Ram Mandir: ಕರುನಾಡಲ್ಲಿ ಕಳೆಗಟ್ಟಿದ ಹಬ್ಬದ ಸಂಭ್ರಮ
Team Udayavani, Jan 22, 2024, 11:50 PM IST
ಅಯೋಧ್ಯೆಯಲ್ಲಿ ಸೋಮವಾರ ರಾಮಮಂದಿರ ಉದ್ಘಾಟನೆ ಹಾಗೂ ರಾಮನ ವಿಗ್ರಹ ಪ್ರತಿಷ್ಠಾಪನೆ ನಡೆದರೆ ಇತ್ತ ಕರುನಾಡಿನಲ್ಲಿ ಬೆಳಗ್ಗೆಯಿಂದಲೇ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ, ಕೋಸಂಬರಿ ವಿತರಿಸಲಾಯಿತು. ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ರಾಮನಿಗೆ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ಮಾಡಿದರು. ಸಂಜೆ ಮನೆ ಹಾಗೂ ದೇಗುಲಗಳಲ್ಲಿ ದೀಪ ಬೆಳಗಿಸಿ ಸಂಭ್ರಮಿಸಲಾಯಿತು. ಒಟ್ಟಾರೆ ಇಡೀ ದಿನ ರಾಜ್ಯದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಈಡೇರಿದ ಹರಕೆ: ಶಾಸಕ ವೇದವ್ಯಾಸ್ ಉರುಳು ಸೇವೆ
ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾದರೆ ಉರುಳು ಸೇವೆ ಮಾಡುವುದಾಗಿ ಈ ಹಿಂದೆ ಸಂಕಲ್ಪ ತೊಟ್ಟಿದ್ದ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನ ಸಂದರ್ಭದಲ್ಲಿ ಮಂಗಳೂರಿನ ಬಜಿಲಕೇರಿಯ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಉರುಳು ಸೇವೆ ಮಾಡಿದರು.
ರಾಮಮಂದಿರದ ವಿವಾದ ನ್ಯಾಯಾಲಯದಲ್ಲಿ ಇದ್ದಂತಹ ಕಾಲದಲ್ಲಿ ತೀರ್ಪು ಮಂದಿರದ ಪರವಾಗಿಯೇ ಬರಬೇಕು; ಅಲ್ಲಿಯೇ ಮಂದಿರ ನಿರ್ಮಾಣವಾಗಬೇಕು ಎಂದು ಬಜಿಲಕೇರಿಯ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಉರುಳು ಸೇವೆಯ ಸಂಕಲ್ಪವನ್ನು ಅವರು ಕೈಗೊಂಡಿದ್ದರು.
ಸುದ್ದಿಗಾರರ ಜತೆಗೆ ಜತೆಗೆ ಮಾತನಾಡಿದ ಅವರು, “ಕ್ಷೇತ್ರದ ಶಾಸಕನಾಗಿರುವಂತಹ ಸಂದರ್ಭದಲ್ಲಿ ಇಂತಹ ಅಪೂರ್ವ ಘಳಿಗೆಗೆ ಸಾಕ್ಷಿಯಾಗಿರುವುದು ನನ್ನ ಪಾಲಿನ ಜೀವಮಾನದ ಪವಿತ್ರ ಭಾಗ್ಯ. ಇದಕ್ಕೆಲ್ಲ ಕಾರಣೀಭೂತರಾದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ, ವಿಶ್ವಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ತ್ಯಾಗ ಬಲಿದಾನ ಹೋರಾಟದಲ್ಲಿ ಪಾಲ್ಗೊಂಡ ಎಲ್ಲ ಕರಸೇವಕರಿಗೆ ಈ ಸೇವೆ ಸಮರ್ಪಿತ ಎಂದರು.
