ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆ ಸಜ್ಜು
Team Udayavani, Sep 22, 2019, 3:10 AM IST
ರಾಜ್ಯದ ಹದಿನೈದು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿದೆ. ಅತ್ತ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಬಿಜೆಪಿಗೆ ಎದುರಾಗಿದ್ದರೆ,ಇತ್ತ ಸರ್ಕಾರದ ಪತನಕ್ಕೆ ಕಾರಣರಾದ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿ, ಅನರ್ಹ ಶಾಸಕರಿಗೆ ಪಾಠ ಕಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ರಣತಂತ್ರ ರೂಪಿಸುತ್ತಿದ್ದಾರೆ. ಈ ಮಧ್ಯೆ, ದಿಢೀರ್ ಚುನಾವಣಾ ಘೋಷಣೆ, ಅನರ್ಹಗೊಂಡ ಶಾಸಕರಿಗೆ “ಶಾಕ್’ ನೀಡಿದ್ದು, ಅವರ ತಲೆಬಿಸಿಗೆ ಕಾರಣವಾಗಿದೆ. ಹೀಗಾಗಿ, ಎಲ್ಲಾ ಕ್ಷೇತ್ರಗಳು ಜಿದ್ದಾಜಿದ್ದಿನ ಕ್ಷೇತ್ರಗಳಾಗಿ ಮಾರ್ಪಡುತ್ತಿದ್ದು, ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿನ ಕದನ ಕುತೂಹಲವಿದು.
ಜಾರಕಿಹೊಳಿ ಕುಟುಂಬದತ್ತ ಎಲ್ಲರ ಚಿತ್ತ
ಬೆಳಗಾವಿ: ಜಾರಕಿಹೊಳಿ ಕುಟುಂಬದ ಯಾವ ನಾಯಕರು, ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ. ನಾವು ಯಾರ ಪರ ನಿಲ್ಲಬೇಕು..? ಇದು ಮುಂದಿನ ತಿಂಗಳು ನಡೆಯಲಿರುವ ಉಪಚುನಾವಣೆಗೆ ಗೋಕಾಕ ಕ್ಷೇತ್ರದ ಮತದಾರರಲ್ಲಿ ಕಾಣುತ್ತಿರುವ ಕದನ ಕುತೂಹಲ. ಇಲ್ಲಿ ವ್ಯಕ್ತಿ ನಿಷ್ಠೆಯೇ ಮುಖ್ಯ. ಈಗಿನ ಲೆಕ್ಕಾಚಾರದಂತೆ ಕ್ಷೇತ್ರದಿಂದ ರಮೇಶ ಜಾರಕಿಹೊಳಿ, ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಒಂದು ವೇಳೆ ರಮೇಶಗೆ ನಿಲ್ಲಲು ಅವಕಾಶ ಸಿಗದೇ ಇದ್ದರೆ ರಮೇಶ ಪುತ್ರ ಹಾಗೂ ಬೆಳಗಾವಿ ಹಾಲು ಒಕ್ಕೂಟದ ನಿರ್ದೇಶಕ ಅಮರನಾಥ ಇಲ್ಲವೇ ಅಳಿಯ ಅಂಬಿರಾವ್ ಪಾಟೀಲ ಹೆಸರು ಪ್ರಸ್ತಾಪದಲ್ಲಿವೆ. ಅದರಲ್ಲೂ ಅವರ ಪುತ್ರ ಅಮರನಾಥ ಹೆಸರು ಬಹುತೇಕ ಅಂತಿಮವಾಗಲಿದೆ. ಕಾಂಗ್ರೆಸ್‌ನಿಂದ ಲಖನ್ ಜಾರಕಿಹೊಳಿ ಸ್ಪರ್ಧಿಸುತ್ತಾರೆಂದು ಸ್ವತಃ ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡಿರುವ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ. ರಮೇಶ ಅವರನ್ನು ಸೋಲಿಸುವುದು ಸತೀಶ ಅವರ ಗುರಿ. ಲಖನ್, ಕಾಂಗ್ರೆಸ್‌ದಿಂದ ಕಣಕ್ಕಿಳಿದರೂ ಒಂದು ವೇಳೆ ಅವರ ವಿರುದ್ಧ ರಮೇಶ ಸ್ಪರ್ಧಿಸಿದರೆ ಆಗ ರಮೇಶ ಮಾತಿಗೆ ಬೆಲೆಕೊಟ್ಟು ಲಖನ್ ತಟಸ್ಥರಾಗಿ ಉಳಿಯಬಹುದೆಂಬ ಭಯ ಕಾಂಗ್ರೆಸ್‌ಗಿದೆ. ಹೀಗಾಗಿ, ಲಖನ್ ಬದಲಿಗೆ ಅಶೋಕ ಪೂಜಾರಿ ಕಾಂಗ್ರೆಸ್‌ನ ಅಭ್ಯರ್ಥಿಯಾಗುವ ಸಾಧ್ಯತೆಗಳು ಹೆಚ್ಚಿದೆ.
