India-Afghanistan: ಮೊದಲ ಸರಣಿ- 14 ತಿಂಗಳ ಬಳಿಕ ಟಿ20 ಕಣದಲ್ಲಿ ರೋಹಿತ್
Team Udayavani, Jan 10, 2024, 11:02 PM IST
ಮೊಹಾಲಿ: ಭಾರತ ಮತ್ತು ಅಫ್ಘಾನಿಸ್ಥಾನ ತಂಡಗಳ ನಡುವೆ ಪ್ರಪ್ರಥಮ ಟಿ20 ಸರಣಿ ಗುರುವಾರ ಮೊಹಾಲಿಯಲ್ಲಿ ಮೊದಲ್ಗೊಳ್ಳಲಿದೆ. ಟಿ20 ಮಾದರಿ ಯುವ ಕ್ರಿಕೆಟಿಗರಿಗೇ ಮೀಸಲಿರಲಿ ಎಂಬ ಅನೇಕರ ಅಭಿಪ್ರಾಯದ ನಡುವೆಯೇ ಸೀನಿಯರ್‌ಗಳಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಆಯ್ಕೆ ಆಗಿರುವುದು ವಿಶೇಷ. ಇಬ್ಬರೂ 14 ತಿಂಗಳ ಸುದೀರ್ಘ ವಿರಾಮದಲ್ಲಿದ್ದರು. ಇದೀಗ ರೋಹಿತ್ ಮರಳಿ ತಂಡದ ಸಾರಥ್ಯ ವಹಿಸಿದರೆ, ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ.
ಇದು ಟಿ20 ವಿಶ್ವಕಪ್ ವರ್ಷವಾದ್ದರಿಂದ ಭಾರತ ತಂಡದ ಸ್ವರೂಪ ಹೇಗಿರಬೇಕು ಎಂಬುದೊಂದು ದೊಡ್ಡ ಪ್ರಶ್ನೆಯಾಗಿ ಕಾಡಿತ್ತು. ಸೀನಿಯರ್‌ಗಳನ್ನು ಸೇರಿಸಿಕೊಳ್ಳಬೇಕೇ ಅಥವಾ ಬಿಸಿ ರಕ್ತದ ಟಿ20 ಸ್ಪೆಷಲಿಸ್ಟ್‌ಗಳನ್ನು ಸೇರಿಸಿಕೊಂಡು ತಂಡವನ್ನು ರಚಿಸಬೇಕೇ ಎಂಬ ಗೊಂದಲ ಅಜಿತ್ ಅಗರ್ಕರ್ ಅಧ್ಯಕ್ಷತೆಯ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಬೆಂಬಿಡದೆ ಕಾಡಿದ್ದು ಸುಳ್ಳಲ್ಲ.
ವಿಶ್ವಕಪ್ ತಂಡದ ಸ್ವರೂಪ
ಆದರೀಗ ರೋಹಿತ್ ಮತ್ತು ಕೊಹ್ಲಿ ಅವರನ್ನು ಮರಳಿ ಸೇರಿಸಿಕೊಳ್ಳುವ ಮೂಲಕ ಭಾರತದ ಟಿ20 ವಿಶ್ವಕಪ್ ತಂಡದ ಸ್ವರೂಪ ಹೇಗಿರಲಿದೆ ಎಂಬುದರ ಚಿತ್ರಣವೊಂದು ಲಭಿಸಿದಂತಾಗಿದೆ. ರೋಹಿತ್ ಮತ್ತು ಕೊಹ್ಲಿ ಇಬ್ಬರೂ 2022ರ ವಿಶ್ವಕಪ್ ಕೂಟದ ಇಂಗ್ಲೆಂಡ್ ವಿರುದ್ಧದ ಅಡಿಲೇಡ್ ಸೆಮಿಫೈನಲ್‌ನಲ್ಲಿ ಕೊನೆಯ ಸಲ ಟಿ20 ಪಂದ್ಯ ಆಡಿದ್ದರು.
