ISIS: ಖಾನಾಪುರದ ಜಾಂಬೋಟಿ ಕಾಡಲ್ಲಿ ಪ್ರಾಯೋಗಿಕ ಸ್ಫೋಟಕ್ಕೆ ಸಂಚು
ಎನ್‌ಐಎ ತನಿಖೆಯಲ್ಲಿ ಬಯಲು ಸ್ಥಳ ಪರಿಶೀಲಿಸಿದ್ದ ಮಿನಾಜ್ ತಂಡ
Team Udayavani, Dec 26, 2023, 6:32 AM IST
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸಹಿತ ರಾಜ್ಯದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪಡಿ ಬೆಂಗಳೂರು ಹಾಗೂ ಗಣಿನಾಡು ಬಳ್ಳಾರಿಯಲ್ಲಿ ಬಂಧನಕ್ಕೊಳಗಾದ ನಿಷೇಧಿತ ಐಸಿಸ್ ಸಂಘಟನೆಯ ಶಂಕಿತ ಉಗ್ರರು ಗಡಿ ಜಿಲ್ಲೆ ಬೆಳಗಾವಿಯ ಖಾನಾಪುರದ ಜಾಂಬೋಟಿ ಕಾಡನ್ನು “ಪ್ರಯೋಗ ತಾಣ”ವನ್ನಾಗಿಸಿಕೊಳ್ಳಲು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ವಿಚಾರ ಬಹಿರಂಗವಾಗಿದೆ.
ಈ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್ ಹಂತಕರು ಕೃತ್ಯದ ತರಬೇತಿಗೆ ಆಯ್ದು ಕೊಂಡಿದ್ದ ಇದೇ ಕಾಡಿನಲ್ಲಿ ಶಂಕಿತ ಉಗ್ರರು ಸುಧಾರಿತ ಸ್ಫೋಟಕ ಸಾಧನ (ಐಇಡಿ)ವನ್ನು ಪ್ರಾಯೋಗಿಕವಾಗಿ ಸ್ಫೋಟಿಸಲು ಯೋಜನೆ ರೂಪಿಸಿದ್ದುದು ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮತ್ತು ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಡಿ.18ರಂದು ಬೆಂಗಳೂರಿನಲ್ಲಿ ಮೊಹಮ್ಮದ್ ಮುನಿರುದ್ದೀನ್, ಸಯ್ಯದ್ ಸಮೀ ವುಲ್ಲಾ ಅಲಿಯಾಸ್ ಸಮಿ ಮತ್ತು ಎಂ.ಡಿ.ಮುಜಾಮ್ಮಿಲ್ ಹಾಗೂ ಬಳ್ಳಾ ರಿಯ ಕೌಲ್‌ಬಜಾರ್‌ನ ಮಿನಾಜ್ ಅಲಿಯಾಸ್ ಎಂ.ಡಿ.ಸುಲೈಮಾನ್ ಮತ್ತು ಸಯ್ಯದ್ ಸಮೀರ್ ಅವರನ್ನು ಬಂಧಿಸಿದ್ದರು. ಆಗ ಆರೋಪಿಗಳಲ್ಲಿ ಭಾರೀ ಪ್ರಮಾಣದ ಸ್ಫೋಟದ ಕಚ್ಚಾ ವಸ್ತು ಪತ್ತೆಯಾಗಿತ್ತು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಜಾಂಬೋಟಿ ಕಾಡಿನ ರಹಸ್ಯ ಬೆಳಕಿಗೆ ಬಂದಿದೆ ಎಂದು ತನಿಖಾ ಸಂಸ್ಥೆ ಮೂಲಗಳು ತಿಳಿಸಿವೆ.
ಜಾಂಬೋಟಿ ಕಾಡಿನಲ್ಲಿ ಪ್ರಾಯೋಗಿಕ ಸ್ಫೋಟ
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿರುವ ಜಾಂಬೋಟಿ ಕಾಡು ದಟ್ಟವಾಗಿದ್ದು, ಜನವಸತಿ ಪ್ರದೇಶಗಳು ಇಲ್ಲಿಂದ ಹತ್ತಾರು ಕಿ.ಮೀ. ದೂರದಲ್ಲಿದೆ. ಆದ್ದರಿಂದ ಕಾಡಿನ ಮಧ್ಯದಲ್ಲಿ ಐಇಡಿ ಸ್ಫೋಟಿಸಿ ದರೆ ಅದರ ಶಬ್ದ ಹೊರಗೆ ಕೇಳಿಸುವ ಸಾಧ್ಯತೆ ತೀರಾ ಕಡಿಮೆ. ಜತೆಗೆ ಮಹಾ ದಾಯಿ ನದಿಯೂ ಈ ದಟ್ಟವಾದ ಅರಣ್ಯ ಮಾರ್ಗದಲ್ಲೇ ಹರಿಯುತ್ತದೆ. ಮತ್ತೂಂದೆಡೆ ನದಿ ತೀರದಲ್ಲಿ ಐಇಡಿ ಸ್ಫೋಟಿಸಿದರೆ ಯಾವುದೇ ಹಾನಿ ಉಂಟಾಗುವುದಿಲ್ಲ. ಹೀಗಾಗಿ ಇದೇ ಕಾಡನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ.