ಮೈಸೂರಲ್ಲಿ ಊದುಬತ್ತಿ ಹೊತ್ತಿಸಿ ಸಂಭ್ರಮಾಚರಣೆ
ಮೈಸೂರು: ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯ ಆವರಣದ ಬಳಿ ಸೋಮವಾರ ಬೆಳಿಗ್ಗೆ ಸೈಕಲ್ ಪ್ಯೂರ್ ಅಗರ್ ಬತ್ತೀಸ್ ಸಂಸ್ಥೆಯಿಂದ ಸಿದ್ಧಪಡಿಸಿದ್ದ “ಪರಂಪರ” ಹೆಸರಿನ 111 ಅಡಿ ಉದ್ದದ ಊದುಬತ್ತಿ ಹೊತ್ತಿಸಿ ಸಂಭ್ರಮಾಚರಣೆ ಮಾಡಲಾಯಿತು. ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್. ಶ್ರೀವತ್ಸ, ಶಿಲ್ಪಿ ಅರುಣ್ ಯೋಗಿರಾಜ್ ತಾಯಿ ಸರಸ್ವತಿ ಊದುಬತ್ತಿ ಬೆಳಗಿಸಿದರು. ಊದುಬತ್ತಿಗೆ 10 ಬಗೆಯ ಮೂಲ ವಸ್ತುಗಳನ್ನು ಬಳಸಿ ತಯಾರಿಸಲಾಗಿದ್ದು, ಗಂಧದ ಮರದ ಪುಡಿ ಜತೆಗೆ ಇದ್ದಿಲು, ಜೇನು, ದೇವದಾರು, ಬಿದಿರು, ಗುಗ್ಗುಲು, ಜಿಗುಟು, ಬೆಲ್ಲದ ಮಿಶ್ರಣ, ಸಾಸಿವೆ, ಸಾಂಬ್ರಾಣಿ ಹಾಗೂ ಬಿಳಿ ಸಾಸಿವೆ ಬಳಕೆ ಮಾಡಲಾಗಿದೆ. 18 ನುರಿತ ಕುಶಲಕರ್ಮಿಗಳು 23 ದಿನಗಳಲ್ಲಿ ಇದನ್ನು ಸಿದ್ಧಪಡಿಸಿದ್ದಾರೆ.
ರಾಮನವಮಿಯನ್ನೂ ಮೀರಿಸುವ ಸಂಭ್ರಮ
ಕೋಲಾರ: ಅಯೋಧ್ಯೆಯಲ್ಲಿ ರಾಮ ಲಲ್ಲಾ ಪ್ರತಿಷ್ಠಾಪನೆಯನ್ನು ಹಬ್ಬವಾಗಿ ಆಚರಿಸಿ ಸಂಭ್ರಮಿಸಿದ ಜನತೆ ರಸ್ತೆ ಬದಿ ಮಜ್ಜಿಗೆ, ಪಾನಕ ವಿತರಣೆಗೂ ವ್ಯವಸ್ಥೆ ಮಾಡಿ ರಾಮಭಕ್ತಿ ಮೆರೆದರು. ಎಲ್ಲೆಡೆ ಶ್ರೀರಾಮನವಮಿಯನ್ನು ಮೀರಿಸುವ ಸಂಭ್ರಮ ಕಂಡು ಬಂತು.
ನಗರದ ಬಸ್ ನಿಲ್ದಾಣದ ಸಮೀಪದ ಪುರಾತನ ರಾಮದೇವರ ಗುಡಿಯನ್ನು ಸಂಸದ ಎಸ್.ಮುನಿಸ್ವಾಮಿ ಕಾಂಪೌಂಡ್ ದುರಸ್ತಿ, ಬಣ್ಣ ಬಳಿಸಿ ದೇವಾಲಯವನ್ನು ಅಣಿಗೊಳಿಸಿದ್ದರು. ದೇವಾಲಯದಲ್ಲಿ ಸಂಸದರ ನೇತೃತ್ವದಲ್ಲಿ ಬೃಹತ್ ಎಲ್‌ಇಡಿ ಪರದೇ ನಿರ್ಮಿಸಿ ರಾಮಲಲ್ಲಾ ಪ್ರತಿಷ್ಠಾಪನೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಅದೇ ವೇದಿಕೆಯಲ್ಲೇ ಸೀತಾರಾಮನ ಕಲ್ಯಾಣೋತ್ಸವ ಅತ್ಯಂತ ವೈಭವದಿಂದ ನಡೆದಿದ್ದು, ಸಹಸ್ರಾರು ಮಂದಿಗೆ ಅನ್ನದಾಸೋಹ ನಡೆಯಿತು.