ಬಿಜೆಪಿಗೆ ಟಿಕೆಟ್ ತಲೆನೋವು
ಬೆಳಗಾವಿ: ಹೊಸದಾಗಿ ತಾಲೂಕು ಕೇಂದ್ರ ಸ್ಥಾನ ಪಡೆದಿರುವ ಕೃಷ್ಣಾ ನದಿ ತೀರದ ವಿಧಾನಸಭಾ ಕ್ಷೇತ್ರವಿದು. ಅಗತ್ಯ ಇಲ್ಲದಿದ್ದರೂ ಮತ್ತೆ ಚುನಾವಣೆ ಎದುರಾಗಲು ಕಾರಣರಾದ ಶ್ರೀಮಂತ ಪಾಟೀಲ ಮೇಲೆ ಕ್ಷೇತ್ರದ ಜನರಲ್ಲಿ ಮೊದಲಿದ್ದ ಅಭಿಪ್ರಾಯ ಈಗ ಬದಲಾಗಿದ್ದು, ಅವರ ರಾಜಕೀಯ ನಡೆ ಅಸಮಾಧಾನಕ್ಕೆ ಕಾರಣವಾಗಿದೆ. ಶ್ರೀಮಂತ ಪಾಟೀಲ, ತಮ್ಮ ಸ್ವಂತ ಬಲದ ಮೇಲೆ ಗೆದ್ದು ಬಂದವರು. ಹೀಗಾಗಿ, ಅವರಿಗೆ ಗೆಲುವಿನ ಸಮಸ್ಯೆಯಿಲ್ಲ ಎಂಬುದು ಬೆಂಬಲಿಗರ ನಂಬಿಕೆ. ಇನ್ನು, ಶ್ರೀಮಂತ ಪಾಟೀಲ ತಮಗೆ ಸ್ಪರ್ಧಿಸುವ ಅವಕಾಶ ಸಿಗದಿದ್ದಲ್ಲಿ ಬಿಜೆಪಿಯಿಂದ ತಮ್ಮ ಪುತ್ರ ಶ್ರೀನಿವಾಸ ಪಾಟೀಲ ಅವರಿಗೆ ಟಿಕೆಟ್ ಕೊಡಿಸುವ ಪ್ರಯತ್ನದಲ್ಲಿದ್ದಾರೆ. ಆದರೆ, ಈ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿದ್ದ ಮಾಜಿ ಶಾಸಕ ರಾಜು ಕಾಗೆ, ಮತದಾರರ ಮೇಲೆ ಗಾಢ ಪ್ರಭಾವ ಹೊಂದಿದ್ದಾರೆ. ಈ ಮಧ್ಯೆ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಕಾಗವಾಡ ಕ್ಷೇತ್ರದಿಂದ ಸ್ಪರ್ಧೆಗೆ ಆಸಕ್ತಿ ತೋರಿಸಿದ್ದಾರೆ. ಇನ್ನು, ಕ್ಷೇತ್ರದ ಪ್ರಭಾವಿ ನಾಯಕ ಹಾಗೂ ಮಾಜಿ ಶಾಸಕ ಮೋಹನ್ ಶಾ ಅವರಿಗೆ ಟಿಕೆಟ್ ಸಿಗಬಹುದು ಎನ್ನಲಾಗುತ್ತಿದೆ. ಕಾಗವಾಡ ಕ್ಷೇತ್ರದಲ್ಲಿ ಶಾ ಪ್ರಭಾವ ಸಾಕಷ್ಟಿದೆ.
ಜಾತಿ ಲೆಕ್ಕಾಚಾರ: ಹೊಸ ಮುಖವೇ ಆಧಾರ?
ಬೆಳಗಾವಿ: ಆಪರೇಶನ್ ಕಮಲದ ಸಮಯದಲ್ಲಿ ಬಿಜೆಪಿ ನಾಯಕರು ಕುಮಟಳ್ಳಿಗೆ ಉಪ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಟಿಕೆಟ್ ಕೊಡುವ ಮಾತು ಕೊಟ್ಟಿದ್ದರೂ, ಟಿಕೆಟ್ ಸಿಗುವುದು ಕಷ್ಟ. ಬಿಜೆಪಿಯಿಂದ ಸೋತಿದ್ದ ಲಕ್ಷ್ಮಣ ಸವದಿ ಈಗ ಬಿಜೆಪಿ ಸರಕಾರದಲ್ಲಿ ಉಪ ಮುಖ್ಯಮಂತ್ರಿ. ಅವರನ್ನು ಕಡೆಗಣಿಸಿ ಕುಮಟಳ್ಳಿಗೆ ಟಿಕೆಟ್ ನೀಡುವುದು ಅಸಾಧ್ಯದ ಮಾತು. ಅಥಣಿ ಕ್ಷೇತ್ರ ಮತ್ತೆ ಬಿಜೆಪಿ ಪರವಾಗಬೇಕಾದರೆ ಸವದಿ ಅವರಿಗೆ ಟಿಕೆಟ್ ನೀಡಬೇಕು. ಇನ್ನೊಂದೆಡೆ ಕುಮಟಳ್ಳಿ ತಾವಾಗೇ ಸ್ಪಧೆೆì ಮಾಡುವುದಿಲ್ಲವೆಂದು ಹೇಳಿಕೆ ನೀಡಿ ಹಿಂದೆ ಸರಿಯಬೇಕು. ಈ ನಿಟ್ಟಿನಲ್ಲಿ ಕುಮಟಳ್ಳಿ ಅವರ ಮನವೊಲಿಕೆಗೆ ತೆರೆಮರೆಯಲ್ಲಿ ಚಟುವಟಿಕೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಮಹೇಶ ಕುಮಟಳ್ಳಿ ಅವರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಆದರೂ, ಆಕಾಂಕ್ಷಿಗಳ ದೊಡ್ಡ ದಂಡೇ ಇದೆ. ಶಹಜಹಾನ್ ಡೊಂಗರಗಾವ್, ಮಾಜಿ ಸಚಿವ ಎಂ.ಬಿ.ಪಾಟೀಲ ಅವರ ಸಹೋದರ ಹಾಗೂ ವಿಧಾನಪರಿಷತ್ ಸದಸ್ಯ ಸುನೀಲ ಪಾಟೀಲ, ಎಸ್.ಕೆ.ಬುಟಾಳೆ, ಬಸವರಾಜ ಬುಟಾಳೆ, ಸುನೀಲ ಸಂಕ, ಸುರೇಶ ಪಾಟೀಲ, ಗಜಾನನ ಮಂಗಸೂಳಿ ಅವರ ಹೆಸರು ಪ್ರಸ್ತಾಪದಲ್ಲಿದೆ. ಇನ್ನು, ಜೆಡಿಎಸ್‌ನಿಂದ ಗಿರೀಶ ಬುಟಾಳೆಗೆ ಬಹುತೇಕ ಟಿಕೆಟ್ ಅಂತಿಮ.
