ಭಾಷಾಂತರ ಜಗತ್ತಿಗೊಂದು ಪ್ರಾಯೋಗಿಕ ಪ್ರವೇಶ
ಹೊಸದಾಗಿ ಕ್ಷೇತ್ರವನ್ನು ಪ್ರವೇಶಿಸುವ ಭಾಷಾಂತರಕಾರರಿಗೆ ಆರಂಭಿಕ ಹಂತದಲ್ಲಿ ಈ ಕೃತಿ ಬಹಳ ಸಹಾಯಕವಾಗ ಬಲ್ಲುದು.
Team Udayavani, Jan 4, 2022, 1:15 PM IST
‘ಭಾಷಾಂತರ ಜಿಜ್ಞಾಸೆ ಮತ್ತು ಪ್ರಾತ್ಯಕ್ಷಿಕೆ’ ಭಾಷಾಂತರ ಕಾರ್ಯದಲ್ಲಿ ಆಸಕ್ತರಿಗೆ ನೆರವಾಗಬಲ್ಲ ಒಂದು ಅತ್ಯುತ್ತಮ ಕೈಪಿಡಿ. ಇತ್ತಿಚೆಗೆ ಮಣಿಪಾಲದ ಯುನಿವರ್ಸಲ್ ಪ್ರೆಸ್ ಪ್ರಕಟಿಸಿರುವ ಈ ಕೃತಿಯನ್ನು ಕನ್ನಡ, ಇಂಗ್ಲಿಷ್ ಮತ್ತು ಜರ್ಮನ್ ಭಾಷೆಗಳಲ್ಲಿ ಪಾಂಡಿತ್ಯವಿರುವ ಹಿರಿಯ ಭಾಷಾಂತರಕಾರರಾದ ಡಾ.ಎನ್.ಟಿ.ಭಟ್ ರಚಿಸಿರುವುದು ಮಂಡಿಸಲಾದ ವಿಷಯಗಳಿಗೆ ಅಧಿಕೃತತೆ ಒದಗಿಸಿದೆ.
ಭಾಷಾಂತರವು ಇಂದು ಬಹಳಷ್ಟು ಬೆಳವಣಿಗೆಯನ್ನು ಸಾಧಿಸಿದ ಮತ್ತು ಮಹತ್ವವನ್ನು ಪಡೆದುಕೊಂಡ ಒಂದು ಕ್ಷೇತ್ರ. ಜಾಗತೀಕರಣಗೊಂಡ ಇಂದಿನ ಜಗತ್ತಿನಲ್ಲಿ ಭಾಷೆ ಭಾಷೆಗಳ ನಡುವೆ ಸಂಪರ್ಕ ಮತ್ತು ಸಂವಹನಗಳ ಅಗತ್ಯ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಭಾಷಾಂತರಕಾರರಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಪರಿಸ್ಥಿತಿಯ ವಿಪರ್ಯಾಸವೆಂದರೆ ಭಾಷಾಂತರದಲ್ಲಿ ಹೊಸದಾಗಿ ತೊಡಗಿಕೊಳ್ಳುವ ಯುವ ಬರಹಗಾರರ ಸಂಖ್ಯೆ ಕಡಿಮೆಯಾಗಿದೆ. ಈ ಕೊರತೆಯನ್ನು ನೀಗಿಸಿಕೊಳ್ಳುವ ದೃಷ್ಟಿಯಿಂದ ಹೊಸದಾಗಿ ಕ್ಷೇತ್ರವನ್ನು ಪ್ರವೇಶಿಸುವ ಭಾಷಾಂತರಕಾರರಿಗೆ ಆರಂಭಿಕ ಹಂತದಲ್ಲಿ ಈ ಕೃತಿ ಬಹಳ ಸಹಾಯಕವಾಗ ಬಲ್ಲುದು.
