Drought: ಬರ ಘೋಷಣೆಗೆ ಸಿದ್ಧತೆ- ರಾಜ್ಯದ 120 ತಾಲೂಕುಗಳಲ್ಲಿ ಜಲಕ್ಷಾಮದ ಛಾಯೆ
- ಮುಂದೆಯೂ ಆಶಾದಾಯಕವಾಗಿಲ್ಲ ಮಳೆ - ಪ್ರತಿ ತಾಲೂಕಿನ 10 ಗ್ರಾಮಗಳಲ್ಲಿ 5 ಬೆಳೆಗಳ ಮಾದರಿ ಸಮೀಕ್ಷೆ
Team Udayavani, Aug 22, 2023, 10:05 PM IST
ಬೆಂಗಳೂರು: ರಾಜ್ಯದ 120 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದ್ದು, ಎನ್‌ಡಿಆರ್‌ಎಫ್ನ ಈಗಿರುವ ಮಾನದಂಡಗಳ ಅನ್ವಯವೇ ಬರ ಘೋಷಣೆ ಮಾಡಬೇಕಿರುವುರಿಂದ ತೀವ್ರ ಮಳೆ ಕೊರತೆ ಇರುವ 75 ತಾಲೂಕುಗಳನ ತಲಾ 10 ಗ್ರಾಮಗಳಲ್ಲಿ ಬೆಳೆ ಸಮೀಕ್ಷೆ ನಡೆಸಿ 10 ದಿನದಲ್ಲಿ ಒಂದು ನಿರ್ಣಯಕ್ಕೆ ಬರಲು ರಾಜ್ಯ ಸರಕಾರ ತೀರ್ಮಾನಿಸಿದೆ.
ಬರ ಘೋಷಣೆ ಸಂಬಂಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ರಾಜ್ಯದ ಮಳೆ, ಬೆಳೆ, ಕುಡಿಯುವ ನೀರು, ಜಾನುವಾರುಗಳ ಮೇವು, ಜಲಾಶಯಗಳ ನೀರಿನ ಮಟ್ಟ, ಕೇಂದ್ರ ಸರಕಾರದ ಬರ ಕೈಪಿಡಿಯ ಮಾರ್ಗಸೂಚಿ ಸಹಿತ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ.
ಸಭೆಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ. 56ರಷ್ಟು ಮಳೆ ಕೊರತೆ ಆಗಿದ್ದರೆ, ಜುಲೈ ತಿಂಗಳಲ್ಲಿ ವಾಡಿಕೆಗಿಂತ ಶೇ. 30ರಷ್ಟು ಹೆಚ್ಚು ಮಳೆಯಾಗಿದೆ. ಆಗಸ್ಟ್‌ನಲ್ಲಿ ಶೇ. 50ಕ್ಕೂ ಹೆಚ್ಚು ಕೊರತೆ ಆಗಿದೆ. ಜೂ. 1ರಿಂದ ಆ. 21ರವರೆಗೆ ರಾಜ್ಯಾದ್ಯಂತ 487 ಮಿ.ಮೀ. ಮಳೆಯಾಗಿದ್ದು, ವಾಡಿಕೆ ಮಳೆಗಿಂತ ಶೇ. 23ರಷ್ಟು ಕೊರತೆ ಆಗಿದೆ. ಮುಂದಿನ ದಿನಗಳಲ್ಲೂ ಮಳೆ ಆಶಾದಾಯಕವಾಗಿಲ್ಲ ಎಂದರು.