ಈ ಹಿಂದೆ ಐಸಿಸ್ ಸಂಘಟನೆಯ ಮೊಹಮ್ಮದ್ ಶಾರೀಕ್(ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ) ಮತ್ತು ಮಾಜ್ ಮುನೀರ್ ಹಾಗೂ ಇವರ ಸಹಚರರು ಕೂಡ ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಐಇಡಿ ತಯಾರಿಸಿ, ಪ್ರಾಯೋಗಿಕ ಸ್ಫೋಟ ನಡೆಸಿದ್ದರು. ಅದೇ ಮಾದರಿಯಲ್ಲೇ ಜಾಂಬೋಟಿ ಕಾಡಿನ ಮಹಾದಾಯಿ ನದಿ ತೀರದಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಲು ಮಿನಾಜ್ ಮತ್ತು ತಂಡ ಯೋಜನೆ ರೂಪಿಸಿತ್ತು. ಅದಕ್ಕಾಗಿಯೇ ಸ್ಫೋಟದ ಕಚ್ಚಾ ವಸ್ತುಗಳನ್ನು ಆನ್‌ಲೈನ್ ಮತ್ತು ಕೆಲವು ಲ್ಯಾಬ್‌ಗಳಿಂದ ಖರೀದಿಸಿದ್ದರು ಎನ್ನಲಾಗಿದೆ.
ಗೌರಿ ಹಂತಕರು ಇದೇ ಕಾಡಿನಲ್ಲಿ ತರಬೇತಿ ಪಡೆದಿದ್ದರು
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾರಾಷ್ಟ್ರದ ಅಮೋಲ್ ಕಾಳೆ ಹಾಗೂ ಆತನ ಸಹಚರರು ಖಾನಾಪುರದ ಜಾಂಬೋಟಿ ಕಾಡಿನಲ್ಲೇ ಬಂದೂಕು ತರಬೇತಿ ಪಡೆದುಕೊಂಡಿದ್ದರು. ಈ ಮಾಹಿತಿಯನ್ನು ತಿಳಿದುಕೊಂಡಿದ್ದ ಕೌಲ್‌ಬಜಾರ್‌ನ ಮಿನಾಜ್ ತನ್ನ ಸಹಚರರ ಜತೆ ಒಮ್ಮೆ ಜಾಂಬೋಟಿ ಕಾಡಿನಲ್ಲಿ ಗೌರಿ ಲಂಕೇಶ್ ಹಂತಕರು ತರಬೇತಿ ಪಡೆದಿದ್ದ ಸ್ಥಳಕ್ಕೂ ಭೇಟಿ ನೀಡಿದ್ದ. ಆದರೆ ಅದೇ ಸ್ಥಳದಲ್ಲಿ ಪ್ರಾಯೋಗಿಕ ಸ್ಫೋಟ ನಡೆಸುವುದಕ್ಕಿಂತ ನದಿ ಸಮೀಪದಲ್ಲಿ ಸ್ಫೋಟಿಸಿದರೆ ಹೆಚ್ಚು ಅನುಕೂಲವಾಗಲಿದೆ ಎಂಬುದು ಶಂಕಿತರ ಯೋಜನೆಯಾಗಿತ್ತು ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಐಇಡಿ ತಯಾರು
ಐವರು ಶಂಕಿತರ ಪೈಕಿ ಬೆಂಗಳೂರಿನಲ್ಲಿ ಬಂಧನಕ್ಕೊಳಗಾದ ಮೂವರಿಗೆ ಐಇಡಿ ತಯಾರಿಸಲು ಮಿನಾಜ್ ಸೂಚಿಸಿದ್ದ. ಅವರಿಗೆ ಮಹಾರಾಷ್ಟ್ರ, ದಿಲ್ಲಿ, ಝಾರ್ಖಂಡ್‌ನಲ್ಲಿ ಬಂಧನಕ್ಕೊಳಗಾದ ಮೂವರು ಶಂಕಿತರು ಸಲಹೆ, ಸೂಚನೆ ನೀಡಬೇಕು ಎಂದು ನಿರ್ದೇಶಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಐಇಡಿ ತಯಾರಿಸಿ, ಬಳಿಕ ಖಾನಾಪುರಕ್ಕೆ ಕೊಂಡೊಯ್ಯಲು ಯೋಜಿಸಿದ್ದರು. ಇದರೊಂದಿಗೆ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಮಾದರಿ, ಐಇಡಿ ಕೊಂಡೊಯ್ಯುವಾಗ ಸ್ಫೋಟಗೊಂಡರೆ ಅಪಾಯ ಸಾಧ್ಯತೆ ಅರಿತು, ಖಾನಾಪುರಕ್ಕೆ ಅಲ್ಪ ಪ್ರಮಾಣದಲ್ಲಿ ಸ್ಫೋಟದ ಕಚ್ಚಾ ವಸ್ತುಗಳನ್ನು ಕೊಂಡೊಯ್ದು ಅಲ್ಲಿಯೇ ಐಇಡಿ ತಯಾರಿಸಲು ಸಿದ್ಧತೆ ನಡೆಸಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.
ಮೋಹನ್ ಭದ್ರಾವತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.