ಪೊಳಲಿ ದ್ವಾರ- ಅಡ್ಡೂರು ಸೇತುವೆ ರಸ್ತೆ : ತೇಪೆ ಕಾಮಗಾರಿಗೆ ಸೀಮಿತ
Team Udayavani, Mar 23, 2021, 5:50 AM IST
ಕೈಕಂಬ : ಮಂಗಳೂರು ನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಹೆದ್ದಾರಿ 169ಗೆ ತಾಗಿಕೊಂಡಿರುವ ಗುರುಪುರದ ಪೊಳಲಿ ದ್ವಾರದಿಂದ ಅಡ್ಡೂರು ಸೇತುವೆಯ ವರೆಗಿನ ರಾಜ್ಯ ಹೆದ್ದಾರಿ 101ಗೆ ಸುಮಾರು 15 ವರ್ಷಗಳಿಂದ ಡಾಮರು ಕಾಮಗಾರಿ ಕಾಣದೆ ಕೇವಲ ತೇಪೆ ಕಾಮಗಾರಿಗೆ ಸೀಮಿತವಾಗಿದೆ. ಈ ಬಾರಿ ಕೂಡ ಲೋಕೋಪಯೋಗಿ ಇಲಾಖೆ ಮುಖಾಂತರ ಪೊಳಲಿ ಜಾತ್ರೆಯ ಪ್ರಯುಕ್ತ ತೇಪೆ ಕಾಮಗಾರಿ ಮಾಡಿ ಕೈತೊಳೆದುಕೊಂಡಿದೆ.
ಪ್ರತಿ ವರ್ಷ ಪೊಳಲಿ ಜಾತ್ರೆ ಸಂದರ್ಭ ಅಲ್ಪ ಸ್ವಲ್ಪ ತೇಪೆ ಕಾರ್ಯ ಮಾಡಲಾಗುತ್ತಿತ್ತು. ಅಂತೆಯೇ ಈ ಬಾರಿ ಕೂಡ ರಾಜ್ಯ ಹೆದ್ದಾರಿಗೆ ತೇಪೆ ಕಾಮಗಾರಿ ಮಾಡಲಾಗುತ್ತಿದೆ.
ಅಪಾಯಕಾರಿ ಹೊಂಡ-ತಗ್ಗುಗಳು
ಪೊಳಲಿ ದ್ವಾರದಿಂದ ಅಡೂxರು ಸೇತುವೆಯ ವರೆಗಿನ ರಾಜ್ಯ ಹೆದ್ದಾರಿಯು ಅಪಾಯಕಾರಿಯಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೊಂಡ-ತಗ್ಗುಗಳು ಕಾಣ ಸಿಗುತ್ತಿದ್ದು, ವಾಹನ ಸವಾರರು ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ. ರಸ್ತೆಯ ಮಧ್ಯದಲ್ಲಿ ಉಬ್ಬು, ಬದಿಯಲ್ಲಿ ತಗ್ಗುಗಳು ಇದ್ದು, ಘನ ವಾಹನ, ಸಣ್ಣ ವಾಹನಗಳ ಸವಾರರು ಅಪಾಯ ಎದುರಿಸುತ್ತಿದ್ದಾರೆ.
ಕಿರಿದಾದ ರಸ್ತೆ, ತಿರುವುಗಳೇ ಅಧಿಕ
ಈ ರಾಜ್ಯ ಹೆದ್ದಾರಿಯ ಅಗಲ ಕಿರಿದಾಗಿದ್ದು ತಿರುವು-ಮುರುವುಗಳಿಂದ ಕೂಡಿದೆ. ಕೆಲವೆಡೆ ಎರಡು ವಾಹನಗಳ ಸಂಚಾರಕ್ಕೆ ಕಷ್ಟವಾಗಿದೆ. ಪರಿಸರದ ಬೇರೆ ರಸ್ತೆಗೆ ಹೋಲಿಸಿದರೆ, ಇದು ಅತ್ಯಂತ ಕಳಪೆ ಮಟ್ಟದ ರಸ್ತೆಯಾಗಿದೆ.
ಅಲ್ಲಲ್ಲಿ ಹೊಂಡಗಳು
ರಾಜ್ಯ ಹೆದ್ದಾರಿ ಕಾಂಜಿಲ ಕೋಡಿಯಲ್ಲಿ ಹೆಚ್ಚು ಹೊಂಡಗಳು ಬಿದ್ದಿವೆ. ಇಲ್ಲಿ ಈಗ ತೇಪೆ ಕಾರ್ಯ ಆರಂಭವಾಗಿದೆ. ಕಳಸಗುರಿ, ಪುಣಿಕೋಡಿ, ನೂಯಿಯಲ್ಲಿ ರಸ್ತೆ ಹೆಚ್ಚು ಕಿರಿದಾಗಿದ್ದು, ಚರಂಡಿ ಇಲ್ಲದಿರುವುದರಿಂದ ವಾಹನ ಸವಾರರಿಗೆ ಹೆಚ್ಚು ಅಪಾಯಕಾರಿ.
