PM Modi: ಪ್ರಧಾನಮಂತ್ರಿ ಮೋದಿಯವರ ಭವ್ಯ ದೂರದೃಷ್ಟಿ…ಭಾರತದ ಸುವರ್ಣ ಯುಗ…
ಕೆಂಪು ಕೋಟೆಯಿಂದ ತಮ್ಮ ಭವ್ಯ ದೂರದೃಷ್ಟಿಯನ್ನು ಜನರ ಮುಂದಿಟ್ಟಿದ್ದಾರೆ.
Team Udayavani, Aug 30, 2023, 10:11 AM IST
ಸಾವಿರ ವರ್ಷಗಳ ಗುಲಾಮಗಿರಿ, ದಬ್ಬಾಳಿಕೆ ಮತ್ತು ಬಡತನದ ಬಳಿಕ ಭಾರತ ಮಾತೆಯು ಆತ್ಮವಿಶ್ವಾಸದಿಂದ ಪುಟಿದೇಳುತ್ತಿರುವ ಸಮಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ಪ್ರಗತಿ ಮತ್ತು ಸಮೃದ್ಧಿಯ ದೀರ್ಘಕಾಲೀನ ಸುವರ್ಣ ಯುಗದ ಬಗ್ಗೆ ಕೆಂಪು ಕೋಟೆಯಿಂದ ತಮ್ಮ ಭವ್ಯ ದೂರದೃಷ್ಟಿಯನ್ನು ಜನರ ಮುಂದಿಟ್ಟಿದ್ದಾರೆ.
ಸ್ವಾತಂತ್ರ್ಯದ ನಂತರ ಜನಿಸಿದ ಭಾರತದ ಮೊದಲ ಪ್ರಧಾನಿ ಎನಿಸಿರುವ ನರೇಂದ್ರ ಮೋದಿ ಅವರು ದೇಶದ ಭವಿಷ್ಯದ ಬಗ್ಗೆ ಆಶಾವಾದ ಹೊಂದಿದ್ದಾರೆ. ಧರ್ಮ, ಪ್ರದೇಶ, ಲಿಂಗ, ಜಾತಿ, ವಯಸ್ಸು ಅಥವಾ ಜನಾಂಗೀಯ ಗುರುತನ್ನು ಲೆಕ್ಕಿಸದೆ ದೇಶದ ಪ್ರತಿಯೊಂದು ಭಾಗದಲ್ಲಿರುವ 140 ಕೋಟಿ ಭಾರತೀಯರ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನು ಮೇಲೆತ್ತಲು ಒಂಬತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಅವಿರತವಾಗಿ ಮಾಡಿದ ಕೆಲಸದಿಂದ ಕಂಡು ಬಂದ ಸ್ಪಷ್ಟ ಪ್ರಗತಿಯಿಂದ ಪ್ರಧಾನಿಯವರ ಆತ್ಮವಿಶ್ವಾಸವು ಹೊರಹೊಮ್ಮಿದೆ.
ಮೋದಿ ಸರ್ಕಾರದ ಪ್ರತಿಯೊಂದು ನೀತಿಯು ಅವರ ‘ಸುಧಾರಣೆ, ಕಾರ್ಯನಿರ್ವಹಣೆ ಮತ್ತು ಪರಿವರ್ತನೆ’ ಮಂತ್ರವನ್ನು ಪ್ರತಿಬಿಂಬಿಸುತ್ತದೆ. ಇದು ವಿಶೇಷವಾಗಿ ಬಡವರು ಮತ್ತು ದೀನದಲಿತರಿಗೆ ಅಗತ್ಯ ಪ್ರತಿಫಲಗಳನ್ನು ನೀಡುತ್ತಿದೆ. ಇದು ಭಾರತವು ವಿಶ್ವದ ಹತ್ತನೇ ಅತಿದೊಡ್ಡ ಆರ್ಥಿಕತೆಯಿಂದ ಒಂಬತ್ತು ವರ್ಷಗಳಲ್ಲಿ ಐದನೇ ಸ್ಥಾನಕ್ಕೆ ಜಿಗಿಯಲು ಸಹಾಯ ಮಾಡಿದೆ. ಜೊತೆಗೆ, ಪ್ರಧಾನಿ ಮೋದಿಯವರ ಮೂರನೇ ಅವಧಿಯಲ್ಲಿ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ.