10 ದಿನಗಳ ಕಾಲಾವಕಾಶ
ಮುಂಗಾರು ಅವಧಿಗೆ 82.35 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿಯಿತ್ತು. 51.87 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ವಾಡಿಕೆಯ ಶೇ. 89ರಷ್ಟು ಬಿತ್ತನೆಯಾದಂತಾಗಿದೆ. 1.82 ಲಕ್ಷ ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆ ಬಿತ್ತನೆಯಾಗಿದ್ದು, ವಾಡಿಕೆಯ ಶೇ. 65ರಷ್ಟು ಬಿತ್ತನೆಯಾಗಿದೆ. ಮಳೆ ಮತ್ತು ತೇವಾಂಶದ ಕೊರತೆಯಿಂದ ಬೆಳೆಗಳು ಒಣಗುವ ಸ್ಥಿತಿ ತಲುಪುತ್ತಿವೆ. ಹೀಗಾಗಿ ತೀವ್ರ ಮಳೆ ಕೊರತೆ ಎದುರಿಸುತ್ತಿರುವ 75 ತಾಲೂಕುಗಳ ತಲಾ 10 ಗ್ರಾಮಗಳಲ್ಲಿ 5 ವಿವಿಧ ಬೆಳೆಗಳನ್ನು ಸಮೀಕ್ಷೆ ಮಾಡುವಂತೆ ಸೂಚಿಸಲಾಗಿದೆ. ಇದಕ್ಕಾಗಿ 10 ದಿನಗಳ ಕಾಲಾವಕಾಶ ನೀಡಲಾಗಿದ್ದು, ಮಾದರಿ ಬೆಳೆ ಸಮೀಕ್ಷೆಯ ವರದಿ ಬಂದ ಬಳಿಕ ಮತ್ತೂಮ್ಮೆ ಸಚಿವ ಸಂಪುಟ ಉಪಸಮಿತಿ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಎನ್‌ಡಿಆರ್‌ಎಫ್ನ ಈಗಿರುವ ಮಾನದಂಡಗಳು ಕಠಿನವಾಗಿದ್ದು, ಇವುಗಳನ್ನು ಸಡಿಲಗೊಳಿಸುವಂತೆ ಕೇಂದ್ರ ಸರಕಾರಕ್ಕೆ ನಮ್ಮ ಸಿಎಂ ಪತ್ರ ಬರೆದಿದ್ದರು. ತಿದ್ದುಪಡಿ ಸೂಕ್ತ ಎಂದು ಅಧಿಕಾರಿಗಳು ಅನೌಪಚಾರಿಕವಾಗಿ ಹೇಳಿದ್ದರೂ ಸದ್ಯಕ್ಕೆ ತಿದ್ದುಪಡಿ ಬಗ್ಗೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಈಗಿರುವ ಮಾನದಂಡಗಳ ಪ್ರಕಾರ ಶೇ. 60ರಷ್ಟು ಮಳೆ ಕೊರತೆ ಇರಬೇಕು. ರಾಜ್ಯದ ಸರಾಸರಿ ಮಳೆ ಕೊರತೆಯು ಶೇ. 28ರಷ್ಟಿದೆ. ಈಗಲೂ ಮಾನದಂಡ ತಿದ್ದುಪಡಿಗೆ ನಮ್ಮ ಒತ್ತಾಯವಿದೆ. ಬೆಳೆ ಸಮೀಕ್ಷೆ ವರದಿ ಬರುವ ವೇಳೆಗೆ ಇನ್ನಷ್ಟು ತಾಲೂಕುಗಳು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿದರೂ ಆಚ್ಚರಿಯಿಲ್ಲ ಎಂದರು.
– ಜೂ. 1ರಿಂದ ಆ. 21ರ ವರೆಗೆ ರಾಜ್ಯಾದ್ಯಂತ 487 ಮಿ.ಮೀ. ಮಳೆ, ವಾಡಿಕೆಗಿಂತ ಶೇ. 23ರಷ್ಟು ಕೊರತೆ
– ಜೂನ್‌ನಲ್ಲಿ ಶೇ. 56ರಷ್ಟು ಕೊರತೆ, ಜುಲೈಯಲ್ಲಿ ಶೇ. 30ರಷ್ಟು ಹೆಚ್ಚಿಗೆ ಮಳೆ, ಆಗಸ್ಟ್‌ನಲ್ಲಿ ಶೇ. 50ರಷ್ಟು ಕೊರತೆ
– ಮುಂಗಾರು ಅವಧಿಯಲ್ಲಿ 83.35 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ, 51.87 ಲಕ್ಷ ಹೆಕ್ಟೇರ್‌ನಲ್ಲಷ್ಟೇ ಬಿತ್ತನೆ
– ಮಳೆ ಮತ್ತು ತೇವಾಂಶ ಕೊರತೆಯಿಂದ ನಾಲ್ಕು ಜಿಲ್ಲೆ ಹೊರತುಪಡಿಸಿ ಉಳಿದೆಡೆ ಒಣಗುವ ಸ್ಥಿತಿಯಲ್ಲಿ ಬೆಳೆ
– ಆಲಮಟ್ಟಿ ಬಿಟ್ಟು ಉಳಿದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿತ
– ಕಾವೇರಿ ಜಲಾನಯನ ಪ್ರದೇಶದಲ್ಲಿ 15 ದಿನಕ್ಕೊಮ್ಮೆ ಬೆಳೆಗಳಿಗೆ ನೀರು, 3 ತಿಂಗಳಿಗೆ ಸಾಕಾಗುವಷ್ಟೇ ನೀರಿದೆ.
