ಅಂದು ದಾನ ರೂಪದಲ್ಲಿದ್ದ ಮತದಾನ ಇಂದು ವ್ಯಾಪಾರೀಕರಣ
Team Udayavani, Feb 15, 2023, 6:05 AM IST
ಪ್ರೊ| ಐ.ಜಿ. ಸನದಿ,
ಮಾಜಿ ಶಾಸಕ ಹಾಗೂ ಮಾಜಿ ಸಂಸದ
ಅಂದು ಮತದಾನ ಹೆಸರೇ ಸೂಚಿಸುವಂತೆ ದಾನದ ರೂಪದಲ್ಲಿ ಇತ್ತು. ಜನಕಲ್ಯಾಣಕ್ಕಾಗಿ ತಮ್ಮ ಸ್ವಂತ ಆಸ್ತಿಯನ್ನು ಮಾರಾಟ ಮಾಡಿ, ತ್ಯಾಗ ಮಾಡಿ ರಾಜಕೀಯಕ್ಕೆ ಧುಮುಕುವವರೇ ಅಧಿಕವಾಗಿದ್ದರು. ಆದರೆ ಇಂದು ಮತದಾನದಿಂದ ದೂರ ಸರಿದು ವಾಣಿಜ್ಯರೂಪ ಪಡೆದುಕೊಂಡಿದೆ. ನನ್ನ ಜನ, ನನ್ನ ಊರು, ನನ್ನ ಕ್ಷೇತ್ರ ಎಂಬ ಜಾಗದಲ್ಲಿ ಸ್ವಾರ್ಥ ಮನೆ ಮಾಡಿಕೊಂಡಿದೆ. ಚುನಾವಣ ರಾಜಕೀಯದಲ್ಲಿ ಅಂದಿಗೂ-ಇಂದಿಗೂ ಅಜಗಜಾಂತರ ಕಾಣುತ್ತಿದೆ. ರಾಜನೀತಿ ಎಂದರೆ ಸೇವಾಕ್ಷೇತ್ರವೆಂದು ನಂಬಿದ್ದ ಅದೆಷ್ಟೋ ಜನರು ಕಳೆದುಹೋಗುವಂತೆ ಮಾಡಿದೆ ಇಂದಿನ ಸ್ಥಿತಿ.
ಮತದಾನ ಎಂದರೆ ಅಂದು ಗೌರವವಿತ್ತು. ಮತ ವ್ಯಾಪಾರೀಕರಣಗೊಂಡಿರಲಿಲ್ಲ. ನಮ್ಮವು ಇಷ್ಟು ಮತಗಳಿವೆ ಎಷ್ಟು ಕೊಡುತ್ತೀರಿ ಎಂದು ಕೇಳುವ ಕೆಟ್ಟ ಸಂಸ್ಕೃತಿ ಇರಲಿಲ್ಲ. ಯಾರು ಜನರೊಂದಿಗೆ ಉತ್ತಮ ಸಂಬಂಧ, ಅವರ ಕಷ್ಟ-ತೊಂದರೆಗಳಿಗೆ ನೆರವಾಗುತ್ತಾರೋ, ಸಂಭಾವಿತ ವ್ಯಕ್ತಿತ್ವ ಹೊಂದಿದವರು ಇದ್ದರೆ ಜನರು ಸ್ವಯಂ ಪ್ರೇರಣೆಯಿಂದ ತಮ್ಮ ಪ್ರತಿನಿಧಿಯನ್ನಾಗಿಸುತ್ತಿದ್ದರು. ಜನ ಪ್ರತಿನಿಧಿಯಾದವರು ಸಹ ಜನರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದ್ದರು. ಜನರಿಗೆ ಕೆಲಸ ಮಾಡಿಕೊಡುವುದಕ್ಕಾಗಿ ಹಣ ಪಡೆದುಕೊಳ್ಳುವ ದುಶ್ಚಟ ರಾಜಕಾರಣಿಗಳಿಗೆ ಇರಲಿಲ್ಲ.
