![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Feb 11, 2020, 3:07 AM IST
ಕಲಬುರಗಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬರೋಬ್ಬರಿ 30 ವರ್ಷ ಸೇವೆ ಸಲ್ಲಿಸಿದ ಅಧಿಕಾರಿಯೊಬ್ಬರು ಬಡ್ತಿಗಾಗಿ ನಡೆಸಿದ ಹೋರಾಟಕ್ಕೆ ನಿವೃತ್ತಿ ಹೊಂದಿದ ನಂತರ ನ್ಯಾಯ ದೊರಕಿದೆ!
1990ರ ಪಿಎಸ್‌ಐ ಬ್ಯಾಚ್‌ನ ನಿಷ್ಠ ಪೊಲೀಸ್ ಅಧಿಕಾರಿ ಎಂದೇ ಖ್ಯಾತಿಯಾದ ರಮೇಶ ಮೇಟಿ ಅವರೇ ನಿವೃತ್ತರಾದ ನಂತರ ಡಿವೈಎಸ್‌ಪಿ ಆಗಿ ಬಡ್ತಿ ಪಡೆದವರು. 2013ರಲ್ಲೇ ಅವರಿಗೆ ಇನ್ಸ್‌ಪೆಕ್ಟರ್ ಹುದ್ದೆಯಿಂದ ಡಿವೈಎಸ್‌ಪಿ ಹುದ್ದೆಗೆ ಬಡ್ತಿ ಸಿಗಬೇಕಿತ್ತು. ಆದರೆ, ಯಾವುದೋ ಕಾರಣಕ್ಕೆ ಅವರ ವೇತನದಲ್ಲಿ ಏರಿಕೆ ಕಂಡಿರಲಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಅವರ ಬಡ್ತಿ ತಡೆ ಹಿಡಿಯಲಾಗಿತ್ತು.
ನ್ಯಾಯಯುತವಾದ ಬಡ್ತಿ ಪಡೆಯುವ ಇಚ್ಛೆ ಹೊಂದಿದ್ದ ರಮೇಶ ಮೇಟಿ, 2013ರಿಂದ ಸತತ ಏಳು ವರ್ಷ ಇಲಾಖೆ ವ್ಯಾಪ್ತಿಯಲ್ಲಿ ಸಾಕಷ್ಟು ಪಯತ್ನ ಪಟ್ಟಿದ್ದರು. ಕೊನೆಗೆ ತಮ್ಮ ನಿವೃತ್ತಿಗೆ 20 ದಿನಗಳು ಬಾಕಿರುವಾಗ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಕಲಬುರಗಿ ಪೀಠದ ಮೆಟ್ಟಿಲೇರಿದ್ದರು. ಡಿ.31ರಂದು ಕಲಬುರಗಿ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ರೋಜಾ ಠಾಣೆಯ ಇನ್ಸ್‌ಪೆಕ್ಟರ್ ಆಗಿಯೇ ಮೇಟಿ ನಿವೃತ್ತಿ ಹೊಂದಿದ್ದರು.
ತ್ವರಿತ ನ್ಯಾಯದಾನ: ಏಳು ವರ್ಷ ಬಡ್ತಿಗಾಗಿ ಕಾಯುತ್ತಿದ್ದ ರಮೇಶ ಮೇಟಿ, ತಮ್ಮ ಬಡ್ತಿ ವಿಷಯದಲ್ಲಿ ಆದ ಲೋಪದೋಷಗಳನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅದು ಪ್ರಯೋಜನವಾಗದ ಹಿನ್ನೆಲೆಯಲ್ಲಿ ಡಿ.11ರಂದು ಕೆಎಟಿ ಕಲಬುರಗಿ ಪೀಠದಲ್ಲಿ ತಮ್ಮ ದಾವೆ ಹೂಡಿದ್ದರು.
ಸೇವೆಯಲ್ಲಿ ತಮಗಿಂತ ಕಿರಿಯರಿಗೆ ಡಿವೈಎಸ್‌ಪಿ ಹುದ್ದೆ ಬಡ್ತಿ ನೀಡಲಾಗಿದೆ. 1985ರ ಆಡಳಿತಾತ್ಮಕ ನ್ಯಾಯ ಮಂಡಳಿ ಕಾಯ್ದೆ-19ರ ಪ್ರಕಾರ 2013ರ ಏಪ್ರಿಲ್‌ನಿಂದ ತಮಗೂ ಡಿವೈಎಸ್‌ಪಿ ಹುದ್ದೆಗೆ ಬಡ್ತಿ ನೀಡಬೇಕೆಂದು ನ್ಯಾಯಾಧಿಕರಣದ ಮೊರೆ ಹೋಗಿದ್ದರು. ಈ ಪ್ರಕರಣದಲ್ಲಿ ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಈಶಾನ್ಯ ವಲಯ ಐಜಿಪಿ ಹಾಗೂ ಕಲಬುರಗಿ ನಗರ ಪೊಲೀಸ್ ಆಯುಕ್ತರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.