ನಗರದ ಎಲ್ಲಾ ಹನುಮ ದೇವಾಲಯ ಗಳಲ್ಲಿ, ಸೇರಿದಂತೆ ಎಲ್ಲಾ ಕಡೆಯೂ ವಿಶೇಷ ಪೂಜೆ ನಡೆದಿದ್ದು, ಹೂವಿನ ಅಲಂ ಕಾರ, ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಿದ್ದು, ಸಾವಿರಾರು ಮಂದಿ ದೇವಾಲ ಯಗಳಿಗೆ ತೆರಳಿ ದರ್ಶನ ಪಡೆದರು.
ಭಕ್ತಿಯ ಸಿಂಚನದಲ್ಲಿ ಮಿಂದು ಪುಳಕಿತರಾದ ಜನತೆ
ಹಾವೇರಿ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಾಗೂ ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾದ್ಯಂತ ಹಬ್ಬದ ವಾತಾವಣ ನಿರ್ಮಾಣಗೊಂಡಿತ್ತು. ವಿವಿಧ ರಾಮ ಮಂದಿರ- ದೇವಸ್ಥಾನ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜನತೆ ಭಕ್ತಿಯ ಸಿಂಚನದಲ್ಲಿ ಮಿಂದು ಪುಳಕಿತರಾದರು. ಶ್ರೀರಾಮ ಹಾಗೂ ಹನುಮನ ಧ್ವಜ ಹಿಡಿದುಕೊಂಡು ರಾಮಭಕ್ತರು ಜೈ ಶ್ರೀರಾಮ, ಜೈ ಹನುಮಾನ ಎಂದು ಘೋಷಣೆ ಕೂಗಿ ಭಕ್ತಿಯ ಪರಾಕಾಷ್ಠೆ ಮೆರೆದರು. ಮನೆಗಳಲ್ಲೂ ರಾಮನ ಪೂಜೆ, ಪುರಸ್ಕಾರ ನೆರವೇರಿಸಲಾಯಿತು. ನಗರದ ರಾಮ ಮಂದಿರದಲ್ಲಿ ಅಯೋಧ್ಯೆ ಕಾರ್ಯಕ್ರಮ ವೀಕ್ಷಣೆಗಾಗಿ ಬೃಹತ್ ಟಿವಿ ಅಳವಡಿಸಲಾಗಿತ್ತು. ರಾಣಿಬೆನ್ನೂರು ಕುರುಬರಗೇರಿ ಮಾಯಮ್ಮ ದೇವಸ್ಥಾನ ಬಳಿ ಹಾಗೂ ರಂಗನಾಥ ನಗರದ ಬಾಬಾರಾಮದೇವ ಗುಡಿ ಬಳಿ ಎಲ್‌ಇಡಿ ಪರದೆ ಹಾಕಲಾಗಿತ್ತು.
ಹಾವೇರಿಯ ಶ್ರೀರಾಮ ದೇವಸ್ಥಾನದಲ್ಲಿ ಬೆಳಗ್ಗೆ ಶ್ರೀರಾಮನಿಗೆ ಅಭಿಷೇಕ, ಶ್ರೀರಾಮ ತಾರಕ ಯಾಗದ ಪುಣ್ಯಾಹ ವಾಚನ, ತ್ರಯೋದಶ ಸಹಸ್ರ ಹೋಮ, ಮಧ್ಯಾಹ್ನ ಪೂರ್ಣಾಹುತಿ ನಡೆಯಿತು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಕೊಡಗಿನೆಲ್ಲೆಡೆ ರಾಮ ನಾಮಸ್ಮರಣೆ, ಅನ್ನಸಂತರ್ಪಣೆ
ಮಡಿಕೇರಿ: ಶತ ಶತಮಾನಗಳ ಹಿಂದೂ ಸಮಾಜದ ನಿರೀಕ್ಷೆಗಳು ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪ್ರತಿಷ್ಠಾಪನೆಯ ಮೂಲಕ ಸಾಕಾರಗೊಳ್ಳುವ ಹಂತದಲ್ಲಿ, ಕೊಡಗು ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯೊಂದಿಗೆ ಶ್ರೀರಾಮ ನಾಮಸ್ಮರಣೆ ನಡೆಯಿತು.
