Elephnat Arjuna: ಅರ್ಜುನ ಆನೆ ಮುಂದೆ ಕಾವಾಡಿಗರ ಕಣ್ಣೀರು
ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಅಸುನೀಗಿದ್ದ; ಸಾವಿರಾರು ಜನರಿಂದ ಅಂತಿಮ ದರ್ಶನ
Team Udayavani, Dec 6, 2023, 8:51 AM IST
ಸಕಲೇಶಪುರ: “ಎದ್ದೇಳು ರಾಜ, ನಾನು ಬಂದಿದ್ದೀನಿ..ಮುದ್ದೆ ಮಾಡಿಕೊಡ್ತೀನಿ.. ಮನೆಗೆ ಹೋಗೋಣ ಬಾ…’
-ಹೀಗೆ ಅರ್ಜುನ ಆನೆಯ ಕಳೇಬರದ ಎದುರು ಕಣ್ಣೀರು ಹಾಕುತ್ತಿದ್ದ ಮಾವುತರ ಗೋಳಾಟ ನೆರೆದಿದ್ದವರ ಮನಕಲಕುವಂತಿತ್ತು. ಮೈಸೂರು ದಸರಾದಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಬೆನ್ನಮೇಲೆ ಹೊತ್ತು ಮೆರೆಸಿದ ಅರ್ಜುನ ಆನೆ ತಾಲೂಕಿನ ಯಸಳೂರು ಸಮೀಪದ ದಬ್ಬಳ್ಳಿ ಬಳಿ ಸೋಮವಾರ ಪುಂಡಾನೆ ಸೆರೆಗೆ ನಡೆದ ಕಾರ್ಯಾಚರಣೆ ವೇಳೆ ಅಸುನೀಗಿದ್ದ. ಪ್ರಾಣ ಕಳೆದುಕೊಂಡ ಜಾಗದಲ್ಲೇ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ಮಂಗಳವಾರ ನಡೆಯಿತು. ಈ ಹೊತ್ತಿನಲ್ಲಿ ಆನೆಯನ್ನು ತಬ್ಬಿಕೊಂಡು ಮಾವುತರು ಕಣ್ಣೀರು ಹಾಕಿದರು.
ಅರ್ಜುನನನ್ನು ಪ್ರೀತಿಯಿಂದ ಪಳಗಿಸಿ, ಅವನ ಆಟಪಾಠಗಳಲ್ಲೇ ಮೈ ಮರೆತಿದ್ದ ಕಾವಾಡಿಗರಿಗೆ ತಮ್ಮ ಮಗುವನ್ನು ಕಳೆದುಕೊಂಡಷ್ಟೇ ದುಖ ಆಗುತ್ತಿದೆ. ಅದರಲ್ಲೂ ಅರ್ಜುನನ ಸಾವು ಅನ್ಯಾಯ ಎಂಬ ಮಾತುಗಳು ಕಾವಾಡಿಗರ ವಲಯ ದಲ್ಲಿದ್ದು, ಕಣ್ಣೀರು, ನೋವಿನ ಭಾರ ಇನ್ನಷ್ಟು ಹೆಚ್ಚಿಸಿದೆ.
“ನನ್ನ ಆನೆಯನ್ನು ಬದುಕಿಸಿಕೊಡಿ, ಮೈಸೂರಿಗೆ ಕಳುಹಿಸಿಕೊಡಿ. ಇಲ್ಲವೇ ನನ್ನನ್ನು, ನನ್ನ ಕುಟುಂಬವನ್ನು ಅರ್ಜುನನ ಜೊತೆ ಮಣ್ಣು ಮಾಡಿ. ಅರ್ಜುನ ಸತ್ತಿಲ್ಲ ಎಂದು ನನ್ನ ಹೆಂಡತಿ ಮಕ್ಕಳಿಗೆ ಹೇಳಿದ್ದೇನೆ. ಅರ್ಜುನನನ್ನು ನನ್ನ ಜೊತೆ ಕಳುಹಿಸಿಕೊಡಿ’ ಎಂದು ಮಾವುತ ವಿನು ಅರ್ಜುನನ ಸೊಂಡಿಲು ಹಿಡಿದು ರೋಧಿಸಿದರು. ಅರ್ಜುನನ ಜೊತೆ ವಿನು ಅವಿನಾಭಾವ ಸಂಬಂಧ ಹೊಂದಿದ್ದ. ಸೋಮವಾರ ಆತನ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು. ಮಂಗಳವಾರ ಚೇತರಿಸಿಕೊಂಡು ಬಂದಿದ್ದ ವಿನು ಅರ್ಜುನನ ಕಳೇಬರ ಕಂಡು ಬಿಕ್ಕಳಿಸಿ ಅಳುತ್ತಿದ್ದುದನ್ನು ಕಂಡ ನೆರೆದಿದ್ದವರ ಕಣ್ಣಾಲಿಗಳು ತುಂಬಿ ಬಂದವು.
