ಪ್ರಿಂಟೆಡ್ ಶ್ರಗ್, ಬೆಚ್ಚಗಿನ ಹಗ್!
Team Udayavani, Jan 13, 2021, 4:50 PM IST
ಸ್ಪೇನ್‌ನ ಪ್ರಸಿದ್ಧ ಕ್ರೀಡೆ ಬುಲ್ ಫೈಟಿಂಗ್‌ನಲ್ಲಿ ಗೂಳಿಯನ್ನು ಅಟ್ಟಾಡಿಸುವ ಮೆಟರ್ಡೋ ತೊಡುವ ಜಾಕೆಟ್‌ನಿಂದ ಪ್ರೇರಣೆ ಪಡೆದ ವಸ್ತ್ರ ವಿನ್ಯಾಸಕರು ಶ್ರಗ್ ಎಂಬ ಉಡುಪನ್ನು ಫ್ಯಾಷನ್ ಲೋಕಕ್ಕೆ ಪರಿಚಯಿಸಿದರು. ಅಂಗಿಯಂತಿರುವ, ಗುಂಡಿಗಳಿರದ ಈ ಮೇಲುಡುಪನ್ನು ಜಾಕೆಟ್ ನಂತೆಯೇ ತೊಡಲಾಗುತ್ತದೆ. ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ, ಎರಡೂ ತರಹದ ಉಡುಗೆಯ
ಜೊತೆ ತೊಡಬಹುದಾದ ಈ ಮೇಲುಡುಪು, ಮುಂಚೆ ಸ್ವೆಟರ್‌ನಂತೆ ಬಳಕೆಯಾಗುತ್ತಿತ್ತು.
ಆದರೀಗ ಸ್ಟೈಲ್ ಸ್ಟೇಟ್‌ಮೆಂಟ್ ಮಾಡಲೂ ತೊಡಲಾಗುತ್ತದೆ. ಕಪ್ಪು, ಬಿಳುಪು, ಕಂದು, ಗಾಢ ಬಣ್ಣಗಳಾದ ಹಸಿರು, ನೀಲಿ, ಕೆಂಪು ಮುಂತಾದ ಬಣ್ಣಗಳಿಗೆ ಸೀಮಿತವಾಗಿದ್ದ ಈ ಶ್ರಗ್, ಇದೀಗ ತಿಳಿ ಬಣ್ಣಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲ,
ಬೋರಿಂಗ್ ಪ್ಲೇನ್ ಆಗಿರದೆ ಬಣ್ಣದ ಚಿತ್ತಾರ, ಆಕೃತಿ, ವಿನ್ಯಾಸ, ಪ್ಯಾಟರ್ನ್ ಮತ್ತು ಆಕಾರದಲ್ಲಿ ಕಾಣಿಸಿಕೊಳ್ಳುತ್ತಿದೆ. ರವಿಕೆಗಿಂತ ಉದ್ದದ, ಜಾಕೆಟ್ ಮತ್ತು ಕೋಟ್‌ಗಿಂತ ತೆಳ್ಳಗಿರುವ ಕೋಟೇ ಈ ಶ್ರಗ್. ಚೂಡಿದಾರ ಟಾಪ್‌ನಷ್ಟೇ ಉದ್ದದ ಶ್ರಗ್‌ಗಳೂ
ಮಾರುಕಟ್ಟೆಯಲ್ಲಿ ಲಭ್ಯವಿವೆ.
