ಪೆರಿಟೋನಿಯಲ್ ಡಯಾಲಿಸಿಸ್
Team Udayavani, Jun 21, 2020, 5:15 AM IST
ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖವಾದ ಅಂಗಗಳಾಗಿದ್ದು , ನಮ್ಮ ದೇಹದಲ್ಲಿ ಅನೇಕ ರೀತಿಯ ಕಾರ್ಯಗಳನ್ನು ನಿರ್ವಹಿಸುತ್ತವೆ. ಆದರೆ ಇಂದು ಅಧಿಕವಾಗಿ ಕಂಡುಬರುತ್ತಿರುವ ಮಧುಮೇಹ, ರಕ್ತದೊತ್ತಡ, ಬದಲಾಗುತ್ತಿರುವ ಜೀವನಶೈಲಿ, ಆಹಾರಕ್ರಮ, ಹೆಚ್ಚುತ್ತಿರುವ ಒತ್ತಡ, ಈ ಎಲ್ಲ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಕೊನೆಯ ಹಂತದ ಶಾಶ್ವತವಾದ ಮೂತ್ರಪಿಂಡಗಳ ವೈಫಲ್ಯ (End Stage Kidney Disease)ದಿಂದ ಬಳಲುತ್ತಿರುವವರ ಸಂಖ್ಯೆಯು ವೃದ್ಧಿಗೊಳ್ಳುತ್ತಿದೆ. ಈ ಖಾಯಿಲೆಯು ಉಲ್ಬಣಗೊಂಡಂತೆ ದೇಹದ ಇತರ ಅಂಗಗಳ ಕಾರ್ಯವೈಖರಿಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಅತ್ಯಗತ್ಯ.
ಮೂತ್ರಪಿಂಡ ಖಾಯಿಲೆಯಲ್ಲಿ ಮುಖ್ಯವಾಗಿ 2 ವಿಧಗಳು
1. ಹಠಾತ್ತನೆ ಸಂಭವಿಸುವ ಮೂತ್ರಪಿಂಡ ವೈಫಲ್ಯ (Acute Kidney Injury)
ಇಂಥ ತೊಂದರೆ ಹಠಾತ್ತನೆ, ತೀವ್ರಗತಿಯಲ್ಲಿ ಸಂಭವಿಸು ತ್ತದೆ. ಕೆಲವೇ ಗಂಟೆಗಳೊಳಗೆ ಅಥವಾ ಕೆಲವೇ ದಿನ ಗಳ ಒಳಗೆ ಒಮ್ಮಿಂದೊಮ್ಮೆಲೆ ಮೂತ್ರಪಿಂಡಗಳ ಕಾರ್ಯ ವೈಖರಿ ಯಲ್ಲಿ ಬದಲಾವಣೆಗಳಾಗಿ ವ್ಯಕ್ತಿಯಲ್ಲಿ ತೀವ್ರ ಅಸ್ವಸ್ಥತೆ ಉಂಟಾಗುತ್ತದೆ. ಆದರೆ ಸರಿಯಾದ ಸಮಯ ದಲ್ಲಿ ಸೂಕ್ತ ಚಿಕಿತ್ಸೆಯ ಕ್ರಮಗಳಾದ ಔಷಧ ಸೇವನೆ, ಪಥ್ಯ ಕ್ರಮ ಮತ್ತು ಅಗತ್ಯವಿದ್ದಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆದರೆ ಮೂತ್ರಪಿಂಡಗಳು ಪೂರ್ವಸ್ಥಿತಿಗೆ ಮರಳುತ್ತವೆ. ಇಂಥ ಕಾಯಿಲೆಯಲ್ಲಿ ಮೂತ್ರಪಿಂಡಗಳು ಪೂರ್ವ ಸ್ಥಿತಿಗೆ ಮರಳು ತನಕ ಡಯಾಲಿಸಿಸ್ ಮಾಡಿ ಅನಂತರ ನಿಲ್ಲಿಸಲಾಗುತ್ತದೆ.
