ಪೆಂಗ್ ಶುಯಿ ಪ್ರತ್ಯಕ್ಷಳಾದರೂ ತೀರದ ಅನುಮಾನ
Team Udayavani, Nov 23, 2021, 6:40 AM IST
ಚೀನದ ಮಾಜಿ ಉಪ ಪ್ರಧಾನಿ ಝಾಂಗ್ ಗೌಲಿ ಅವರ ವಿರುದ್ಧ ಮೀಟೂ ಆರೋಪ ಮಾಡಿದ್ದ ಟೆನ್ನಿಸ್ ತಾರೆ ಪೆಂಗ್ ಶುಯಿ ದಿಢೀರನೆ ನಾಪತ್ತೆಯಾಗಿದ್ದರು. ಈ ಬಗ್ಗೆ ಜಗತ್ತಿನಾದ್ಯಂತ ತೀವ್ರ ಆತಂಕವೂ ವ್ಯಕ್ತವಾಗಿತ್ತು. ರವಿವಾರ ಮತ್ತೆ ಪೆಂಗ್ ಶುಯಿ ಪ್ರತ್ಯಕ್ಷರಾಗಿದ್ದಾರೆ. ಆದರೆ ಇದುವರೆಗೆ ಎಲ್ಲಿದ್ದರು? ಏನು ಮಾಡುತ್ತಿದ್ದರು ಎಂಬೆಲ್ಲ ಪ್ರಶ್ನೆಗಳಿಗೆ ಅವರು ಉತ್ತರಿಸಿಲ್ಲ. ಇದು ಅನುಮಾನಗಳಿಗೆ ಕಾರಣವಾಗಿದೆ.
ಯಾರಿವರು ಪೆಂಗ್ ಶುಯಿ?
ಚೀನದ ವೃತ್ತಿಪರ ಟೆನ್ನಿಸ್ ಆಟಗಾರ್ತಿ. ಸಿಂಗಲ್ಸ್‌ನಲ್ಲಿ ಜಗತ್ತಿನಲ್ಲಿ 189ನೇ ರ್‍ಯಾಂಕ್, ಡಬಲ್ಸ್‌ನಲ್ಲಿ 248ನೇ ರ್‍ಯಾಂಕಿಂಗ್‌ನಲ್ಲಿ ಇದ್ದಾರೆ. ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದರು.
2013ರಲ್ಲಿ ವಿಂಬಲ್ಡನ್ ಡಬಲ್ಸ್‌ನಲ್ಲಿ ಚಾಂಪಿಯನ್, 2014ರಲ್ಲಿ ಫ್ರೆಂಚ್ ಓಪನ್ ಟೆನ್ನಿಸ್ ಚಾಂಪಿಯನ್ ಆಗಿದ್ದರು. ಇದಾದ ಬಳಿಕ ಡಬಲ್ಸ್‌ನಲ್ಲಿ ಜಗತ್ತಿನ ನಂ.1 ಆಗಿದ್ದರು. 2014ರಲ್ಲಿ ಯುಎಸ್ ಓಪನ್‌ನ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ಸ್ ಪ್ರವೇಶಿಸಿದ್ದರು. ಆದರೆ 2020ರ ಆರಂಭದಿಂದ ವೃತ್ತಿಪರ ಟೆನ್ನಿಸ್‌ನಿಂದ ಇವರು ದೂರವೇ ಉಳಿದಿದ್ದರು.
ಯಾರಿವರು ಝಾಂಗ್ ಗೌಲಿ?
ಚೀನದ ಕಮ್ಯೂನಿಸ್ಟ್ ಪಕ್ಷದ ಮಾಜಿ ಪ್ರಮುಖ ನಾಯಕ. 75 ವರ್ಷದ ಇವರು, ಶಾಂಡಾಂಗ್‌ನ ಗವರ್ನರ್ ಆಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಟಿಯಾಂಜಿನ್‌ನಲ್ಲಿ ಪಕ್ಷದ ಕಾರ್ಯದರ್ಶಿಯಾಗಿದ್ದರು. 2013ರಿಂದ 2018ರ ವರೆಗೆ ಚೀನದ ಉಪ ಪ್ರಧಾನಿಯಾಗಿದ್ದರು. ಹಾಗೆಯೇ 2012ರಿಂದ 2017ರ ವರೆಗೆ ಪಾಲಿಟ್‌ಬ್ಯೂರೋ ಸ್ಟಾಂಡಿಂಗ್ ಕಮಿಟಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದರು.
ಇದನ್ನೂ ಓದಿ:ಮರೆಗುಳಿ ಕಾಯಿಲೆ ಮೂಲ ಪತ್ತೆ; ಐಐಟಿ ಮಂಡಿ ಸಂಶೋಧಕರಿಂದ ಮಹತ್ವದ ಸಂಶೋಧನೆ
ಮೀಟೂ ಆರೋಪ
ನ.2ರಂದು ಚೀನದ ಸಾಮಾಜಿಕ ಜಾಲತಾಣ ವೈಬೂವಿನಲ್ಲಿ ಮಾಜಿ ಉಪ ಪ್ರಧಾನಿ ಝಾಂಗ್ ಗೌಲಿ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಈ ಪೋಸ್ಟ್ ಡಿಲೀಟ್ ಆಗಿತ್ತು. ಬಳಿಕ ಇಂಟರ್ನೆಟ್‌ನಲ್ಲಿ ಈ ಬಗ್ಗೆ ಸಾಕಷ್ಟು ಹುಡುಕಾಟವೂ ನಡೆದಿತ್ತು.