“ಕೈ’ನಲ್ಲಿ ಗೊಂದಲ, ಸುಧಾಕರ್ ನಡೆ ನಿಗೂಢ
ಚಿಕ್ಕಬಳ್ಳಾಪುರ: ಸದ್ಯದ ರಾಜಕೀಯ ಸ್ಥಿತಿಗತಿಗಳನ್ನು ಗಮನಿಸಿದರೆ ಕಾಂಗ್ರೆಸ್, ಜೆಡಿಎಸ್ ಪ್ರತ್ಯೇಕವಾಗಿ ಚುನಾವಣೆ ಎದುರಿಸುವುದು ದಟ್ಟವಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಡಾ.ಕೆ.ಸುಧಾಕರ್, ಸತತ 2ನೇ ಬಾರಿ ಗೆಲುವು ಸಾಧಿಸುವ ಮೂಲಕ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದ್ದರು. ಈಗ ಸುಧಾಕರ್‌ಗೆ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ, ಕಾಂಗ್ರೆಸ್, ಜೆಡಿಎಸ್ ಹಾಗೂ ಸುಧಾಕರ್ ಪರ ನಿಲ್ಲುವ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದಂಡು ಹೆಚ್ಚಿದ್ದು, ಕಳೆದ ಬಾರಿ ಸುಧಾಕರ್ ವಿರುದ್ಧ ಕಾಂಗ್ರೆಸ್ ಟಿಕೆಟ್ ಸಿಗದಿದ್ದಕ್ಕೆ ಬಂಡಾಯವಾಗಿ ಸ್ಪರ್ಧಿಸಿದ್ದ ಕೆ.ವಿ.ನವೀನ್ ಕಿರಣ್, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂದಿ ಅಂಜಿನಪ್ಪ, ಮಾಜಿ ಜಿಪಂ ಅಧ್ಯಕ್ಷರಾದ ಗಂಗರೇಕಾಲುವೆ ನಾರಾಯಣಸ್ವಾಮಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ರಮೇಶ್, ಮಾಜಿ ಸಂಸದರಾದ ಆರ್.ಎಲ್.ಜಾಲಪ್ಪ ಭಾಮೈದ ಜಿ.ಎಚ್.ನಾಗರಾಜ್, ಮಾಜಿ ಸಚಿವ, ಬಲಿಜ ಸಮುದಾಯದ ಬೆಂಗಳೂರಿನ ಎಂ.ಆರ್.ಸೀತಾರಾಮ್ ಹೆಸರು ಕೇಳಿ ಬರುತ್ತಿದೆ.ಕಾಂಗ್ರೆಸ್‌ಗೆ ಪ್ರಬಲ ಎದುರಾಳಿಯಾಗಿರುವ ಜೆಡಿಎಸ್‌ನಿಂದ ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ ಸ್ಪರ್ಧಿಸುವುದು ಬಹುತೇಖ ಖಚಿತ.
ಹಳ್ಳಿಹಕ್ಕಿಯ ನಡೆ ಏನು?
ಮೈಸೂರು: ಅಡಗೂರು ಎಚ್.ವಿಶ್ವನಾಥ್ ರಾಜೀನಾಮೆಯಿಂದ ಜಿಲ್ಲೆಯ ಹುಣಸೂರು ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದ್ದು, ಹಳ್ಳಿಹಕ್ಕಿ ಖ್ಯಾತಿಯ ವಿಶ್ವನಾಥ್ ನಡೆ ಏನೆಂಬುದು ಕುತೂಹಲ ಮೂಡಿಸಿದೆ. ಸತತ 2 ಬಾರಿ ಗೆಲುವು ಸಾಧಿಸಿ 2018ರ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ತಪ್ಪಿಸಿಕೊಂಡಿದ್ದ ಕಾಂಗ್ರೆಸ್‌ನ ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಉಪ ಚುನಾವಣೆಯ ಸಿದ್ಧತೆಯಲ್ಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೃಪಾಕಟಾಕ್ಷ ಇರುವುದರಿಂದ ಕಾಂಗ್ರೆಸ್‌ನಿಂದ ಎಚ್.ಪಿ.ಮಂಜುನಾಥ್ ಅವರೇ ಬಹುತೇಕ ಅಭ್ಯರ್ಥಿಯಾಗಲಿದ್ದಾರೆ. ತಾಂತ್ರಿಕವಾಗಷ್ಟೇ ಜೆಡಿಎಸ್‌ನಲ್ಲಿ ಉಳಿದಿರುವ ಶಾಸಕ ಜಿ.ಟಿ.ದೇವೇಗೌಡ ಉಪ ಚುನಾವಣೆಯಲ್ಲಿ ತಮ್ಮ ಪುತ್ರ ಹರೀಶ್ ಗೌಡರನ್ನು ಹುಣಸೂರು ಕ್ಷೇತ್ರದಿಂದ ಕಣಕ್ಕಿಳಿಸುವುದಿಲ್ಲ ಎಂದಿದ್ದಾರೆ. ಹೀಗಾಗಿ, ಜೆಡಿಎಸ್ ಅಭ್ಯರ್ಥಿ ಯಾರೆಂಬ ಕುತೂಹಲ ಮೂಡಿಸಿದೆ. ಬಿಜೆಪಿಯಿಂದ ತಾಲೂಕು ಘಟಕದ ಅಧ್ಯಕ್ಷರಾದ ವಕೀಲ ಬಿ.ಎಸ್.ಯೋಗಾನಂದ ಕುಮಾರ್ ಆಕಾಂಕ್ಷಿಯಾಗಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆಂಬ ಕಾರಣಕ್ಕೆ ಒಕ್ಕಲಿಗ ಸಮುದಾಯ ಕಳೆದ ಚುನಾವಣೆಯಲ್ಲಿ ವಿಶ್ವನಾಥ್ ಅವರನ್ನು ಬೆಂಬಲಿಸಿತ್ತು. ಈ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಆಯ್ಕೆ ಯಾರು ಎಂಬ ಕುತೂಹಲವೂ ಇದೆ.
ಬಿಎಸ್‌ವೈ ತವರಲ್ಲಿ ಅಭ್ಯರ್ಥಿ ಯಾರು?
