂ. ವಾರ್ಷಿಕ ಕಂದಾಯ ಬೇಡಿಕೆಯನ್ನು ಆಯೋಗ ನಿರ್ಧರಿಸಿದೆ. ಮಂಗಳೂರು ವಿಶೇಷ ಆರ್ಥಿಕ ವಲಯ, ಕೈಗಾರಿಕಾ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 7.15 ರೂ.ನಂತೆ ಪರಿಷ್ಕೃತ ಚಿಲ್ಲರೆ ವಿದ್ಯುತ್ ದರ ನಿಗದಿಪಡಿಸಿದೆ.
ಹಾಗೆಯೇ ಏಕಸ್ ವಿಶೇಷ ಆರ್ಥಿಕ ವಲಯಕ್ಕೆ 2020, 2021, 2022ಕ್ಕೆ ಕ್ರಮವಾಗಿ 19.25 ಕೋಟಿ ರೂ., 21.86 ಕೋಟಿ ರೂ. ಹಾಗೂ 23.89 ಕೋಟಿ ರೂ. ವಾರ್ಷಿಕ ಕಂದಾಯ ಬೇಡಿಕೆಯನ್ನೂ ಆಯೋಗ ತೀರ್ಮಾನಿಸಿದೆ. ಏಕಸ್ ವಿಶೇಷ ಆರ್ಥಿಕ ವಲಯದ ಕೈಗಾರಿಕಾ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 6.80 ರೂ.ನಂತೆ ಪರಿಷ್ಕೃತ ಚಿಲ್ಲರೆ ವಿದ್ಯುತ್ ದರ ನಿಗದಿಪಡಿಸಿದೆ ಎಂದು ಅವರು ತಿಳಿಸಿದರು.
ಒಂದು ಲಕ್ಷ ರೂ.ವರೆಗೆ ದಂಡ: ಗ್ರಾಹಕರ ಸಮಸ್ಯೆಯನ್ನು ಕಾಲಮಿತಿಯೊಳಗೆ ಪರಿಹರಿಸಬೇಕು ಎಂದು ಸೂಚನೆಯನ್ನು ಈ ಬಾರಿಯ ಆದೇಶದಲ್ಲೂ ಆಯೋಗ ಪುನರುಚ್ಚರಿಸಿದೆ. ಪ್ರತಿ ಉಪವಿಭಾಗ ವ್ಯಾಪ್ತಿಯಲ್ಲಿ ಗ್ರಾಹಕ ಸಂಪರ್ಕ ಸಭೆಗಳನ್ನು ಸಂಬಂಧಪಟ್ಟ ಅಧೀಕ್ಷಕ ಎಂಜಿನಿಯರ್ ಇಲ್ಲವೇ ಕಾರ್ಯಪಾಲಕ ಎಂಜಿನಿಯರ್ ಅಧ್ಯಕ್ಷತೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸಬೇಕು. ಇಲ್ಲದಿದ್ದರೆ ಪ್ರತಿ ಉಪವಿಭಾಗಕ್ಕೂ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸಿ, ಸಂಬಂಧಪಟ್ಟ ಅಧಿಕಾರಿಯಿಂದ ದಂಡ ವಸೂಲಿ ಮಾಡಲಾಗುವುದು ಎಂದು ಕೆಇಆರ್‌ಸಿ ಅಧ್ಯಕ್ಷ ಶಂಭುದಯಾಳ್ ಮೀನಾ ಹೇಳಿದರು.
ಕೈಗಾರಿಕೆ ಬಳಕೆ ವಿದ್ಯುತ್ ದರ ಏರಿಕೆ: ರಾಜ್ಯದ ಎಲ್ಲ ಲೋ ಟೆನ್ಷನ್ (ಎಲ್.ಟಿ) ಕೈಗಾರಿಕಾ ಬಳಕೆದಾರರಿಗೆ ಅನ್ವಯವಾಗುವ ವಿದ್ಯುತ್ ದರವೂ ಪ್ರತಿ ಯೂನಿಟ್‌ಗೆ 15 ಪೈಸೆಯಿಂದ 20 ಪೈಸೆವರೆಗೆ ಏರಿಕೆಯಾಗಿದೆ. ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ ಮತ್ತು ಇತರೆ ಪುರಸಭೆ ಪ್ರದೇಶ ಹಾಗೂ ಬೆಸ್ಕಾಂ ವ್ಯಾಪ್ತಿಯ ಇತರೆ ಪ್ರದೇಶಗಳಲ್ಲಿ ಎಲ್.ಟಿ. ಕೈಗಾರಿಕಾ ಬಳಕೆ ದರ ಸ್ಲಾಬ್ ಆಧಾರಿತವಾಗಿ 15 ಪೈಸೆ ಹಾಗೂ 20 ಪೈಸೆ ಹೆಚ್ಚಳವಾಗಿದೆ.
