UNO: ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ- ಭಾರತದ ಉಮೇದುವಾರಿಕೆಗೆ ಆನೆಬಲ
Team Udayavani, Oct 8, 2023, 11:55 PM IST
ವಿಶ್ವಸಂಸ್ಥೆ ಮತ್ತದರ ಅಂಗಸಂಸ್ಥೆಗಳು ಹಾಗೂ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳನ್ನು ಹಾಲಿ ಪರಿಸ್ಥಿತಿಗನುಗುಣವಾಗಿ ವಿಸ್ತರಿಸಬೇಕೆಂದು ಭಾರತ ಕೆಲವು ವರ್ಷಗಳಿಂದೀಚೆಗೆ ಜಾಗತಿಕ ಸಮುದಾಯವನ್ನು ಆಗ್ರಹಿಸುತ್ತಲೇ ಬಂದಿದೆ. ಇದೇ ವೇಳೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವವನ್ನು ಪಡೆಯಲು ಭಾರತ ಉತ್ಸುಕವಾಗಿದ್ದು ಇದಕ್ಕಾಗಿ ವಿಶ್ವದ ಪ್ರಬಲ ರಾಷ್ಟ್ರಗಳ ಬೆಂಬಲವನ್ನು ಯಾಚಿಸಿದೆ. ಭಾರತದ ಉಮೇದುವಾರಿಕೆಗೆ ಕಳೆದ ಕೆಲವು ತಿಂಗಳುಗಳಿಂದೀಚೆಗೆ ಜಾಗತಿಕ ಸಮುದಾಯದಿಂದ ಭಾರೀ ಬೆಂಬಲ ವ್ಯಕ್ತವಾಗತೊಡಗಿದ್ದು ಆನೆಬಲ ಲಭಿಸಿದಂತಾಗಿದೆ.
ಹೊಸದಿಲ್ಲಿಯಲ್ಲಿ ತಿಂಗಳ ಹಿಂದೆ ನಡೆದ ಜಿ 20 ರಾಷ್ಟ್ರಗಳ ಶೃಂಗಸಭೆಯಲ್ಲೂ ಭಾರತ ತನ್ನ ಈ ಬೇಡಿಕೆಯನ್ನು ಪುನರುಚ್ಚರಿಸುವ ಮೂಲಕ ವಿಶ್ವ ರಾಷ್ಟ್ರಗಳ ಗಮನ ಸೆಳೆದಿತ್ತು. ಈ ಸಂದರ್ಭದಲ್ಲಿ ಕೆಲವು ರಾಷ್ಟ್ರಗಳು ಭಾರತದ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದ್ದೇ ಅಲ್ಲದೆ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವಿಶ್ವಸಂಸ್ಥೆಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸ ಬೇಕೆಂದು ಆಗ್ರಹಿಸಿದ್ದವು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ವತ್ವ ಹೊಂದುವ ಭಾರತದ ಮಹತ್ವಾಕಾಂಕ್ಷೆಗೆ ಆಸ್ಟ್ರೇಲಿಯಾ ತನ್ನ ಬೆಂಬಲವನ್ನು ಸಾರಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳ ಪಟ್ಟಿಗೆ ಭಾರತ, ಜಪಾನ್‌ನಂತಹ ದೇಶಗಳನ್ನು ಸೇರ್ಪಡೆಗೊಳಿಸುವ ಮೂಲಕ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸಲು ಸಾಧ್ಯ ಎಂದು ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಪೆನ್ನಿ ವಾಂಗ್ ನೀಡಿರುವ ಹೇಳಿಕೆ ಭಾರತವನ್ನು ಭದ್ರತಾ ಮಂಡಳಿಯ ಇನ್ನಷ್ಟು ಸನಿಹಕ್ಕೆ ತಂದಿದೆ.