2. ದೀರ್ಘಕಾಲಿಕ ಶಾಶ್ವತವಾದ ಮೂತ್ರಪಿಂಡ ವೈಫಲ್ಯ (Chronic Kidney Disease)
ಇದರಲ್ಲಿ ಮೂತ್ರಪಿಂಡಗಳ ಕಾರ್ಯಗಳು ಅತಿ ನಿಧಾನಗತಿಯಲ್ಲಿ ಕ್ಷೀಣಗೊಂಡು, ಅಂತಿಮವಾಗಿ ವ್ಯಕ್ತಿಯ ಮೂತ್ರಪಿಂಡಗಳು ಪುನಃ ಸುಸ್ಥಿತಿಗೆ ಮರಳಿಬಾರದೆ, ಶಾಶ್ವತವಾಗಿ ವೈಫಲ್ಯಗೊಳ್ಳುತ್ತವೆ.
ದೀರ್ಘಕಾಲಿಕ ಶಾಶ್ವತವಾದ ಮೂತ್ರಪಿಂಡ ವೈಫಲ್ಯವನ್ನು 5 ಹಂತಗಳಾಗಿ ವಿಂಗಡಿಸಲಾಗಿದೆ. ಮೊದಲ 4 ಹಂತಗಳನ್ನು ಪಥ್ಯಕ್ರಮ, ಜೀವನಶೈಲಿಯಲ್ಲಿನ ಮಾರ್ಪಾಡು ಮತ್ತು ಔಷಧಿಗಳ ಸೇವನೆಯಿಂದ ಖಾಯಿಲೆಯು ಉಲ್ಬಣಗೊಳ್ಳುವುದನ್ನು ನಿಧಾನಿಸಬಹುದು ಹಾಗೂ ಡಯಾಲಿಸಿಸ್‌ಗೆ ಒಳಗಾಗುವುದನ್ನು ಮುಂದೂಡಬಹುದು. 5ನೇ ಹಂತದಲ್ಲಿ ಅಥವಾ ಕೊನೆಯ ಹಂತದಲ್ಲಿ ಮೂತ್ರಪಿಂಡಗಳು 15%ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಾಗ ಪಥ್ಯಕ್ರಮ, ಜೀವನಶೈಲಿಯಲ್ಲಿನ ಮಾರ್ಪಾಡು ಮತ್ತು ಔಷಧಿಗಳ ಸೇವನೆಯ ಜೊತೆಗೆ ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಚಿಕಿತ್ಸೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಈ ಎರಡೂ ಚಿಕಿತ್ಸಾಕ್ರಮಗಳಿಂದ ಮೂತ್ರಪಿಂಡಗಳ ವೈಫಲ್ಯವನ್ನು ಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ . ಆದರೆ ಆರೋಗ್ಯದ ಗುಣಮಟ್ಟವನ್ನು ಹೆಚ್ಚಿಸಿ ಜೀವನ ಮುನ್ನಡೆಸಬಹುದು.
ಡಯಾಲಿಸಿಸ್ ಎನ್ನುವುದೊಂದು ರಕ್ತದಲ್ಲಿರುವ ಕಷ್ಮಲಗಳನ್ನು ಬೇರ್ಪಡಿಸಿ, ರಕ್ತವನ್ನು ಶುದ್ಧೀಕರಣಗೊಳಿಸುವಂತಹ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯು ಮೂತ್ರಪಿಂಡಗಳು ನಿರ್ವಹಿಸುವಂತಹ ಎಲ್ಲಾ ಕಾರ್ಯಗಳನ್ನು ಮಾಡಲು ಸಾಧ್ಯವಾಗದಿದ್ದರೂ ಕೆಲವು ಕಾರ್ಯಗಳನ್ನು ನಿರ್ವಹಿಸಲು ಸಕ್ಷಮವಾಗಿದೆ.
ಅವುಗಳು ಈ ಕೆಳಗಿನಂತಿವೆ :
1. ದೇಹದಲ್ಲಿನ ಅಧಿಕವಾದ ನೀರಿನಾಂಶವನ್ನು ತೆಗೆಯುವುದು.
2. ದೇಹದಲ್ಲಿನ ಅಧಿಕವಾದ ಸಾರಜನಕಯುಕ್ತ ಕಶ್ಮಲಗಳನ್ನು ತೆಗೆಯುವುದು.
3. ದೇಹದಲ್ಲಿನ ಆಮ್ಲ ಹಾಗೂ ಪ್ರತ್ಯಾಮ್ಲಗಳ ಸಮತೋಲನವನ್ನು ಕಾಪಾಡುವುದು.
4. ದೇಹದಲ್ಲಿನ ಲವಣಾಂಶಗಳ ಸಮತೋಲನವನ್ನು ಕಾಪಾಡುವುದು.
