ಕರಾವಳಿಯ ಹಲವೆಡೆ ಸಿಡಿಲು, ಗಾಳಿ ಸಹಿತ ಉತ್ತಮ ಮಳೆ; ಹಾನಿ
Team Udayavani, Apr 8, 2020, 6:40 AM IST
ಮಂಗಳೂರು/ಉಡುಪಿ: ಉತ್ತರ ಒಳನಾಡಿನಿಂದ ಕೇರಳ ರಾಜ್ಯದವರೆಗೆ ಸಮುದ್ರದಲ್ಲಿ ನಿಮ್ನ ಒತ್ತಡ ನಿರ್ಮಾಣವಾದ ಪರಿಣಾಮ ಕರಾವಳಿಯ ಅನೇಕ ಕಡೆ ಗಳಲ್ಲಿ ಮಂಗಳವಾರ ಸಂಜೆ ಭಾರೀ ಸಿಡಿಲು, ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಕೆಲವು ಕಡೆ ಗಾಳಿ, ಸಿಡಿಲಿನಿಂದ ಹಾನಿಯೂ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಗುರುವಾಯನಕೆರೆ, ಧರ್ಮಸ್ಥಳ, ಮುಂಡಾಜೆ, ಕಕ್ಕಿಂಜೆ, ಚಾರ್ಮಾಡಿ, ಉಡುಪಿ
ಜಿಲ್ಲೆಯ ಉಡುಪಿ, ಮಣಿಪಾಲ, ಬ್ರಹ್ಮಾವರ, ಹಾಲಾಡಿ, ಕಾರ್ಕಳ, ಕುಂದಾಪುರ, ಕೊಲ್ಲೂರು, ಸಿದ್ದಾಪುರ, ಗಂಗೊಳ್ಳಿ, ಹೆಮ್ಮಾಡಿ, ಉಪ್ಪುಂದ, ಶಿರೂರು, ಹೆಬ್ರಿ, ಕಮಲಶಿಲೆ ಸುತ್ತಮುತ್ತ ಗುಡುಗು, ಗಾಳಿ ಮಳೆಯಾಗಿದೆ. ಉಳಿದಂತೆ ಜಿಲ್ಲೆಯ ಹೆಚ್ಚಿನ ಕಡೆ ಮೋಡ ಕವಿದ ವಾತಾವರಣ ಇತ್ತು.ಬಂಟ್ವಾಳ ತಾಲೂಕಿನ ಹಲವೆಡೆ ತುಂತುರು ಮಳೆಯಾಗಿದೆ.
ವಿದ್ಯುತ್ ವ್ಯತ್ಯಯ
ಗುಡುಗು ಸಹಿತ ಮಳೆ ಸುರಿಯುತ್ತಿದ್ದಂತೆ ಉಡುಪಿ ಜಿಲ್ಲೆಯ ವಿವಿಧೆಡೆ ವಿದ್ಯುತ್ ವ್ಯತ್ಯಯವಾಯಿತು. ಕಾರ್ಕಳ, ಹಿರಿಯಡ್ಕ ಭಾಗದಲ್ಲಿ ಹಾದುಹೋಗುವ ಮೈನ್‌ಲೈನ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ವ್ಯತ್ಯ ಉಂಟಾಯಿತು. ಅನಂತರ ಹಂತ-ಹಂತವಾಗಿ ವಿದ್ಯುತ್ ಸರಬರಾಜು ಮಾಡಲಾಯಿತು.
ಇನ್ನೂ 2 ದಿನ ಮಳೆ ಸಾಧ್ಯತೆ
ಭಾರತೀಯ ಹವಾಮಾನ ಇಲಾಖೆಯ ಅಂಕಿ-ಅಂಶದಂತೆ ಮಂಗಳವಾರ ಪಣಂಬೂರಿನಲ್ಲಿ 36.9 ಮಿ.ಮೀ. ಗರಿಷ್ಠ ಮತ್ತು 26 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ಎರಡು ದಿನಗಳ ಕಾಲ ದ.ಕ. ಸೇರಿದಂತೆ ಕರಾವಳಿ ಭಾಗದ ಅನೇಕ ಕಡೆಗಳಲ್ಲಿ ಸಂಜೆ ವೇಳೆ ಸಾಧಾರಣ ಗಾಳಿ-ಮಳೆಯಾಗುವ ಸಾಧ್ಯತೆ ಇದೆ. ಸುಮಾರು 10ರಿಂದ 15 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿಸಿದೆ. ಮುಂದಿನ ಒಂದೆರಡು ದಿನ ಬಿಸಿಲಿನ ತಾಪ ಕಡಿಮೆಯಾಗಲಿದ್ದು, ಬಳಿಕ ಗರಿಷ್ಠ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹವಾಮಾನ ತಜ್ಞರು.