ಉತ್ತಮ ಆರ್ಥಿಕ ನೀತಿಗಳು, ಭ್ರಷ್ಟಾಚಾರದ ವಿರುದ್ಧ ದೃಢವಾದ ಹೋರಾಟ, ಸರ್ಕಾರದ ವೆಚ್ಚಗಳಲ್ಲಿನ ಸೋರಿಕೆಯನ್ನು ತಡೆಗಟ್ಟುವುದು, ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದು ಹಾಗೂ ಉದಾರ ಕಲ್ಯಾಣ ಯೋಜನೆಗಳು ಈ ಸಾಧನೆಗೆ ಕಾರಣವಾಗಿವೆ.
ಮಹಿಳಾ ನೇತೃತ್ವದ ಅಭಿವೃದ್ಧಿ
ದೇಶದ ಪರಿವರ್ತನೆಯ ಪ್ರಮುಖ ಭಾಗವೆಂದರೆ ದೇಶದಲ್ಲಿ ಕಂಡು ಬಂದ ಮಹಿಳಾ ನೇತೃತ್ವದ ಅಭಿವೃದ್ಧಿ. ಪ್ರಧಾನಿ ಹೇಳಿದಂತೆ, ಭಾರತವು ಬೇರೆ ಯಾವುದೇ ದೇಶಕ್ಕಿಂತ ಹೆಚ್ಚಿನ ಮಹಿಳಾ ಪೈಲಟ್ ಗಳನ್ನು ಹೊಂದಿದೆ ಮತ್ತು ಅವರು ಚಂದ್ರಯಾನದಂತಹ ಹೈಟೆಕ್ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಬಾಲಕರಿಗಿಂತ ಹೆಚ್ಚಿನ ಬಾಲಕಿಯರು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ವಿಷಯಗಳನ್ನು (ಎಸ್ ಟಿ ಇ ಎಂ) ಅಧ್ಯಯನಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ಹೆಮ್ಮೆಯ ವಿಷಯವಾಗಿದೆ. ಹಳ್ಳಿಗಳಲ್ಲಿ 2 ಕೋಟಿ ʻಲಕ್ಷಾಧಿಪತಿʼಗಳನ್ನು ಸೃಷ್ಟಿಸುವ ಗುರಿಯನ್ನು ಪ್ರಧಾನಿ ಹೊಂದಿದ್ದಾರೆ ಮತ್ತು ಡ್ರೋನ್ ಗಳ ಕಾರ್ಯಾಚರಣೆ ಮತ್ತು ದುರಸ್ತಿಯಲ್ಲಿ ಮಹಿಳೆಯರನ್ನು ತೊಡಗಿಸಿಕೊಳ್ಳಲು ಉದ್ದೇಶಿಸಿದ್ದಾರೆ.
ಈ ಪರಿವರ್ತನೆಯ ಪಯಣದಲ್ಲಿ, ಮೋದಿ ಸರ್ಕಾರವು ʻಊಟ, ಬಟ್ಟೆ ಮತ್ತು ಮನೆʼಗಾಗಿ ತಮ್ಮ ಜೀವಮಾನವಿಡೀ ಹೋರಾಡುವುದರಿಂದ ಬಡವರನ್ನು ಮುಕ್ತಗೊಳಿಸುತ್ತಿದೆ. ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ, ಸುಮಾರು 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳು, ದೇಶಾದ್ಯಂತ ಪಡಿತರ ಚೀಟಿಗಳ ಸಿಂಧುತ್ವ, ಮಹಿಳೆಯರ ಘನತೆಯನ್ನು ರಕ್ಷಿಸುವ ಶೌಚಾಲಯಗಳು, ಪ್ರತಿ ಹಳ್ಳಿಯಲ್ಲಿ ವಿದ್ಯುತ್, ಅಡುಗೆ ಅನಿಲ, ಉತ್ತಮ ರಸ್ತೆಗಳು, ಆರೋಗ್ಯ ವಿಮೆ ಮತ್ತು ಕೈಗೆಟುಕುವ ಇಂಟರ್ನೆಟ್ ಅನ್ನು ಸರ್ಕಾರ ಒದಗಿಸಿದೆ. ಎಲ್ಲರಿಗೂ ವಸತಿ ಮತ್ತು ಪ್ರತಿ ಮನೆಗೂ ಕೊಳಾಯಿ ಮೂಲಕ ಕುಡಿಯುವ ನೀರನ್ನು ಪೂರೈಸುವ ಯೋಜನೆಗಳು ವೇಗವಾಗಿ ಪ್ರಗತಿ ಸಾಧಿಸುತ್ತಿವೆ.