ಡಯಾಲಿಸಿಸ್‌ನ ವಿಧಗಳು: 1. ಹೀಮೋಡಯಾಲಿಸಿಸ್ 2. ಪೆರಿಟೋನಿಯಲ್ ಡಯಾಲಿಸಿಸ್
ಪೆರಿಟೋನಿಯಲ್ ಡಯಾಲಿಸಿಸ್ ಅಂದರೇನು?
ಬಹಳಷ್ಟು ಮಂದಿ ಜನರಿಗೆ ಹೀಮೋಡಯಾಲಿಸಿಸ್ ಬಗ್ಗೆ ಮಾಹಿತಿಯಿದೆ. ಆದರೆ ಪೆರಿಟೋನಿಯಲ್ ಡಯಾಲಿಸಿಸ್ ಇಂದು ಅಷ್ಟು ಪ್ರಚಲಿತದಲ್ಲಿರದ ಚಿಕಿತ್ಸೆ.
ಹೀಮೋಡಯಾಲಿಸಿಸ್ ಅನ್ನು ಡಯಾಲಿಸಿಸ್ ಯಂತ್ರ ಮತ್ತು ಕೃತಕ ಮೂತ್ರಪಿಂಡದ ಸಹಾಯದಿಂದ ಮಾಡಲಾಗುತ್ತದೆ. ಈ ಯಂತ್ರಗಳ ನಿರ್ವಹಣೆಯನ್ನು ಮಾಡಲು ತರಬೇತಿ ಪಡೆದ ನುರಿತ ತಂತ್ರಜ್ಞರ ಆವಶ್ಯಕತೆ ಇರುತ್ತದೆ. ಆದರೆ ಪೆರಿಟೋನಿಯಲ್ ಡಯಲಿಸಿಸ್ ಅನ್ನು ಮನೆಯಲ್ಲೇ ತಂತ್ರಜ್ಞರ ಸಹಾಯವಿಲ್ಲದೆ ಸ್ವತಃ ಅಥವಾ ಮನೆಯವರೇ ಮಾಡಬಹುದು. ಇದನ್ನು ನಿರ್ವಹಿಸಲು ಆಸ್ಪತ್ರೆಯಲ್ಲಿ ಕೆಲವು ದಿನಗಳ ತರಬೇತಿಯನ್ನು ನೀಡಲಾಗುತ್ತದೆ. ಈ ಚಿಕಿತ್ಸೆಯನ್ನು ಮಾಡುವಾಗ ಸ್ವತ್ಛತೆಗೆ ಆದ್ಯತೆ ನೀಡುವುದು ತುಂಬಾ ಅಗತ್ಯ.
ಪೆರಿಟೋನಿಯಲ್ ಡಯಾಲಿಸಿಸ್ ಉಪಕರಣಗಳು :
1. ಪೆರಿಟೋನಿಯಂ : ಇದು ನಮ್ಮ ದೇಹದ ಉದರ ಭಾಗದ ಅಥವಾ ಹೊಟ್ಟೆಯ ಒಳಗಿನ ಪೊಳ್ಳು ಭಾಗದ ಮೇಲ್ಮೆ„ಯನ್ನು , ಆ ಭಾಗದ ಅಂಗಗಳನ್ನು ಹಾಗೂ ಅವುಗಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳಗಳನ್ನು ಆವರಿಸುವ ತೆಳುವಾದ ಹೊದಿಕೆಯಾಗಿದೆ. ಈ ಪೊರೆಯು ಈ ಎಲ್ಲಾ ಭಾಗಗಳಿಗೆ ಸಂರಕ್ಷಣಾ ಕವಚವಾಗಿದೆ. ಪೆರಿಟೋನಿಯಂ ಒಂದು ಸೆಮಿಪರ್ಮಿಯೇಬಲ್ ಮೆಂಬ್ರೇನ್ ಆಗಿದ್ದು ಪೆರಿಟೋನಿಯಲ್ ಡಯಾಲಿಸಿಸ್ ಮಾಡುವಾಗ ಶೋಧಕದಂತೆ (filter) ಕೆಲಸ ಮಾಡುತ್ತದೆ.