‘ಭಾಷಾಂತರ ಜಿಜ್ಞಾಸೆ ಮತ್ತು ಪ್ರಾತ್ಯಕ್ಷಿಕೆ’ ಕೃತಿಯಲ್ಲಿ ಐದು ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ಪೀಠಿಕೆಯ ರೂಪದಲ್ಲಿ ಭಾಷಾಂತರದ ಕುರಿತಾದ ಹಲವಾರು ವಿಷಯಗಳ ಕುರಿತು ಲೇಖಕರು ಚರ್ಚೆ ನಡೆಸಿದ್ದಾರೆ. ಭಾಷಾಂತರ ಪದದ ನಿರ್ವಚನೆ, ಭಾಷಾಂತರವು ಯಾಕೆ ಅನಿವಾರ್ಯ, ಭಾಷಾಂತರವು ಹೇಗೆ ಒಂದು ಸಮಸ್ಯಾತ್ಮಕ ಪ್ರಕ್ರಿಯೆಯಾಗಿದೆ, ಒಂದೇ ಸಾಂಸ್ಕ್ರತಿಕ ಹಿನ್ನೆಲೆಯ ಭಾಷೆಗಳ ನಡುವಣ ಭಾಷಾಂತರಕ್ಕಿರುವ ಸೌಲಭ್ಯಗಳು ಯಾವುವು, ಭಾಷಾಂತರಕಾರನ ಅರ್ಹತೆಗಳೇನು, ಭಾಷಾಂತರಕಾರನಿಗೆ ಬೇಕಾದ ಸೌಕರ್ಯಗಳು ಮತ್ತು ಪರಿಕರಗಳು ಯಾವುವು, ಭಾಷಾಂತರದ ತಾತ್ವಿಕ ಪ್ರಯೋಜನಗಳೇನು, ಭಾಷಾಂತರದ ಸಂದರ್ಭಗಳು ಯಾವುವು, ಮೂಲ ಕೃತಿಕಾರ ಮತ್ತು ಭಾಷಾಂತರಕಾರನ ನಡುವಣ ಸಂಬಂಧ ಹೇಗಿರಬೇಕು, ಭಾಷಾಂತರದ ಪ್ರಕಾರಗಳು ಯಾವುವು ಇವೇ ಮುಂತಾದ ಪ್ರಶ್ನೆಗಳಿಗೆ ವಿವರಣಾತ್ಮಕ ಉತ್ತರಗಳನ್ನು ಕೊಡುತ್ತಾರೆ. ೨ನೇ ಅಧ್ಯಾಯದಲ್ಲಿ ಸುಮಾರು ೧೩೬ ಪುಟಗಳಷ್ಟು ದೀರ್ಘವಾಗಿ ಇಂಗ್ಲೀಷ್ ಕನ್ನಡಗಳ ನಡುವಣ ಭಾಷಾಂತರ ಪ್ರಾತ್ಯಕ್ಷಿಕೆಯಿದೆ. ನೂರಾರು ಸರಳ ಉದಾಹರಣೆಗಳ ಮೂಲಕ ಈ ಕೆಲಸವನ್ನು ಓದುಗನಿಗೆ ಸುಲಭ ಗ್ರಾಹ್ಯವಾಗುವ ರೀತಿಯಲ್ಲಿ ಲೇಖಕರು ನಡೆಸಿ ಕೊಟ್ಟಿದ್ದಾರೆ.
ಅಧ್ಯಾಯ 3ರಲ್ಲಿ ಭಾಷಾಂತರ ಮಾಡಿದ ನಂತರ ಲಕ್ಷ್ಯ ಭಾಷೆಯಲ್ಲಾಗುವ ಬದಲಾವಣೆಗಳನ್ನು ಪರಿಗಣಿಸಿ ಭಾಷಾಂತರದ ಕುರಿತಾದ ಕೆಲವು ನಿಯಮಗಳನ್ನು ಹೇಗೆ ರೂಪಿಸಬಹುದೆಂಬುದನ್ನು ಲೇಖಕರು ನಿರೂಪಿಸುತ್ತಾರೆ. ಭಾಷಾಂತರ ಮಾಡಿದಾಗ ವಾಕ್ಯ ವಿನ್ಯಾಸದಲ್ಲಿ ಮಾತ್ರವಲ್ಲದೆ ವಿಷಯಗಳನ್ನು ಪ್ರಸ್ತಾಪಿಸುವ ರೀತಿಯಲ್ಲೂ ಬದಲಾವಣೆಗಳಾಗಬಹುದು ಎಂಬುದಕ್ಕೆ ಉದಾಹರಣೆಗಳನ್ನು ಕೊಡುತ್ತಾರೆ. ಭಿನ್ನ ಪದಗಳ ಅನುಕ್ರಮ, ವಿಶೇಷಣಗಳ ಅನುಕ್ರಮ, ನಾಮಪದ ಸಂಬಂಧವಾಚಕ ಪದ, ಕರ್ತೃಪದ ಕ್ರಿಯಾಪದ, ಮುಖ್ಯ ವಾಕ್ಯ ಖಂಡ ಅಧೀನ ವಾಕ್ಯ ಖಂಡ, ಸಮಾನಾರ್ಥಕ ಪದ, ಪಾರಿಭಾಷಿಕ ಪದ ಹೀಗೆ ಅನೇಕ ಸಂದರ್ಭಗಳಲ್ಲಿ ಭಾಷಾಂತರ ಮಾಡುವ ಬಗೆಯನ್ನು ವಿವರಿಸುತ್ತಾರೆ.