ಇವರಿಬ್ಬರನ್ನು ಹೊರತುಪಡಿಸಿ ಉಳಿದವ ರೆಲ್ಲ ಯುವ ಆಟಗಾರರಾಗಿದ್ದಾರೆ. ಗಾಯಾಳಾ ಗಿರುವ ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯ ಕುಮಾರ್ ಯಾದವ್ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಹಾಗೆಯೇ ಕೆ.ಎಲ್. ರಾಹುಲ್, ಜಸ್‌ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜ, ಮೊಹಮ್ಮದ್ ಸಿರಾಜ್ ಮೊದಲಾದವರಿಗೆ ವಿಶ್ರಾಂತಿ ನೀಡಲಾಗಿದೆ. ಕೌಟುಂಬಿಕ ಕಾರಣಗಳಿಂದ ದಕ್ಷಿಣ ಆಫ್ರಿಕಾ ಸರಣಿಯನ್ನು ತೊರೆದು ಬಂದ ಇಶಾನ್ ಕಿಶನ್ ಸದ್ಯಕ್ಕೆ ಮೂಲೆಗುಂಪಾಗಿದ್ದಾರೆ.
ತಂಡದಲ್ಲಿ ಯುವ ಆಟಗಾರರದ್ದೇ ಸಿಂಹ ಪಾಲು. ಬ್ಯಾಟಿಂಗ್ ಹಾಗೂ ಸ್ಪಿನ್ ವಿಭಾಗ ಪರ್ವಾಗಿಲ್ಲ. ಆದರೆ ವೇಗದ ಬೌಲಿಂಗ್ ವಿಭಾಗ ದುರ್ಬಲವೆಂದೇ ಹೇಳಬೇಕು. ಇಲ್ಲಿರುವವರು ಅರ್ಷದೀಪ್ ಸಿಂಗ್, ಮುಕೇಶ್ ಕುಮಾರ್ ಮತ್ತು ಆವೇಶ್ ಖಾನ್ ಮಾತ್ರ.
ಇದು ಟಿ20 ವಿಶ್ವಕಪ್‌ಗ್ೂ ಮೊದಲು ಭಾರತ ಆಡಲಿರುವ ಕೊನೆಯ ಟಿ20 ಸರಣಿ.
ವಿಶ್ವಕಪ್ ಏರ್ಪಡುವುದು ಜೂನ್ ತಿಂಗಳಲ್ಲಿ. ಹೀಗಾಗಿ ಇಲ್ಲಿನ ಸಾಧನೆ ವಿಶ್ವಕಪ್‌ಗೆ ಮಾನದಂಡವೇನಲ್ಲ. ಸಾಧನೆಗೆ ಮೆಟ್ಟಿಲಾಗಿರುವುದು ಅದೇ ಕ್ಯಾಶ್ ರಿಚ್ ಲೀಗ್-ಐಪಿಎಲ್. ಪ್ರಮುಖ ಟಿ20 ಆಟಗಾರರ ಜತೆಗೆ ಐಪಿಎಲ್‌ನಲ್ಲಿ ಮಿಂಚಿದ ಕೆಲವರನ್ನು ಆಯ್ದು ವಿಶ್ವಕಪ್ ತಂಡವನ್ನು ಅಂತಿಮಗೊಳಿಸಬೇಕಾಗುತ್ತದೆ.