ಮೋದಿ ಸರ್ಕಾರವು ಇತರ ದೇಶಗಳಿಗಿಂತ ಅಥವಾ ಹಿಂದಿನ ಆಡಳಿತಗಳಿಗೆ ಹೋಲಿಸಿದರೆ ಹಣದುಬ್ಬರವನ್ನು ಉತ್ತಮವಾಗಿ ನಿರ್ವಹಿಸಿದೆ. ಆದರೆ ಪ್ರಧಾನಿ ಹೇಳಿದಂತೆ, ಸರ್ಕಾರವು ಇಷ್ಟಕ್ಕೇ ಸಂತೃಪ್ತವಾಗಿಲ್ಲ. ನಮ್ಮ ದೇಶವಾಸಿಗಳ ಮೇಲಿನ ಹಣದುಬ್ಬರದ ಹೊರೆಯನ್ನು ಕಡಿಮೆ ಮಾಡಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಪ್ರಧಾನಿಯವರ ಕಾಳಜಿ ಮತ್ತು ಸಹಾನುಭೂತಿ ನೀತಿಗಳು 2021ರವರೆಗೆ ಐದು ವರ್ಷಗಳಲ್ಲಿ 13.5 ಕೋಟಿ ಜನರನ್ನು ಬಡತನದಿಂದ ಹೊರಬರಲು ಮತ್ತು ಮಧ್ಯಮ ವರ್ಗದಕ್ಕೆ ಸೇರಲು ಸಹಾಯ ಮಾಡಿವೆ.
ಇಡೀ ಸಹಸ್ರಮಾನದಲ್ಲೇ ದೊಡ್ಡ ಸಂಕಷ್ಟದ (ಕೋವಿಡ್ ಸಾಂಕ್ರಾಮಿಕ) ನಂತರ, ನವ ಭಾರತವು ಭರವಸೆ, ಆಕಾಂಕ್ಷೆ ಮತ್ತು ಮಹತ್ವಾಕಾಂಕ್ಷೆಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ದೇಶವು ಹೆಚ್ಚುತ್ತಿರುವ ಯುವ ಶಕ್ತಿ ಮತ್ತು ಮಹಿಳಾ ಶಕ್ತಿ; ಕಠಿಣ ಪರಿಶ್ರಮಿ ಕಾರ್ಮಿಕರು ಮತ್ತು ರೈತರು; ನಿಪುಣ ಕುಶಲಕರ್ಮಿಗಳು ಮತ್ತು ನೇಕಾರರು; ಹಾಗೂ ಜಾಗತಿಕ ಅಲೆಗಳನ್ನು ಸೃಷ್ಟಿಸುತ್ತಿರುವ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯದಿಂದ ಸಮೃದ್ಧವಾಗಿದೆ.
