ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಮೆಸ್ಕಾಂ ಕಚೇರಿಗೆ ಮುತ್ತಿಗೆ
Team Udayavani, Mar 3, 2022, 1:55 PM IST
ಸೊರಬ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗುರುವಾರ ಪಟ್ಟಣದ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘದ ರಾಜ್ಯ ಸಂಚಾಲಕ ಉಮೇಶ್ ಪಾಟೀಲ್ ಹಿರೇಕಸವಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೇವಲ ಆಶ್ವಾಸನೆಗಳನ್ನು ನೀಡುತ್ತಿವೆ. ರೈತರಿಗೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ. ಕಳೆದ ಸುಮಾರು 15 ದಿನಗಳಿಂದ ಸಮರ್ಪಕ ವಿದ್ಯುತ್ ಪೂರೈಕೆ ಮಾಡದೇ ಇರುವುದರಿಂದ ತೋಟಗಳು ಹಾಗೂ ಬೆಸಿಗೆ ಬೆಳೆಗಳು ಒಣಗುತ್ತಿವೆ. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆಯನ್ನು ಬಗೆಹರಿಸುತ್ತಿಲ್ಲ. ರೈತರ ಜಮೀನುಗಳಿಗೆ ವಿದ್ಯುತ್ ಪೂರೈಸುವ ಟಿ.ಸಿ ಹಾಳಾದರೆ ಕೇವಲ 48 ಗಂಟೆಗಳಲ್ಲಿ ಸರಿ ಪಡಿಸಲಾಗುವುದು ಎಂದು ಹೇಳುವ ಸರ್ಕಾರಗಳು ಕೇವಲ ಹುಸಿ ನುಡಿಯುತ್ತಿವೆ ಎಂದು ಆರೋಪಿಸಿದರು.
ಮನೆ ವಿದ್ಯುತ್ ಶುಲ್ಕದಲ್ಲಿ ಮೀಟರ್‍ಗೆ 70 ರೂ., ಬಾಡಿಗೆ ಹಾಕುವುದು ರದ್ದಾಬೇಕು. ರೈತರ ಪಂಪ್‍ಸೆಟ್, ಟಿಸಿಗಳು ಯಾವುದೇ ಕಾರಣಕ್ಕೆ ಹಾಳಾದರೂ 24 ಗಂಟೆಯೊಳಗೆ ಮೆಸ್ಕಾಂ ಇಲಾಖೆಯ ವಾಹನದಲ್ಲಿಯೇ ಸರಬರಾಜು ಮಾಡಿ, ದುರಸ್ತಿ ಮಾಡಬೇಕು. 3 ಫೇಸ್‍ನಲ್ಲಿ ಉತ್ತಮ ಗುಣಮಟ್ಟದ 12 ತಾಸು ನಿರಂತರ ವಿದ್ಯುತ್ ನೀಡಬೇಕು. ಮನೆ ಮೀಟರ್ ವಾಪಾಸ್ಸಾತಿ ಚಳುವಳಿಯಲ್ಲಿ ಬಾಕಿ ಇರುವ ಮೊತ್ತವನ್ನು ಸರ್ಕಾರದಿಂದಲೇ ಭರಿಸುವಂತೆ ಇಂಧನ ಸಚಿವರಿಗೆ ವಿವರ ನೀಡಿ ಪತ್ರ ಬರೆಯಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಕಂಡವರ ಜೇಬು ಭರ್ತಿ ಮಾಡುವ ‘ನೀಟ್’ ದಂಧೆಗೆ ಚರಮಗೀತೆ ಹಾಡುತ್ತೇವೆ: ಎಚ್ ಡಿ ಕುಮಾರಸ್ವಾಮಿ
ಇದಕ್ಕೂ ಮೊದಲು ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದಿಂದ ಮುಖ್ಯರಸ್ತೆ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಮೆಸ್ಕಾಂಗೆ ಮುತ್ತಿಗೆ ಹಾಕಿ. ಮೆಸ್ಕಾಂ ಎಇಇ ಎಚ್.ಜೆ. ಉಮೇಶ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎನ್.ಕೆ. ಮಂಜುನಾಥಗೌಡ, ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಪ್ರಮುಖರಾದ ಕೆ.ಜಿ. ಮೇಘರಾಜ ಬೆಟ್ಟದಕೂರ್ಲಿ, ಕೆ.ಜಿ. ನಾಗರಾಜ ಕೊಡಕಣಿ, ಶಿವಮೂರ್ತಿ ಸಾಹುಕಾರ, ಶಿವಕುಮಾರ್, ಹುಚ್ಚಪ್ಪ ತಳೇಬೈಲ್ ಸೇರಿದಂತೆ ಮತ್ತಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.