Politics: ಆಣೆಗೆ ನಾನು ರೆಡಿ; ನೀವೂ ಬರ್ತಿರಾ?: ಎಚ್‌ಡಿಕೆ ಸವಾಲು
Team Udayavani, Oct 26, 2023, 11:13 PM IST
ಬೆಂಗಳೂರು: ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿರುವ ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ತಿರುಗೇಟು ಕೊಟ್ಟಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ನಾನು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಹಾಗೇನೆ ಸಿಎಂ, ಡಿಸಿಎಂ ಸೇರಿ ಎಲ್ಲ ಸಚಿವರು ನಾವು ವರ್ಗಾವಣೆಯಲ್ಲಿ ಕಳೆದ 5 ತಿಂಗಳ ಸರಕಾರದಲ್ಲಿ ಹಣ ತೆಗೆದುಕೊಂಡಿಲ್ಲ ಅಂತ ಆಣೆ ಮಾಡಲಿ ಎಂದು ಪ್ರತಿ ಸವಾಲು ಹಾಕಿದ್ದಾರೆ.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿ, ಶಾಸಕ ಬಾಲಕೃಷ್ಣ ಅವರ ಸವಾಲ್ ನಾನು ಸ್ವೀಕಾರ ಮಾಡುತ್ತೇನೆ. ಅದರಂತೆ ನನ್ನ ಸವಾಲನ್ನು ಅವರು ಸ್ವೀಕಾರ ಮಾಡಲಿ. ನಾನು, ನನ್ನ ಕುಟುಂಬ ಸರಕಾರದ ಹಣವನ್ನು ಲೂಟಿ ಮಾಡಿಲ್ಲ. ಅಧಿಕಾರಿಗಳ ನಿಯೋಜನೆಯಲ್ಲಿ ಹಣಕ್ಕೆ ಅವಕಾಶ ನೀಡಿಲ್ಲ. ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿ, ತಾಯಿ ಚಾಮುಂಡೇಶ್ವರಿ ಸನ್ನಿಧಿ ಎಲ್ಲೇ ಆದರೂ ನಾನು ಆಣೆ ಮಾಡಲು ಸಿದ್ಧ ಎಂದರು.
ಡಿಕೆಶಿ ಸವಾಲು ಸ್ವೀಕರಿಸಿದ ಎಚ್ಡಿಕೆ
ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿದ್ದ ಪಂಥಾಹ್ವಾನವನ್ನು ಸ್ವೀಕರಿಸಿದ್ದೇನೆ ಎಂದಿರುವ ಕುಮಾರಸ್ವಾಮಿ ವಿಧಾನಸಭೆಯಲ್ಲಿಯೇ ಚರ್ಚೆ ಮಾಡಲು ನಾನು ತಯಾರಿದ್ದೇನೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಿರಂಗ ಚರ್ಚೆಗೆ ಬನ್ನಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನನಗೆ ಬಹಿರಂಗ ಸವಾಲು ಹಾಕಿದ್ಧಾರೆ. ಅದು ಹಾಗಿರಲಿ, ರಾಮನಗರ ಜಿಲ್ಲೆಯ ಅಭಿವೃದ್ಧಿಯನ್ನು ಯಾರು ಮಾಡಿದರು ಎಂಬ ವಿಷಯವೂ ಸೇರಿದಂತೆ; ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಬೆಂಗಳೂರು ಸುತ್ತ ಇರುವ ಭೂಮಿಗಳನ್ನು ಯಾರು ಕೊಳ್ಳೆ ಹೊಡೆಯಲು ಹೊರಟಿದ್ಧಾರೆ ಎಂಬ ಬಗ್ಗೆಯೂ ಬಹಿರಂಗ ಚರ್ಚೆ ಸದನದಲ್ಲಿಯೇ ನಡೆಯಲಿ. ದಾಖಲೆ ಸಮೇತ ಚರ್ಚೆ ಮಾಡಲು ನಾನು ತಯಾರಿದ್ದೇನೆ ಎಂದು ಘೋಷಿಸಿದರು.
ಆಮರಣಾಂತ ಉಪವಾಸ
ರಾಮನಗರ ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಿದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಕೂರುತ್ತೇನೆ. ನನ್ನ ಆರೋಗ್ಯ ಚೆನ್ನಾಗಿಲ್ಲ. ನನ್ನ ಜೀವ ಹೋದರೂ ಪರವಾಗಿಲ್ಲ, ಜಿಲ್ಲೆಯ ಹೆಸರು ಬದಲಾವಣೆಗೆ ಬಿಡುವುದಿಲ್ಲ. ನಾನು ಹುಟ್ಟಿದ್ದು ಹಾಸನ ಜಿಲ್ಲೆ ಇರಬಹುದು. ಆದರೆ ನನ್ನ ಜೀವನ ಅಂತ್ಯ ಆಗುವುದು ರಾಮನಗರದಲ್ಲೆ. ನನ್ನ ಹೋರಾಟಕ್ಕೆ ರಾಮನಗರದ ಜನರ ಸಹಕಾರ ಕೇಳ್ತೀನಿ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.