2.ಪೆರಿಟೋನಿಯಲ್ ಡಯಾಲಿಸಿಸ್ ದ್ರಾವಣ / ಡಯಲೈಸೇಟ್: ಇದೊಂದು ಶುದ್ಧವಾದ ನೀರಿಗೆ ಸರಿಯಾದ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಬೇಕಾಗುವ ಕೆಲವು ಲವಣಾಂಶಗಳನ್ನು ಹಾಗೂ ಬೈಕಾರ್ಬನೇಟನ್ನು ಸೇರಿಸಿ ತಯಾರಿಸುವ ದ್ರಾವಣವಾಗಿದೆ. ಇದು ದೇಹಕ್ಕೆ ಬೇಕಾಗಿರುವ ಲವಣಾಂಶಗಳನ್ನು ಮತ್ತು ಆಮ್ಲ, ಪ್ರತ್ಯಾಮ್ಲಗಳನ್ನು ಸಮತೋಲನದಲ್ಲಿರಿಸಲು ಬಳಸುವ ದ್ರಾವಣವಾಗಿದೆ. ಪೆರಿಟೋನಿಯಲ್ ಡಯಾಲಿಸಿಸ್ ದ್ರಾವಣದಲ್ಲಿ ಗ್ಲುಕೋಸನ್ನೂ ಸಹ ಸೇರಿಸಲಾಗಿರುತ್ತದೆ. ಇದು ಡಯಾಲಿಸಿಸ್ ಮಾಡುವಾಗ ದೇಹದ ಅಧಿಕ ನೀರಿನಾಂಶವನ್ನು ರಕ್ತದಿಂದ ಸೆಳೆದುಕೊಳ್ಳಲು ಸಹಾಯ ಮಾಡುತ್ತದೆ.
3. ಡಯಾಲಿಸಿಸ್ ಆಕ್ಸೆಸ್: ಪೆರಿಟೋನಿಯಲ್ ಡಯಾ ಲಿಸಿಸ್‌ಗಾಗಿ ಉಪಯೋಗಿಸುವ ಡಯಾಲಿಸಿಸ್ ಆಕ್ಸೆಸನ್ನು ಪೆರಿಟೋನಿಯಲ್ ಆಕ್ಸೆಸ್ ಅಥವಾ ಪೆರಿಟೋನಿಯಲ್ ಡಯಾಲಿಸಿಸ್ ಕ್ಯಾಥೆಟರ್ (ನಳಿಕೆ / ಟ್ಯೂಬ್) ಎಂದು ಕರೆಯುತ್ತಾರೆ. ಇದನ್ನು ಪೆರಿಟೋನಿಯಲ್ ಡಯಾಲಿಸಿಸ್ ಮಾಡುವ ಮೊದಲು ಹೊಟ್ಟೆಯ ಭಾಗದಲ್ಲಿ ಒಂದು ಸಣ್ಣ ಶಸ್ತ್ರಚಿಕಿತ್ಸೆಯನ್ನು ಮಾಡಿ ಪೆರಿಟೋನಿಯಲ್ ಕ್ಯಾವಿಟಿಯಲ್ಲಿ (ಉದರದ ಕುಹರ / ಹೊಟ್ಟೆಯಲ್ಲಿನ ಪೊಳ್ಳು ಭಾಗ) ಅಳವಡಿ ಸಲಾಗುತ್ತದೆ. ಇದೊಂದು ಸರಳವಾದ ನಳಿಕೆ ಯಾಗಿದ್ದು, ಇದರ ಒಂದು ಕೊನೆ ಪೆರಿಟೋನಿಯಲ್ ಕ್ಯಾವಿಟಿ ಯಲ್ಲೂ ಇನ್ನೊಂದು ಕೊನೆ ದೇಹದ ಹೊರಭಾಗದಲ್ಲೂ ಇರುತ್ತದೆ.
