ರಾಮನಗರ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಗೂ ಅಪಸ್ವರ
Team Udayavani, Jan 14, 2020, 3:08 AM IST
ಬೆಂಗಳೂರು: ಶೃಂಗೇರಿಯಲ್ಲಿ ನಡೆದ ಚಿಕ್ಕಮಗಳೂರು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ವಿಚಾರ ವಿವಾದ ರೂಪ ಪಡೆದು ತಣ್ಣಗಾಗುವ ಮುನ್ನವೇ ಇದೀಗ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಆಯ್ಕೆ ವಿಚಾರದಲ್ಲೂ ಕೆಲ ಹಿಂದೂ ಪರ ಸಂಘಟನೆಗಳು ಅಪಸ್ವರ ಎತ್ತಿವೆ.
ರಾಮನಗರದಲ್ಲಿ ಜ.23 ಮತ್ತು 24ರಂದು ಆರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಹಿರಿಯ ಸಾಹಿತಿ, ವಿಚಾರವಾದಿ ಹಾಗೂ ಕುವೆಂಪು ಅವರ ಅನುಯಾಯಿ ಪ್ರೊ. ಶಿವನಂಜಯ್ಯ ಅವರು ಸಮ್ಮೇಳನಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದು ಅವರ ಆಯ್ಕೆಗೆ ಹಿಂದೂ ಜಾಗರಣ ವೇದಿಕೆ ವಿರೋಧ ವ್ಯಕ್ತಪಡಿಸಿದೆ.
ಪ್ರೊ.ಶಿವನಂಜಯ್ಯ ಅವರು ತಮ್ಮ ಜೀವನದುದ್ದಕ್ಕೂ ಹಿಂದೂ ಧರ್ಮ, ದೇವರನ್ನು ತುತ್ಛವಾಗಿ ಕಾಣುತ್ತಾ ಟೀಕೆ -ಟಿಪ್ಪಣಿ ಮಾಡಿದ್ದಾರೆ. ಬಹು ಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದು ಕೊಂಡಿದ್ದಾರೆಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ.
ಜತೆಗೆ ರಾಮನಗರದಲ್ಲಿ ಕೆಂಗಲ್ ಹನುಮಂತಯ್ಯ ಅವರ ಪುತ್ಥಳಿ ನಿರ್ಮಾಣಕ್ಕೆ ಹಣ ಸಂಗ್ರಹಿಸಿ ಪೋಲು ಮಾಡಿದ್ದಾರೆ. ಇಂತಹ ವ್ಯಕ್ತಿಗೆ ಸಮ್ಮೇಳನಾಧ್ಯಕ್ಷತೆ ನೀಡಿರುವುದು ಸರಿಯಲ್ಲ ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.
ಜಾತ್ರೆಗೆ ಅಡ್ಡಿಪಡಿಸಬೇಡಿ: ಪ್ರೊ.ಶಿವನಂಜಯ್ಯ ಅವರ ಬಗ್ಗೆ ಕೆಲವರು ಪೂರ್ವಗ್ರಹ ಪೀಡಿತರಾಗಿ ಮಾತನಾ ಡುತ್ತಿದ್ದಾರೆ. ಕುವೆಂಪು ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿ ರುವವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಶಿವನಂಜಯ್ಯ ಅವರು ಸುಮಾರು 35 ಕೃತಿಗಳನ್ನು ರಚಿಸಿದ್ದಾರೆ.
ಎಲ್ಲಿಯೂ ಅವರು ಹಿಂದೂ ಧರ್ಮಕ್ಕೆ ಧಕ್ಕೆ ಬರುವ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದು ರಾಮನಗರ ಜಿಲ್ಲಾ ಕಸಾಪ ಅಧ್ಯಕ್ಷ ಸಿಂ.ಲಿಂ.ನಾಗರಾಜ್ ಹೇಳಿದ್ದಾರೆ. “ಉದಯವಾಣಿ’ ಯೊಂದಿಗೆ ಮಾತನಾಡಿ, ಅಪಸ್ವರವಿದ್ದರೆ ಪ್ರೊ. ಶಿವಲಿಂಗಯ್ಯ ಅವರ ಕೃತಿಗಳನ್ನು ಓದಿ ಅನುಮಾನ ಪರಿಹರಿಸಿಕೊಳ್ಳೋಣ. ಆದರೆ ಯಾವುದೇ ಕಾರಣಕ್ಕೂ ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿ ಪಡಿಸಬೇಡಿ ಎಂದು ಮನವಿ ಮಾಡಿದರು.