ಬಣ್ಣಬಣ್ಣದ ಬಟ್ಟೆ ಮೇಲೆ ಪ್ಲೈನ್ ಶ್ರಗ್ ತೊಟ್ಟರೆ, ಪ್ಲೈನ್ ಉಡುಗೆ ಮೇಲೆ ಬಣ್ಣಬಣ್ಣದ ಶ್ರಗ್ ತೊಡಲಾಗುತ್ತದೆ. ಇವುಗಳಲ್ಲಿ ಬಟನ್, ಲಾಡಿ, ದಾರ, ಜಿಪ್ ಅಥವಾ ವೆಲ್ಕ್ರೋ ಇಲ್ಲದೆ ಇರುವ ಕಾರಣ ಇವುಗಳನ್ನು ಗಡಿಬಿಡಿಯಲ್ಲೂ ತೊಡಬಹುದು! ಇನ್ನು ಬಟ್ಟೆಯ ಮೆಟೀರಿಯಲ್ ನೋಡಿ ಹೋಗುವುದಾದರೆ, ವೆಲ್ವೆಟ್ (ಮಕ್ಮಲ್), ಫರ್ (ಮೃದು ರೋಮದಿಂದ ಮಾಡಿದ ಬಟ್ಟೆ),
ಲೇಸ್, ಉಣ್ಣೆ, ಹೀಗೆ ಹಲವು ಬಗೆಗಳಿವೆ. ಜೀನ್ಸ್ ಪ್ಯಾಂಟ್ ಮೇಲೆ ಧರಿಸಲು ಸರಳ ಶ್ರಗ್, ಚೂಡಿದಾರ ಮೇಲೆ ತೊಡಲು ಟ್ಯಾಝೆಲ್ ಶ್ರಗ್, ಸಲ್ವಾರ್ ಕಮೀಜ್ ಹಾಗು ಅನಾರ್ಕಲಿ ಡ್ರೆಸ್ ಮೇಲೆ ಬ್ಲಾಕ್ ಪ್ರಿಂಟೆಡ್ ಶ್ರಗ್‌ಗಳೂ ಲಭ್ಯವಿವೆ. ಸೀರೆ, ಚೂಡಿದಾರ, ಕುರ್ತಿ, ಲಂಗ, ಶಾರ್ಟ್ಸ್, ಡೆನಿಮ್ ಸೇರಿದಂತೆ ಬಹುತೇಕ ಎಲ್ಲ ದಿರಿಸಿನ ಜೊತೆ ಶ್ರಗ್‌ಗಳನ್ನು ತೊಡಬಹುದು. ಶ್ರಗ್‌ನಿಂದ ಯಾವುದೇ ಸಿಂಪಲ್ ಉಡುಪು ಕೂಡ ಸ್ಪೆಷಲ್ ಆಗಿ ಕಾಣಿಸುತ್ತದೆ. ಈ ಚಳಿಗಾಲದಲ್ಲಿ, ಸ್ಟೈಲಿಶ್ ಪ್ರಿಂಟೆಡ್ ಶ್ರಗ್ ಜೊತೆ ಬೆಚ್ಚಗಿನ ಆರಾಮ ಪಡೆಯಿರಿ, ಜೊತೆಗೆ ಇನ್ನಷ್ಟು ಅಂದವಾಗಿಯೂ ಕಾಣಿರಿ.
ಎಲ್ಲೇಡೆ ಲಭ್ಯವಿದೆ…
ಮಿಲಿಟರಿ ಪ್ರಿಂಟ್, ಬ್ಲಾಕ್ ಪ್ರಿಂಟ್, ಚೆಕ್ಸ್ ಡಿಸೈನ್, ಫ್ರೋರಲ್ ಪ್ರಿಂಟ್ ಅಂದರೆ ಹೂವಿನ ಆಕೃತಿ, ಅನಿಮಲ್ ಪ್ರಿಂಟ್, ಕಲಮ್ ಕಾರಿ, ಚಿಕನ್ ಕಾರಿ, ಬಾಂಧಾನಿ, ಟೈ – ಡೈ, ಮತ್ತಿತರ ಕಸೂತಿ ಹಾಗು ಚಿತ್ರಕಲಾ ಶೈಲಿ ಉಳ್ಳ ಶ್ರಗ್ ಅಂಗಡಿ, ಮಾರುಕಟ್ಟೆ ಮತ್ತು ಆನ್‌ಲೈನ್‌ನಲ್ಲೂ ಲಭ್ಯ ಇವೆ. ಶ್ರಗ್ ಅನ್ನು ಹೆಚ್ಚಾಗಿ ಕ್ಯಾಶುಯಲ್ ಪ್ಯಾಂಟ್, ಶರ್ಟ್ ಜೊತೆ ತೊಡುತ್ತಿದ್ದರು. ಆದರೀಗ ಮೇಕ್
ಓವರ್ ಪಡೆದ ಕಾರಣ ಬಗೆಬಗೆಯ ಇಂಡಿಯನ್ ಶ್ರಗ್ ಅನ್ನು ಹಬ್ಬ, ಪೂಜೆ, ಮದುವೆ ಸೇರಿದಂತೆ ಎಲ್ಲ ಕಾರ್ಯಕ್ರಮಕ್ಕೂ
ಧರಿಸಬಹುದು.
– ಅದಿತಿಮಾನಸ ಟಿ ಎಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.