ಮಂಡ್ಯ: ಕೆ.ಆರ್.ಪೇಟೆ ಯಡಿಯೂರಪ್ಪನವರ ತವರು ಕ್ಷೇತ್ರವಾಗಿದ್ದು, ಗೆಲುವು ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ. ಆದರೆ, ನೆಲೆಯೇ ಇಲ್ಲದ ಕೆ.ಆರ್.ಪೇಟೆಯೊಳಗೆ ಬಿಜೆಪಿ ಕಮಲ ಅರಳಿಸುವುದು ಸುಲಭವಲ್ಲ. ಕಳೆದ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬೂಕಹಳ್ಳಿ ಬಿ.ಸಿ.ಮಂಜು 10 ಸಾವಿರ ಮತ ಪಡೆದು, ಠೇವಣಿ ಕಳೆದುಕೊಂಡಿದ್ದರು. ಈಗ ಹಿಂದೊಮ್ಮೆ ಕೆ.ಆರ್.ಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಎನ್.ಕೆಂಗೇಗೌಡ ಮಗ ಕೆ.ಶ್ರೀನಿವಾಸ್ ಅಥವಾ ಬಿಎಸ್‌ವೈ ಪುತ್ರ ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಕೆ.ಸಿ.ನಾರಾಯಣಗೌಡರು ಒಂದೂವರೆ ತಿಂಗಳಿಂದ ಕ್ಷೇತ್ರದಲ್ಲಿ ಸಂಚರಿಸುತ್ತಾ ಜನರ ವಿಶ್ವಾಸ ಸಂಪಾದಿಸುವ ಯತ್ನದಲ್ಲಿದ್ದರು. ಆದರೆ, ಅವರ ಸ್ಪರ್ಧೆ ಈಗ ಅನುಮಾನ. ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಇಲ್ಲದಿರುವುದು ದಳಪತಿಗಳ ಚಿಂತೆಗೆ ಕಾರಣವಾಗಿದೆ. ಜೆಡಿಎಸ್‌ನಲ್ಲಿ ಜಿಪಂ ಸದಸ್ಯ ಬಿ.ಎಲ್.ದೇವರಾಜು, ಮುಖಂಡ ಬಸ್ ಕೃಷ್ಣೇಗೌಡ, ಜೆಡಿಎಸ್ ಟಿಕೆಟ್‌ನ ಪ್ರಬಲ ಆಕಾಂಕ್ಷಿಗಳಾಗಿದ್ದರೂ, ಗೆಲ್ಲುವ ಸಾಮರ್ಥ್ಯ ಹೊಂದಿಲ್ಲ. ಹೀಗಾಗಿ, ನಿಖಿಲ್‌ರನ್ನು ಕೊನೆಯ ಆಯ್ಕೆಯಾಗಿ ಉಳಿಸಿಕೊಂಡು ಪರ್ಯಾಯ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸ್ಪರ್ಧೆ ಬಹುತೇಕ ಖಚಿತ.
ಎಂಬಿಟಿ ಪುತ್ರ, ಬೈರತಿ ಸುರೇಶ್ ಪತ್ನಿ ಕಣಕ್ಕೆ?
ಹೊಸಕೋಟೆ: ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ. ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ಅನರ್ಹತೆಯ ವಿಚಾರಣೆ ನಡೆಯಲಿದ್ದು, ಅಂದೇ ತೀರ್ಪು ಹೊರ ಬೀಳುವ ನಿರೀಕ್ಷೆಯಲ್ಲಿದೆ. ಅನರ್ಹತೆ ರದ್ದಾದಲ್ಲಿ ಎಂಟಿಬಿ ನಾಗರಾಜ್ ಅಭ್ಯರ್ಥಿಯಾಗಲಿದ್ದಾರೆ. ಇಲ್ಲದಿದ್ದರೆ ಎಂಟಿಬಿ ನಾಗರಾಜ್ ಪುತ್ರ, ಬಿಬಿಎಂಪಿ ಸದಸ್ಯ ನಿತಿನ್ ಪುರುಷೋತ್ತಮ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇದನ್ನು ಸ್ವತಃ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ. ಆದರೆ ಯಾವ ಪಕ್ಷದಿಂದ ಎಂಬುದು ಇನ್ನೂ ಖಚಿತಗೊಳ್ಳದ ಕಾರಣ, ಎಂಟಿಬಿ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಗೊಂದಲದಲ್ಲಿ ಸಿಲುಕಿದ್ದಾರೆ. ಇನ್ನು, ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಪರಾಭವಗೊಂಡಿದ್ದ ಶರತ್ ಬಚ್ಚೇಗೌಡರನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದಿಂದ ಇದಕ್ಕೆ ಹಿನ್ನಡೆಯಾಗಿದೆ. ಸ್ವತಂತ್ರ ಅಭ್ಯರ್ಥಿಯಾಗಿಯಾದರೂ ಸ್ಪರ್ಧಿಸುವುದಾಗಿ ಹೇಳುತ್ತಿದ್ದ ಶರತ್ ಬಚ್ಚೇಗೌಡ, ಇದೀಗ ಮೌನ ವಹಿಸಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಸ್ತುತ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಪತ್ನಿ, ಪದ್ಮಾವತಿ ಸ್ಪರ್ಧಿಸುವ ನಿರೀಕ್ಷೆ ಹೆಚ್ಚಾಗಿದೆ. ಜೆಡಿಎಸ್‌ನಿಂದ ದೊಡ್ಡಗಟ್ಟಿಗನಬ್ಬೆಯ ವಿ.ಶ್ರೀಧರ್ ಸ್ಪರ್ಧಿಸುವ ಸಾಧ್ಯತೆಗಳಿವೆ.
ಪಾಟೀಲ್ ವರ್ಸಸ್ ಯು.ಬಿ.ಬಣಕಾರ?
ಹಾವೇರಿ: ಸ್ಪರ್ಧೆಗೆ ಅವಕಾಶ ಸಿಕ್ಕರೆ ಬಿ.ಸಿ.ಪಾಟೀಲರೇ ಬಿಜೆಪಿ ಅಭ್ಯರ್ಥಿಯಾಗುತ್ತಾರೆ. ಅವಕಾಶ ಸಿಗದಿದ್ದರೆ ಅವರ ಮಗಳು ಸೃಷ್ಠಿ ಪಾಟೀಲರಿಗೆ ಟಿಕೆಟ್ ಕೊಡಿ ಎಂದು ಕೇಳಬಹುದು. ಒಂದು ವೇಳೆ ಕುಟುಂಬದವರಿಗೆ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿದರೆ, ಮುಂದೆ ಪಾಟೀಲರಿಗೆ ವಿಧಾನ ಪರಿಷತ್ ಸದಸ್ಯತ್ವ ಕೊಡುವ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಬಗ್ಗೆಯೂ ಚರ್ಚೆಯಾಗುತ್ತಿದೆ. ಆಗ ಕ್ಷೇತ್ರದ ಪ್ರಭಾವಿ ಮುಖಂಡ, ಮಾಜಿ ಶಾಸಕ ಯು.ಬಿ. ಬಣಕಾರ ಅವರಿಗೆ ಟಿಕೆಟ್ ಸಿಗಲಿದೆ ಎಂಬ ಲೆಕ್ಕಾಚಾರ ಬಿಜೆಪಿ ವಲಯದಲ್ಲಿ ನಡೆದಿದೆ. ಈವರೆಗೂ ಬಣಕಾರ ಹಾಗೂ ಪಾಟೀಲ ಪ್ರತಿಸ್ಪ ರ್ಧಿಗಳಾಗಿ ಪೈಪೋಟಿಯೊಂದಿಗೆ ರಾಜಕಾರಣ ಮಾಡಿಕೊಂಡು ಬಂದವರು. ಸದ್ಯಕ್ಕೆ ಬಣಕಾರ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಎದುರಾಳಿ ಅಭ್ಯರ್ಥಿ ಯಾರಾಗುತ್ತಾರೆ ಎಂದು ಕಾದು ನೋಡಿ ಕಾಂಗ್ರೆಸ್ ತನ್ನ ದಾಳ ಉರುಳಿಸಲು ತೀರ್ಮಾನಿಸಿದೆ. ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ಅಥವಾ ಅವರ ಮಗ ಹಾಗೂ ಜಿಪಂ ಸದಸ್ಯ ಪ್ರಕಾಶ ಬನ್ನಿಕೋಡಗೆ ಟಿಕೆಟ್ ಕೊಡಬಹುದು. ಜಿಪಂ ಮಾಜಿ ಸದಸ್ಯರಾದ ಬಿ.ಎನ್. ಬಣಕಾರ, ಪಿ.ಡಿ.ಬಸನಗೌಡ್ರ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ತಿಪ್ಪಣ್ಣನವರ, ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಹೆಸರು ಕೇಳಿ ಬರುತ್ತಿವೆ. ಜೆಡಿಎಸ್ ಅಭ್ಯರ್ಥಿಗಳ ಹುಡುಕಾಟ ನಡೆಸಿದೆ.