ಭಾರತದ ಮಹತ್ವಾಕಾಂಕ್ಷೆಯ ಯುವಕರು ಬೇಡಿಕೆ ಮತ್ತು ಔದ್ಯಮಿಕ ಶಕ್ತಿಯನ್ನು ಸೃಷ್ಟಿಸುತ್ತಿದ್ದಾರೆ. ಮೋದಿ ಸರ್ಕಾರವು ಜನಸಾಮಾನ್ಯರಿಗೆ ವಸತಿ, ಆರೋಗ್ಯ ಮತ್ತು ಆಹಾರವನ್ನು ಒದಗಿಸುತ್ತಿರುವುದರಿಂದ ಮತ್ತು ಕೋಟ್ಯಂತರ ಜನರು ಬಡತನದ ಸಂಕೋಲೆಯಿಂದ ಹೊರಬರುತ್ತಿರುವುದರಿಂದ, ವಿವಿಧ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದು ನಮ್ಮ ಸಣ್ಣ ಉದ್ಯಮಗಳು ಮತ್ತು ವ್ಯಾಪಾರಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಇದು ಪ್ರತಿಭಾವಂತ ಯುವಕರು ಮತ್ತು ಮಹಿಳೆಯರನ್ನು ನವೋದ್ಯಮ ಆರಂಭಿಸಲು ಪ್ರೋತ್ಸಾಹಿಸುತ್ತಿದೆ, ಇದು ಉದ್ಯೋಗಾಕಾಂಕ್ಷಿಗಳನ್ನು ಉದ್ಯೋಗ ಸೃಷ್ಟಿಕರ್ತರನ್ನಾಗಿ ಪರಿವರ್ತಿಸುತ್ತಿದೆ. ಮೋದಿ ಸರ್ಕಾರದ ʻಮುದ್ರಾʼ ಸಾಲ ಯೋಜನೆಯಡಿ, 8 ಕೋಟಿ ಹೊಸ ಉದ್ಯಮಿಗಳನ್ನು ಸೃಷ್ಟಿಸಲು 23 ಲಕ್ಷ ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಈ ಪೈಕಿ 70 ಪ್ರತಿಶತದಷ್ಟು ಮಹಿಳಾ ಉದ್ಯಮಿಗಳು ಹಾಗೂ 51 ಪ್ರತಿಶತದಷ್ಟು ಫಲಾನುಭವಿಗಳು ಪ.ಜಾ /ಪ.ಪಂ. ಅಥವಾ ಒಬಿಸಿ ವರ್ಗಗಳಿಗೆ ಸೇರಿದವರಾಗಿದ್ದಾರೆ.
ದೇಶದ 140 ಕೋಟಿ ಜನರ ಶಕ್ತಿ ಮತ್ತು ಆಕಾಂಕ್ಷೆಗಳಿಂದಾಗಿ ಭಾರತದ ಪರಿವರ್ತನೆಯು ಇಡೀ ಜಗತ್ತಿಗೆ ಗೋಚರಿಸುತ್ತದೆ. ಇಂದು, ಸಾಂಕ್ರಾಮಿಕ ಹಾಗೂ ರಷ್ಯಾ ಉಕ್ರೇನ್ ಬಿಕ್ಕಟ್ಟಿನ ಅವಳಿ ಆಘಾತಗಳ ಹೊರತಾಗಿಯೂ ಭಾರತವನ್ನು ಪ್ರಕ್ಷುಬ್ಧ ಜಗತ್ತಿನಲ್ಲಿ ಪ್ರಕಾಶಮಾನವಾದ ತಾಣವೆಂದು ಜಾಗತಿಕವಾಗಿ ಶ್ಲಾಘಿಸಲಾಗಿದೆ.
ವಿಚಲಿತಗೊಂಡ ಪ್ರತಿಪಕ್ಷಗಳು
ಪ್ರಧಾನಿಯವರ ದೂರದೃಷ್ಟಿಯ ನಾಯಕತ್ವವು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ʻಅಮೃತ್ ಕಾಲʼದ ಸಮಯದಲ್ಲಿ, ಆಶಾವಾದದ ಈ ಹಂತದಲ್ಲಿ, ಕೆಲವು ಜನರು ಆತಂಕಕ್ಕೊಳಗಾಗಿದ್ದಾರೆ. ಭ್ರಷ್ಟಾಚಾರ, ವಂಶಪಾರಂಪರ್ಯ ರಾಜಕೀಯ ಮತ್ತು ತುಷ್ಟೀಕರಣ ಎಂಬ ಮೂರು ಪಿಡುಗುಗಳ ವಿರುದ್ಧ ಹೋರಾಡಲು ಪ್ರಧಾನಿ ನೀಡಿದ ಕರೆಯಿಂದ ಅವರು ವಿಚಲಿತರಾಗಿದ್ದಾರೆ.