ಪೆರಿಟೋನಿಯಲ್ ಡಯಾಲಿಸಿಸ್‌ನ ಹಂತಗಳು :
ಪೆರಿಟೋನಿಯಲ್ ಡಯಾಲಿಸಿಸ್ ಮಾಡುವುದು ಸರಳ ಹಾಗೂ ಇದನ್ನು ಮಾಡುವ ಹಂತಗಳು ಈ ಕೆಳಗಿನಂತಿವೆ :
1. ಮೊದಲನೆಯ ಹಂತ : ಪೆರಿಟೋ ನಿಯಲ್ ಡಯಾ ಲಿಸಿಸ್ ದ್ರಾವಣವನ್ನು ಪೆರಿಟೋನಿಯಲ್ ಕ್ಯಾವಿಟಿಯಲ್ಲಿ ಕ್ಯಾಥೆಟರ್ ಮೂಲಕ ವ್ಯಕ್ತಿಯ ದೇಹಗಾತ್ರಕ್ಕನುಗುಣ ವಾಗಿ 500 ಮಿಲಿ ಲೀಟರ್ – 2.5 ಲೀಟರ್ ವರೆಗೆ, ವೈದ್ಯರ ಸಲಹೆಯಂತೆ ತುಂಬಿಸುವುದು.
2. ಎರಡನೆಯ ಹಂತ : ಡಯಾಲಿಸಿಸ್ ದ್ರಾವಣವನ್ನು ವೈದ್ಯರ ಸಲಹೆಯಂತೆ ಕಷ್ಮಲ ಮತ್ತು ನೀರಿನ ಅಣುಗಳ ಪರಸ್ಪರ ಚಲನೆಗೆ ಅಗತ್ಯದಷ್ಟು ಹೊತ್ತು ಪೆರಿಟೋನಿಯಲ್ ಕ್ಯಾವಿಟಿಯಲ್ಲಿರಿಸುವುದು. ಡಯಾಲೈಸೇಟ್ ಮತ್ತು ರಕ್ತನಾಳದಲ್ಲಿ ಹರಿಯುವ ರಕ್ತವು ಪೆರಿಟೋನಿಯಂನಿಂದಾಗಿ ಪರಸ್ಪರ ಬೇರ್ಪಡಿಸಲ್ಪಟ್ಟಿರುತ್ತವೆ. ಈ ಸಮಯದಲ್ಲಿ ರಕ್ತ ದಲ್ಲಿನ ಕಷ್ಮಲ ಮತ್ತು ಅಧಿಕ ಪ್ರಮಾಣದ ನೀರಿನಾಂಶವು ಪೆರಿಟೋನಿಯಂ ಮೂಲಕ ಹಾದು ಡಯಾಲೈಸೇಟ್ ದ್ರಾವಣ ಸೇರುತ್ತವೆ.
3. ಮೂರನೆಯ ಹಂತ : ಸೂಚಿಸಲಾದ ಸಮಯದ ನಂತರ ಡಯಾಲಿಸಿಸ್ ದ್ರಾವಣವನ್ನು ಕ್ಯಾಥೆಟರ್ ಮೂಲಕ ಹೊರ ಹಾಯಿಸಬೇಕು. ಈ ಮೂಲಕ ರಕ್ತದಲ್ಲಿನ ಕಶ್ಮಲಗಳು ಮತ್ತು ಅಧಿಕವಾದ ನೀರು ದೇಹದಿಂದ ಹೊರಹಾಕಲ್ಪಡುತ್ತವೆ.
ಪೆರಿಟೋನಿಯಲ್ ಡಯಾಲಿಸಿಸ್ ವಿಧಗಳು
ಮುಖ್ಯವಾಗಿ ಎರಡು ವಿಧಗಳು:
ಯಂತ್ರದ ಸಹಾಯವಿಲ್ಲದೆ ನಿರಂತರವಾಗಿ ಡಯಾಲಿಸಿಸ್ ದ್ರಾವಣವನ್ನು ವರ್ಗಾವಣೆ (ತುಂಬಿಸುವುದು/ಬರಿದು ಮಾಡುವುದು) ಮಾಡುವುದು. ಈ ವಿಧಾನದಲ್ಲಿ ದಿನಕ್ಕೆ 3ರಿಂದ 4 ಬಾರಿ ಡಯಾಲೈಸೇಟನ್ನು ವರ್ಗಾವಣೆ ಮಾಡಬೇಕಾಗುತ್ತದೆ. ಹಾಗೂ ರಾತ್ರಿಯಲ್ಲಿ ತುಂಬಿಸಿದ ದ್ರಾವಣವನ್ನು ಮರುದಿನ ಬೆಳಿಗ್ಗೆ ಹೊರತೆಗೆಯಲಾಗು ತ್ತದೆ. (Continious Ambulatory Peritoneal Dialysis – CAPD).