ಪೆಂಗ್ ಶುಯಿ ಸುರಕ್ಷತೆ
ಬಗ್ಗೆ ಆತಂಕ ವ್ಯಕ್ತಪಡಿಸಿದವರು
ನವೋಮಿ ಒಸಾಕ, ರೋಜರ್ ಫೆಡರರ್, ನೋವಾಕ್ ಜಾಕೋವಿಕ್, ಸೆರೆನಾ ವಿಲಿಯಮ್ಸ್, ರಫೇಲ್ ನಡಾಲ್, ಬಿಲ್ಲಿ ಜೀನ್ ಕಿಂಗ್, ಗಿರಾಡ್ ಪಿಕ್.
ಜಗತ್ತಿನ ಆತಂಕಕ್ಕೆ ಕಾರಣಗಳೇನು?
1.ಪೆಂಗ್ ಶುಯಿ ಅವರ ಪೋಸ್ಟ್ ಅನ್ನು ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಿದ್ದು. ಹಾಗೆಯೇ ಇವರ ಹೆಸರಿನಲ್ಲಿ ಇಂಟರ್ನೆಟ್‌ನಲ್ಲಿ ಏನೇ ಹುಡುಕಾಟ ನಡೆಸಿದರೂ ಚೀನದಲ್ಲಿ ಬ್ಲ್ಯಾಕ್ ಆಗಿದ್ದು. ಅಂದರೆ ಪೆಂಗ್ ಶುಯಿ, ಟೆನ್ನಿಸ್ ಎಂಬ ಪದಗಳನ್ನು ಹಾಕಿದರೂ ಏನೂ ಬರುತ್ತಿರಲಿಲ್ಲ.
2.ಪೋಸ್ಟ್ ಹಾಕಿದ ದಿನವೇ ಪೆಂಗ್ ಶುಯಿಜಗತ್ತಿನ ಕಣ್ಣಿಗೆ ಕಾಣದಂತೆ ನಾಪತ್ತೆಯಾಗಿದ್ದು. ರವಿವಾರದ ವರೆಗೂ ಇವರು ಎಲ್ಲಿದ್ದರು ಎಂಬುದು ಪತ್ತೆಯಾಗಿರಲಿಲ್ಲ.
3.ನ.14ರಂದು ಮಹಿಳಾ ಟೆನ್ನಿಸ್ ಸಂಸ್ಥೆಯ ಅಧ್ಯಕ್ಷ ಸ್ಟೀವ್ ಸಿಮೋನ್ ಅವರು, ಪೆಂಗ್ ಶುಯಿ ಕುರಿತಂತೆ ತನಿಖೆ ನಡೆಸುವಂತೆ ಚೀನದ ಮೇಲೆ ಒತ್ತಾಯ ಮಾಡಿದ್ದರು.
4.ನ.17ರಂದು ಚೀನದ ಬ್ರಾಡ್‌ಕಾಸ್ಟರ್ ಸಿಜಿಟಿಎನ್ ಸುದ್ದಿಯೊಂದನ್ನು ಪ್ರಕಟಿಸಿ, ಪೆಂಗ್ ಶುಯಿ ಅವರು ಡಬ್ಲ್ಯೂಟಿಎಗೆ ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆ ಪ್ರಕಟಿಸಿತ್ತು. ಹಾಗೆಯೇ ತಾವು ಮಾಡಿದ್ದ ಆರೋಪಗಳು ಸುಳ್ಳು ಎಂದಿದ್ದಾರೆ ಎಂದೂ ಪ್ರಸಾರ ಮಾಡಿತ್ತು.
5.ನ.17ರಂದೇ ಚೀನದ ಸರಕಾರಿ ನಿಯಂತ್ರಣದಲ್ಲಿರುವ ಮಾಧ್ಯಮಗಳು ಪೆಂಗ್ ಶುಯಿ ಅವರ ವೀಡಿಯೋವೊಂದನ್ನು ಪ್ರಸಾರ ಮಾಡಿತ್ತು. ಆದರೆ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿರಲಿಲ್ಲ.
6.ನ.21ರಂದು ಪೆಂಗ್ ಶುಯಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಚ್ ಅವರ ಜತೆ 30 ನಿಮಿಷಗಳ ಕಾಲ ವೀಡಿಯೋ ಕರೆ ಮಾಡಿ ಮಾತನಾಡಿದರು. ಬಳಿಕ ಸಮಿತಿಯೇ ಪೆಂಗ್ ಶುಯಿ ಸುರಕ್ಷಿತವಾಗಿದ್ದಾರೆ ಎಂದು ಹೇಳಿಕೆ ಹೊರಡಿಸಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.