Revenue Department: ತಕರಾರು ಪ್ರಕರಣ ಕಾಲಮಿತಿಯಲ್ಲಿ ಇತ್ಯರ್ಥ
Team Udayavani, Aug 9, 2023, 12:11 AM IST
ಮೈಸೂರು: ರಾಜ್ಯದಲ್ಲಿ ಕಂದಾಯ ಇಲಾಖೆಯಲ್ಲಿ ಆರು ತಿಂಗಳಿಗಿಂತ ಹೆಚ್ಚು ಕಾಲದಿಂದ ಬಾಕಿ ಉಳಿದಿರುವ ತಕರಾರು ಪ್ರಕರಣಗಳನ್ನು ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯಗಳು 3-4 ತಿಂಗಳ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.
ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ಪ್ರಾದೇಶಿಕ ವಿಭಾಗದ ಉಪ ವಿಭಾಗಾಧಿಕಾರಿ (ಎಸಿ) ಹಾಗೂ ಜಿಲ್ಲಾಧಿಕಾರಿ (ಡಿಸಿ) ನ್ಯಾಯಾಲಯಗಳಲ್ಲೂ ಸಾಕಷ್ಟು ತಕರಾರು ಪ್ರಕರಣಗಳು ಬಾಕಿ ಉಳಿದಿವೆ ಎಂದರು.
ಎಲ್ಲೆಲ್ಲಿ, ಎಷ್ಟೆಷ್ಟು ಬಾಕಿ?
ಕೊಳ್ಳೇಗಾಲ 540, ಚಿಕ್ಕಮಗಳೂರು 473, ತರೀಕೆರೆ 952, ಮಂಗಳೂರು 3,627, ಪುತ್ತೂರು 243, ಹಾಸನ 678, ಸಕಲೇಶಪುರ 189, ಮಡಿಕೇರಿ 827, ಮಂಡ್ಯ 1456, ಪಾಂಡವಪುರ 1,111, ಮೈಸೂರು 1,535, ಹುಣಸೂರು 751, ಮತ್ತು ಕುಂದಾಪುರದಲ್ಲಿ 2,061 ಪ್ರಕರಣಗಳು ಸೇರಿದಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಒಟ್ಟಾರೆಯಾಗಿ 14,444 ಪ್ರಕರಣಗಳು ಬಾಕಿ ಇವೆ. ಜಿಲ್ಲಾಧಿಕಾರಿ ನ್ಯಾಯಾಲಯಗಳ ಪೈಕಿ ಚಿಕ್ಕಮಗಳೂರು 652, ಚಾಮರಾಜನಗರ 213, ದಕ್ಷಿಣ ಕನ್ನಡ 507, ಹಾಸನ 547, ಕೊಡಗು 140, ಮಂಡ್ಯ 320, ಮೈಸೂರು 1,040, ಉಡುಪಿ 130 ಪ್ರಕರಣಗಳು ಸೇರಿದಂತೆ ಒಟ್ಟಾರೆ 3,513 ಪ್ರಕರಣಗಳು ಬಾಕಿ ಇವೆ. ಉಪ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳು ತಮ್ಮ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನೂ ಶೀಘ್ರ ವಿಲೇವಾರಿ ಮಾಡಬೇಕು ಎಂದರು.
ಗ್ರಾಮ ಲೆಕ್ಕಿಗರಿಗೆ ಬೀಟ್ ವ್ಯವಸ್ಥೆ
ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವುದನ್ನು ತಡೆಯಲು ಗ್ರಾಮ ಲೆಕ್ಕಿಗರಿಗೆ ಬೀಟ್ ವ್ಯವಸ್ಥೆಯನ್ನು ಜಾರಿಗೊಳಿಸಲು ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ. ಸರಕಾರಿ ಜಾಗಕ್ಕೆ ಗ್ರಾಮ ಲೆಕ್ಕಿಗ ಕನಿಷ್ಠ ಎರಡು ತಿಂಗಳಿಗೆ ಒಮ್ಮೆಯಾದರೂ ತೆರಳಿ ಆ ಸ್ಥಳದಿಂದಲೇ ಆ್ಯಪ್ ಮೂಲಕ ಸರಕಾರಿ ಜಾಗ ಒತ್ತುವರಿಯಾಗಿಲ್ಲ ಎಂಬುದನ್ನು ಧೃಡಪಡಿಸಬೇಕಾಗುತ್ತದೆ. ಇದೊಂದು ರೀತಿ ಸರಕಾರಿ ಭೂಮಿಯನ್ನು ರಕ್ಷಿಸುವ ಕಾವಲು ವ್ಯವಸ್ಥೆಯಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.