ಇತರೆ ಎಸ್ಕಾಂ ವ್ಯಾಪ್ತಿಯ ಪುರಸಭೆ ಪ್ರದೇಶಗಳು ಹಾಗೂ ಇತರೆ ಎಲ್ಲ ಪ್ರದೇಶಗಳಲ್ಲೂ ಸ್ಲಾಬ್ ಆಧಾರಿತವಾಗಿ 15 ಪೈಸೆ, 20 ಪೈಸೆ ಏರಿಕೆ ಮಾಡಲಾಗಿದೆ.ರಾಜ್ಯದ ಎಲ್ಲ ಎಚ್.ಟಿ. ಕೈಗಾರಿಕಾ ಬಳಕೆ ವಿದ್ಯುತ್ ದರ ಕೂಡ ಪ್ರತಿ ಯೂನಿಟ್‌ಗೆ 20 ಪೈಸೆ ಹೆಚ್ಚಳವಾಗಿದೆ. ವಾಣಿಜ್ಯ ಬಳಕೆ ವಿದ್ಯುತ್ ದರವು ಪ್ರತಿ ಯೂನಿಟ್‌ಗೆ 25 ಪೈಸೆ ಏರಿಕೆ ಮಾಡಲಾಗಿದೆ. ಎಲ್.ಟಿ. ವ್ಯಾಪ್ತಿಗೆ ಬರುವ ಖಾಸಗಿ ವಿದ್ಯಾಸಂಸ್ಥೆಗಳು ಹಾಗೂ ಖಾಸಗಿ ಆಸ್ಪತ್ರೆಗಳು ಬಳಸುವ ವಿದ್ಯುತ್ ದರವೂ 20 ಪೈಸೆ ಹೆಚ್ಚಳವಾಗಿದೆ.
ನೀರು ಸರಬರಾಜು ವಿದ್ಯುತ್ ದರವೂ ಹೆಚ್ಚಳ: ಕುಡಿಯುವ ನೀರು ಸರಬರಾಜು ಮಾಡುವ ಎಲ್.ಟಿ. ಸ್ಥಾವರಗಳಲ್ಲಿ ಬಳಸಲಾಗುವ ಪ್ರತಿ ಯೂನಿಟ್ ದರ 4.40 ರೂ.ನಿಂದ 4.60ರೂ.ಗೆ ಏರಿಕೆಯಾಗಿದ್ದು, 20 ಪೈಸೆ ಹೆಚ್ಚಳವಾಗಿದೆ. ಕುಡಿಯುವ ನೀರು ಸರಬರಾಜು ಮಾಡುವ ಎಚ್.ಟಿ. ಸ್ಥಾವರ ವಿದ್ಯುತ್ ದರವೂ 5 ರೂ.ನಿಂದ 5.20 ರೂ.ಗೆ ಏರಿಕೆಯಾಗಿದ್ದ 20 ಪೈಸೆ ಹೆಚ್ಚಳವಾಗಿದೆ.
ಸರ್ಕಾರದಿಂದ ಸಬ್ಸಿಡಿ: ಕೃಷಿ ಚಟುವಟಿಕೆಗೆ 10 ಎಚ್.ಪಿ.ವರೆಗಿನ ಸಾಮರ್ಥಯದ 28.40 ಲಕ್ಷ ಪಂಪ್‌ಸೆಟ್ ಹಾಗೂ 28.19 ಲಕ್ಷ ಭಾಗ್ಯಜ್ಯೋತಿ/ ಕುಟೀರ ಜ್ಯೋತಿ ಸಂಪರ್ಕಗಳಿಗೆ ಉಚಿತ ವಿದ್ಯುತ್ ಪೂರೈಕೆಗಾಗಿ 2018-19ನೇ ಸಾಲಿನಲ್ಲಿ ಸರ್ಕಾರ ನೀಡಬೇಕಾದ ಸಹಾಯಧನ ಮೊತ್ತ 11,048 ಕೋಟಿ ರೂ.ಗೆ ಪ್ರತಿಯಾಗಿ 2019-2020ನೇ ಸಾಲಿನಲ್ಲಿ 11,892.45 ಕೋಟಿ ರೂ. ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.
