ಪರ್ಫೆಕ್ಟ್ ಪ್ರೊಫೆಷನ್ : ಕ್ರಿಕೆಟ್ ಅಲ್ಲ, ಇದೇ ನನ್ನ ವೃತ್ತಿ…
Team Udayavani, May 5, 2020, 4:12 PM IST
ಸಾಂದರ್ಭಿಕ ಚಿತ್ರ
ಚಿಕ್ಕಂದಿನಲ್ಲಿ ನಮ್ಮ ಮನೆ ನೋಡಿದಾಗ, ಇದು ಹೋಟೆಲ್ಲೋ ಅಥವಾ ಮನೆಯೋ ಅನ್ನೋ ಅನುಮಾನ ಕಾಡೋದು. ನಮ್ಮದು ಕೂಡು ಕುಟುಂಬ. ಅಪ್ಪ- ದೊಡ್ಡಪ್ಪ ಎಲ್ಲರೂ ಸೇರಿ, ಸ್ವೀಟ್ ಸ್ಟಾಲ್ ನಡೆಸುತ್ತಿದ್ದರು. ಹೀಗಾಗಿ, ಎಲ್ಲರಿಗೂ ಸಮಾನ ಕೆಲಸ. ಬೆಳಗ್ಗೆ ನಿತ್ರಾಣದಲ್ಲಿರುತ್ತಿದ್ದ ಕೆಲಸ, ಮಧ್ಯಾಹ್ನ ದಾಟುತ್ತಿದ್ದಂತೆ ವೇಗ ಪಡೆದುಕೊಂಡು, ಸಂಜೆ ಹೊತ್ತಿಗೆ, ಮೈಸೂರ್ ಪಾಕ್, ಹಲ್ವಾ ಸಿದ್ಧವಾಗಿ ಬಿಡೋದು. ಬಾದಾಮ್ ಪುರಿ, ಬರ್ಪಿ, ಕಾರಾಬೂಂದಿ ಅದ್ಯಾವಾಗ ತಯಾರಾಗುತ್ತಿತ್ತೋ ತಿಳಿಯದು. ಸಂಜೆ 6 ಗಂಟೆಯ ಹೊತ್ತಿಗೆ, ಬಿಸಿಬಿಸಿ ಬೊಂಡಾಗಳೊಂದಿಗೆ, ಆವತ್ತಿನ ಕೆಲಸದ ವೇಗದಲ್ಲಿ ಇಳಿತ ಶುರುವಾಗುತ್ತಿದ್ದದ್ದು.
ಯಾಕೋ ಕಾಣೆ: ದೊಡ್ಡವನಾದ ಮೇಲೂ ಸ್ಟಾಲ್ ಬಗ್ಗೆ ನನಗೆ ಅಂತಹ ಆಸಕ್ತಿ ಹುಟ್ಟಲಿಲ್ಲ. ಅಪ್ಪ ತಿಂಡಿ ಸಪ್ಲೈ ಮಾಡುತ್ತಿದ್ದರು. ದೊಡ್ಡಪ್ಪ ಇಲ್ಲದಾಗ, ಅಪ್ಪ ಹೋಗಿ ಗಲ್ಲದ ಮೇಲೆ ಕೂರುತ್ತಿದ್ದರು. ಆಗ, ಸಪ್ಲೈ ಕೆಲಸ ನನ್ನ ಹೆಗಲಿಗೆ ಬೀಳುತ್ತಿತ್ತು. ಅಪ್ಪ ನನ್ನನ್ನೂ ಹೋಟೆಲ್ ಕೆಲಸಕ್ಕೆ ಸೇರಿಸಿಕೊಂಡು ಬಿಟ್ಟರೆ ಏನು ಮಾಡುವುದು ಅಂತ, ಆವಾಗವಾಗ ಭಯ ಆಗುತ್ತಿತ್ತು. ಹೀಗಾಗಿ, ಹೆಚ್ಚಾಗಿ
ಸ್ಟಾಲ್ ಕಡೆ ತಲೆ ಹಾಕುತ್ತಿರಲಿಲ್ಲ.