ಬಹುತೇಕ ದೇವಸ್ಥಾನಗಳಲ್ಲಿ ಅಯೋಧ್ಯೆಯ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಮಡಿಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಆಂಜನೇಯ ದೇಗುಲದಲ್ಲಿ ಅಳವಡಿಸಲಾಗಿದ್ದ ಎಲ್‌ಇಡಿ ಪರದೆಯ ಮೂಲಕ ನೂರಾರು ಭಕ್ತರು ಪ್ರಾಣ ಪ್ರತಿಷ್ಠಾಪನೆಯನ್ನು ವೀಕ್ಷಿಸಿ, ಅದಾಗಲೇ ಹಿಂದೂ ಪರ ಸಂಘಟನೆಗಳ ಮೂಲಕ ವಿತರಿಸಲಾಗಿದ್ದ ಅಯೋಧ್ಯೆ ಮಂತ್ರಾಕ್ಷತೆಯನ್ನು ಶಿರಕ್ಕೆ ಹಾಕಿಕೊಂಡು ಶ್ರೀರಾಮನಿಗೆ ನಮಿಸಿದರು. ಅಯೋಧ್ಯೆಯಲ್ಲಿ 1992ರಲ್ಲಿ ನಡೆದ ಕರಸೇವೆಯಲ್ಲಿ ಪಾಲ್ಗೊಂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೆ.ಕೆ. ಮಹೇಶ್ ಕುಮಾರ್ ನೇತೃತ್ವದ ತಂಡದ ಸದಸ್ಯರನ್ನು ಕೇಸರಿ ಶಾಲು ಹೊದೆಸಿ ಗೌರವಿಸಲಾಯಿತು. ಅಂದಿನ ಕರಸೇವೆ ಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ಇಂದು ನಮ್ಮೊಡನೆ ಇಲ್ಲದ ಹಿರಿಯರನ್ನು ಸ್ಮರಿಸಿಕೊಂಡು ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಅಯೋಧ್ಯೆ ಮಂದಿರ ಉದ್ಘಾಟನೆ ದಿನವೇ ಸೀತಾರಾಮ ಲಕ್ಷ್ಮಣ ದೇಗುಲ ಉದ್ಘಾಟಿಸಿದ ಸಿದ್ದು
ಬೆಂಗಳೂರು: ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರೀರಾಮನ ಪ್ರಾಣ ಪ್ರತಿ ಷ್ಠಾಪನೆ ನೆರವೇರಿಸಿದ “ಅಭಿಜಿತ್ ಮುಹೂರ್ತ’ ದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹದೇವಪುರದ ಹಿರಂಡಹಳ್ಳಿಯಲ್ಲಿ ಸೀತಾರಾಮ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ “ಜೈ ಶ್ರೀರಾಮ್’ ಘೊಷಣೆ ಹಾಕಿ ಗಮನ ಸೆಳೆದರು.
ಬಿದರಹಳ್ಳಿ ಹೋಬಳಿಯ ಹಿರಂಡಹಳ್ಳಿಯಲ್ಲಿ ಶ್ರೀರಾಮ ಟೆಂಪಲ್ ಟ್ರಸ್ಟ್ ನಿರ್ಮಿಸಿದ ರಾಮ ಸೀತ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜ ನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮ ಉದ್ಘಾಟಿಸಿದ ಸಿದ್ದರಾಮಯ್ಯ ಮಹಾ ಕುಂಭಾಭಿಷೇಕದಲ್ಲಿ ಪಾಲ್ಗೊಂಡರು.
ಮುಸ್ಲಿಂ ಪಂಚ್ ಕಮಿಟಿಯಿಂದ ರಾಮ ಮಂದಿರದಲ್ಲಿ ಪೂಜೆ, ಅನ್ನಸಂತರ್ಪಣೆ
ಕೊಪ್ಪಳ: ಇಲ್ಲಿಯ ಭಾಗ್ಯನಗರದ ಮುಸ್ಲಿಂ ಪಂಚ್ ಕಮಿಟಿಯವರು ಅಯೋಧ್ಯಾ ರಾಮಮಂದಿರದ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಸ್ಥಳೀಯ ರಾಮಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ನೆರವೇರಿಸಿ ಭಾವೈಕ್ಯತೆ ಸಂದೇಶ ಸಾರಿದರು.
