ಬಿಜೆಪಿಯಲ್ಲಿ ತಗ್ಗಿದ ಅತೃಪ್ತಿಯ ತೀವ್ರತೆ
Team Udayavani, Aug 29, 2019, 3:09 AM IST
ಬೆಂಗಳೂರು: ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ಉಪಮುಖ್ಯಮಂತ್ರಿ ಸ್ಥಾನ ಹಂಚಿಕೆ ಸಂಬಂಧ ಅತೃಪ್ತಿ ತೋರ್ಪಡಿಸಿದವರಿಗೆ ಬಿಜೆಪಿ ಹೈಕಮಾಂಡ್‌ನ ಖಡಕ್ ಎಚ್ಚರಿಕೆ, ಜೊತೆಗೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನವೊಲಿಕೆ, ಭರವಸೆ ಹಿನ್ನೆಲೆಯಲ್ಲಿ ಸದ್ಯ ಅತೃಪ್ತಿಯ ತೀವ್ರತೆ ತಗ್ಗಿದಂತೆ ಕಾಣುತ್ತಿದೆ.
ಇನ್ನೊಂದೆಡೆ, ಸಚಿವರೆಲ್ಲಾ ತಮ್ಮ ಜವಾಬ್ದಾರಿ ನಿರ್ವಹಣೆಯತ್ತ ಗಮನ ನೀಡುತ್ತಿದ್ದಂತೆ ಆಡಳಿತ ಚುರುಕುಗೊಳ್ಳುವ ಲಕ್ಷಣ ಕಾಣುತ್ತಿದೆ. ಮುಖ್ಯ ಮಂತ್ರಿ ಯಡಿಯೂರಪ್ಪ ಸಹ ಅಸಮಾಧಾನಿತರ ಅತೃಪ್ತಿಗೆ ಹೆಚ್ಚು ಆದ್ಯತೆ ನೀಡದೆ ಆಡಳಿತದತ್ತ ಗಮನ ಹರಿಸಿದಂತಿದ್ದು, ಸದ್ಯ ಕಮಲ ಪಾಳಯದಲ್ಲಿ ಸೃಷ್ಟಿಯಾಗಿದ್ದ ಅಸಮಾಧಾನದ ಒಳಬೇಗುದಿ ತಹಬದಿಗೆ ಬಂದಂತಿದೆ.
ಸಚಿವ ಸ್ಥಾನದ ಆಕಾಂಕ್ಷಿಗಳು, ಪ್ರಭಾವಿ ಖಾತೆ ಸಿಗದವರು, ಉಪಮುಖ್ಯಮಂತ್ರಿ ಸ್ಥಾನದ ಆಕಾಂ ಕ್ಷಿಗಳು ಒಮ್ಮೆಲೆ ಪರೋಕ್ಷವಾಗಿ ಅತೃಪ್ತಿ ಹೊರ ಹಾಕಲಾರಂಭಿಸಿದ್ದರಿಂದ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೇಳುವ ಆತಂಕ ಸೃಷ್ಟಿಯಾಗಿತ್ತು. ಆದರೆ, ಮಧ್ಯ ಪ್ರವೇಶಿಸಿದ ಹೈಕಮಾಂಡ್, ಎಚ್ಚರಿಕೆ ನೀಡಿದ ಬೆನ್ನಲ್ಲೇ ರೋಷಾವೇಶ ತೋರುತ್ತಿದ್ದ ಅತೃಪ್ತರೆಲ್ಲ ತಮಗೇನೂ ಬೇಸರವಿಲ್ಲವೆಂಬಂತೆ ಸ್ಪಷ್ಟನೆ ನೀಡಲಾರಂಭಿಸಿದ್ದಾರೆ.
ಹೈಕಮಾಂಡ್ ಎಚ್ಚರಿಕೆ: ಸಂಪುಟ ವಿಸ್ತರಣೆ, ಖಾತೆ ಹಾಗೂ ಉಪಮುಖ್ಯಮಂತ್ರಿ ಸ್ಥಾನ ಹಂಚಿಕೆ ಬಳಿಕ ಹಲವು ನಾಯಕರು ಏಕಾಏಕಿ ಅಸಮಾಧಾನ ತೋರ್ಪಡಿಸಲಾರಂಭಿಸುತ್ತಿದ್ದಂತೆ ಹೈಕಮಾಂಡ್ ಮಧ್ಯ ಪ್ರವೇಶಿಸಿದೆ. ಯಾರೇ ಆಗಲಿ, ಅಸಮಾಧಾನ ಪ್ರದರ್ಶಿಸಿ, ರಾಜೀನಾಮೆ ನೀಡುವುದಾಗಿ ಬೆದರಿಕೆಯೊಡ್ಡಿದರೆ ಮುಲಾಜಿಲ್ಲದೆ ಕ್ರಮ ಜರುಗಿಸಿ. ಯಾರ ಒತ್ತಡ ತಂತ್ರಕ್ಕೂ ಮಣಿಯುವ ಪ್ರಶ್ನೆಯೇ ಇಲ್ಲ.