ರೋಹಿತ್‌ಗೆ ಅಗ್ನಿಪರೀಕ್ಷೆ
ರೋಹಿತ್ ನಾಯಕತ್ವವೂ ಇಲ್ಲಿ ಅಗ್ನಿಪರೀಕ್ಷೆಗೆ ಒಳಗಾಗಲಿದೆ. ಬಹಳಷ್ಟು ದ್ವಿಪಕ್ಷೀಯ ಸರಣಿ ಗಳನ್ನು ಗೆದ್ದಿರಬಹುದು, ಆದರೆ ಈವರೆಗೆ ಒಂದೇ ಒಂದು ಐಸಿಸಿ ಟ್ರೋಫಿಯನ್ನು ಎತ್ತಿ ಹಿಡಿದಿಲ್ಲ. ಈ ವಿಷಯದಲ್ಲಿ ರೋಹಿತ್ ನಿಜಕ್ಕೂ ನತದೃಷ್ಟ. ಇದಕ್ಕೆ ತಾಜಾ ಉದಾಹರಣೆ ಏಕದಿನ ವಿಶ್ವಕಪ್ ಫೈನಲ್. ಹೀಗಾಗಿ ಟಿ20 ವಿಶ್ವಕಪ್‌ಗೆ ಮತ್ತೆ ರೋಹಿತ್ ಅವರನ್ನೇ ನಾಯಕರನ್ನಾಗಿ ನೇಮಿಸಿದರೆ ಭಾರತಕ್ಕೆ ಅದೃಷ್ಟ ಒಲಿದೀತೇ ಎಂಬುದೊಂದು ಪ್ರಶ್ನೆ. ರೋಹಿತ್ ಜತೆ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಕೊಹ್ಲಿ ಗೈರಲ್ಲಿ ಗಿಲ್ ವನ್‌ಡೌನ್‌ನಲ್ಲಿ ಬರುತ್ತಾರೆ. ಬಳಿಕ ಸಂಜು ಸ್ಯಾಮ್ಸನ್, ತಿಲಕ್ ವರ್ಮ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಅವರಿಂದ ಬ್ಯಾಟಿಂಗ್ ಲೈನ್‌ಅಪ್ ಬೆಳೆಯಬೇಕಿದೆ. ಸ್ಪಿನ್ ವಿಭಾಗ ಬಿಷ್ಣೋಯಿ, ಕುಲದೀಪ್ ಮತ್ತು ಅಕ್ಷರ್ ಪಟೇಲ್ ಅವರಿಂದ ಬಲಿಷ್ಠವಾಗಿದೆ.
ಅಪಾಯಕಾರಿ ಅಫ್ಘಾನ್
ಅಫ್ಘಾನಿಸ್ಥಾನ ಅತ್ಯಂತ ಅಪಾಯಕಾರಿ ತಂಡ. ಸಾಕಷ್ಟು ಬಲಿಷ್ಠವೂ ಹೌದು. ಭಾರತದ ವಿರುದ್ಧ ಈವರೆಗೆ ಗೆದ್ದಿಲ್ಲ ನಿಜ, ಆದರೆ ಗೆಲ್ಲಬಲ್ಲ ಸಾಮರ್ಥ್ಯವಂತೂ ಇದೆ. ಸಾಕಷ್ಟು ಮಂದಿ ಟಿ20 ಸ್ಪೆಷಲಿಸ್ಟ್‌ಗಳನ್ನು, ಅನುಭವಿ ಆಟಗಾರರನ್ನು ಹೊಂದಿದೆ. ಪ್ರಮುಖ ಸ್ಪಿನ್ನರ್ ರಶೀದ್ ಖಾನ್ ಗೈರು ಒಂದಿಷ್ಟು ಹಿನ್ನಡೆ ಆದೀತು.
ಅಫ್ಘಾನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಮತೋಲನ ಹೊಂದಿರುವ ತಂಡ. ಅದರಲ್ಲೂ ಸ್ಪಿನ್ ವಿಭಾಗ ವೈವಿಧ್ಯ ಮಯ. ಭಾರತದ ಟರ್ನಿಂಗ್ ಟ್ರ್ಯಾಕ್‌ಗಳಲ್ಲಿ ಸ್ಪಿನ್ನರ್ ಯಶಸ್ಸು ಸಾಧಿಸಿದರೆ ಪೈಪೋಟಿ ತೀವ್ರಗೊಳ್ಳಲಿದೆ.
ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನ್ ಅಮೋಘ ಪರಾಕ್ರಮ ಮೆರೆದಿತ್ತು. ಅರ್ಹತಾ ಸುತ್ತಿನಿಂದ ಬಂದು ಹಾಲಿ ಚಾಂಪಿಯನ್ ಇಂಗ್ಲೆಂಡ್, ಬಲಿಷ್ಠ ಪಾಕಿಸ್ಥಾನವನ್ನು ಮಣಿಸಿ ಸುದ್ದಿಯಾಗಿತ್ತು. ಆಸ್ಟ್ರೇಲಿಯವನ್ನೂ ಉರುಳಿಸುವ ಹಾದಿಯಲ್ಲಿತ್ತು. ಇವೆಲ್ಲವೂ ಟಿ20 ಸರಣಿಯಲ್ಲಿ ಅಫ್ಘಾನ್‌ಗೆ ಸ್ಫೂರ್ತಿ ತುಂಬುವ ಸಂಗತಿಗಳೇ ಆಗಿವೆ.