ವಿದ್ಯುತ್ ದರ ಏರಿಕೆ ಲೆಕ್ಕ: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಪ್ರತಿ ಯೂನಿಟ್ ವಿದ್ಯುತ್ ದರ ಸರಾಸರಿ 33 ಪೈಸೆ ಹೆಚ್ಚಳಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ವಿದ್ಯುತ್ ದರ ವ್ಯವಸ್ಥೆಯಲ್ಲಿ ಗ್ರಾಹಕರಿಂದ ಸಂಗ್ರಹಿಸುವ ನಿಗದಿತ ಶುಲ್ಕವು ಎಸ್ಕಾಂಗಳು ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸೊಸೈಟಿ (ಎಚ್‌ಆರ್‌ಇಸಿಎಸ್)ನ ವಾಸ್ತವ ನಿಗದಿತ ವೆಚ್ಚಕ್ಕೆ ಸಮನಾಗಿಲ್ಲ. ನಿಗದಿತ ಖರ್ಚಿನ ಒಂದು ಭಾಗವನ್ನಷ್ಟೇ ನಿಗದಿತ ಶುಲ್ಕವೆಂದು ಸಂಗ್ರಹಿಸಲಾಗುತ್ತಿದೆ. ನಿಗದಿತ ಖರ್ಚಿನಲ್ಲಿ ಶೇ. 24.70ರಷ್ಟು ಮಾತ್ರ ಸಂಗ್ರಹವಾಗುತ್ತಿದ್ದು, ಉಳಿದ ನಿಗದಿತ ವೆಚ್ಚವನ್ನು ವಿದ್ಯುತ್ ಶುಲ್ಕದ ಮೂಲಕ ಸಂಗ್ರಹಿಸಲಾಗುತ್ತಿದೆ.
ಎಲ್ಲ ಎಸ್ಕಾಂಗಳ ಒಟ್ಟು ಯೋಜಿತ ಹಾಲಿ ಆದಾಯಕ್ಕೆ ಹೋಲಿಸಿದರೆ 7217 ಕೋಟಿ ರೂ. ಕೊರತೆ ಇರುವುದು ಕಾಣುತ್ತಿದೆ. ಆದರೆ ನಿಯಮಾನುಸಾರ 1960 ಕೋಟಿ ರೂ.ನಷ್ಟು ಕೊರತೆ ತುಂಬಲಷ್ಟೇ ಅವಕಾಶವಿದೆ. ಆ ಹಿನ್ನೆಲೆಯಲ್ಲಿ ಪ್ರತಿ ಯೂನಿಟ್‌ಗೆ ಸರಾಸರಿ 33 ಪೈಸೆ ಹೆಚ್ಚಳ ಮಾಡಿದ್ದು, ಇದರಲ್ಲಿ 22 ಪೈಸೆ ವಿದ್ಯುತ್ ಶುಲ್ಕದಂತೆ ಸಂಗ್ರಹವಾದರೆ ಉಳಿದ 11 ಪೈಸೆ ನಿಗದಿತ ಶುಲ್ಕ ರೂಪದಲ್ಲಿ ಸಂಗ್ರಹವಾಗಲಿದೆ. ಹಾಗಾಗಿ ನೀರಾವರಿ ಪಂಪ್‌ಸೆಟ್ ಸಂಪರ್ಕ ಹೊರತುಪಡಿಸಿ ಉಳಿದ ಸಂಪರ್ಕಗಳಿಗೆ ನಿಗದಿತ ಶುಲ್ಕವನ್ನು ಪ್ರತಿ ಕೆ.ವಿ, ಎಚ್.ಪಿ., ಕೆ.ವಿ.ಎ.ಗೆ 5 ರೂ.ನಿಂದ 10 ರೂ.ವರೆಗೆ ಏರಿಕೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.