– ನೀರಾವರಿ ಆಶ್ರಿತ ಬೆಳೆ ಬದಲು ಖುಷ್ಕಿ ಬೆಳೆ ಬೆಳೆಯಲು ರೈತರಿಗೆ ಸಲಹೆ
– 1.50 ಕೋಟಿ ಟನ್ ಮೇವು ಲಭ್ಯ, 28 ವಾರಗಳಿಗೆ ಸಾಕಾಗುವಷ್ಟು ಮೇವು ದಾಸ್ತಾನು
– 147 ಗ್ರಾಮಗಳಿಗೆ 161 ಖಾಸಗಿ ಕೊಳವೆಬಾವಿ ಹಾಗೂ 18 ಗ್ರಾಮಗಳಿಗೆ 24 ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ
– ಪ್ರಸ್ತುತ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಒಟ್ಟು 520 ಕೋಟಿ ರೂ. ಲಭ್ಯ
ರಾಜ್ಯದ 120 ತಾಲೂಕುಗಳಲ್ಲಿ ಮಳೆ ಕೊರತೆ ಇದೆ. ಕೇಂದ್ರದ ಬರ ಕೈಪಿಡಿಯ ಮಾನದಂಡ ತಿದ್ದುಪಡಿಗೆ ಈಗಲೂ ನಮ್ಮ ಒತ್ತಾಯವಿದೆ. ಈಗಿರುವ ಮಾನದಂಡದ ಪ್ರಕಾರ, ಬರಪೀಡಿತ ಪ್ರದೇಶಗಳನ್ನು ಘೋಷಿಸಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ. 10 ದಿನದಲ್ಲಿ ಬೆಳೆ ನಷ್ಟ ಸಮೀಕ್ಷೆಯ ವರದಿ ಬರಲಿದ್ದು, ಅನಂತರ ನಿರ್ಣಯ ಕೈಗೊಳ್ಳಲಾಗುವುದು.
– ಕೃಷ್ಣ ಬೈರೇಗೌಡ, ಕಂದಾಯ ಸಚಿವ
ಮುಂಗಾರು ಹಂಗಾಮಿನಲ್ಲಿ ಒಟ್ಟು 82.35 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. 51.87 ಲಕ್ಷ ಹೆಕ್ಟೇರ್ (ಶೇ. 89)ನಲ್ಲಿ ಬಿತ್ತನೆಯಾಗಿದ್ದು, ಮಳೆ ಮತ್ತು ತೇವಾಂಶದ ಕೊರತೆಯಿಂದ ಹಲವೆಡೆ ಬೆಳೆ ಒಣಗುವ ಸ್ಥಿತಿ ತಲುಪಿವೆ. ಈಗಿರುವ ಪರಿಸ್ಥಿತಿ ಮುಂದುವರಿದರೆ ಸಹಜವಾಗಿ ಆಹಾರದ ಕೊರತೆಯೂ ಎದುರಾಗಬಹುದು. ಸಮೀಕ್ಷೆ ವರದಿ ಅನಂತರ ಬರದ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯ.
– ಎನ್. ಚಲುವರಾಯಸ್ವಾಮಿ, ಕೃಷಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಅಕ್ರಮ ವರದಿಯಿಂದ ಏನೂ ಆಗದು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
Waqf Notice: ವಕ್ಫ್ ಬೋರ್ಡ್ ರದ್ದತಿಗೆ ಪಕ್ಷಭೇದ ಮರೆತು ಶ್ರಮಿಸಿ: ಪಲಿಮಾರು ಶ್ರೀ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
Election Campaign: ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ
Loan facility: ಕೇಂದ್ರ ಸರಕಾರದ ಯೋಜನೆಗಳಡಿ ಸಾಲ ಮಂಜೂರು ಹೆಚ್ಚಿಸಿ: ನಿರ್ಮಲಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.