ಭಾಷಾಂತರಕಾರನಿಗೆ ಮೂಲಕೃತಿಯ ಭಾಷೆಯ ಸಾಂಸ್ಕೃತಿಕ ಹಿನ್ನೆಲೆ ಚೆನ್ನಾಗಿ ತಿಳಿದಿದ್ದರೆ ಭಾಷಾಂತರ ಕೃತಿಯ ಗುಣಮಟ್ಟ ಉತ್ಕೃಷ್ಟವಾಗಿರಲು ಸಾಧ್ಯವೆಂದು ಹೇಳುತ್ತಾರೆ. ಕ್ಲಿಷ್ಟ ವಾಕ್ಯ ವಿನ್ಯಾಸವನ್ನು ಸರಳೀಕರಿಸುವುದು ಹೇಗೆ, ಮೂಲವಾಕ್ಯದಲ್ಲಿರುವ ಅಲಂಕಾರವನ್ನು ಉಳಿಸಿಕೊಳ್ಳುವುದು ಹೇಗೆ, ಕರ್ತರಿ ಕರ್ಮಣಿ ಪ್ರಯೋಗಗಳನ್ನು ಬಳಸುವುದು ಹೇಗೆ, ಮೂಲದ ಆಶಯಕ್ಕೆ ನಿಷ್ಠವಾಗಿರುವುದು ಹೇಗೆ ಮತ್ತು ವಾಕ್ಯಾನುಸಂಧಾನ ಹೇಗಿರಬೇಕು ಎಂಬಿತ್ಯಾದಿ ವಿಷಯಗಳನ್ನು ಮನಮುಟ್ಟುವಂತೆ ವಿವರಿಸುತ್ತಾರೆ. ಒಟ್ಟು ೨೯ ಪುಟಗಳ ಈ ಅಧ್ಯಾಯದಲ್ಲಿ ಭಾಷಾಂತರದ ಬಗ್ಗೆ ಅನೇಕ ಉಪಯುಕ್ತ ಮಾಹಿತಿಗಳು ನಮಗೆ ಸಿಗುತ್ತವೆ. 49 ಪುಟಗಳಿರುವ 4ನೇ ಅಧ್ಯಾಯದಲ್ಲಿ ಸಂಕ್ಷಿಪ್ತ ಭಾಷಾಂತರ ಕೋಶ ಮತ್ತು 26ಪುಟಗಳ ಕೊನೆಯ ಅಧ್ಯಾಯದಲ್ಲಿ ಭಾಷಾಂತರ ಅಭ್ಯಾಸಗಳಿವೆ.
ಭಾಷಾಪ್ರಭುತ್ವಕ್ಕೆ ಬುದ್ಧಿವಂತಿಕೆಯ ಜತೆಗೆ ಸತತ ಅಧ್ಯಯನ ಮತ್ತು ಪರಿಶ್ರಮಗಳೂ ಬೇಕಾಗುತ್ತವೆ. ಇಂಥ ಪುಸ್ತಕಗಳನ್ನು ಶ್ರದ್ಧೆಯಿಂದ ಓದಿದಾಗ ಭಾಷೆ ತಾನಾಗಿಯೇ ಮನಸ್ಸಿನೊಳಗೆ ಬೆಳೆಯುತ್ತ ಹೋಗುತ್ತದೆ. ನಮಗರಿವಿಲ್ಲದೆಯೇ ನಮ್ಮೊಳಗೆ ಒಬ್ಬ ಒಳ್ಳೆಯ ಭಾಷಾಂತರಕಾರ ಹುಟ್ಟಿಕೊಳ್ಳುತ್ತಾನೆ. ಈ ನಿಟ್ಟಿನಲ್ಲಿ ಒಂದು ಒಳ್ಳೆಯ ಮಾರ್ಗದರ್ಶಿಯಾಗಿ ಬಂದಿರುವ ‘ಭಾಷಾಂತರ ಜಿಜ್ಞಾಸೆ ಮತ್ತು ಪ್ರಾತ್ಯಕ್ಷಿಕೆ’ ಎಂಬ ಈ ಅಪರೂಪದ ಕೃತಿ ಭಾರತೀಯ ಪ್ರಾದೇಶಿಕ ಭಾಷೆಗಳ ನಡುವಣ ಭಾಷಾಂತರಗಳ ಬಗೆಗೂ ವಿವರಗಳನ್ನು ನೀಡುವ ಇಂಥದೇ ಕೃತಿಗಳು ಇನ್ನಷ್ಟು ಬರಲಿ ಎಂದು ಹಾರೈಸುವಂತೆ ಮಾಡುತ್ತದೆ.
ಕೃತಿಯ ಹೆಸರು : ಭಾಷಾಂತರ ಜಿಜ್ಞಾಸೆ ಮತ್ತು ಪ್ರಾತ್ಯಕ್ಷಿಕೆ
ಲೇಖಕರು : ಡಾ.ಎನ್.ಟಿ.ಭಟ್
ಪ್ರ : ಮಣಿಪಾಲ ಯುನಿವರ್ಸಲ್ ಪ್ರೆಸ್, ಮಣಿಪಾಲ
-ಡಾ.ಪಾರ್ವತಿ ಜಿ.ಐತಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.