ಕೋಳಿವಾಡ-ಶಂಕರ್ ಮುಖಾಮುಖಿ?
ಹಾವೇರಿ: ರಾಣಿಬೆನ್ನೂರು ಕ್ಷೇತ್ರದಲ್ಲಿ ಉಪಚುನಾವಣಾ ರಾಜಕೀಯ ಶುರುವಾಗಿದ್ದು, ರಾಜಕೀಯ ಪಕ್ಷಗಳ ಲೆಕ್ಕಾಚಾರ ಚುರುಕಾಗಿದೆ. ಒಂದೊಮ್ಮೆ ಶಂಕರ್ ತಮಗೆ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ತಮ್ಮ ಕುಟುಂಬದವರಿಗೆ ಟಿಕೆಟ್ ಕೊಡುವಂತೆ ಕೇಳಬಹುದು. ಇದಕ್ಕೆ ಬಿಜೆಪಿ ನಿರಾಕರಿಸಿದರೆ, ಟಿಕೆಟ್ ಆಕಾಂಕ್ಷಿ ಪ್ರಮುಖರಾದ ಡಾ|ಕೇಲಗಾರ, ಅರುಣಕುಮಾರ ಪೂಜಾರ, ನ್ಯಾಯವಾದಿ ಶಿವಲಿಂಗಪ್ಪ ಅವರಲ್ಲೊಬ್ಬರಿಗೆ ಟಿಕೆಟ್ ಕೊಡಬಹುದು. ಇಲ್ಲವೇ ಹಿರೇಕೆರೂರು ಕ್ಷೇತ್ರದ ಟಿಕೆಟ್ ಹಂಚಿಕೆ (ಬಿ.ಸಿ.ಪಾಟೀಲರ ಮಗಳಿಗೆ ಟಿಕೆಟ್ ಕೊಟ್ಟರೆ) ನೋಡಿಕೊಂಡು ಯು.ಬಿ.ಬಣಕಾರ ಅವರಿಗೂ ಟಿಕೆಟ್ ಕೊಡಬಹುದು. ಶಂಕರ್‌ಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬಹುದು ಎಂಬ ಲೆಕ್ಕಾಚಾರವೂ ನಡೆದಿದೆ. ಒಂದು ವೇಳೆ, ಶಂಕರ್‌ಗೆ ಸ್ಪ ರ್ಧಿಸುವ ಅವಕಾಶ ಸಿಕ್ಕರೆ ಮೂರನೇ ಬಾರಿ ಕ್ಷೇತ್ರದಲ್ಲಿ ಶಂಕರ್ ಹಾಗೂ ಕಾಂಗ್ರೆಸ್‌ನ ಕೆ.ಬಿ.ಕೋಳಿವಾಡ ಮುಖಾಮುಖಿ ಆಗುವ ಸಾಧ್ಯತೆ ಹೆಚ್ಚಿದೆ. ಕೇವಲ ಒಂದು ವರ್ಷದ ಹಿಂದಷ್ಟೇ ಸೋತ ಕೋಳಿವಾಡ ಈ ಉಪಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡು ತಾವೇ ಸ್ಪ ರ್ಧಿಸಲು ಇಚ್ಛಿಸಿದ್ದು, ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಹ ಸಮ್ಮತಿಸುವ ಸಾಧ್ಯತೆ ಇದೆ. ಇನ್ನು, ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹುಡುಕಾಟದಲ್ಲಿದೆ.
ಶಿವಾಜಿನಗರದಲ್ಲಿ ಗೆಲುವಿನ ಹಾರ ಯಾರಿಗೆ?
ಬೆಂಗಳೂರು: ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ರೋಷನ್‌ಬೇಗ್ ಗೆಲುವು ಸಾಧಿಸಿದ್ದರು. ಇದೀಗ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗದಿದ್ದರೆ ಅವರ ಪುತ್ರ ರೆಹಾನ್ ಬೇಗ್ ಬಿಜೆಪಿಯಿಂದ ಸ್ಪರ್ಧೆ ಮಾಡ್ತಾರೆ ಎಂಬ ಮಾತುಗಳಿವೆ. ಕಾಂಗ್ರೆಸ್‌ನಿಂದ ಎಸ್.ಎ.ಹುಸೇನ್, ವಿಧಾನ ಪರಿಷತ್ ಸದಸ್ಯ ಅರ್ಷದ್ ರಿಜ್ವಾನ್, ರೆಹಮಾನ್ ಖಾನ್ ಪುತ್ರ ಮನ್ಸೂರ್ ಅಲಿ ಖಾನ್, ದಿನೇಶ್ ಗುಂಡೂ ರಾವ್ ಪತ್ನಿ ಟಬು, ಬಿ.ಆರ್. ನಾಯ್ಡು ಆಕಾಂಕ್ಷಿಗಳಾಗಿದ್ದಾರೆ. ಇಲ್ಲಿ ಜೆಡಿಎಸ್‌ಗೆ ಅಭ್ಯರ್ಥಿ ಕೊರತೆ ಇದೆ. ಆದರೂ, ಒಂದು ತಿಂಗಳಿನಿಂದ ಪಕ್ಷದ ವಿಧಾನಸಭೆ ಕ್ಷೇತ್ರವಾರು ನಾಯಕರ ಸಭೆ ನಡೆಸಿ, ಪಕ್ಷ ಸಂಘಟನೆ ಪ್ರಯತ್ನದಲ್ಲಿದ್ದ ಜೆಡಿಎಸ್, ಉಪ ಚುನಾವಣೆ ಎದುರಿಸಲು ಮಾನಸಿಕವಾಗಿ ಸಜ್ಜಾಗಿದೆ. ಸರ್ಕಾರ ಪತನವಾದಾಗಿನಿಂದಲೂ ಉಪ ಚುನಾವಣೆಗೆ ಒಂದಿಲ್ಲೊಂದು ರೀತಿಯಲ್ಲಿ ಸಿದ್ಧತೆ ಆರಂಭಿಸಿದ್ದ ಕಾಂಗ್ರೆಸ್‌ಗೆ, ಈ ಉಪ ಚುನಾವಣೆ ನಿರೀಕ್ಷಿತವಾಗಿತ್ತು. ಪಕ್ಷಕ್ಕೆ ಕೈ ತಪ್ಪಿರುವ ಕ್ಷೇತ್ರವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿದೆ. ಬಿಜೆಪಿಗೆ ಅಭ್ಯರ್ಥಿ ಆಯ್ಕೆಯೇ ಕಗ್ಗಂಟಾಗಿದೆ. ಅನರ್ಹತೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಇನ್ನೂ ಪ್ರಕರಣ ಇತ್ಯರ್ಥಗೊಳ್ಳದ ಕಾರಣ ಅಭ್ಯರ್ಥಿ ಯಾರು ಎಂಬುದು ಬಿಜೆಪಿಗೆ ತಕ್ಷಣಕ್ಕೆ ಸ್ಪಷ್ಟತೆ ಸಿಗುತ್ತಿಲ್ಲ.
