ಗ್ರಾಪಂ ವ್ಯಾಪ್ತಿಯಲ್ಲಿ ಸಿಗಲಿದೆ ಮಳೆ ಮಾಹಿತಿ
ಉದಯವಾಣಿ ಸಂವಾದ
Team Udayavani, Jul 2, 2019, 3:10 AM IST
ಬೆಂಗಳೂರು: ನಿಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ವರ್ಷ ಎಷ್ಟು ಮಳೆ ಆಗಲಿದೆ? ಯಾವಾಗ ಮಳೆ ಆಗಬಹುದು? ಒಟ್ಟಾರೆ ವಾರ್ಷಿಕ ನೀರಿನ ಲಭ್ಯತೆ ಎಷ್ಟಿರುತ್ತದೆ? ಹಾಗಿದ್ದರೆ, ನೀವು ಯಾವ ಬೆಳೆ ಬೆಳೆಯಬೇಕು?
ಅಂದುಕೊಂಡಂತೆ ಎಲ್ಲವೂ ನಡೆದರೆ ಮುಂದಿನ ವರ್ಷದ ಮುಂಗಾರಿಗೆ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಎಲ್ಲ ಮಾಹಿತಿಯನ್ನು ಒಳಗೊಂಡ ಫಲಕಗಳ ಅಳವಡಿಕೆ ಆಗಲಿವೆ. ಈ ಮಾಹಿತಿಯನ್ನು ಆಧರಿಸಿಯೇ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಅನುಸರಿಸಬಹುದು. ಹಾಗೊಂದು ವೇಳೆ ಈ ಎಲ್ಲ ಸೂಚನೆಗಳನ್ನು ಅನುಸರಿಸಿದ ನಂತರವೂ ನಷ್ಟವಾದರೆ, ಆ ನಷ್ಟವನ್ನೂ ಸರ್ಕಾರವೇ ಭರಿಸಲಿದೆ!
ಹೌದು, ಹವಾಮಾನ ಆಧಾರಿತ ಬೆಳೆಯ ಪದ್ಧತಿ ನಿಗದಿಪಡಿಸುವ ತಜ್ಞರ ಸಮಿತಿಯು ಇಂತಹದ್ದೊಂದು ಶಿಫಾರಸನ್ನು ಸರ್ಕಾರದ ಮುಂದಿಟ್ಟಿದೆ. ಇದಕ್ಕೆ ಪೂರಕ ಸ್ಪಂದನೆಯೂ ದೊರಕಿದೆ ಎಂದು ಆ ಸಮಿತಿಯ ಸದಸ್ಯ ಹಾಗೂ ಹವಾಮಾನ ತಜ್ಞ ಪ್ರೊ.ಎಂ.ಬಿ. ರಾಜೇಗೌಡ ತಿಳಿಸಿದರು. “ಉದಯವಾಣಿ’ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ “ಮಂಕಾದ ಮುಂಗಾರು; ಕೃಷಿ ಚಟುವಟಿಕೆಗಳ ಮೇಲಿನ ಪರಿಣಾಮ’ ಕುರಿತ ಸಂವಾದದಲ್ಲಿ ಅವರು ಈ ಮಾಹಿತಿ ನೀಡಿದರು.
ರಾಜ್ಯದಲ್ಲಿ ನಿರಂತರ ಬರ ಇರಬಹುದು. ಆದರೆ, ಕಳೆದ ಎರಡು ದಶಕಗಳ ಮಳೆ ಪ್ರಮಾಣ ಲೆಕ್ಕಹಾಕಿದರೆ, ವಾಡಿಕೆಗಿಂತ ಶೇ. ಒಂದೂವರೆಯಷ್ಟು ಹೆಚ್ಚು ಮಳೆ ಬೀಳುತ್ತಿದೆ. ಆದರೆ, ಅದರ ಹಂಚಿಕೆ ಸಮರ್ಪಕವಾಗಿಲ್ಲ. ಈ ಮಧ್ಯೆ ಮುಂಗಾರು ಬಿತ್ತನೆ ಅವಧಿ ಕೂಡ ಪಲ್ಲಟವಾಗಿದೆ. ಇದರಿಂದ ರೈತನ ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ಮಳೆಯ ವಿಶ್ಲೇಷಣೆ ಮಾಡಿ, ಅದಕ್ಕೆ ತಕ್ಕಂತೆ ಕೃಷಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಈ ಚಿಂತನೆಯನ್ನು ಈಗಾಗಲೇ ಸರ್ಕಾರದ ಮುಂದಿಡಲಾಗಿದೆ. ಬಹುಶಃ ಮುಂದಿನ ವರ್ಷ ಹೊಸ ವ್ಯವಸ್ಥೆ ಜಾರಿಗೆ ಬರುವ ನಿರೀಕ್ಷೆ ಇದೆ ಎಂದೂ ಪ್ರೊ. ರಾಜೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನು ಜಾರಿಗೊಳಿಸುವ ಮುನ್ನ ಸಮಿತಿಯು ಆಯಾ ಪ್ರದೇಶಗಳಲ್ಲಿನ ಹಿಂದಿನ ನೂರು ವರ್ಷಗಳ ಮಳೆ ಪ್ರಮಾಣ ಅಧ್ಯಯನ ಮಾಡಲಿದೆ. ಸದ್ಯ ರಾಜ್ಯದಲ್ಲಿರುವ ಎಲ್ಲ ಹತ್ತು ಕೃಷಿ ಹವಾಮಾನ ವಲಯಗಳ ಮಳೆಯ ಮಾಹಿತಿ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯ್ತಿವಾರು ಮಳೆಯ ಅಧ್ಯಯನ ಮಾಡಿ ಮಾಹಿತಿ ಫಲಕಗಳನ್ನು ಅಳವಡಿಸಲಾಗುವುದು ಎಂದರು.
