ಹೋರಾಟಕ್ಕೆ ರಾಹುಲ್ ಬೆಂಬಲ: ವಿರೋಧ
Team Udayavani, Oct 1, 2019, 3:08 AM IST
ಬೆಂಗಳೂರು: ಬಂಡೀಪುರ ಹೆದ್ದಾರಿ ರಾತ್ರಿ ಸಂಚಾರ ಅನುಮತಿಗಾಗಿ ಕೇರಳದಲ್ಲಿ ಕೆಲ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿ ಬೆಂಬಲ ಸೂಚಿಸಿರುವುದಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅಭಿಪ್ರಾಯ ನೀಡಿರುವ ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ, 2010ರಲ್ಲಿ ಪರ್ಯಾಯ ರಸ್ತೆ ಅಭಿವೃದ್ಧಿ ಪಡಿಸಿದರೆ ರಾತ್ರಿ ಸಂಚಾರ ನಿರ್ಬಂಧಕ್ಕೆ ವಿರೋಧವಿಲ್ಲ ಎಂದು ಹೇಳಿದವರು ಈಗ ವ್ಯತಿರಿಕ್ತವಾಗಿ ತಗಾದೆ ತೆಗೆದಿದ್ದಾರೆ. ಬಹು ಮುಖ್ಯವಾಗಿ ಕೇರಳ ಸರ್ಕಾರವು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಮಾಡಿದ ಮನವಿಯ ಮೇರೆಗೆ ರಾಜ್ಯ ಸರ್ಕಾರ 75 ಕೋಟಿ ವೆಚ್ಚದಲ್ಲಿ ಪರ್ಯಾಯ ರಸ್ತೆಯನ್ನು ಅಭಿವೃದ್ಧಿಪಡಿಸಿದೆ.
ಜತೆಗೆ ಸದ್ಯ ನಿರ್ಬಂಧದ ವೇಳೆ ತುರ್ತು ವಾಹನಗಳಿಗೆ ಮುಕ್ತ ಸಂಚಾರ ಹಾಗೂ ಎಂಟು ಸರ್ಕಾರಿ ಬಸ್ ಗಳಿಗೆ ಅನುಮತಿಯ ವ್ಯವಸ್ಥೆ ನೀಡಿದ್ದರೂ ಪೂರ್ಣ ಅನುಮತಿ ಕೇಳುವುದು ಸೂಕ್ತವಲ್ಲ. ಬಂಡೀಪುರ ಹೆದ್ದಾರಿ ರಾತ್ರಿ ಸಂಚಾರ ನಿರ್ಬಂಧವನ್ನು ವನ್ಯಜೀವಿಗಳ ಸಂರಕ್ಷಣೆಯ ದೃಷ್ಠಿಯಿಂದ ನ್ಯಾಯಾಲಯ ಆದೇಶಿಸಿದೆ. ಈ ಆದೇಶವನ್ನು ಕರ್ನಾಟಕ ರಾಜ್ಯದ ಮತ್ತು ಕೇಂದ್ರದ ಎಲ್ಲಾ ಪಕ್ಷಗಳ ಸರ್ಕಾರಗಳು ಬೆಂಬಲಿಸಿವೆ ಎಂದಿದ್ದಾರೆ.