ಜಿ 20 ಶೃಂಗದ ವೇಳೆ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ನೀಡುವ ಪ್ರಸ್ತಾವಕ್ಕೆ ತನ್ನ ಬೆಂಬಲವನ್ನು ಪುನರುಚ್ಚರಿಸಿದ್ದರು. ಅಲ್ಲದೆ ಟರ್ಕಿ ಅಧ್ಯಕ್ಷ ರಿಸೆಪ್ ತಯಿಪ್ ಎಡ್ರೊಗೆನ್ ಅವರು ಭದ್ರತಾ ಮಂಡಳಿಯಲ್ಲಿ ಭಾರತವನ್ನು ಖಾಯಂ ಸದಸ್ಯ ರಾಷ್ಟ್ರವಾಗಿ ಕಾಣಲು ಟರ್ಕಿ ಹೆಮ್ಮೆ ಪಡುತ್ತದೆ ಎಂದಿದ್ದರು. ಇದೇ ವೇಳೆ ಪೋರ್ಚುಗೀಸ್ ಅಧ್ಯಕ್ಷ ಮಾರ್ಸೆಲೊ ರೆಬೆಲೋ ಡೆ ಸೌಸ ಅವರು ಭಾರತ ಮತ್ತು ಬ್ರೆಜಿಲ್‌ಗೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ನೀಡಬೇಕೆಂದು ಆಗ್ರಹಿಸಿದ್ದರು.
ಸದ್ಯ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ, ಬ್ರಿಟನ್, ಚೀನ, ಫ್ರಾನ್ಸ್ ಮತ್ತು ಆಸ್ಟ್ರೇಲಿಯಾ ಖಾಯಂ ಸದಸ್ಯ ರಾಷ್ಟ್ರಗಳಾಗಿದ್ದು ವಿಟೋ ಅಧಿಕಾರವನ್ನು ಹೊಂದಿವೆ. ಭಾರತಕ್ಕೆ ಖಾಯಂ ಸದಸ್ಯತ್ವ ನೀಡಲು ಜಾಗತಿಕ ಸಮುದಾಯದಿಂದ ಭಾರೀ ಬೆಂಬಲ ವ್ಯಕ್ತವಾಗಿದೆಯಾದರೂ ಚೀನ ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತ ಬಂದಿದೆ. ನಿರಂತರವಾಗಿ ಒಂದಲ್ಲ ಒಂದು ವಿಷಯವನ್ನು ಮುಂದಿಟ್ಟು ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇರುವ ಚೀನ ಗಡಿಯಲ್ಲಿ ಸುಖಾಸುಮ್ಮನೆ ಭಾರತವನ್ನು ಕೆಣಕುವ ಕಾರ್ಯದಲ್ಲಿ ನಿರತವಾಗಿದೆ. ಆದರೆ ಚೀನದ ಈ ಷಡ್ಯಂತ್ರಗಳಿಗೆ ಭಾರತ ಸೂಕ್ತ ತಿರುಗೇಟು ನೀಡುತ್ತಲೇ ಬಂದಿದೆ.
ಈಗ ಆಸ್ಟ್ರೇಲಿಯಾ ಕೂಡ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವದ ವಿಷಯದಲ್ಲಿ ಭಾರತದ ಪರ ಬ್ಯಾಟ್ ಬೀಸಿರುವುದು ಈ ದಿಸೆಯಲ್ಲಿ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಇಂಡೋ-ಪೆಸಿಫಿಕ್ ವಲಯದಲ್ಲಿ ಚೀನದ ವಿಸ್ತರಣಾವಾದದ ಬೆದರಿಕೆಯನ್ನು ಹಿಮ್ಮೆಟ್ಟಿಸಲು ಆಸ್ಟ್ರೇಲಿಯಾ ಮತ್ತು ಅಮೆರಿಕ ಜತೆಗೂಡಿ ರಚಿಸಿರುವ ರಕ್ಷಣ ಮೈತ್ರಿಕೂಟ “ಕ್ವಾಡ್’ನಲ್ಲಿ ಭಾರತ ಮತ್ತು ಜಪಾನ್ ಸದಸ್ಯ ರಾಷ್ಟ್ರಗಳಾಗಿರುವುದು ಇಲ್ಲಿ ಗಮನಾರ್ಹ.
