ಹೊರೆ ತಗ್ಗಿಸಲು ಸಂಪನ್ಮೂಲ ಹೊಂದಾಣಿಕೆ ಸವಾಲು
Team Udayavani, Mar 2, 2020, 3:10 AM IST
ಬೆಂಗಳೂರು: ಹಿಂದಿನ ಸರ್ಕಾರಗಳ ರೈತರ ಸಾಲ ಮನ್ನಾ ಹಾಗೂ ಅನ್ನಭಾಗ್ಯ ಯೋಜನೆಗಳಿಂದಾಗಿ ರಾಜ್ಯದ ಆರ್ಥಿಕತೆ ಮೇಲೆ ದೊಡ್ಡ ಹೊರೆ ಬಿದ್ದಿದ್ದು, ವೆಚ್ಚಕ್ಕೆ ತಕ್ಕಂತೆ ಸಂಪನ್ಮೂಲ ಕ್ರೋಢೀಕರಣ ಆಗದಿರುವುದು ತಲೆನೋವಾಗಿ ಪರಿಣಮಿಸಿದೆ. ಅನ್ನಭಾಗ್ಯ ಅಕ್ಕಿ ಪ್ರಮಾಣ ಕಡಿತಕ್ಕೂ ವಿರೋಧ ವ್ಯಕ್ತವಾಗುತ್ತಿರುವುದರಿಂದ ಯಥಾಸ್ಥಿತಿ ಯಲ್ಲಿ ಯೋಜನೆ ಮುಂದುವರಿಸಿದರೆ ಸರ್ಕಾರಕ್ಕೆ ವಾರ್ಷಿಕ 4 ಸಾವಿರ ಕೋಟಿ ರೂ. ಬೇಕಾಗಿದೆ.
ಜತೆಗೆ, ಈ ಬಾರಿಯ ಬಜೆಟ್‌ನಲ್ಲೂ ರೈತರು ಸಾಲ ಮನ್ನಾ ಘೋಷಣೆ ನಿರೀಕ್ಷೆಯಲ್ಲಿದ್ದಾರೆ. ರೈತ ಸಂಘಟನೆಗಳು ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಈ ಬೇಡಿಕೆ ಇಟ್ಟಿವೆ. ಆದ ರೆ, ಹಿಂದಿನ ಸರ್ಕಾರದ ಸಾಲ ಮನ್ನಾ ನಂತರ ಸಹಕಾರ ಸಂಘಗಳಲ್ಲಿ ಸುಮಾರು 8 ಸಾವಿರ ಕೋಟಿ ರೂ.ವರೆಗೂ ಹೊಸದಾಗಿ ಸಾಲ ಪಡೆಯಲಾಗಿದೆ. ಹೀಗಾಗಿ, ಮತ್ತೆ ಸಾಲ ಮನ್ನಾ ಎಂದರೆ ಹಣಕಾಸು ಹೊಂದಾಣಿಕೆ ಕಷ್ಟ ಎಂದು ಹಣಕಾಸು ಇಲಾಖೆ ಕೈ ಚೆಲ್ಲಿದೆ.
ಅನ್ನಭಾಗ್ಯಕ್ಕೆ ಕತ್ತರಿ ಬೀಳುತ್ತಾ?: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ ಅನ್ನಭಾಗ್ಯ ಯೋಜನೆಗೆ ವಾರ್ಷಿಕ ನಾಲ್ಕು ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. ಇದನ್ನು ಮುಂದುವರಿಸಲು ಪ್ರಸ್ತುತ ಸಂದರ್ಭದಲ್ಲಿ ಹಣಕಾಸಿನ ಮುಗ್ಗಟ್ಟು ಉಂಟಾಗಿದೆ. ಆನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಅಕ್ಕಿಯ ಪ್ರಮಾಣ 2 ಕೆಜಿ ಇಳಿಸಿದರೂ ವಾರ್ಷಿಕ 500 ಕೋಟಿ ರೂ.ವರೆಗೆ ಉಳಿತಾಯವಾಗಲಿದೆ.
ಕೆಲವೆಡೆ ಅನ್ನಭಾಗ್ಯ ಫಲಾನುಭವಿ ಗಳೇ ಉಚಿತವಾಗಿ ಸಿಗುವ ಅಕ್ಕಿಯನ್ನು ಮಾರುಕಟ್ಟೆ ಯಲ್ಲಿ ಮಾರಾಟ ಮಾಡುತ್ತಿದ್ದು ಅದನ್ನು ತಪ್ಪಿಸಲು ಅಕ್ಕಿ ಪ್ರಮಾಣ ಕಡಿತ ಮಾಡಿ. ಅದರ ಬದಲು ಗೋಧಿ, ತೊಗರಿ ಬೇಳೆ ನೀಡಿ ಎಂಬ ಬೇಡಿಕೆಯೂ ಇದೆ. ಹೀಗಾಗಿ, ರಾಜ್ಯ ಸರ್ಕಾರ ಅತ್ತ ಅನ್ನಭಾಗ್ಯ ನಿಲ್ಲಿಸಲೂ ಆಗದೆ ಇತ್ತ ಯಥಾಸ್ಥಿತಿಯಲ್ಲಿ ಮುಂದು ವರಿ ಸಲೂ ಆಗದಂತೆ ಅಡಕತ್ತರಿಯಲ್ಲಿ ಸಿಲುಕಿಕೊಂ ಡಿದೆ. ಬಜೆಟ್‌ನಲ್ಲಿ ಅನ್ನಭಾಗ್ಯಕ್ಕೆ ಸಂಬಂಧಿಸಿದಂತೆ ಒಂದಷ್ಟು ಬದಲಾವಣೆಗಳಂತೂ ಆಗುವ ಸಾಧ್ಯತೆಯಿದೆ.