ಭಾಗ್ಯನಗರದಲ್ಲಿ ಈ ಹಿಂದಿನಿಂದಲೂ ಸರ್ವಧರ್ಮೀಯರು ಎಲ್ಲ ಹಬ್ಬಗಳನ್ನು ಕೂಡಿಕೊಂಡು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡುತ್ತಾರೆ. ಅದರಂತೆ ರಾಮನ ಮಂದಿರಕ್ಕೆ ತೆರಳಿದ ಮುಸ್ಲಿಂ ಪಂಚ್ ಕಮಿಟಿಯ ಮುಖಂಡರು ಹೂವು, ಹಣ್ಣು, ಕಾಯಿ, ಕರ್ಪೂರ ಅರ್ಪಿಸಿ ಭಕ್ತಿಯಿಂದ ಪ್ರಾರ್ಥಿಸಿದರು. ಬಳಿಕ ಸಮೀಪದ ಮಾರುತೇಶ್ವರ ದೇವಸ್ಥಾನಕ್ಕೂ ತೆರಳಿ ವೀರಾಂಜನೇಯ ಮೂರ್ತಿಗೆ ಪೂಜೆ ಸಲ್ಲಿಸಿದರು.
ಕಮಿಟಿ ಗೌರವಾಧ್ಯಕ್ಷ ಹೊನ್ನೂರಸಾಬ ಭೈರಾಪುರ, ಅಧ್ಯಕ್ಷ ಇಬ್ರಾಹಿಂ ಸಾಬ್ ಬಿಸರಳ್ಳಿ, ಉಪಾಧ್ಯಕ್ಷ ಮೌಲಾಸಾಬ್ ಅಣಗಿ, ಮುಖಂಡರಾದ ಕಬೀರ ಸಾಬ್, ಪೀರ್ ಸಾಬ್, ಫಕೀರಸಾಬ, ನೂರುಭಾಷಾ, ಖತುಬುದ್ದೀನ್ ಸಾಬ್, ಬಾಬು ಪಟೇಲ್ ಇನ್ನಿತರರಿದ್ದರು.
ಕಿಷ್ಕಿಂಧೆ ನಾಡಲ್ಲಿ ವೈಭವದ ರಾಮೋತ್ಸವ
ಕೊಪ್ಪಳ: ಹನುಮನ ನಾಡು ಕಿಷ್ಕಿಂಧೆೆಯ ಬೀಡು ಎಂದೆನಿಸಿದ ಜಿಲ್ಲೆಯಲ್ಲಿ ಅಯೋಧ್ಯಾ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಅಂಜನಾದ್ರಿ ಪರ್ವತ, ರಾಘವೇಂದ್ರ ಸ್ವಾಮಿಗಳ ಮಠ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ, ಮನೆ ಮನೆಗಳಲ್ಲಿ ವೈಭವದಿಂದ ರಾಮೋತ್ಸವ ಜರುಗಿತು. ಜಿಲ್ಲಾದ್ಯಂತ ರಾಮ ಹಾಗೂ ಹನುಮನ ಮಂದಿರಗಳಲ್ಲಿ ಹೋಮ, ಹವನ, ಪೂಜೆ ನಡೆದರೆ ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಅಂಜನಾದ್ರಿಯ ಬೆಟ್ಟದಲ್ಲಿ ಮೆಟ್ಟಿಲೋತ್ಸವ, ಧಾರ್ಮಿಕ ಕೈಂಕರ್ಯ, ಮಹಾಯಾಗ ನಡೆಯಿತು. ಭಾಗ್ಯನಗರದಲ್ಲಿ ಬಾಲ ರಾಮಾಯಣ ಪುಸ್ತಕಗಳ ವಿತರಣೆ, ಮುಸ್ಲಿಂ ಬಾಂಧವರಿಂದ ರಾಮನ ಮೂರ್ತಿಗೆ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಕುಷ್ಟಗಿಯಲ್ಲಿ ಶೋಭಯಾತ್ರೆ, ರಾಮ ತಾರಕ ಮಹಾಯಾಗ ನಡೆಯಿತು. ಸಂಜೆ ಮನೆಗಳ ಮುಂದೆ ದೀಪಾಲಂಕಾರ, ರಂಗೋಲಿಗಳ ಚಿತ್ತಾರ ಕಣ್ಮನ ಸೆಳೆಯಿತು. ಅಂಜನಾದ್ರಿ ಪರ್ವತ, ಕೊಪ್ಪಳ ಸದಾಚಾರರ ಸಭಾಭವನದ ಪ್ರದೇಶದಲ್ಲಿ ಅಯೋಧ್ಯಾ ನೇರಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಿನಲ್ಲಿ ಜಿಲ್ಲಾದ್ಯಂತ ರಾಮೋತ್ಸವ ಅತ್ಯಂತ ಸಂಭ್ರಮ, ಸಡಗರದಿಂದ ನಡೆಯಿತು. ಅನ್ನಸಂತರ್ಪಣಾ ಕಾರ್ಯ ಸಾಂಗವಾಗಿ ಜರುಗಿತು.