ಕಂಬನಿ ನಡುವೆ ನೆರವೇರಿದ ಅರ್ಜುನನ ಅಂತ್ಯಸಂಸ್ಕಾರ
ಸಕಲೇಶಪುರ: ಸೋಮವಾರ ಸಂಜೆ ಮೃತಪಟ್ಟ ದಸರಾ ಅಂಬಾರಿ ಆನೆ ಅರ್ಜುನನ ಅಂತ್ಯಸಂಸ್ಕಾರ ಸಾವಿರಾರು ಜನರ ಕಂಬನಿ ಹಾಗೂ ಸಕಲ ಸರ್ಕಾರಿ ಗೌರವದ ನಡುವೆ ತಾಲೂಕಿನ ಯಸಳೂರು ಸಮೀಪದ ದಬ್ಬಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮಂಗಳವಾರ ನಡೆಯಿತು.
ಅರ್ಜುನನಿಗೆ ಮೈಸೂರು ದಸರಾ ಸಂದರ್ಭದಲ್ಲಿ ಪೂಜೆ ಸಲ್ಲಿಸುತ್ತಿದ್ದ ಪ್ರಹ್ಲಾದ್ ಜೋಷಿ ಅವರು ಮೃತದೇಹದ ಅಂತಿಮ ದರ್ಶನ ಪಡೆದು ಶಾಸ್ತ್ರೋಕ್ತವಾಗಿ ಅಂತಿಮ ಸಂಸ್ಕಾರಕ್ಕೆ ವಿಧಿವಿಧಾನಗಳನ್ನು ನೆರವೇರಿಸಿ ದರು. ಸಕಲ ಸರ್ಕಾರಿ ಗೌರವದೊಂದಿಗೆ ಅರ್ಜುನನನ್ನು ಮಣ್ಣು ಮಾಡಲಾಯಿತು. ಪೊಲೀಸ್ ಪಡೆಗಳಿಂದ 3 ಸುತ್ತು ಆಕಾಶಕ್ಕೆ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಈ ವೇಳೆ ಹಾಜರಿದ್ದ ಸಾವಿರಾರು ಮಂದಿ ಕಂಬನಿ ಮಿಡಿದರು.
ಅಂತಿಮ ಕ್ಷಣದಲ್ಲಿ ಲಾಠಿಚಾರ್ಜ್: ಅರ್ಜುನನ ಅಂತ್ಯಸಂಸ್ಕಾರ ಅರಣ್ಯ ಪ್ರದೇಶದಲ್ಲಿ ಮಾಡಬಾರದು, ಸಮೀಪದ ದಬ್ಬಳ್ಳಿ ಗ್ರಾಮದ ವೃತ್ತದಲ್ಲಿ ಅಥವಾ ರಸ್ತೆ ಇರುವ ಕಡೆ ಮಾಡಿದರೆ ಸ್ಮಾರಕ ನಿರ್ಮಿಸಬಹುದು ಎಂದು ಸ್ಥಳೀಯರು ಗದ್ದಲ ಆರಂಭಿಸಿದರು. ಈ ವೇಳೆ ಮಾತಿನ ಚಕಮಕಿ ನಡೆದು ಪೊಲೀಸರು ಲಾಠಿ ಪ್ರಹಾರ ಮಾಡುವ ಮೂಲಕ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನೋಡಿಕೊಂಡರು.
-ಸುಧೀರ್ ಎಸ್.ಎಲ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.