ಇನ್ನು, ರೈತರ ಸಾಲ ಮನ್ನಾ ವಿಚಾರಕ್ಕೆ ಬಂದರೆ ಎಚ್.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿನ ರೈತರ ಸಾಲ ಮನ್ನಾದಿಂದ ಸುಮಾರು 25 ಸಾವಿರ ಕೋಟಿ ರೂ. ಹೊರೆಯಾಗಿತ್ತು. 2019-20 ನೇ ಸಾಲಿನಲ್ಲಿ ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ವಾಣಿಜ್ಯ ಬ್ಯಾಂಕ್ ಬೆಳೆ ಸಾಲ ಮನ್ನಾಗಾಗಿ 6500 ಕೋಟಿ ರೂ., ಸಹಕಾರಿ ಬ್ಯಾಂಕ್‌ಗಳ ಬೆಳೆ ಸಾಲ ಮನ್ನಾಗಾಗಿ 6150 ಕೋಟಿ ರೂ. ಒದಗಿಸಲಾಗಿತ್ತು. ಆದರೆ, ಒಂದೇ ಕಂತಿನಲ್ಲಿ ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ್ದ ಎರಡು ಲಕ್ಷ ರೂ.ವರೆಗಿನ ಸಾಲ ಮನ್ನಾಗೆ ಕ್ರಮ ಕೈಗೊಂಡಿದ್ದರಿಂದ ಹತ್ತು ಸಾವಿರ ಕೋಟಿ ರೂ. ಹೆಚ್ಚುವರಿ ಹೊರೆಯಾಗಿತ್ತು.
ಅದಕ್ಕೂ ಮುಂಚೆ ಸಿದ್ದರಾಮಯ್ಯ ಅವರು 2018-19 ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದ 50 ಸಾವಿರ ರೂ. ವರೆಗಿನ ಸಹಕಾರ ಸಂಘಗಳ ಸಾಲ ಮನ್ನಾದಿಂದ 4665 ಕೋಟಿ ರೂ. ಹೊರೆ ಬಿದ್ದಿತ್ತು. ಸಾಲಮನ್ನಾ ಹೊರೆಯನ್ನು ಬೇರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಿಸಿ ಹೊಂದಾಣಿಕೆ ಮಾಡಲು ಸಾಧ್ಯವಾಗಲಿಲ್ಲ. ಇದರ ಎಫೆಕ್ಟ್ ಬೇರೆ ಬೇರೆ ಇಲಾಖೆಗಳಿಗೂ ತಟ್ಟಿತು. ಸಾಲ ಮನ್ನಾ ಬಾಬ್ತು ಇನ್ನೂ 1.75 ಲಕ್ಷ ರೈತರ 330 ಕೋಟಿ ರೂ. ಚುಕ್ತಾ ಆಗಬೇಕಿದೆ.
ಮತ್ತೆ ಸಾಲ ಮನ್ನಾ ಬೇಡಿಕೆ?: ಇದೀಗ ರಾಜ್ಯ ಸರ್ಕಾರವು ರೈತರು ರಾಜ್ಯದ ಸಹಕಾರ ಸಂಘಗಳು ಅಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು, ಲ್ಯಾಂಪ್ಸ್ ಸಹಕಾರ ಸಂಘಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದ 2020 ಜನವರಿ 31 ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಕಂತುಗಳ ಅಸಲನ್ನು 2020 ಮಾರ್ಚ್ 31 ರೊಳಗೆ ಪೂರ್ತಿಯಾಗಿ ಮರುಪಾವತಿ ಮಾಡಿದಲ್ಲಿ ಆ ಮೊತ್ತಗಳಿಗೆ ಮರುಪಾವತಿ ದಿನಾಂಕದವರೆಗೆ ಬಾಕಿ ಇರುವ ಬಡ್ಡಿ ಮನ್ನಾ ಮಾಡಲು ಮತ್ತು ಈ ರೀತಿ ಮನ್ನಾ ಮಾಡಿದ ಬಡ್ಡಿ ಮೊಬಲಗು ಸಹಕಾರ ಸಂಸ್ಥೆಗಳಿಗೆ ಸರ್ಕಾರವು ಭರಿಸಲು ಒಪ್ಪಿಗೆ ನೀಡಲಾಗಿದೆ.