ರಾಮನಗರದಲ್ಲಿ ದಿನವಿಡೀ ರಾಮಧ್ಯಾನ
ರಾಮನಗರ: ರಾಮದೇವರ ಬೆಟ್ಟದಲ್ಲಿನ ಶ್ರೀರಾಮ ದೇವಾಲಯ, ಚನ್ನಪಟ್ಟಣ ತಾ. ಕೂಡ್ಲೂರು ಗ್ರಾಮದ ಶ್ರೀರಾಮ ದೇವಾಲಯ, ರಾಮನಗರ ಛತ್ರದ ಬೀದಿಯಲ್ಲಿರುವ ರಾಮ ಮಂದಿರ, ಚನ್ನಪಟ್ಟಣದ ಕೆಂಗಲ್ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಬೆಳಗ್ಗಿನಿಂದ ಸಂಜೆ ವರೆಗೆ ರಾಮಜಪ ಮಾಡಲಾಯಿತು. ಪೊಲೀಸರು ಅನುಮತಿ ನಿರಾಕರಿಸಿದ ಪರಿಣಾಮ ಮೆರವಣಿಗೆ ಮತ್ತು ಶೋಭಾಯಾತ್ರೆ ನಿರ್ಬಂಧಿಸಲಾಗಿತ್ತು. ರಾಮಮಂದಿರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಸಾರ್ವಜನಿಕ ವೀಕ್ಷಣೆಗಾಗಿ ಬƒಹತ್ ಎಲ್‌ಇಡಿ ಸ್ಕ್ರೀನ್ ಮೂಲಕ ಅವಕಾಶ ಮಾಡಿಕೊಡಲಾಗಿತ್ತು. ಪಾನಕ, ಮಜ್ಜಿಗೆ, ಕೋಸಂಬರಿ, ಪ್ರಸಾದ ವಿತರಿಸಲಾಯಿತು.
ಗದಗದಲ್ಲಿ ಪೂಜೆ, ರಾಮ ಜಪ
ಗದಗ: ಅಯೋಧ್ಯೆಯಲ್ಲಿ ಉದ್ಘಾಟನೆಗೊಂಡ ಶ್ರೀರಾಮಮಂದಿರ ಹಾಗೂ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಣ್ತುಂಬಿಗೊಂಡ ಜನತೆ ದಿನವಿಡೀ ರಾಮನಾಮ ಜಪ ಮಾಡಿದರು. ಅವಳಿ ನಗರದ ಐತಿಹಾಸಿಕ ವೀರನಾರಾಯಣ, ತ್ರಿಕೂಟೇಶ್ವರ ದೇವಸ್ಥಾನ, ಲಕ್ಷೆ ¾àಶ್ವರ ಪಟ್ಟಣದ ಸೋಮೇಶ್ವರ, ಗಜೇಂದ್ರಗಡದ ಕಾಲಕಾಲೇಶ್ವರ ದೇವಸ್ಥಾನ ಸೇರಿ ವಿವಿಧ ಶ್ರೀರಾಮ, ಮಾರುತಿ ದೇವಸ್ಥಾನಗಳಲ್ಲಿ ಅಭಿಷೇಕ, ರಾಮ ನಾಮ ಜಪ, ರಾಮತಾರಕ ಹೋಮ, ಪಲ್ಲಕ್ಕಿ ಪ್ರದಕ್ಷಿಣೆ, ಪುಣ್ಯವಾಚನ, ಭಜನೆ ಕಾರ್ಯಕ್ರಮಗಳು ಜರುಗಿದವು.