ಕಂಪ್ಯೂಟರೀಕೃತ ಮಾಹಿತಿಗಳನ್ನಾಧರಿಸಿ ಕಾರ್ಯ ನಿರ್ವಹಿಸುವ ಒಂದು ಪುಟ್ಟ ಯಂತ್ರದ ಸಹಾಯದಿಂದ ದ್ರಾವಣದ ವರ್ಗಾವಣೆಯನ್ನು ಮಾಡುವುದು. ಈ ವಿಧಾನದಲ್ಲಿ ವ್ಯಕ್ತಿಯು ದಿನವಿಡೀ ಈ ವರ್ಗಾವಣೆಯ ಕಾರ್ಯದಿಂದ ಬಿಡುವಾಗಿರಬಹುದು. ರಾತ್ರಿ ನಿದ್ರಾ ಸಮಯದಲ್ಲಿ, ಈ ಯಂತ್ರವನ್ನು ವ್ಯಕ್ತಿಯ ದೇಹಕ್ಕೆ ಜೋಡಿಸಿದರೆ ಯಂತ್ರವು ಅದರಲ್ಲಿ ನಮೂದಿಸಲ್ಪಟ್ಟಂತೆ ಡಯಾಲಿಸಿಸ್ ದ್ರಾವಣದ ವರ್ಗಾವಣೆಯನ್ನು ಮಾಡುತ್ತದೆ. ಇದರಿಂದಾಗಿ ಯಾವುದೇ ತೊಂದರೆ ಇಲ್ಲದೆ ಡಯಾಲಿಸಿಸ್ ಮಾಡಿಕೊಳ್ಳುತ್ತಿರುವ ವ್ಯಕ್ತಿಗೆ ವಿಶ್ರಾಂತಿಯೂ ದೊರೆಯುತ್ತದೆ. (Automated Peritoneal Dialysis – APD).
ಪೆರಿಟೋನಿಯಲ್ ಡಯಾಲಿಸಿಸ್ ನಿಧಾನ ಗತಿಯಲ್ಲಿ ನಡೆಯುವ ಪ್ರಕ್ರಿಯೆಯಾಗಿದ್ದು , ಸಾಮಾನ್ಯವಾಗಿ ಹಿಮೋಡಯಾಲಿಸಿಸ್‌ನಲ್ಲಿ ಕಂಡುಬರುವ ಹಠಾತ್ತನೆ ರಕ್ತದೊತ್ತಡ ಕಡಿಮೆಯಾಗುವುದು ಮತ್ತು ಲವಣಾಂಶಗಳ ಅಸಮತೋಲನದಿಂದಾಗುವ ತೊಂದರೆಗಳು ಇಲ್ಲಿ ಹೆಚ್ಚು ಕಂಡುಬರುವುದಿಲ್ಲ .
ನಮ್ಮ ದೇಹದಲ್ಲಿ ಮೂತ್ರಪಿಂಡಗಳ ಮಹತ್ವ
1. ನಮ್ಮ ದೇಹದಲ್ಲಿನ ಲವಣಾಂಶಗಳನ್ನು , ನೀರಿನಾಂಶವನ್ನು , ಆಮ್ಲ ಹಾಗೂ ಪ್ರತ್ಯಾಮ್ಲಗಳನ್ನು ಸಮತೋಲನದಲ್ಲಿರಿಸುತ್ತವೆ.
2. ದೇಹದಲ್ಲಿ ಉತ್ಪತ್ತಿಯಾದ ಸಾರಜನಕಯುಕ್ತ ಕಶ್ಮಲಗಳನ್ನು (ಯೂರಿಯ, ಕ್ರಿಯಾಟಿನಿನ್), ಅಧಿಕ ಪ್ರಮಾಣದಲ್ಲಿ ನೀರನ್ನು ಮತ್ತು ಮೂತ್ರಪಿಂಡದ ಮೂಲಕ ವಿಸರ್ಜಿಸಲ್ಪಡುವ ಔಷಧಿಗಳನ್ನು ದೇಹದಿಂದ ಹೊರಹಾಕುತ್ತವೆ.
3. ಕೆಲವು ಹಾರ್ಮೋನುಗಳನ್ನು ಸ್ರವಿಸಿ, ನಮ್ಮ ರಕ್ತದೊತ್ತಡವನ್ನು, ಮೂಳೆಗಳ ಸಾಂದ್ರತೆಯನ್ನು ಹಾಗೂ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ನಿಯಂತ್ರಣದಲ್ಲಿರಿಸುತ್ತವೆ.
