Mangaluru: ಶೇ. 500 ಲಾಭಾಂಶದ ಆಮಿಷ: 46 ಲ.ರೂ. ವಂಚನೆ
Team Udayavani, Dec 7, 2024, 12:17 AM IST
ಮಂಗಳೂರು: ಹೂಡಿಕೆ ಮಾಡಿದ ಹಣಕ್ಕೆ ಶೇ. 500 ಲಾಭಾಂಶ ನೀಡುವುದಾಗಿ ನಂಬಿಸಿ 46 ಲ.ರೂ. ವಂಚಿಸಿದ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರ ವಾಟ್ಸ್‌ಆ್ಯಪ್ ಸಂಖ್ಯೆಗೆ ಶ್ರದ್ದಾ ಬೆಲಾನಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಮಸೇಜ್ ಕಳುಹಿಸಿ ARES MANAGEMENT CORPORATION ಪರವಾಗಿ ಷೇರು ಟ್ರೇಡಿಂಗ್‌ನಲ್ಲಿ ಹಣ ತೊಡಗಿಸಿದರೆ ಶೇ. 500 ಲಾಭಾಂಶ ಬರುವುದಾಗಿ ನಂಬಿಸಿದ್ದ. ಅನಂತರ ಲಿಂಕ್ ಕಳುಹಿಸಿ ನೋಂದಣಿ ಮಾಡಿಸಿಕೊಂಡು H 777 ARES Stock Exchange Group ವಾಟ್ಸ್ ಆ್ಯಪ್ ಗ್ರೂಪ್‌ಗೆ ಸೇರ್ಪಡೆಗೊಳಿಸಿದ್ದ. ಬಳಿಕ ದೂರುದಾರರು ಮೊದಲಿಗೆ 2 ಲ.ರೂ. ಹಣವನ್ನು ಹೂಡಿಕೆ ಮಾಡಿದ್ದರು.
ಸ್ಟಾಕ್‌ನ ಮಾರಾಟದಿಂದ ಬಂದ ಲಾಭವೆಂದು ಅವರ ಖಾತೆಗೆ 50,000 ರೂ. ಜಮೆ ಮಾಡಲಾಗಿತ್ತು. ಇದನ್ನು ನಂಬಿದ ದೂರುದಾರರು ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ 5 ಲ.ರೂ. ಹಣವನ್ನು ಹೂಡಿಕೆ ಮಾಡಿದ್ದರು.
ಬಳಿಕ 9 ಲ.ರೂ., 29 ಲ.ರೂ., 1 ಲ.ರೂ. ಹೀಗೆ ಅ. 24ರಿಂದ ನ. 25ರ ವರೆಗೆ ಒಟ್ಟು 46 ಲ.ರೂ.ಗಳನ್ನು ಹೂಡಿಕೆ ಮಾಡಿದ್ದರು.
ನ. 29ರಂದು ಹಣದ ಆವಶ್ಯಕತೆ ಇದ್ದುದರಿಂದ 20 ಲ.ರೂ.ಗಳನ್ನು ವಿದ್‌ಡ್ರಾ ಮಾಡಲು ಯತ್ನಿಸಿದಾಗ ಸಾಧ್ಯವಾಗಲಿಲ್ಲ. ಈ ಬಗ್ಗೆ ಹೂಡಿಕೆ ಮಾಡಿಸಿದ್ದ ಶ್ರದ್ಧಾ ಬೆಲಾನಿ ಹಾಗೂ ಅಭಿಷೇಕ್ ರಾಮ್‌ಜೀ ಅವರನ್ನು ಸಂಪರ್ಕಿಸಿದಾಗ ಅವರು ಹಣವನ್ನು ವಾಪಸು ತೆಗೆಯಬೇಕಾದರೆ ಮತ್ತೆ 8.78 ಲ.ರೂ.ಗಳನ್ನು ವರ್ಗಾವಣೆ ಮಾಡಿ ಖಾತೆಯನ್ನು ಮುಕ್ತಾಯಗೊಳಿಸಬಹುದು ಎಂದು ತಿಳಿಸಿದ್ದರು. ಇದರಿಂದ ಅನುಮಾನಗೊಂಡ ದೂರುದಾರರು ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.