“ವಿಜಯನಗರ’ದ ವಿಜಯ ಯಾರಿಗೆ?
ಬಳ್ಳಾರಿ: ಕಾಂಗ್ರೆಸ್‌ನಿಂದ ಗೆದ್ದು, ಅನರ್ಹಗೊಂಡ ಬಳಿಕ ಆನಂದ್‌ಸಿಂಗ್ ಬಿಜೆಪಿಯತ್ತ ಮುಖ ಮಾಡಿದ್ದು, ಸುಪ್ರೀಂಕೋರ್ಟ್‌ನಲ್ಲಿ ತೀರ್ಪು ಪರವಾಗಿ ಬಂದಲ್ಲಿ ಸಿಂಗ್ ಬಿಜೆಪಿಯಿಂದಲೇ ಸ್ಪಧಿಸುವುದು ಖಚಿತ ಎನ್ನಲಾಗುತ್ತಿದೆ. ಒಂದು ವೇಳೆ ತೀರ್ಪು ಬಾರದಿದ್ದಲ್ಲಿ ಅವರ ಪುತ್ರ ಸಿದ್ಧಾರ್ಥ್ ಸಿಂಗ್, ಪತ್ನಿ ಲಕ್ಷ್ಮೀ ಸಿಂಗ್, ಅಳಿಯ ಸಂದೀಪ್ ಸಿಂಗ್ ಹೆಸರು ಮುಂಚೂಣಿಯಲ್ಲಿವೆ. ಆದರೆ 23 ವರ್ಷದ ಸಿದ್ಧಾರ್ಥ್ ಸಿಂಗ್‌ಗೆ ಸ್ಪಧಿಸಲು ಅವಕಾಶವಿಲ್ಲದ ಕಾರಣ ಪತ್ನಿ ಲಕ್ಷ್ಮೀ ಸಿಂಗ್ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಇನ್ನು, ಮಾಜಿ ಸಚಿವ ಎಸ್.ಸಂತೋಷ್ ಲಾಡ್ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಈಗಾಗಲೇ ಕೇಳಿ ಬಂದಿವೆ. ಇವರೊಂದಿಗೆ ಸ್ಥಳೀಯವಾಗಿ ತಮ್ಮ, ತಮ್ಮ ಸಮುದಾಯಗಳಲ್ಲಿ ಪ್ರಭಾವಿ ಮುಖಂಡರಾಗಿರುವ ಗುಜ್ಜಲ ನಾಗರಾಜ್, ಎಚ್.ಎನ್.ಎಫ್. ಇಮಾಮ್ ನಿಯಾಜಿ, ಆರ್. ಕೊಟ್ರೇಶ್, ನಿಂಬಗಲ್ ರಾಮಕೃಷ್ಣ ಸೇರಿ ಹಲವರು ಆಕಾಂಕ್ಷಿಗಳಾಗಿದ್ದಾರೆ. ಮಾಜಿ ಶಾಸಕ ಎಚ್.ಆರ್. ಗವಿಯಪ್ಪ, ಬಿಜೆಪಿ ಟಿಕೆಟ್ ದೊರೆಯದಿದ್ದಲ್ಲಿ ಪುನ: ಮಾತೃಪಕ್ಷ ಕಾಂಗ್ರೆಸ್ ಕದತಟ್ಟಿದರೂ ಆಶ್ಚರ್ಯವಿಲ್ಲ. ಜೆಡಿಎಸ್‌ದಿಂದ ಆನಂದ್ ಸಿಂಗ್ ಕುಟುಂಬದ ದೀಪಕ್ ಸಿಂಗ್ ಈ ಬಾರಿಯೂ ಸ್ಪಧಿಸುವ ಸಾಧ್ಯತೆಯಿದೆ.