ಅಬ್ಬರದ ಪ್ರಚಾರ ಇರಲಿಲ್ಲ
ಚುನಾವಣೆ ಪ್ರಚಾರದ ವಿಚಾರಕ್ಕೆ ಬಂದರೆ ಇಂದಿನಂತೆ ಅಬ್ಬರದ ಪ್ರಚಾರ ಇರಲಿಲ್ಲ. ಪ್ರಚಾರಕ್ಕೆ ಧ್ವನಿವರ್ಧಕ ಇರಲಿಲ್ಲ. ಗ್ರಾಮಾಫೋನ್ ತೆಗೆದುಕೊಂಡು ಹೋಗುತ್ತಿದ್ದೆವು. ಹಾರ್ನ್ ಮಾಡುತ್ತ ಓಣಿ ಓಣಿಯಲ್ಲಿ ಕೂಗಿಕೊಂಡು ಹೋಗಬೇಕಾಗಿತ್ತು. ಇನ್ನು ಸಾರ್ವಜನಿಕ ಸಭೆ ಎಂದರೆ ಕ್ಷೇತ್ರದ 2-3 ಕಡೆ ಮಾಡಿದರೆ ಅದೇ ಹೆಚ್ಚು ಎನ್ನುವಂತಿತ್ತು. ಒಬ್ಬ ಭಾಷಣಕಾರರು ಇರುತ್ತಿದ್ದರು. ರಾಜ್ಯಮಟ್ಟದ ನಾಯಕರು ಬಂದರೆ ಬಂದರು ಇಲ್ಲವೆಂದರೆ ಇಲ್ಲ ಎನ್ನುವ ಸ್ಥಿತಿ ಅದು. ಇನ್ನು ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಜಾತಿ, ವಿದ್ಯಾರ್ಹತೆಗೆ ಹೆಚ್ಚು ಗಮನ ನೀಡಲಾಗುತ್ತಿರಲಿಲ್ಲ. ಬದಲಾಗಿ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದಾರೆಯೇ, ಸಂಭಾವಿತರೇ, ಜನರ ಆಶೋತ್ತರಗಳಿಗೆ ಸ್ಪಂದಿಸುವರೇ ಎಂಬ ವಿಷಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿತ್ತು.
ವಚನ ಮಾಸಪತ್ರಿಕೆ ಆರಂಭಿಸಿದ್ದೆ
ನನ್ನ ಮೊದಲ ಚುನಾವಣೆಯನ್ನೇ ತೆಗೆದುಕೊಳ್ಳಿ. ಕಾಲೇಜೊಂದರ ಪ್ರಾಂಶುಪಾಲನಾಗಿದ್ದ ನಾನು ಕೆ.ಎಚ್.ಪಾಟೀಲ, ಎಫ್.ಎಚ್.ಮೊಹಸೀನ್ ಅವರ ಗರಡಿಯಲ್ಲಿ ಪಳಗಿದ್ದರೂ ಚುನಾವಣ ಸ್ಪರ್ಧೆ ನನ್ನ ಚಿಂತನೆಯಲ್ಲಿಯೂ ಇರಲಿಲ್ಲ. 1972ರಲ್ಲಿ ಅಂದಿನ ಹುಬ್ಬಳ್ಳಿ ಶಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ನನ್ನನ್ನು ಹಿರಿಯರು ಆಯ್ಕೆ ಮಾಡಿದಾಗ ಚುನಾವಣ ಸ್ಪರ್ಧೆಗಿಳಿಯುವ ಪುಳಕ ಒಂದು ಕಡೆಯಾದರೆ, ಚುನಾ ವಣೆಗಾಗಿ ಇದ್ದ ನೌಕರಿ ಬಿಟ್ಟು, ಚುನಾವಣೆಯಲ್ಲಿ ಸೋತರೆ ಮುಂದೇನು ಎಂಬ ಆತಂಕ ಮತ್ತೂಂದು ಕಡೆ ಮೂಡಿತ್ತು. ಯಾವುದಕ್ಕೂ ಇರಲಿ ಎಂದು ವಚನ ಎಂಬ ಮಾಸಪತ್ರಿಕೆ ಟೈಟಲ್ ಪಡೆದುಕೊಂಡು ಇರಿಸಿಕೊಂಡಿದ್ದೆ. ಒಂದು ವೇಳೆ ಸೋತರೆ ಪತ್ರಿಕೆ ನಡೆಸಿಕೊಂಡು ಹೋದರಾಯಿತು ಎಂದು ನಿರ್ಧರಿಸಿದ್ದೆ.