ಬೆಚ್ಚಿ ಬೀಳಿಸಿದ ಸಿಡಿಲು
ಕೆಲವು ದಿನಗಳಿಂದ ತಾಪಮಾನ ಏರಿಕೆಯಾಗಿ ಸೆಕೆಯಿಂದ ಬಸವಳಿದಿದ್ದ ಜನತೆಗೆ ಮಂಗಳವಾರ ಸಂಜೆಯ ಮಳೆ ತಂಪೆರೆಯಿತಾದರೂ ಜತೆ ಜತೆಗೆ ಒಂದರ ಮೇಲೊಂದರಂತೆ ಎರಗಿದ ಸಿಡಿಲಿನಿಂದ ಜನರು ಬೆಚ್ಚಿ ಬೀಳುವಂತಾಯಿತು. ಉಡುಪಿ ನಗರ ಸಹಿತ ಜಿಲ್ಲೆಯ ಹೆಚ್ಚಿನೆಡೆ ಸಿಡಿಲಿನ ಅಬ್ಬರ ಜೋರಾಗಿತ್ತು. ಸಿಡಿಲಿನಿಂದಾಗಿ ಹೆಚ್ಚಿನ ಕಡೆ ವಿದ್ಯುತ್ ಸರಬರಾಜು ಕಡಿತಗೊಂಡಿತು. ಉಡುಪಿ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ರಾತ್ರಿಯವರೆಗೂ ವಿದ್ಯುತ್ ಕಣ್ಣಾಮುಚ್ಚಾಲೆ ಮುಂದುವರಿದಿತ್ತು. ವಿದ್ಯುತ್ ಸರಬರಾಜು ಮಾತ್ರವಲ್ಲದೆ ಕೆಲವೆಡೆ ಮೊಬೈಲ್ ನೆಟ್‌ವರ್ಕ್ ಕೂಡ ಸ್ಥಗಿತಗೊಂಡು ಕೆಲವು ಸಮಯ ಸಂವಹನವೂ ಸ್ತಬ್ಧಗೊಂಡಿತು.
ಮನೆ, ಶೆಡ್‌ಗೆ ಹಾನಿ
ಮುಂಡಾಜೆ ಗ್ರಾಮದ ಕಜೆ ರಾಧಾ ಹೆಬ್ಟಾರ್ ಅವರ ತೋಟದಲ್ಲಿ ಸಂಜೆ ಬೀಸಿದ ಭಾರಿ ಗಾಳಿಗೆ ವಿದ್ಯುತ್ ಕಂಬ ಧರಾಶಾಯಿಯಾಗಿ ಪಂಪ್‌ಶೆಡ್‌ಗೆ ಹಾನಿಯಾಗಿದೆ. ಕುಂಭಾಶಿ ಗ್ರಾ.ಪಂ. ವ್ಯಾಪ್ತಿಯ ಹೊಳಕಟ್ಟು ಗಣೇಶ್ ಶೆಣೈ ಅವರ ಮನೆಯ ಹೆಂಚುಗಳು ಗಾಳಿಗೆ ಹಾರಿಹೋಗಿವೆ.
ಸೂಪರ್‌ಮೂನ್ ದರ್ಶನ
ಮಂಗಳವಾರ ಸೂಪರ್‌ಮೂನ್ ನೋಡಲು ಕಾತರದಿಂದಿದ್ದ ಜನರಿಗೆ ಕೆಲವು ಪ್ರದೇಶಗಳಲ್ಲಿ ಸಂಜೆಯಾಗುತ್ತಿದ್ದಂತೆ ಸುರಿದ ಮಳೆ, ಮೋಡ ಅಡ್ಡಿಯಾಯಿತು. ಇನ್ನು ಕೆಲವು ಪ್ರದೇಶಗಳಲ್ಲಿ ರಾತ್ರಿ ವೇಳೆಗೆ ಮೋಡ ಮರೆಯಾಗಿದ್ದರಿಂದ ಸೂಪರ್ ಮೂನ್ ವೀಕ್ಷಿಸಲು ಸಾಧ್ಯವಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.