ಸುಗಮ ಆಡಳಿತ ದೃಷ್ಟಿಯಿಂದ ಕೈಗೊಂಡ ಕ್ರಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೈಕಮಾಂಡ್ ಖಡಕ್ ಸೂಚನೆ ನೀಡಿದೆ ಎನ್ನಲಾಗಿದೆ. ಇನ್ನೊಂದೆಡೆ, ಮುಖ್ಯಮಂತ್ರಿಗಳು ಸಹ ಕೆಲ ಹಿರಿಯ ಸಚಿವರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸುವುದರ ಜತೆಗೆ ಸಚಿವ ಸ್ಥಾನವಂಚಿತರ ಮನವೊಲಿಸಿ ಸಹಕಾರ ನೀಡುವಂತೆ ಕೋರುವ ಮೂಲಕ ಸಮಾಧಾನಪಡಿ ಸುವ ಕಸರತ್ತು ಮುಂದುವರಿಸಿದ್ದಾರೆ. ಇದು ತಕ್ಕ ಮಟ್ಟಿಗೆ ಫಲ ನೀಡಿದಂತೆ ಕಾಣುತ್ತಿದೆ.
ಶಾಸಕ ಸ್ಥಾನವೇ ಸಾಕು – ತಿಪ್ಪಾರೆಡ್ಡಿ: ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಜಿ.ಎಚ್.ತಿಪ್ಪಾರೆಡ್ಡಿ ಅವರು ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಡಾಲರ್ ಕಾಲೋನಿ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು. ಈ ವೇಳೆ, ಯಡಿಯೂರಪ್ಪ ಅವರು ತಿಪ್ಪಾರೆಡ್ಡಿಯವರನ್ನು ಸಮಾಧಾನಪಡಿಸಿದ್ದು, ಮುಂದೆ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಭೇಟಿ ಬಳಿಕ ಪ್ರತಿಕ್ರಿಯಿಸಿದ ತಿಪ್ಪಾರೆಡ್ಡಿ, “ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಬೇಸರವಿಲ್ಲ. ಶಾಸಕ ಸ್ಥಾನವೇ ಸಾಕು.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಉತ್ತಮವಾಗಿ ಕ್ಷೇತ್ರದ ಕೆಲಸ ಮಾಡುತ್ತೇವೆ’ ಎಂದು ತಿಳಿಸಿದರು. “ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡಿ ಎಂದು ಕೇಳುವಷ್ಟು ಪ್ರಭಾವಿ ನಾನಲ್ಲ. ನನಗೆ ಯಾವುದೇ ಭರವಸೆ ನೀಡಿಲ್ಲ. ಕ್ಷೇತ್ರದ ಕೆಲಸ ಮಾಡುತ್ತೇನೆ. ಮೂವರು ಉಪಮುಖ್ಯಮಂತ್ರಿಗಳ ನೇಮಕಕ್ಕೆ ನಮ್ಮ ವಿರೋಧವಿಲ್ಲ. ಕೆಲವರು ವಿರೋಧ ವ್ಯಕ್ತಪಡಿಸಿರಬಹುದು. ನನಗೂ, ಅದಕ್ಕೂ ಸಂಬಂಧವಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ಧ’ ಎಂದು ಹೇಳಿದರು.
ಹಿತ ಕಾಯುವ ಭರವಸೆ: ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಪಿ.ರಾಜೀವ್ ಇತರರು ಕೂಡ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಯಾವುದೇ ಕಾರಣಕ್ಕೂ ಅಸಮಾಧಾನಕ್ಕೆ ಒಳಗಾಗಬೇಕಿಲ್ಲ. ಎಲ್ಲರ ಹಿತ ಕಾಪಾಡುವ ಭರವಸೆಯನ್ನು ಯಡಿಯೂರಪ್ಪ ನೀಡಿದರು ಎನ್ನಲಾಗಿದೆ. ಸರ್ಕಾರದ ವತಿಯಿಂದ ಸಾಧ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು. ವರ್ಗಾವಣೆ, ವಿಶೇಷ ಅನುದಾನ ಸೇರಿದಂತೆ ಇತರ ಸೌಲಭ್ಯಗಳಲ್ಲಿ ಆದ್ಯತೆ ನೀಡಲಾಗುವುದು. ಯಾರೊಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಹಸ್ತಕ್ಷೇಪ ಮಾಡದಂತೆಯೂ ಎಚ್ಚರ ವಹಿಸಲಾಗುವುದು. ಒಟ್ಟಾರೆ ಹಿತ ಕಾಯುವುದರ ಜತೆಗೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡುವ ಭರವಸೆಯನ್ನು ಅಸಮಾಧಾನಿತ ಶಾಸಕರಿಗೆ ನೀಡಲಾಗಿದೆ ಎಂದು ಹೇಳಲಾಗಿದೆ.