8ನೇ ತರಗತಿಗೆ ಬರುವ ಹೊತ್ತಿಗೆ, ಒಳ್ಳೆ ಕ್ರಿಕೆಟರ್ ಆಗಬೇಕು ಅನ್ನೋ ಆಸೆ ಚಿಗುರೊಡೆಯಿತು. ಗೆಳೆಯರೆಲ್ಲ ಸೇರಿ, ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಅಂತ ಶುರುಮಾಡಿದೆವು. ನನಗೋ, ಕ್ರಿಕೆಟ್
ಆಡುವುದು, ಸ್ವೀಟ್ ಸ್ಟಾಲ್‌ನಿಂದ ತಪ್ಪಿಸಿಕೊಳ್ಳಲು ಇದ್ದ ಬಲು ದೊಡ್ಡ ನೆಪ. ಬೆಳಗ್ಗೆ ಶಾಲೆಗೆ ಹೋದರೆ, ಸಂಜೆ ಕ್ರಿಕೆಟ್ ಆಡಿ ಮನೆಗೆ ಬರುತ್ತಿದ್ದೆ. ಸ್ಕೂಲಿಗೆ ಬಂಕ್ ಹೊಡೆದು ಕ್ರಿಕೆಟ್ ಆಡುತ್ತಿದ್ದದ್ದೂ ಉಂಟು. ಗೆಳೆಯರ ದಂಡು ಕಟ್ಟಿಕೊಂಡು, ಸುತ್ತಮುತ್ತಲ ಹಳ್ಳಿಗಳಲ್ಲೂ ಕ್ರಿಕೆಟ್ ಆಡಲು ಹೋಗುತ್ತಿದ್ದೆ. ಆ ಕಾಲಕ್ಕೆ ಟೀಮ್‌ನಲ್ಲಿ ನನಗೆ, ಜಾಂಟಿ ರೋಡ್ಸ್ ಅಂತ ಕರೆಯುತ್ತಿದ್ದರು. ಆಟದಲ್ಲಿ ಅಷ್ಟು ಚೆನ್ನಾಗಿ ಪಳಗಿದ್ದೆ. ವಿಪರ್ಯಾಸವೆಂದರೆ, ನಾನು ಕ್ರಿಕೆಟರ್ ಆಗಿ ಹೆಸರು ಮಾಡುತ್ತಿದ್ದ ವೇಳೆಗೆ, ಸ್ವೀಟ್ ಸ್ಟಾಲ್‌ಗೆ ಬಾ ಎಂದು ಅಪ್ಪ ಪೀಡಿಸತೊಡಗಿದರು.
ದೊಡ್ಡಪ್ಪನಿಗೆ ಹುಷಾರಿಲ್ಲ. ಸ್ವೀಟ್ ಸ್ಟಾಲ್ ನೋಡಿಕೋ ಅನ್ನುತ್ತಿದ್ದರು. ನೋ ಅನ್ನಲು ಸಾಧ್ಯವಾಗದೆ, ಆಗಾಗ ಹೋಗಿ ಬರುತ್ತಿದ್ದೆ. ಆದರೆ, ನನ್ನ ಮನಸ್ಸು ಫೋರು, ಸಿಕ್ಸರ್, ಫ್ಲಿಕ್ ಶಾಟ್‌ಗಳ ಜೊತೆ ಓಡಾಡುತ್ತಿತ್ತು. “ಬೆಂಗಳೂರಿನಲ್ಲಿ ವೈಎಂಸಿಎ ಅಂತಿದೆ. ಅಲ್ಲಿ ಸೇರಿದರೆ, ಸ್ಟೇಟ್ ಲೆವೆಲ್‌ನಲ್ಲಿ ಆಡಬಹುದು’ ಅಂತ ಬೆಂಗಳೂರಲ್ಲಿ ಇದ್ದ ಗೆಳೆಯ ಹೇಳಿದ. ಅವನ ಮಾತು ಕೇಳಿದ ನಂತರ, ಸ್ವೀಟ್ ಸ್ಟಾಲ್‌ನ ಸಹವಾಸವೇ ಸಾಕು ಅನಿಸತೊಡಗಿತು. ಒಂಭತ್ತನೇ ತರಗತಿಯಲ್ಲಿದ್ದಾಗ ಒಮ್ಮೆ ಮನೆ ಬಿಟ್ಟು, ನೇರ ಬೆಂಗಳೂರಿನ ಬಸ್ಸು ಹತ್ತಿಬಿಟ್ಟಿದ್ದೆ. ಮನೆಯಲ್ಲಿ ಎಲ್ಲರೂ, ಎಲ್ಲೋ ಕ್ರಿಕೆಟ್ ಆಡೋಕೆ ಹೋಗಿದ್ದಾನೆ ಬರ್ತಾನೆ ಅಂದುಕೊಂಡಿದ್ದರು. ನಾನು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗಿ, ಅಲ್ಲಿ ಗೇಟ್ ಕೀಪರ್‌ನನ್ನು ಕಾಡಿ ಬೇಡಿ, ತೆಂಡೂಲ್ಕರ್, ಗಂಗೂಲಿ ನಡೆದಾಡಿದ ನೆಲವನ್ನು ಮುಟ್ಟಿ ಬಂದಿದ್ದೆ. ಆಮೇಲೆ, ವೈಎಂಸಿಎಗೆ ಹೋಗಿ, ಕ್ರಿಕೆಟರ್ ಆಗಲು ಹೇಗೆಲ್ಲಾ ತಯಾರಾಗಿ ಬರಬೇಕು ಅಂತ ಮಾಹಿತಿ ಸಂಗ್ರಹಿಸಿ, ಊರಿಗೆ ಬರುವ ಹೊತ್ತಿಗೆ
ಮಧ್ಯರಾತ್ರಿ!
ಮನೆಯಲ್ಲಿ ಎಲ್ಲರ ವಿರೋಧದ ಮಧ್ಯೆಯೂ, ಕ್ರಿಕೆಟ್ಟೇ ನನ್ನ ಜೀವನ ಎಂದು ನಿರ್ಧರಿಸಿದ್ದೆ. ಆದರೆ, ಅದೇ ವೇಳೆಗೆ ದೊಡ್ಡಪ್ಪ ತೀರಿಕೊಂಡರು. ಪರಿಸ್ಥಿತಿ ತೀರಾ ಬಿಗಡಾಯಿಸಿತು. ಅಪ್ಪ ಕೆಲಸ ಮಾಡದೇ ಇದ್ದರೆ, ಸ್ಟಾಲ್ ಸಂಪೂರ್ಣ ನಿಂತು ಹೋಗುವ ಹಂತಕ್ಕೆ ಬಂತು. ಆಗ, ನಾನು ಮತ್ತೆ ಸ್ಟಾಲ್‌ಗೆ ಕಾಲಿಡುವುದು ಅನಿರ್ವಾಯವಾಯಿತು. ಅಲ್ಲಿನ ಸೋಲು, ಗೆಲುವುಗಳನ್ನು ನುಂಗಿಕೊಂಡೇ, ಲಾಭದ ಮುಖ ನೋಡುವ ಹೊತ್ತಿಗೆ, ವಯಸ್ಸು 30 ದಾಟಿತ್ತು. ಇದರ ಮಧ್ಯೆ, ಸ್ವೀಟ್ ಸ್ಟಾಲ್ ಸಹವಾಸವೇ ಸಾಕು ಅಂತ, ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಲು ಕೂಡ ಹೋಗಿದ್ದೆ. ಅದ್ಯಾಕೋ ಹೊಂದಿಕೆ ಆಗಲಿಲ್ಲ. ಮತ್ತೆ ಹೋಟೆಲ್ ಉದ್ಯಮಕ್ಕೇ ಬಂದೆ. ಈಗ, ಪರಿಪೂರ್ಣ ಹೋಟೆಲಿಗನಾಗಿದ್ದೇನೆ. ಮನೆ, ಜಮೀನು, ಸೈಟುಗಳನ್ನುಮಾಡಿಟ್ಟಿದ್ದೇನೆ. ಊರಲ್ಲಿ ಉದ್ಯಮಿ ಅನ್ನೋ ಹೆಸರು, ಗೌರವ ಕೂಡ ಇದೆ. ಈಗ ಕ್ರಿಕೆಟ್ ಅಲ್ಲ, ಇದೇ ಪರ್ಫೆಕ್ಟ್ ಪ್ರೊಫೆಷನ್ ಅನಿಸಿದೆ.
ಶ್ರೀರಂಗನಾಥ ತಳಕೂರು, ಬಾಗೇಪಲ್ಲಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.