ಹೋಮದಲ್ಲಿ ಹನುಮ(ಕೋತಿ): ಲಕ್ಮೇಶ್ವರ ಪಟ್ಟಣದ ಸೋಮನಾಥ ದೇವ ಸ್ಥಾನದಲ್ಲಿ ಹಮ್ಮಿಕೊಂಡಿದ್ದ ಅಗ್ನಿಹೋತ್ರ ಹೋಮದಲ್ಲಿ ವಾನರ ರೂಪಿ (ಕೋತಿ) ಭಾಗಿಯಾಗಿದ್ದು ವಿಶೇಷವಾಗಿತ್ತು. ಅಗ್ನಿಹೋತ್ರ ಹೋಮ ನಡೆಯುತ್ತಿದ್ದ ಸಮಯ ದಲ್ಲಿ ಸುತ್ತಲೂ ಭಕ್ತರು ಕುಳಿತಿದ್ದರೂ ಹನುಮ(ಕೋತಿ) ಯಾಗದ ವಿಧಿಗಳು ಪೂರ್ಣಗೊಳ್ಳುವವರೆಗೂ ಯಾಗದ ಮುಂದೆಯೇ ಕುಳಿತು ವೀಕ್ಷಿಸುತ್ತಿತ್ತು.
ಕಲ್ಪತರು ನಾಡಲ್ಲಿ ಗಂಗಾಜಲ ವಿತರಣೆ
ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿಯೂ ಮಠ-ಮಂದಿರ, ಮನೆಮನೆಗಳಲ್ಲಿ ರಾಮಜಪ ಮೇಳೈಸಿತು. ಮಠಾಧೀಶರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ರಾಮನ ಭಕ್ತರು ರಾಮೋತ್ಸ$ವದ ಸಂಭ್ರಮದಲ್ಲಿ ಮಿಂದೆದ್ದರು. ಭಕ್ತರಿಗೆ ಪ್ರಸಾದ, ಪಾನಕ, ಮಜ್ಜಿಗೆ ವಿತರಿಸಿ ಗಮನಸೆಳೆದರು. ಸಹಕಾರ ಸಚಿವ ಕೆ.ಎನ್.ರಾಜಣ್ಣ ಕುಟುಂಬದಿಂದ ಮಧುಗಿರಿ ತಾಲೂಕಿನ ಕಿತ್ತಗಾನಹಳ್ಳಿ ಗ್ರಾಮದಲ್ಲಿರುವ ಶ್ರೀ ರಾಮ ದೇವಾಲಯದಲ್ಲಿ ಹೋಮ ನಡೆಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪಾಳು ಬಿದ್ದಿದ್ದ ಈ ದೇವ ಸ್ಥಾನವನ್ನು ಸಚಿವ ಕೆ.ಎನ್. ರಾಜಣ್ಣನವರೇ ಜೀರ್ಣೋ ದ್ಧಾರ ಮಾಡಿರುವುದು ವಿಶೇಷ. ಇನ್ನು ಮಾಜಿ ಸಚಿವ ಸೊಗಡು ಶಿವಣ್ಣ ಅವರು ಶ್ರೀರಾಮ ಹೂಡಿದ್ದ ಜಾಗದ ನಾಮದ ಚಿಲುಮೆಯ ಪವಿತ್ರಾಗಂಗಾ ಜಲವನ್ನು ವಿತರಿಸಿದರು. ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದಲೇ ಭಕ್ತರಿಂದ ಶ್ರೀರಾಮ ನಾಮ ಸ$¾ರಣೆ ಮೊಳಗಿತು. ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ನೇರ ಪ್ರಸಾರ ಕಣ್ತುಂಬಿಕೊಳ್ಳಲು ಬಹುತೇಕ ಕಡೆ ಎಲ್ ಇಡಿ ವ್ಯವಸ್ಥೆ ಮಾಡಲಾಗಿತ್ತು.