ಕೇಂದ್ರ ಕಸಾಪ ದನಿ ಎತ್ತಬೇಕು: ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಕಾದಂಬರಿಕಾರ ಕುಂ.ವೀರಭದ್ರಪ್ಪ, ಶೃಂಗೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೇ ಮೂಗು ತೂರಿಸಿದ್ದರು. ಇದೀಗ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಪ್ರಗತಿಪರ ವ್ಯಕ್ತಿ ಆಯ್ಕೆಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ.
ಈ ಬಗ್ಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ದನಿ ಎತ್ತಬೇಕು. ಈ ಬೆಳವಣಿಗೆಗಳು ಕನ್ನಡ ಸಾಹಿತ್ಯ ಪರಿಷತ್ತಿಗೆ “ಕಪ್ಪು ಚುಕ್ಕೆ’ ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಕೆ.ಮರುಳ ಸಿದ್ದಪ್ಪ, ಜಿಲ್ಲಾ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಜವಾಬ್ದಾರಿ ಇರುತ್ತದೆ. ಕನ್ನಡ ಸಾಂಸ್ಕೃತಿಕ ಕ್ಷೇತ್ರದ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು ಪ್ರೇರಿತ ನಡೆ: ರಾಮನಗರದಲ್ಲಿ ಕಾಣಿಸಿಕೊಂಡಿರುವ ಅಪಸ್ವರ “ಚಿಕ್ಕಮಗಳೂರು ಪ್ರೇರಿತ ನಡೆ’ಯಾಗಿದೆ. ಇಂತಹ ನಡೆ ಸಾಂಸ್ಕೃತಿಕ ಲೋಕಕ್ಕೆ ಆರೋಗ್ಯಕರವಲ್ಲ ಎಂದು ಹಿರಿಯ ಸಾಹಿತಿ ಡಾ.ಬರಗೂರು ರಾಮ ಚಂದ್ರಪ್ಪ ತಿಳಿಸಿದ್ದಾರೆ. ಭಿನ್ನಾಭಿಪ್ರಾಯಗಳು ಇರಬಹುದು.
ಆದರೆ ಪರಿಷತ್ತಿನ ಕಾರ್ಯ ಕಾರಿಣಿಯಲ್ಲಿ ಸರ್ವಾನುಮತದಿಂದ ಆಯ್ಕೆ ಯಾದ ಸಮ್ಮೇಳನಾಧ್ಯಕ್ಷ ರನ್ನು ಬದಲಾಯಿಸಿ ಎನ್ನುವುದು ಖಂಡನೀಯ. ವಿಚಾರಧಾರೆಯನ್ನೇ ಇಟ್ಟು ಕೊಂಡು ವಿರೋಧ ವ್ಯಕ್ತಪಡಿಸಿದರೆ ಆಗ ಯಾರೂ ಯಾವುದೇ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರೊ.ಶಿವನಂಜಯ್ಯ ಅವರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ವಿರೋಧಿಸಿ, ಜತೆಗೆ ಅವರ ಬದಲಾವಣೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅವರು ಹುಸಿ ಜಾತಿವಾದಿ. ಒಂದು ಪಂಥಕ್ಕೆ ಸೀಮಿತವಾಗಿ ಮಾತನಾಡುತ್ತಾರೆ.
-ಅನಿಲ್ ಬಾಬು, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಅಪಸ್ವರದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ಮಾಹಿತಿ ಇಲ್ಲ.
-ಮನು ಬಳಿಗಾರ್, ಕೇಂದ್ರ ಕಸಾಪ ಅಧ್ಯಕ್ಷ
* ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.