ಇದರ ಬಾಬ್ತು 466 ಕೋಟಿ ರೂ. ಆಗಲಿದೆ. ಜನವರಿ ಅಂತ್ಯಕ್ಕೆ 92525 ರೈತರ ಅಲ್ಪಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಗಳ ಸುಸ್ತಿ 560 ಕೋಟಿ ರೂ.ಗಳಷ್ಟಿದೆ. ಆದರೆ, ಪ್ರವಾಹ, ಬರ ಹಿನ್ನೆಲೆಯಲ್ಲಿ ಈ ವರ್ಷವೂ ಬೆಳೆ ಕೈಗೆ ಸಿಕ್ಕಿಲ್ಲ. ಹೊಸ ಸರ್ಕಾರ ಬಂದಿದೆ, ಮತ್ತೆ ಸಾಲ ಮನ್ನಾ ಮಾಡಿ ಎಂದು ರೈತ ಸಂಘಟನೆಗಳು ಬೇಡಿಕೆ ಇಟ್ಟಿವೆ. ಜತೆಗೆ, ಕೃಷಿ, ತೋಟಗಾರಿಕೆ, ನೀರಾವರಿ, ಸಹಕಾರ, ಪಶು ಸಂಗೋಪನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು 55 ಸಾವಿರ ಕೋಟಿ ರೂ.ವರೆಗೆ ಅನುದಾನಕ್ಕೆ ಬೇಡಿಕೆ ಇಟ್ಟಿವೆ.
ಇದರ ಜತೆಗೆ, ವಿದ್ಯುತ್ ಸಬ್ಸಿಡಿ, ಹಾಲಿನ ಸಬ್ಸಿಡಿ, ಕೃಷಿ ಸಾಲದ ಮೇಲಿನ ಬಡ್ಡಿ ಸಹಾಯಧನ ಸೇರಿದರೆ ಇನ್ನೂ 10 ರಿಂದ 15 ಸಾವಿರ ಕೋಟಿ ರೂ. ಬೇಕಾಗುತ್ತದೆ. ಇಷ್ಟು ದೊಡ್ಡ ಮೊತ್ತ ಹೊಂದಿಸುವುದು ಸವಾಲು ಆಗಿದೆ. ಒಟ್ಟಾರೆ ಬಜೆಟ್ ಗಾತ್ರ 2.50 ಲಕ್ಷ ಮೀರುವುದು ಈಗಿನ ಹಣಕಾಸು ಸ್ಥಿತಿಯಲ್ಲಿ ಕಷ್ಟ ಸಾಧ್ಯ. ಹೀಗಿರುವಾಗ ಏಳೆಂಟು ಇಲಾಖೆಗಳಿಗೆ, ಸಬ್ಸಿಡಿಗಾಗಿ 75 ಸಾವಿರ ಕೋಟಿ ರೂ. ಬೃಹತ್ ಮೊತ್ತ ಹೊಂದಿಸಿದರೆ ಉಳಿದ ಇಲಾಖೆಗಳ ಆನುದಾನಕ್ಕೆ ಕತ್ತರಿ ಹಾಕಬೇಕಾಗುತ್ತದೆ. ಹೀಗಾಗಿ, ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಈ ಬಾರಿಯ ಬಜೆಟ್‌ನಲ್ಲಿ ಮಾಡಲಿರುವ “ಮ್ಯಾಜಿಕ್’ ಕುತೂಹಲ ಮೂಡಿಸಿದೆ.
ಇಸ್ರೇಲ್ ಮಾದರಿ ಕೃಷಿಗೆ ಅನುದಾನ ಸಿಗುತ್ತಾ?: 2018-19 ನೇ ಸಾಲಿನಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿಯವರು ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ತಲಾ 5 ಸಾವಿರ ಹೆಕ್ಟೇರ್ ಖುಷ್ಕಿ ಜಮೀನಿನಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ ಒದಗಿಸಲು 150 ಕೋಟಿ ರೂ. ಒದಗಿಸಲಾಗಿತ್ತು. 2019-20 ನೇ ಸಾಲಿನ ಬಜೆಟ್‌ನಲ್ಲೂ 145 ಕೋಟಿ ರೂ. ಒದಗಿಸಲಾಗಿತ್ತು. ಈಗಿನ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಇಸ್ರೇಲ್ ಮಾದರಿ ಕೃಷಿ ಮುಂದುವರಿಸುವುದಾಗಿ ಹೇಳಿದೆ. ಅದಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಎಷ್ಟು ಮೊತ್ತ ಮೀಸಲಿಡಲಾಗುವುದು ಎಂಬುದನ್ನು ನೋಡಬೇಕು.
* ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.