ರಾಮನಶಿಲೆಯಲ್ಲೇ ಹನುಮ ಮೂರ್ತಿ ಕೆತ್ತನೆಗೆ ಕೊಪ್ಪಳದಲ್ಲಿ ಚಾಲನೆ
ಕೊಪ್ಪಳ: ಮೈಸೂರಿನಲ್ಲಿ ದೊರೆತ ಕೃಷ್ಣ ಶಿಲೆಯಲ್ಲಿ ಕೆತ್ತಿದ ರಾಮಲಲ್ಲಾ ಮೂರ್ತಿ ಸೋಮವಾರ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಿದ್ದು, ಅದರಲ್ಲಿ ಉಳಿದ ಭಾಗದ ಕೃಷ್ಣ ಶಿಲೆಯನ್ನು ಇಲ್ಲಿನ ಶೇಖಣ್ಣಾಚಾರ್ಯ ಮಠದ ಹನುಮನ ಮೂರ್ತಿ ಕೆತ್ತನೆಗೆ ತರಿಸಿ ಪೂಜೆ ಸಲ್ಲಿಸಲಾಯಿತು. ನಗರದ ಶಿಲ್ಪಿ ಪ್ರಕಾಶ ಶಿಲ್ಪಿ ಅವರು ಪ್ರತಿದಿನವೂ ಒಂದೊಂದು ಹನುಮನ ಮೂರ್ತಿ ಕೆತ್ತನೆ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ರಾಮಶಿಲೆ ಯಲ್ಲಿ ಉಳಿದ ಭಾಗವನ್ನು ಪ್ರಕಾಶ ಅವರು ಖರೀದಿಸಿ ಕೊಪ್ಪಳಕ್ಕೆ ತಂದಿದ್ದಾರೆ. ಅವುಗಳಲ್ಲಿ ರಾಮ, ಲಕ್ಷ್ಮಣ, ಹನುಮಂತ, ಸೀತಾ ಮಾತೆ ಯ ಮೂರ್ತಿ ಕೆತ್ತನೆಯ ಸಂಕಲ್ಪ ಮಾಡಿದ್ದಾರೆ. ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ದಿನದಂದೇ ಉಳಿದ ಶಿಲೆಗಳನ್ನು ಕೊಪ್ಪಳಕ್ಕೆ ತಂದಿದ್ದು, ಶೇಖಣ್ಣಾಚಾರ್ಯ ಮಠದಲ್ಲಿ ಕೃಷ್ಣ ಶಿಲೆಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಹನುಮನ ಮೂರ್ತಿ ಕೆತ್ತನೆ ಕಾರ್ಯ ಆರಂಭಿಸಲಾಯಿತು.
ಮುಸ್ಲಿಮರಿಂದ ಲಾಡು-ಶರಬತ್ತು ವಿತರಣೆ
ಕುಷ್ಟಗಿ: ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ರಾಮೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡವರಿಗೆ ಮುಸ್ಲಿಂ ಸಮುದಾಯದವರು ಶರಬತ್ತು, ಲಾಡು ವಿತರಿಸಿದರು. ಇಲ್ಲಿನ ಲೋಕೋಪಯೋಗಿ ಕಚೇರಿಯ ಮುಂದೆ ರಾಮೋತ್ಸವದಲ್ಲಿ ಪಾಲ್ಗೊಂಡವರಿಗೆ ತಂಪು ಪಾನೀಯ ವಿತರಿಸಿ ಹಿಂದೂ ಸಮಾಜಕ್ಕೆ ಶುಭ ಕೋರಿದರು. ಆರೆಸ್ಸೆಸ್ ಸಂಘಟನೆಯ ಬಸನಗೌಡ ಪಾಟೀಲ ನೇತೃತ್ವದಲ್ಲಿ ಅವರು ಸಾರ್ವಜನಿಕರಿಗೆ ಶರಬತ್ತು ವಿತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.