ಯಶವಂತಪುರದಲ್ಲಿ ಯಾರಿಗೆ ಯಶಸ್ಸು
ಬೆಂಗಳೂರು: ಕಾಂಗ್ರೆಸ್‌ನಲ್ಲಿ ಯಶವಂತಪುರ ಕ್ಷೇತ್ರದಿಂದ ಎಂ.ರಾಜ್‌ಕುಮಾರ್, ಮಾಗಡಿ ಬಾಲಕೃಷ್ಣ ಸೇರಿ ಹಲವಾರು ಆಕಾಂಕ್ಷಿಗಳಿದ್ದರೆ, ಜೆಡಿಎಸ್‌ನಲ್ಲಿ ಜವರಾಯಿಗೌಡ ಪ್ರಬಲ ಆಕಾಂಕ್ಷಿ. ಇಲ್ಲಿ ಕಾಂಗ್ರೆಸ್‌ನಿಂದ ಎಸ್.ಟಿ.ಸೋಮಶೇಖರ್ ಗೆಲುವು ಸಾಧಿಸಿದ್ದರು. ಇದೀಗ ಅವರು ನ್ಯಾಯಾಲಯದ ತೀರ್ಪಿನತ್ತ ಚಿತ್ತ ಹರಿಸಿದ್ದು, ಒಂದೊಮ್ಮೆ ಅವಕಾಶ ಸಿಗದಿದ್ದರೆ ಕುಟುಂಬ ಸದಸ್ಯರೊಬ್ಬರನ್ನು ಕಣಕ್ಕಿಳಿಸುತ್ತಾರೆ ಎನ್ನಲಾಗಿದೆ. ಒಂದು ತಿಂಗಳಿನಿಂದ ಪಕ್ಷದ ವಿಧಾನಸಭೆ ಕ್ಷೇತ್ರವಾರು ನಾಯಕರ ಸಭೆ ನಡೆಸಿ, ಪಕ್ಷ ಸಂಘಟನೆ ಪ್ರಯತ್ನದಲ್ಲಿದ್ದ ಜೆಡಿಎಸ್, ಉಪ ಚುನಾವಣೆ ಎದುರಿಸಲು ಮಾನಸಿಕವಾಗಿ ಸಜ್ಜಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಂದು ಸುತ್ತಿನ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನೂ ಪೂರ್ಣಗೊಳಿಸಿದ್ದಾರೆ. ಸರ್ಕಾರ ಪತನವಾದಾಗಿನಿಂದಲೂ ಉಪ ಚುನಾವಣೆಗೆ ಒಂದಿಲ್ಲೊಂದು ರೀತಿಯಲ್ಲಿ ಸಿದ್ಧತೆ ಆರಂಭಿಸಿದ್ದ ಕಾಂಗ್ರೆಸ್‌ಗೆ, ಈ ಉಪ ಚುನಾವಣೆ ನಿರೀಕ್ಷಿತವಾಗಿತ್ತು. ಪಕ್ಷಕ್ಕೆ ಕೈ ತಪ್ಪಿರುವ ಕ್ಷೇತ್ರವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿದೆ. ಹದಿನೈದು ವಿಧಾನಸಭೆ ಕ್ಷೇತ್ರಗಳ ಚುನಾವಣೆ ಘೋಷಣೆಯಾಗಿರುವುದರಿಂದ ಸಂಘಟನೆಯಲ್ಲಿ ಮುಂದಿರುವ ಬಿಜೆಪಿಗೆ ಅಭ್ಯರ್ಥಿ ಆಯ್ಕೆಯೇ ಕಗ್ಗಂಟಾಗಿದೆ.
ಮತದಾರರ ಕೇರ್ ಯಾರ ಮೇಲೆ?
ಬೆಂಗಳೂರು: ಕೆ.ಆರ್.ಪುರದಲ್ಲಿ ಅನರ್ಹಗೊಂಡಿರುವ ಬೈರತಿ ಬಸವರಾಜ್ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರು. ಇದೀಗ ಕಾಂಗ್ರೆಸ್‌ನಿಂದ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ, ಕೇಶವ್ ರಾಜಣ್ಣ, ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ, ಸಿ.ಎಂ.ಧನಂಜಯ ಹೆಸರು ಕೇಳಿ ಬರುತ್ತಿವೆ. ಕಳೆದ ಚುನಾವಣೆಯಲ್ಲಿ ಇಲ್ಲಿ ಜೆಡಿಎಸ್‌ನಿಂದ ಡಿ.ಎ.ಗೋಪಾಲ್ ಸ್ಪರ್ಧಿಸಿ ಸೋತಿದ್ದರು. ಬಿಜೆಪಿಯಿಂದ ನಂದೀಶ್ ರೆಡ್ಡಿ ಸ್ಪರ್ಧಿಸಿದ್ದರು. ಇದೀಗ ನಂದೀಶ್ ರೆಡ್ಡಿ ಸೆಳೆಯುವ ಯತ್ನ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ನಡೆದಿದೆ. ಒಂದು ತಿಂಗಳಿನಿಂದ ಪಕ್ಷದ ವಿಧಾನಸಭೆ ಕ್ಷೇತ್ರವಾರು ನಾಯಕರ ಸಭೆ ನಡೆಸಿ, ಪಕ್ಷ ಸಂಘಟನೆ ಪ್ರಯತ್ನದಲ್ಲಿದ್ದ ಜೆಡಿಎಸ್, ಉಪ ಚುನಾವಣೆ ಎದುರಿಸಲು ಮಾನಸಿಕವಾಗಿ ಸಜ್ಜಾಗಿದೆ. ಸರ್ಕಾರ ಪತನವಾದಾಗಿನಿಂದಲೂ ಉಪ ಚುನಾವಣೆಗೆ ಒಂದಿಲ್ಲೊಂದು ರೀತಿಯಲ್ಲಿ ಸಿದ್ಧತೆ ಆರಂಭಿಸಿದ್ದ ಕಾಂಗ್ರೆಸ್‌ಗೆ, ಈ ಉಪ ಚುನಾವಣೆ ನಿರೀಕ್ಷಿತವಾಗಿತ್ತು. ಪಕ್ಷಕ್ಕೆ ಕೈ ತಪ್ಪಿರುವ ಕ್ಷೇತ್ರವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿದೆ. ಅನರ್ಹತೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಇನ್ನೂ ಪ್ರಕರಣ ಇತ್ಯರ್ಥಗೊಳ್ಳದ ಕಾರಣ ಅಭ್ಯರ್ಥಿ ಯಾರು ಎಂಬುದು ಬಿಜೆಪಿಗೆ ತಕ್ಷಣಕ್ಕೆ ಸ್ಪಷ್ಟತೆ ಸಿಗುತ್ತಿಲ್ಲ.