1972ರ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಪ್ರಮುಖರೊಬ್ಬರು ಮನೆಗೆ ಕರೆದು ಕುಡಿಯಲು ಹಾಲು ನೀಡಿ, 100 ರೂ.ಗಳನ್ನು ಚುನಾವಣೆ ವೆಚ್ಚಕ್ಕೆಂದು ನೀಡಿದ್ದರು. ನನ್ನೊಂದಿಗೆ ಇದ್ದವರು ನನ್ನ 16 ಜನ ವಿದ್ಯಾರ್ಥಿಗಳು, ನಾಲ್ಕೈದು ಜನ ಪ್ರಮುಖರು ಮಾತ್ರ. ಮತ ಹಾಕಲು ಇನ್ನಿತರ ವೆಚ್ಚವೆಂದು ಯಾರೊಬ್ಬರೂ ನನ್ನಲ್ಲಿ ಹಣ ಕೇಳಿರಲಿಲ್ಲ. ಜನರೇ ಖುಷಿಯಿಂದ ಮತದಾನ ಮಾಡಿ ನನ್ನನ್ನು ಗೆಲ್ಲಿಸಿದ್ದರು. ಮುಂದೆ 1978, 1983ರಲ್ಲಿ ಹಲವು ಅಪಪ್ರಚಾರದಿಂದ ಸೋಲುಣ್ಣಬೇಕಾಯಿತು.
ಆತ್ಮಸಾಕ್ಷಿಗೆ ಪೂರಕವಾಗಿ ನಡೆಯಬೇಕು
ಜನಪ್ರತಿನಿಧಿ ಆಗುವುದು ಜನರ ಸೇವೆ ಮಾಡುವುದಕ್ಕಾಗಿ, ತಮಗೆ ಉಪಕಾರ ಆಗಲಿದೆ ಎಂಬ ಉದ್ದೇಶದಿಂದಲೇ ಜನರು ಆಯ್ಕೆ ಮಾಡಿರುತ್ತಾರೆ. ಜನರ ಕೆಲಸ ಮಾಡಿಸಿಕೊಡಲು ಅವರಿಂದ ಹಣ ಪಡೆಯುವುದು ಸರಿಯಲ್ಲ. ಎಷ್ಟೋ ಜನ ಚಿನ್ನಾಭರಣ ಒತ್ತೆ ಇರಿಸಿ ಇಲ್ಲವೆ ಮಾರಾಟ ಮಾಡಿ, ಆಸ್ತಿ ಮಾರಾಟ ಮಾಡಿ, ಸಾಲ ಮಾಡಿ ಹಣ ತಂದಿರುತ್ತಾರೆ. ಅಂತಹ ಹಣ ಪಡೆದು ನಾವು ಸುಖವಾಗಿರಲು ಸಾಧ್ಯವೇ? ಅನ್ಯಮಾರ್ಗವಾಗಿ ಸಂಪಾದನೆ ಮಾಡಿದವರು ಸುಖೀಯಾಗಿರುವುದನ್ನು ನಾನು ಕಂಡಿಲ್ಲ. ಸಾರ್ವಜನಿಕ ಜೀವನದಲ್ಲಿ ಎಚ್ಚರಿಕೆಯಿಂದ ಇರಬೇಕು. ಆತ್ಮಸಾಕ್ಷಿಗೆ ಪೂರಕವಾಗಿ ನಡೆಯಬೇಕು. ಆದರೆ ಇಂದಿನ ರಾಜಕೀಯ ಸ್ಥಿತಿ ನೋವು-ಬೇಸರ ತರಿಸುತ್ತಿದೆ.
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.