ಕೆಎಟಿ ಪೀಠದ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ ಅರ್ಜಿ ವಿಚಾರಣೆ ನಡೆಸಿ, ಕೇವಲ 38 ದಿನದಲ್ಲಿ ಪ್ರಕರಣ ಇತ್ಯರ್ಥ ಪಡಿಸಿದ್ದಾರೆ. ಜ.21ರಂದು ರಮೇಶ ಮೇಟಿ ಪರವಾಗಿ ನ್ಯಾಯಮೂರ್ತಿಗಳು ತೀರ್ಪು ನೀಡಿದ್ದಾರೆ. ರಮೇಶ ಮೇಟಿ ಅವರಿಗೆ 2016, ಸೆ.9ರಿಂದ ಡಿವೈಎಸ್‌ಪಿ ಶ್ರೇಣಿಯ ವೇತನ ನಿಗದಿಪಡಿಸಿದ ಬಡ್ತಿ ಕೊಡಬೇಕು. ಜತೆಗೆ ಅವರಿಗೆ ಸಿಗಬೇಕಾದ ಅರಿಯರ್ಸ್ ಸೇರಿ ಎಲ್ಲ ಸೌಲಭ್ಯಗಳನ್ನು ಮೂರು ತಿಂಗಳೊಳಗೆ ಒದಗಿಸಬೇಕೆಂದು ಆದೇಶಿಸ ಲಾ ಗಿದೆ. ರಮೇಶ ಮೇಟಿ ಪರವಾಗಿ ನ್ಯಾಯವಾದಿ ಪಿ. ವಿಲಾಸ್‌ಕುಮಾರ ವಾದ ಮಂಡಿಸಿದ್ದರು. ಸರ್ಕಾರದ ಪರವಾಗಿ ಆರತಿ ಪಾಟೀಲ ವಾದಿಸಿದ್ದರು.
30 ವರ್ಷಕ್ಕೆ ಒಂದೇ ಬಡ್ತಿ!: 1990ರಿಂದ ಪೊಲೀಸ್ ಇಲಾಖೆಯಲ್ಲಿ ಪಿಎಸ್‌ಐ ಆಗಿ ಸೇವೆ ಆರಂಭಿಸಿದ್ದ ರಮೇಶ ಮೇಟಿಗೆ ತಮ್ಮ ಸೇವಾವಧಿಯ 30 ವರ್ಷದಲ್ಲಿ ಸಿಕ್ಕಿದ್ದು ಒಂದೇ ಒಂದು ಬಡ್ತಿ. ಪಿಎಸ್‌ಐ ಆದ 19 ವರ್ಷಗಳ ಬಳಿಕ 2001ರಲ್ಲಿ ಇನ್ಸ್‌ಪೆಕ್ಟರ್ ಆಗಿ ಬಡ್ತಿ ಪಡೆದಿದ್ದರು. ಮೈಸೂರಿನಲ್ಲಿ ತರಬೇತಿ ಮುಗಿಸಿದ್ದ ಇವರು ತನಿಖೆ ನಡೆಸಿದ ಎಂಟು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯ ತೀರ್ಪುಗಳು ಬಂದಿವೆ.
ರಾಯಚೂರಿನಲ್ಲಿ ನಕ್ಸಲ್ ವಿರೋಧಿ ಚಟುವಟಿಕೆ, ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ಮರಳು ದಂಧೆಗೆ ಕಡಿವಾಣ ಹಾಕುವಲ್ಲಿ ಶ್ರಮಿಸಿದ್ದರು. ಅಲ್ಲದೇ, ಬೆಂಗಳೂರಿನಲ್ಲಿ ಅಪರಾಧ ದಾಖಲಾತಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದ ಇವರು, ಕಲಬುರಗಿ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲೂ ಸೇವೆ ಸಲ್ಲಿಸಿದ್ದರು.
ಸತ್ಯ ಮೇವ ಜಯತೇ ಎಂಬುದನ್ನು ನನ್ನ ಪ್ರಕರಣವೂ ನಿರೂಪಿಸಿದೆ. ನ್ಯಾಯಾಲಯ ಅರ್ಜಿ ವಿಚಾರಣೆ ನಡೆಸಿ ತ್ವರಿತ ನ್ಯಾಯದಾನ ಮಾಡಿದ್ದು, ಅತ್ಯಂತ ಸಂತೋಷ ತರಿಸಿದೆ. ಈ ತೀರ್ಪು ಇತರ ಸರ್ಕಾರಿ ನೌಕರರಿಗೆ ನೈತಿಕ ಶಕ್ತಿ ತುಂಬಲಿದೆ.
-ರಮೇಶ ಮೇಟಿ, ನಿವೃತ್ತಿ ನಂತರ ಬಡ್ತಿ ಪಡೆದ ಪೊಲೀಸ್ ಅಧಿಕಾರಿ
* ರಂಗಪ್ಪ ಗಧಾರ
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.