ಮಳೆ ಜೂನ್‌ನಿಂದ ಜುಲೈಗೆ ಶಿಫ್ಟ್!: ರೈತರಿಗೆ ಸೂಕ್ತ ಬಿತ್ತನೆ ಅವಧಿ ತಿಳಿಸುವುದು ಅವಶ್ಯಕ. ಮೂರ್‍ನಾಲ್ಕು ದಶಕಗಳ ಹಿಂದಿನ ಮುಂಗಾರು ಸಮಯದಲ್ಲಿ ಜೂನ್ ತಿಂಗಳು ಬಿತ್ತನೆಗೆ ಸೂಕ್ತ ಸಮಯವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಆ ಅವಧಿ ಜುಲೈ 15ರಿಂದ 25ಕ್ಕೆ ಬದಲಾಗಿದ್ದು, ಇದಕ್ಕೆ ಕಾರಣ ಮಳೆಯ ಸ್ಥಳಾಂತರ. ಪ್ರತಿ ವರ್ಷ ಮಳೆ ಅವಧಿ ಹಾಗೂ ಪ್ರಮಾಣ ಸ್ಥಳಾಂತರದಿಂದ ಮಾಹಿತಿ ಇಲ್ಲದೆ ಅನೇಕ ರೈತರಿಗೆ ಬೆಳೆಗಳು ಕೈಕೊಡುತ್ತಿವೆ ಎಂದರು.
ಪ್ರಸ್ತುತ ಹವಾಮಾನ ವೈಪರೀತ್ಯದಿಂದ ರೈತರ ಲೆಕ್ಕಾಚಾರ ತಪ್ಪುತ್ತಿದೆ. ವೈಜ್ಞಾನಿಕತೆ ಅಳವಡಿಕೆಯ ಅವಶ್ಯಕತೆ ಹೆಚ್ಚಿದೆ. ಮಾಹಿತಿಯಲ್ಲಿ ಕೇವಲ ಬಿತ್ತನೆ ಅವಧಿ ಅಲ್ಲದೆ, ಮಳೆಯಿಂದ ಯಾವಾಗ ಎಷ್ಟು ನೀರು ಸಿಗುತ್ತದೆ ಎನ್ನುವ ಮಟ್ಟಿಗೆ ಆಯಾ ವರ್ಷದ ಮಳೆಯ ಎಲ್ಲಾ ಅಂಶಗಳನ್ನು ತಿಳಿಸಲಾಗುತ್ತದೆ. ಇದರಿಂದ ರೈತರಿಗೆ ಸೂಕ್ತ ಬೆಳೆ, ಸಮಯ, ನೀರಿನ ಲಭ್ಯತೆ ಪ್ರಮಾಣ, ನೀರು ಶೇಖರಣೆ ಅವಶ್ಯಕತೆ ಸೇರಿದಂತೆ ಎಲ್ಲ ಅಂಶಗಳು ದೊರೆಯಲಿವೆ. ಈ ಬೆಳೆಯ ಶಿಫಾರಸು ಆಯಾ ಪ್ರದೇಶದ ಆಹಾರ ಪದ್ಧತಿಗೆ ಅನುಗುಣವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಒಟ್ಟಾರೆ ಯಾವ ಬೆಳೆಯು ನೀರಿಲ್ಲದೆ ಹಾನಿಗೊಳಗಾಗಬಾರದು ಎಂಬ ಆಶಯ ಹೊಂದಿದ್ದು, ಬಿತ್ತನೆಯಿಂದ ಕಟಾವುವರೆಗೆ ಯಾವುದೇ ಸಮಯದಲ್ಲೂ ರೈತರಿಗೆ ನೀರಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ದೀರ್ಘಾವಧಿ ಬೆಳೆಗಳ ಬಿತ್ತನೆಗೆ ಅವಕಾಶ: ಮುಂಗಾರಿನಲ್ಲಿ ಈವರೆಗೆ 10.59 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಆದರೆ, ವಾಸ್ತವವಾಗಿ ಆಗಬೇಕಾಗಿದ್ದು 25 ಲಕ್ಷ ಹೆಕ್ಟೇರ್. ಮುಂಗಾರು ಪೂರ್ವದಲ್ಲಿ ಕೇವಲ ಶೇ.41ಷ್ಟು ಬಿತ್ತನೆ ಆಗಿತ್ತು. ಮುಂಗಾರಿನಲ್ಲಿ ಇನ್ನೂ ಶೇ. 40ರಷ್ಟೂ ಬಿತ್ತನೆ ಆಗಿಲ್ಲ. ಆದರೆ, ಆಗಸ್ಟ್ ಮೊದಲ ವಾರದವರೆಗೂ ದಿರ್ಘಾವಧಿ ಬೆಳೆಗಳ ಬಿತ್ತನೆಗೆ ಅವಕಾಶ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.