ಇವೆಲ್ಲದರ ಮಧ್ಯೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಕೂಡ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯ ಸ್ಥಾನ ನೀಡಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ಪುತಿನ್ ಅವರ ಈ ಹೇಳಿಕೆಯಿಂದ ಭಾರತದ ಉಮೇದುವಾರಿಕೆಗೆ ಆನೆಬಲ ಲಭಿಸಿದಂತಾಗಿದೆ.
ಕೊರೊನೋತ್ತರದಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಆರ್ಥಿಕವಾಗಿ ಸದೃಢಗೊಳ್ಳಲು ಹರಸಾಹಸ ಪಡುತ್ತಿದ್ದರೆ ಭಾರತ ಮಾತ್ರ ಜಾಗತಿಕ ಏಳುಬೀಳುಗಳ ಹೊರತಾಗಿಯೂ ಆರ್ಥಿಕತೆಯಲ್ಲಿ ಅತ್ಯುತ್ತಮ ಪ್ರಗತಿಯನ್ನು ಸಾಧಿಸುತ್ತ ಮುನ್ನಡೆದಿದೆ. ಇನ್ನು ಅಭಿವೃದ್ಧಿ ವಿಚಾರದಲ್ಲಿಯೂ ಭಾರತ ದಾಪುಗಾಲು ಇರಿಸಿದ್ದು ಎಲ್ಲ ಕ್ಷೇತ್ರಗಳಲ್ಲೂ ಸ್ವಾವಲಂಬನೆಯ ಗುರಿಯೊಂದಿಗೆ ಮುನ್ನುಗ್ಗುತ್ತಿದೆ. ಇದೇ ವೇಳೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದು ಯಾವುದೇ ಸಂದಿಗ್ಧತೆ ಎದುರಾದಾಗಲೂ ಜಾಗತಿಕ ಸಮುದಾಯ ಭಾರತದ ನಿಲುವಿನತ್ತ ದೃಷ್ಟಿ ಹರಿಸಲಾರಂಭಿಸಿದೆ. ದೇಶದ ಸಾರ್ವಭೌಮತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ದೇಶ ಮತ್ತು ನಾಗರಿಕರ ಹಿತದೃಷ್ಟಿಗೆ ಪೂರಕವಾದ ಹೆಜ್ಜೆಗಳನ್ನಿರಿಸುವ ಮೂಲಕ ರಾಜತಾಂತ್ರಿಕ ನೆಲೆಯಲ್ಲಿಯೂ ವಿದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗಿದೆ. ಹೀಗಾಗಿಯೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಹಿತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳಲ್ಲಿ ಭಾರತಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬ ಆಗ್ರಹಗಳು ಕೇವಲ ಬಡ ಮತ್ತು ಅಭಿವೃದ್ಧಿಶೀಲ ದೇಶಗಳಿಂದ ಮಾತ್ರವಲ್ಲದೆ ಅಭಿವೃದ್ಧಿ ಹೊಂದಿದ ಬಲಾಡ್ಯ ದೇಶಗಳಿಂದಲೂ ಕೇಳಿಬರತೊಡಗಿದೆ.
ಇಡೀ ಜಾಗತಿಕ ಸಮುದಾಯದಿಂದ ವ್ಯಕ್ತವಾಗುತ್ತಿರುವ ಬೆಂಬಲವನ್ನು ಗಮನಿಸಿದಾಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಹೊಂದುವ ಭಾರತದ ಬಹುವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾದಂತೆ ಕಂಡುಬರುತ್ತಿದೆ.
ಹರೀಶ್. ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.