ಅತೃಪ್ತರ ಸೆಳೆಯಲು ಕಾರ್ಯತಂತ್ರ
ಬೆಂಗಳೂರು: ಮಹಾಲಕ್ಷ್ಮೀ ಲೇ ಔಟ್ ಕ್ಷೇತ್ರದಲ್ಲಿ ಈ ಹಿಂದೆ ಜೆಡಿಎಸ್‌ನಿಂದ ಗೋಪಾಲಯ್ಯ ಗೆಲುವು ಸಾಧಿಸಿದ್ದರು. ಬಿಜೆಪಿಯಿಂದ ನೆ.ಲ.ನರೇಂದ್ರಬಾಬು, ಕಾಂಗ್ರೆಸ್‌ನಿಂದ ಮಂಜುನಾಥ್ ಗೌಡ ಸ್ಪರ್ಧಿಸಿ ಸೋತಿದ್ದರು. ಈಗ ಕಾಂಗ್ರೆಸ್‌ನಿಂದ ಪಾಲಿಕೆ ಸದಸ್ಯ ಶಿವರಾಜ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಿಂದ ನರೇಂದ್ರಬಾಬು, ಎನ್.ನಾಗರಾಜ್, ಹರೀಶ್ ಆಕಾಂಕ್ಷಿಗಳು. ಆದರೆ, ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಂಡರೆ ಗೋಪಾಲಯ್ಯ ಬಿಜೆಪಿಯಿಂದ ಸ್ಪರ್ಧಿಸಬಹುದು. ಇಲ್ಲವೇ ಅವರ ಪತ್ನಿ ಹೇಮಲತಾ ಬಿಜೆಪಿಯಿಂದ ಸ್ಪರ್ಧೆ ಮಾಡಬಹುದೆಂದು ಹೇಳಲಾಗುತ್ತಿದೆ. ಜೆಡಿಎಸ್‌ನಲ್ಲಿ ಭದ್ರೇಗೌಡ ಸೇರಿ ಹಲವರು ಆಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಜೆಪಿಯ ಅತೃಪ್ತರ ಸೆಳೆಯಲು ಕಾರ್ಯತಂತ್ರ ರೂಪಿಸಿದೆ. ಸರ್ಕಾರ ಪತನವಾದಾಗಿನಿಂದಲೂ ಉಪ ಚುನಾವಣೆಗೆ ಒಂದಿ ಲ್ಲೊಂದು ರೀತಿಯಲ್ಲಿ ಸಿದ್ಧತೆ ಆರಂಭಿಸಿದ್ದ ಕಾಂಗ್ರೆಸ್‌ಗೆ, ಈ ಉಪ ಚುನಾವಣೆ ನಿರೀಕ್ಷಿತವಾಗಿತ್ತು. ಪಕ್ಷಕ್ಕೆ ಕೈ ತಪ್ಪಿರುವ ಕ್ಷೇತ್ರವನ್ನು ಉಳಿಸಿಕೊಳ್ಳುವ ಅನಿವಾರ್ಯ ತೆಯಿದೆ. ಸಂಘಟನೆಯಲ್ಲಿ ಮುಂದಿರುವ ಬಿಜೆಪಿಗೆ ಅಭ್ಯರ್ಥಿ ಆಯ್ಕೆಯೇ ಕಗ್ಗಂಟಾಗಿದೆ. ಅನರ್ಹತೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಇನ್ನೂ ಪ್ರಕರಣ ಇತ್ಯರ್ಥಗೊಳ್ಳದ ಕಾರಣ ಅಭ್ಯರ್ಥಿ ಯಾರು ಎಂಬ ಬಗ್ಗೆ ತಕ್ಷಣಕ್ಕೆ ಸ್ಪಷ್ಟತೆ ಸಿಗುತ್ತಿಲ್ಲ.
ಬಿಜೆಪಿ ಟಿಕೆಟ್ ಹೆಬ್ಬಾರರಿಗೋ, ಪಾಟೀಲರಿಗೋ?
ಕಾರವಾರ: ಸದ್ಯಕ್ಕಂತೂ ಶಿವರಾಮ ಹೆಬ್ಬಾರ್ ಅವರೇ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎನ್ನಲಾಗುತ್ತಿದ್ದರೂ, ಇದು ಸುಪ್ರೀಂಕೋರ್ಟ್ ತೀರ್ಪನ್ನು ಅವಲಂಬಿಸಿದೆ. ಒಂದು ವೇಳೆ ಹೆಬ್ಬಾರ್‌ಗೆ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ಹೆಬ್ಬಾರ್ ಅವರ ಪತ್ನಿ ಅಥವಾ ಪುತ್ರ ಸ್ಪರ್ಧಿಸುತ್ತಾರಾ ಎನ್ನುವುದು ಸ್ಪಷ್ಟವಾಗಿಲ್ಲ. ಮಾಜಿ ಶಾಸಕ ವಿ.ಎಸ್.ಪಾಟೀಲರಿಗೆ ಟಿಕೆಟ್ ಸಿಗಬಹುದೆಂಬ ಮಾತುಗಳೂ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಕ್ಷೇತ್ರದ ಮಟ್ಟಿಗೆ ಬಿಜೆಪಿ ಸಂಘಟನೆಯಲ್ಲಿ ಮುಂದಿದೆ. ಶಾಸಕರೇ ಬಿಜೆಪಿಯತ್ತ ಮುಖ ಮಾಡಿದ ಕಾರಣ ಇಡೀ ಸಂಘಟನೆ ಕಮಲದ ಕಡೆ ವಾಲಿದೆ. ಕಾಂಗ್ರೆಸ್‌ಗೆ ಇದು ಪ್ರತಿಷ್ಠಿತ ಕ್ಷೇತ್ರ. ಹಾಲಿ ಶಾಸಕರು “ಕೈ’ ಕೊಟ್ಟ ಹಿನ್ನೆಲೆಯಲ್ಲಿ ಈ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿದೆ. ಗೆಲ್ಲಿಸಿ ಕೊಡುವ ಜವಾಬ್ದಾರಿಯನ್ನು ಮಾಜಿ ಸಚಿವ ದೇಶಪಾಂಡೆ ಅವರ ಹೆಗಲಿಗೆ ಹಾಕಲಿದೆ. ಹಾಗಾಗಿ, ಪಕ್ಷ ಟಿಕೆಟ್ ನೀಡುವಾಗ ಮುಂಡಗೋಡದಿಂದ ಆಯ್ಕೆಯಾಗಿ ಪಕ್ಷದಿಂದ ಕೆಲಸ ಮಾಡಿದ ಜಿ.ಪಂ. ಸದಸ್ಯರನ್ನು ಹುಡುಕಲಿದೆ. ಇಲ್ಲವೇ ಭೀಮಣ್ಣ ನಾಯ್ಕ ಅಥವಾ ಸಿ.ಎಫ್.ನಾಯ್ಕ ಅವರಲ್ಲೊಬ್ಬರನ್ನು ಕಣಕ್ಕೆ ಇಳಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ. ಜೆಡಿಎಸ್ ಈ ಕ್ಷೇತ್ರದಲ್ಲಿ ಪ್ರಬಲವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
ಹೈಕಮಾಂಡ್ ಸೂಚನೆಗೆ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ: ಜಿ.ಪರಮೇಶ್ವರ್
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.