ಪೆರಿಟೋನಿಯಲ್ ಡಯಾಲಿಸಿಸ್‌ನ ಅನುಕೂಲತೆಗಳು :
– ಇದು ನವಜಾತ ಶಿಶುಗಳಿಂದ ಕೂಡಿ ಅತಿ ವೃದ್ಧರಿಗೂ ಕೂಡ ಸೂಕ್ತವಾದ ಚಿಕಿತ್ಸೆಯಾಗಿದೆ.
– ತೀವ್ರತರವಾದ ಹೃದಯದ ತೊಂದರೆ ಹಾಗೂ ಅತಿ ಕಡಿಮೆ ರಕ್ತದೊತ್ತಡದ ತೊಂದರೆ ಇರುವವರಿಗೆ ಈ ಚಿಕಿತ್ಸೆಯು ಹಿಮೋಡಯಾಲಿಸಿಸ್‌ಗಿಂತ ಉತ್ತಮವಾಗಿದೆ.
– ಚಿಕಿತ್ಸೆಗಾಗಿ ರಕ್ತವನ್ನು ದೇಹದ ಹೊರಗೆ ಹಾಯಿಸದೆ ದೇಹದೊಳಗೇ ರಕ್ತವನ್ನು ಶುದ್ಧಿ ಮಾಡುವುದರಿಂದ ಸೋಂಕು ಹೊಂದುವ/ರಕ್ತ ಕಳೆದುಕೊಳ್ಳುವ ಸಾಧ್ಯತೆಗಳಿಂದ ತಪ್ಪಿಸಿಕೊಳ್ಳಬಹುದು. ಹಾಗೆಯೇ ಹಿಮೋಡಯಾಲಿಸಿಸ್‌ನಂತೆ ಪ್ರತಿ ಬಾರಿಯು ಸೂಜಿ ಚುಚ್ಚಿಸಿಕೊಳ್ಳುವ ಮತ್ತು ಪದೇ ಪದೇ ಆಸ್ಪತ್ರೆ ಭೇಟಿ ಅಗತ್ಯವಿರುವುದಿಲ್ಲ .
– ಸಮುದಾಯದಲ್ಲಿ ಹರಡುವ ಖಾಯಿಲೆಯ ಸಂದರ್ಭಗಳಲ್ಲಿ ಪೆರಿಟೋನಿಯಲ್ ಡಯಾಲಿಸಿಸ್ ಬಹಳ ಉಪಯುಕ್ತವಾದ ಹಾಗೂ ಜೀವರಕ್ಷಕ ಚಿಕಿತ್ಸೆಯಾಗಿದೆ.
ಪೆರಿಟೋನಿಯಲ್ ಡಯಾಲಿಸಿಸ್‌ನ ಅನನುಕೂಲತೆಗಳು :
– ಪೆರಿಟೋನಿಯಲ್ ಡಯಾಲಿಸಿಸ್ ಮಾಡಿಸುವವರಲ್ಲಿ ಪೆರಿಟೋನಿಯಲ್ ಕ್ಯಾಥೆಟರ್ ಹಾಗೂ ಆ ಚರ್ಮದ ಭಾಗದಲ್ಲಿ ಸೋಂಕು ಸಾಮಾನ್ಯವಾಗಿ ಕಂಡುಬರುತ್ತದೆ. ಸರಿಯಾದ ಮುನ್ನೆಚ್ಚರಿಕೆಗಳನ್ನು ವಹಿಸಿದರೆ ಅದನ್ನು ತಡೆಗಟ್ಟಬಹುದು. ಒಂದು ವೇಳೆ ಸೋಂಕು ಕಂಡುಬಂದಲ್ಲಿ ವೈದ್ಯರ ಸಲಹೆಯಂತೆ ಔಷಧೋಪಚಾರ ಮಾಡಿದರೆ ಇದನ್ನು ಗುಣಪಡಿಸಬಹುದು.