ಮರಳು ಕಳ್ಳ ಸಾಗಣೆದಾರರು, ಖಾಸಗಿ ಬಸ್‌ಗಳಲ್ಲಿ ತೆರಿಗೆ ವಂಚಿಸಿ ಸರಕು ಸಾಗಣೆ ಮಾಡುವವರು, ಕಾನೂನುಬಾಹಿರವಾಗಿ ಜಾನುವಾರು ಸಾಗಣೆ ಮತ್ತು ಇತ್ತೀಚೆಗೆ ಕೇರಳದಿಂದ ಕರ್ನಾಟಕಕ್ಕೆ ಆಸ್ಪತ್ರೆ ಕಸ ಮತ್ತಿತರ ಸಾಂಕ್ರಾಮಿಕ ರೋಗಗಳನ್ನು ಹರಡುವ ಹೊಲಸನ್ನು ತಂದು ಸುರಿಯುವವರ ದುಷ್ಟಕೂಟಗಳು ಈ ವಿರೋಧದ ಹಿಂದಿರುವ ಜನ. ಇವರನ್ನು ರಾಜಕಾರಣಿಗಳು ಬೆಂಬಲಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ರಾತ್ರಿ ಸಂಚಾರ ಅನುಮತಿ ಕೇಳುವುದು ತಪ್ಪು: ಈ ಕುರಿತು ಪ್ರತಿಕ್ರಿಯೆ ನೀಡಿದ ಪರಿಸರ ತಜ್ಞ ಲಿಯೋ ಸಾಲ್ಡಾನಾ ಅವರು, ರಾಹುಲ್ ಗಾಂಧಿ ಅವರು ನೀಡಿರುವ ಹೇಳಿಕೆ ತಪ್ಪು. ಈ ಹಿಂದೆ ಸಂಚಾರ ನಿಷೇಧ ಮಾಡುವ ಮೊದಲು ಆ ರಸ್ತೆಯಲ್ಲಿ ಸಾಕಷ್ಟು ಬಾರಿ ಓಡಾಟ ಮಾಡಿದ್ದೇನೆ. ಆ ವೇಳೆ ಜಿಂಕೆ, ಆನೆ, ಚಿರತೆಗಳಿಗೆ ರಸ್ತೆದಾಟುವಾಗ ವಾಹನಗಳಿಂದ ಹಾನಿಯಾಗಿರುವುದನ್ನು ನೋಡಿದ್ದೇನೆ. ಪರ್ಯಾಯ ರಸ್ತೆ ಮಾರ್ಗವಿದ್ದರೂ ಬಳಸದೇ ಅದೇ ರಸ್ತೆ ಮಾರ್ಗಬೇಕು ಎಂದು ಕೇಳುವುದು ಸೂಕ್ತವಲ್ಲ ಎಂದಿದ್ದಾರೆ.
ಮನುಷ್ಯನಷ್ಟೇ ಪ್ರಾಣಿಗಳಿಗೂ ಜೀವಿಸುವ ಹಕ್ಕಿದ್ದು, ಕಾಡಿನಿಂದ ಮಾನವನ ಹಸ್ತಕ್ಷೇಪ ಕಡಿಮೆ ಮಾಡಬೇಕು. ಸಾಧ್ಯವಾದರೆ ಹಗಲು ರಸ್ತೆ ಸಂಚಾರವನ್ನೂ ರಾಜ್ಯ ಸರ್ಕಾರ ಅಭಿವೃದ್ಧಿ ಪಡೆಸಿರುವ ಪರ್ಯಾಯ ಮಾರ್ಗದಲ್ಲಿಯೇ ಕೇರಳಕ್ಕೆ ವಾಹನ ತೆರಳುವಂತೆ ಕ್ರಮವಹಿಸಬೇಕು. ಇನ್ನು ಸರ್ಕಾರ ಭವಿಷ್ಯದಲ್ಲಿ ಕಾಡಿನೊಳಗೆ ಕಾರಿಡಾರ್ ರಸ್ತೆ ನಿರ್ಮಾಣದಂತಹ ತಪ್ಪು ನಿರ್ಧಾರಕ್ಕೆ ಮುಂದಾಗಿ ಕಾಮಗಾರಿಗಳಿಂದ ಕಾಡನ್ನು ಬಹುಪಾಲು ಹಾಳು ಮಾಡುವುದು ಬೇಡ ಎಂದಿದ್ದಾರೆ.