ಪಕ್ಷದ ತೀರ್ಮಾನಕ್ಕೆ ಬದ್ಧ: ಶ್ರೀರಾಮುಲು
ಬಳ್ಳಾರಿ: “ಬಿಜೆಪಿ ನನಗೆ ತಾಯಿಯಿದ್ದಂತೆ. ಪಕ್ಷದ ನಿರ್ಣಯಕ್ಕೆ ಬದ್ಧನಾಗಿದ್ದು, ವೈಯಕ್ತಿಕ ಅಭಿಪ್ರಾಯ ಬದಿಗಿರಿಸಿ ನಾವೆಲ್ಲರೂ ಪಕ್ಷಕ್ಕಾಗಿ ದುಡಿಯಬೇಕಿದೆ. ಸ್ಥಾನ ದೊರಕಿಲ್ಲ ಎಂದು ಪ್ರತಿಭಟಿಸೋದು ಸರಿಯಲ್ಲ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮಗೆ ಉಪಮುಖ್ಯಮಂತ್ರಿ ಹುದ್ದೆ ನೀಡದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಮಂಗಳವಾರ ಪ್ರತಿಭಟನೆ ನಡೆಸಲಾಗಿದ್ದು, ಈ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡಿದ್ದೇನೆ.
ಅಭಿಮಾನಿಗಳು ತಮ್ಮ ಪರ ಪ್ರತಿಭಟನೆ ನಡೆಸಬಾರದು ಎಂದು ಮತ್ತೂಮ್ಮೆ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು. ರಾಜ್ಯದಲ್ಲಿರುವ ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಒದಗಿಸುವ ಕೆಲಸ ಆಗಬೇಕಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಬಗ್ಗೆ ಆಶ್ವಾಸನೆ ನೀಡಿದ್ದಾರೆ. ಅದು ದೊರೆತರೆ ವಾಲ್ಮೀಕಿ ಸಮುದಾಯಕ್ಕೆ ಸಂಪೂರ್ಣ ಮೀಸಲಾತಿ ಸೌಲಭ್ಯ ಸಿಕ್ಕಂತಾಗುತ್ತದೆ. ಈ ವಿಚಾರದಲ್ಲಿ ಸಮುದಾಯದ ಪ್ರಭಾವಿ ಮುಖಂಡರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಶಿವನಗೌಡ ನಾಯಕ, ರಾಜುಗೌಡ ಎಲ್ಲರೂ ಒಂದಾಗಿ ಪ್ರಯತ್ನ ಮುಂದುವರಿಸಲಿದ್ದೇವೆ ಎಂದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡುವ ವಿಚಾರಕ್ಕೆ ಸಂಬಂಧಿ ಸಿದಂತೆ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಸದ್ಯಕ್ಕೆ ನೆರೆ ಪೀಡಿತ ಪ್ರದೇಶಗಳಲ್ಲಿ ಮೂಲ ಸೌಕರ್ಯ ಹಾಗೂ ಪರಿಹಾರ ಕಾರ್ಯ ಕೈಗೊಳ್ಳುವ ಸಂಬಂ ಧ ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳ ಉಸ್ತುವಾರಿಯಾಗಿದ್ದೇನೆ ಅಷ್ಟೇ.
-ಬಿ.ಶ್ರೀರಾಮುಲು, ಆರೋಗ್ಯ ಸಚಿವ
ರಾಜುಗೌಡಗೆ ಸಚಿವ ಸ್ಥಾನ ನೀಡಲು ಆಗ್ರಹ
ಶಿವಮೊಗ್ಗ: ಶಾಸಕ ರಾಜುಗೌಡರಿಗೆ ಮಂತ್ರಿ ಸ್ಥಾನ ನೀಡಲು ಒತ್ತಾಯಿಸಿ ಬುಧವಾರ ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆದಿದೆ. ಸುರಪುರ ಕ್ಷೇತ್ರದ ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ರಾಜುಗೌಡ ಅಭಿಮಾನಿ ಬಳಗದ ಸದಸ್ಯರು ಶಿವಪ್ಪ ನಾಯಕ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.
ರಾಜುಗೌಡ ಅವರಿಗೆ ಸಚಿವ ಸ್ಥಾನ ನೀಡದೆ ಇರುವುದು ವಾಲ್ಮೀಕಿ ಸಮಾಜಕ್ಕೆ ಮಾಡಿದ ಅನ್ಯಾಯವಾಗಿದೆ. ರಾಜುಗೌಡ ಅವರು ಪಕ್ಷಕ್ಕಾಗಿ ದುಡಿದವರು. ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷರಾಗಿ ಜನಪ್ರಿಯ ಕಾರ್ಯಕ್ರಮ ನೀಡಿದವರು. ಎಸ್ಟಿ ಮೋರ್ಚಾದ ಸಮಾವೇಶ ಹಮ್ಮಿಕೊಂಡು ಲಕ್ಷಾಂತರ ಜನರನ್ನು ಸೇರಿಸಿದ ಕೀರ್ತಿ ಇವರಿಗಿದೆ. ಬಿಜೆಪಿ ಸಂಘಟನೆಯಲ್ಲಿ ಇವರು ಗಣನೀಯ ಪಾತ್ರ ವಹಿಸಿದ್ದಾರೆ. ಇವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.