ಅವರ ಭಯಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಭ್ರಷ್ಟಾಚಾರವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಪರಿಣಾಮಕಾರಿ ಕಾನೂನು ಜಾರಿ, ತಂತ್ರಜ್ಞಾನದ ಬಳಕೆ ಹಾಗೂ ಜನರಿಗೆ ಕಿರುಕುಳ ನೀಡಲು ಹಾಗೂ ಲಂಚ ಸುಲಿಗೆ ಮಾಡಲು ಬಳಕೆಯಾಗುತ್ತಿದ್ದ ಪುರಾತನ ಕಾನೂನುಗಳ ರದ್ದು ಮುಂತಾದ ಸರಣಿ ಉಪಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಸಾಮಾಜಿಕ ಸಾಮರಸ್ಯವನ್ನು ಹಾನಿಗೊಳಿಸಿದ ಈ ಹಿಂದಿನ ತುಷ್ಟೀಕರಣ ನೀತಿಗಳಿಗಿಂತ ಭಿನ್ನವಾಗಿ, ಸರ್ಕಾರದ ಪ್ರತಿಯೊಂದು ಉಪಕ್ರಮವು ಎಲ್ಲಾ ನಾಗರಿಕರನ್ನು ಸಮಾನವಾಗಿ ಪರಿಗಣಿಸುತ್ತದೆ ಎಂದು ಪ್ರಧಾನಿ ಖಾತರಿಪಡಿಸಿದ್ದಾರೆ.
ವಂಶಪಾರಂಪರ್ಯ ರಾಜಕಾರಣದ ದುಷ್ಟತನವನ್ನು ಪ್ರಧಾನಿ ಒತ್ತಿ ಹೇಳಿರುವುದು ಸರಿಯಷ್ಟೇ. ಇದರಲ್ಲಿ, ಒಂದು ನಿರ್ದಿಷ್ಟ ಕುಟುಂಬದ ಸದಸ್ಯರು ಅರ್ಹತೆಯನ್ನು ಲೆಕ್ಕಿಸದೆ ರಾಜಕೀಯ ಪಕ್ಷದ ಉನ್ನತ ಸ್ಥಾನವನ್ನು ಅಲಂಕರಿಸುತ್ತಾರೆ, ಅಲ್ಲಿ ಪಕ್ಷದ ಅರ್ಹ ಸದಸ್ಯರಿಗೆ ಉನ್ನತ ಸ್ಥಾನಕ್ಕೆ ಏರಲು ಯಾವುದೇ ಅವಕಾಶವಿಲ್ಲ.
ಈ ದುಷ್ಟತನಗಳನ್ನು ಹತ್ತಿಕ್ಕುವ ಸರ್ಕಾರದ ದೃಢನಿಶ್ಚಯವು ಜನಸಾಮಾನ್ಯರನ್ನು ಉತ್ತೇಜಿಸಿದೆ. ಆದರೆ ಕೆಲವು ವಿರೋಧ ಪಕ್ಷಗಳು ಇದರಿಂದ ಕಂಗಾಲಾಗಿವೆ. ಅವರು ತಮ್ಮ ನಕಾರಾತ್ಮಕತೆಯನ್ನು ಮರೆಮಾಚಲು ಸಾಧ್ಯವೇ ಇಲ್ಲ. ಇದರಲ್ಲಿ ಆಶ್ಚರ್ಯವೇನಿಲ್ಲ. ʻಘಮಾಂಡಿಯಾ ಘಟಬಂಧನ್ʼ ಹಗರಣ ಕಳಂಕಿತ ರಾಜವಂಶಗಳ ಒಂದು ಕೂಟವಾಗಿದೆ. ಅವರು ತುಷ್ಟೀಕರಣವನ್ನು ಚುನಾವಣಾ ಸಾಧನವಾಗಿ ಬಳಸುತ್ತಾರೆ. ಅವರಲ್ಲಿರುವ ಒಂದೇ ಒಂದು ಸಾಮ್ಯತೆಯೆಂದರೆ ನಕಾರಾತ್ಮಕತೆ, ತಣಿಯದ ಅಧಿಕಾರದಾಹ ಮತ್ತು ಮೂರು ದುಷ್ಟತನಗಳ ವಿರುದ್ಧ ಸರ್ಕಾರ ಕೈಗೊಳ್ಳುವ ನಿರ್ಣಾಯಕ ಕ್ರಮದ ಬಗ್ಗೆ ಹೆಚ್ಚುತ್ತಿರುವ ಭೀತಿ.