– ಪೆರಿಟೋನಿಯಲ್ ಡಯಾಲಿಸಿಸ್ ಮಾಡಿಸುವವರಲ್ಲಿ ಕಂಡುಬರುವ ಅತಿ ಮುಖ್ಯವಾದ ತೊಂದರೆ ಎಂದರೆ ಪೆರಿಟೊನೈಟಿಸ್. ಪೆರಿಟೊನೈಟಿಸ್ ಎಂದರೆ ಪೆರಿಟೋನಿಯಂ ಮೆಂಬ್ರೇನ್‌ನ ಸೋಂಕು ಮತ್ತು ಉರಿಊತ. ಇದರಿಂದಾಗಿ ಪೆರಿಟೋನಿಯಲ್ ಡಯಾಲಿಸಿಸ್‌ನ ಕಾರ್ಯವೈಖರಿಯಲ್ಲಿ ವ್ಯತ್ಯಯವಾಗುತ್ತದೆ. ಈ ತೊಂದರೆಯನ್ನು ಕೆಲವು ಮುನ್ನೆಚ್ಚರಿಕೆಗಳ ಪಾಲನೆಯಿಂದ ತಡೆಗಟ್ಟಬಹುದು ಹಾಗೂ ಡಯಾಲಿಸಿಸ್ ಮುಂದುವರಿಸಲು ಯಾವುದೇ ತೊಂದರೆಗಳಿರುವುದಿಲ್ಲ . ಒಂದು ವೇಳೆ ಪೆರಿಟೊನೈಟಿಸ್ ತೊಂದರೆಯುಂಟಾದರೆ ಸೂಕ್ತ ಚಿಕಿತ್ಸೆಯು ಲಭ್ಯವಿದ್ದು ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸುವುದು ಅತ್ಯಾವಶ್ಯಕವಾಗಿದೆ.
ಬಹಳಷ್ಟು ಮಂದಿ ಜನರಿಗೆ ಹೀಮೋಡಯಾಲಿಸಿಸ್ ಬಗ್ಗೆ ಮಾಹಿತಿಯಿದೆ ಆದರೆ ಪೆರಿಟೋನಿಯಲ್ ಡಯಾಲಿಸಿಸ್ ಇಂದು ಅಷ್ಟು ಪ್ರಚಲಿತದಲ್ಲಿರದ ಚಿಕಿತ್ಸೆಯಾಗಿದೆ. ಹೀಮೋಡಯಾಲಿಸಿಸ್ ಅನ್ನು ಡಯಾಲಿಸಿಸ್ ಯಂತ್ರದ ಹಾಗೂ ಕೃತಕ ಮೂತ್ರಪಿಂಡದ ಸಹಾಯದಿಂದ ಮಾಡಲಾಗುತ್ತದೆ. ಈ ಯಂತ್ರಗಳ ನಿರ್ವಹಣೆಯನ್ನು ಮಾಡಲು ತರಬೇತಿ ಪಡೆದ ನುರಿತ ತಂತ್ರಜ್ಞರ ಆವಶ್ಯಕತೆ ಇರುತ್ತದೆ. ಆದರೆ ಪೆರಿಟೋನಿಯಲ್ ಡಯಾಲಿಸಿಸ್ ಅನ್ನು ಮನೆಯಲ್ಲೆ ಯಾವ ತಂತ್ರಜ್ಞರ ಸಹಾಯವಿಲ್ಲದೆ ಸ್ವತಃ ಅಥವಾ ಮನೆಯವರೇ ಮಾಡಬಹುದು. ಇದನ್ನು ನಿರ್ವಹಿಸಲು ಆಸ್ಪತ್ರೆಯಲ್ಲಿ ಕೆಲವು ದಿನಗಳ ತರಬೇತಿಯನ್ನು ನೀಡಲಾಗುತ್ತದೆ. ಈ ಚಿಕಿತ್ಸೆಯನ್ನು ಮಾಡುವಾಗ ಸ್ವತ್ಛತೆಗೆ ಆದ್ಯತೆ ನೀಡುವುದು ತುಂಬಾ ಅಗತ್ಯ.
ಮೇಘಾ ನಾಗರಾಜ ನಾಯಕ್
ಅಸಿಸ್ಟೆಂಟ್ ಪ್ರೊಫೆಸರ್
ವೀಣಾ ಎನ್. ಕೆ.
ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಪ್ರೋಗ್ರಾಮ್ ಕೊಆರ್ಡಿನೇಟರ್, ಆರ್ ಆರ್ ಟಿ ಮತ್ತು ಡಯಾಲಿಸಿಸ್ ಟೆಕ್ನಾಲಜಿ ವಿಭಾಗ,
ಎಂ ಸಿ ಎಚ್ ಪಿ, ಮಾಹೆ – ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.