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಈ ರಸ್ತೆಯ ಮೂಲಕವೇ ಅಧಿಕ ಭಕ್ತರು ಆಗಮಿಸುತ್ತಾರೆ. ಮಂಗಳೂರು -ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169 ಗುರುಪುರ ಬಳಿ ಪೊಳಲಿದ್ವಾರ ಬಳಿ ಈ ರಾಜ್ಯ ಹೆದ್ದಾರಿ ಸಂಪರ್ಕಿಸುವ ಕಾರಣ ಈ ರಸ್ತೆ ಪ್ರಾಮುಖ್ಯ ಪಡೆದಿದೆ.
ಪ್ರಧಾನಮಂತ್ರಿಗೆ ಮನವಿ
ಪೊಳಲಿ ದ್ವಾರ-ಅಡೂxರು ಸೇತುವೆ ವರೆಗೆ ರಾಜ್ಯ ಹೆದ್ದಾರಿ 101 ರಸ್ತೆ ಅಭಿವೃದ್ದಿಗಾಗಿ ಪೊಳಲಿಯ ಸುಜಿತ್ ಅವರು ಕೇಂದ್ರಿಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ಮತ್ತು ಮಾನಿಟರಿಂಗ್ ಸಿಸ್ಟಂ ಮೂಲಕ ಪ್ರಧಾನ ಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ವರದಿ ನೀಡುವಂತೆ ರಾಜ್ಯ ಹೆದ್ದಾರಿಯ ಕಾರ್ಯಪಾಲಕ ಅಭಿಯಂತರಿಗೆ ಪ್ರಧಾನಿ ಕಾರ್ಯಾಲಯದಿಂದ ಪತ್ರ ಬರೆಯಲಾಗಿತ್ತು. ಈ ದೂರಿನ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಸೂಚನೆಯನ್ನು ನೀಡಲಾಗಿದೆ. ಈ ಬಗ್ಗೆ ನಿಯಾಮಾನುಸಾರ ಅಗತ್ಯ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಕುರಿತು ದೂರುದಾರರಿಗೆ ಹಿಂಬರಹ ನೀಡಿ ಪ್ರತಿಯನ್ನು ಕಚೇರಿಗೆ ಸಲ್ಲಿಸಲು ಸೂಚಿಸಿದೆ. ಸದ್ರಿ ಕಾಮಗಾರಿಗೆ ಈ ವರೆಗೆ ಯಾವುದೇ ಲೆಕ್ಕ ಶೀರ್ಷಿಕೆಯಲ್ಲಿ ಅನುದಾನ ಕಾದಿರಿಸದಿದ್ದಲ್ಲಿ ಸದ್ರಿ ಕಾಮಗಾರಿ ಪೂರೈಸಲು ಬೇಕಾಗುವ ಅನುದಾನದ ವಿವರ ನೀಡುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಪರವಾಗಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಪತ್ರ ಬರೆಯಲಾಗಿದೆ.
5 ಕೋ.ರೂ. ಅನುದಾನಕ್ಕೆ ಪ್ರಸ್ತಾವ
ಕೈಕಂಬ ಜಂಕ್ಷನ್‌ನಿಂದ ಅಡೂxರು -ಪೊಳಲಿ ಸೇತುವೆಯ ವರೆಗಿನ ರಸ್ತೆಗೆ ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ 5 ಕೋ.ರೂ.ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಅನುಮೋದನೆಗೆ ಹೋಗಿದ್ದು, ಅಂತಿಮ ಹಂತದಲ್ಲಿದೆ. ರಸ್ತೆಯ ವಿಸ್ತರಣೆ ಜತೆ ತಿರುವುಗಳನ್ನು ತೆಗೆದು ನೇರ ಮಾಡುವುದು, ತಡೆಗೋಡೆ ರಚನೆ ಮಾಡಲು ಯೋಜಿಸಲಾಗುತ್ತಿದೆ.
-ಡಾ| ಭರತ್ ಶೆಟ್ಟಿ ವೈ., ಶಾಸಕರು, ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರ
7.5 ಮೀಟರ್ ರಸ್ತೆ ವಿಸ್ತರಣೆ
ಪೊಳಲಿ ದ್ವಾರದಿಂದ ಅಡೂxರು ಸೇತುವೆವರೆಗೆ ಲೋಕೋಪಯೋಗಿ ಇಲಾಖೆಯ 5 ಕೋ.ರೂ. ಅನುದಾನಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯದಲ್ಲಿ ಅನುದಾನ ಬಿಡುಗಡೆಯಾಗಲಿದೆ. ರಸ್ತೆಯನ್ನು 5.5 ಮೀ.ನಿಂದ 7.5 ಮೀ. ವಿಸ್ತರಿಸಲಾಗುವುದು.
-ಯಶವಂತ್, ಎಕ್ಸಿಕ್ಯೂಟಿವ್ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಮಂಗಳೂರು
– ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.