ಅಂತಹ ಒಂದು ಪಕ್ಷವು ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದಾಗ, ಆಡಳಿತಾವಧಿಯುದ್ದಕ್ಕೂ ನೂರಾರು ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಒಳಗೊಂಡ ಹಗರಣಗಳು ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿತು. ಇದು ಸಮ್ಮಿಶ್ರ ರಾಜಕೀಯದ ಅನಿವಾರ್ಯತೆ ಎಂದು ಆ ಸರ್ಕಾರದ ಪ್ರಧಾನಿ ಒಮ್ಮೆ ಹೇಳಿದ್ದರು. ಸಮ್ಮಿಶ್ರ ಸರ್ಕಾರವನ್ನು ಮುಂದುವರಿಸಬೇಕಾದ ಅನಿವಾರ್ಯ ಕಾರಣಕ್ಕಾಗಿ ಪ್ರಾಮಾಣಿಕ ಆಡಳಿತವನ್ನು ನೀಡಲು ಪ್ರಧಾನಿಗೆ ಸಾಧ್ಯವಾಗದಿರುವುದಕ್ಕಿಂತ ದುರದೃಷ್ಟಕರ ಪರಿಸ್ಥಿತಿ ಇರಲು ಸಾಧ್ಯವಿಲ್ಲ. ಪಕ್ಷವನ್ನು ನಡೆಸುವ ಕುಟುಂಬವು ಉತ್ತರದಾಯಿತ್ವವಿಲ್ಲದೆ ಅಧಿಕಾರವನ್ನು ನೀಡುವ ವ್ಯವಸ್ಥೆಯನ್ನು ರೂಪಿಸಿತು.
ಇದಕ್ಕೆ ಪ್ರತಿಯಾಗಿ, ಪ್ರಧಾನಿ ಮೋದಿಯವರಿಗೆ, ಆಡಳಿತ ಎಂದರೆ ಪ್ರಾಮಾಣಿಕತೆ, ಉತ್ತರದಾಯಿತ್ವ, ಪಾರದರ್ಶಕತೆ ಮತ್ತು ನಾಗರಿಕರ ಜೀವನವನ್ನು ಸುಧಾರಿಸುವ ಜ್ವಲಂತ ಬಯಕೆಯಾಗಿದೆ. ಅವರ ಪ್ರಕಾರ, ‘ಕುಟುಂಬ’ ಎಂದರೆ ಭಾರತದ ಎಲ್ಲಾ 140 ಕೋಟಿ ಜನರು. ಪ್ರಧಾನಿಯವರ ಕಾಳಜಿ ಮತ್ತು ಸಹಾನುಭೂತಿಯ ನಾಯಕತ್ವವನ್ನು ಜನರು ನಂಬುತ್ತಾರೆ, ಇದು ಅವರನ್ನು ಭಾರತದ ಅತ್ಯಂತ ಪರಿಣಾಮಕಾರಿ ಮತ್ತು ಅತ್ಯಂತ ಜನಪ್ರಿಯ ʻಪ್ರಧಾನ ಸೇವಕʼರನ್ನಾಗಿ ಮಾಡಿದೆ.
ಪಿಯೂಷ್ ಗೋಯಲ್,
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ,
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಜವಳಿ ಖಾತೆ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.