ಅಂತರ ಕಾಯ್ದುಕೊಳ್ಳಲು ಕಾಂಗ್ರೆಸ್ ನಿರ್ಧಾರ
ಬೆಂಗಳೂರು: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿಹೊತ್ತು ವಾಹನ ಸಂಚಾರ ಮಾಡುವ ಕುರಿತಂತೆ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ವಯನಾಡು ಸಂಸದ ರಾಹುಲ್ ಗಾಂಧಿ ಅವರ ನಿಲುವಿನಿಂದ ರಾಜ್ಯ ಕಾಂಗ್ರೆಸ್ ಅಂತರ ಕಾಯ್ದುಕೊಳ್ಳಲು ತೀರ್ಮಾನಿಸಿದೆ. ರಾಹುಲ್ ಗಾಂಧಿ ಕೇರಳ ಪರವಾಗಿ ವಾದ ಮಾಡಿರು ವುದು ರಾಜ್ಯ ಕಾಂಗ್ರೆಸನ್ನು ಗೊಂದಲಕ್ಕೆ ಸಿಲುಕಿಸಿದೆ. ರಾಹುಲ್ ಪರ ವಾದ ಮಾಡಿದರೆ, ರಾಜ್ಯದ ವಿರುದ್ಧ ವಾದ ಮಾಡಿದರು ಎಂಬ ಆರೋಪ ಹೊತ್ತುಕೊ ಳ್ಳಬೇಕಾಗುತ್ತದೆ ಎನ್ನುವ ಕಾರಣಕ್ಕೆ ಈ ವಿಷಯದಿಂದ ಅಂತರ ಕಾಯ್ದುಕೊಳ್ಳಲು ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ.
ರಾಹುಲ್ ಗಾಂಧಿ ವಯನಾಡು ಸಂಸದರಾಗಿರುವುದರಿಂದ ಅವರು ತಮ್ಮ ಕ್ಷೇತ್ರದ ಜನರ ಬೇಡಿಕೆಯಂತೆ ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ಹೊತ್ತು ವಾಹನ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಆದರೆ, ಇದರಲ್ಲಿ ರಾಜ್ಯದ ಹಿತಾಸಕ್ತಿಯೂ ಅಡಗಿರುವುದರಿಂದ ಅನಗತ್ಯ ಗೊಂದಲ ಸೃಷ್ಠಿಸಿಕೊಳ್ಳುವ ಬದಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತೆಗೆದುಕೊಳ್ಳುವ ನಿಲುವಿಗೆ ಬದ್ಧರಾಗಿರಲು ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ.
ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ವಾಹನ ಸಂಚಾರದಿಂದ ಕಾಡು ಪ್ರಾಣಿಗಳಿಗೆ ಹಾನಿಯಾಗುತ್ತದೆ ಎನ್ನುವ ಕಾರಣಕ್ಕೆ ಈಗಾಗಲೇ ರಾಜ್ಯ ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರ ರಾತ್ರಿ ವಾಹನ ಸಂಚಾರ ನಿಷೇಧ ಹೇರಿರುವುದರಿಂದ ಈ ಸಂದರ್ಭದಲ್ಲಿ ರಾಹುಲ್ ಪರ ನಿಲ್ಲುವುದರಿಂದ ರಾಜ್ಯ ವಿರೋಧಿ ಧೋರಣೆ ಅನುಸರಿಸಿದಂತಾಗುತ್ತದೆ. ಒಂದು ವೇಳೆ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಆ ಭಾಗದಲ್ಲಿ ರಾತ್ರಿ ಹೊತ್ತು ವಾಹನ ಸಂಚಾರಕ್ಕೆ ವೈಜ್ಞಾನಿಕವಾಗಿ ಪರ್ಯಾಯ ಮಾರ್ಗ ಹುಡುಕುವ ಪ್ರಯತ್ನ ಮಾಡಿದರೆ. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬದ್ದವಾಗಿರಲು ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ.
ರಾಹುಲ್ ಗಾಂಧಿಯವರು ವಯನಾಡು ಕ್ಷೇತ್ರದ ಸಂಸದರಾಗಿ ಹೇಳಿದ್ದಾರೆ. ಅದು ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ, ಸ್ಥಳೀಯರ ನಿರ್ಧಾರವೂ ಮುಖ್ಯವಾಗುತ್ತದೆ. ಅಲ್ಲದೇ ನ್ಯಾಯಾಲಯದ ಆದೇಶಗಳೂ ಇವೆ. ಹೀಗಾಗಿ ಇದರಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಇರೋದಿಲ್ಲ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.