ಸರಣಿಯಿಂದ ರಶೀದ್ ಖಾನ್ ಔಟ್
ಅಫ್ಘಾನಿಸ್ಥಾನದ ಸ್ಟಾರ್ ಬೌಲರ್, ಅಪಾಯಕಾರಿ ಲೆಗ್‌ಸ್ಪಿನ್ನರ್ ರಶೀದ್ ಖಾನ್ ಕೊನೆಯ ಗಳಿಗೆಯಲ್ಲಿ ಭಾರತ ಸರಣಿಯಿಂದ ಬೇರ್ಪಟ್ಟಿದ್ದಾರೆ. ಆದರೆ ಉಳಿದವರು ಈ ಸ್ಥಾನ ವನ್ನು ತುಂಬಲು ಸಮರ್ಥರಿದ್ದಾರೆ ಎಂದು ನಾಯಕ ಇಬ್ರಾಹಿಂ ಜದ್ರಾನ್ ಹೇಳಿದ್ದಾರೆ.
ಏಕದಿನ ವಿಶ್ವಕಪ್ ಪಂದ್ಯಾವಳಿಯ ವೇಳೆ ರಶೀದ್ ಖಾನ್ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಭಾರತಕ್ಕೆ ಪ್ರವಾಸ ಕೈಗೊಳ್ಳುವ ತಂಡದಲ್ಲಿ ಸ್ಥಾನ ಪಡೆದರು. ಆದರೀಗ ಸಂಪೂರ್ಣ ದೈಹಿಕ ಕ್ಷಮತೆ ಹೊಂದಿ ಲ್ಲದ ಕಾರಣ ತಂಡದಿಂದ ಬೇರ್ಪಡಬೇಕಾಗಿದೆ ಎಂಬುದಾಗಿ ಜದ್ರಾನ್ ಬುಧವಾರದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
“ನಮ್ಮಲ್ಲಿ ಬಹಳಷ್ಟು ಆಯ್ಕೆಗಳಿವೆ. ಇವರ ಮೇಲೆ ನಮಗೆ ನಂಬಿಕೆ ಇದೆ. ರಶೀದ್ ಅನುಪಸ್ಥಿತಿ ನಮ್ಮನ್ನು ಕಾಡಬಹುದು. ಆದರೆ ಯಾರಾದರೊಬ್ಬರು ಪರಿಸ್ಥಿತಿಯನ್ನು ನಿಭಾ ಯಿಸಬಲ್ಲರು ಎಂಬ ವಿಶ್ವಾಸ ಇದೆ” ಎಂದರು.
“ಭಾರತದಲ್ಲಿ ಭಾರತ ತಂಡವನ್ನು ಎದುರಿಸುವುದು ಭಾರೀ ಸವಾಲು. ಆದರೆ ನಾವಿಲ್ಲಿ ಗೆಲ್ಲಲೆಂದು ಬಂದಿದ್ದೇವೆ. ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿದೆ. ಟಿ20 ಮಾದರಿಯಲ್ಲಿ ನಮ್ಮದೊಂದು ಸಶಕ್ತ ತಂಡ. ನಮ್ಮ ಸ್ಪಿನ್ ವಿಭಾಗ ಅತ್ಯಂತ ಬಲಿಷ್ಠ. ಉತ್ತಮ ವೇಗಿಗಳೂ ಇದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಒಂದಿಷ್ಟು ಸುಧಾರಣೆ ಆಗಬೇಕಿದೆ. ಆದರೆ ಉತ್ತಮ ಹೋರಾಟವನ್ನಂತೂ ಸಂಘಟಿಸ ಲಿದ್ದೇವೆ’ ಎಂಬುದಾಗಿ ಜದ್ರಾನ್ ಹೇಳಿದರು.
ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮ, ರಿಂಕು ಸಿಂಗ್, ಜಿತೇಶ್ ಶರ್ಮ, ಸಂಜು ಸ್ಯಾಮ್ಸನ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಆವೇಶ್ ಖಾನ್, ಮುಕೇಶ್ ಕುಮಾರ್.
ಅಫ್ಘಾನಿಸ್ಥಾನ: ಇಬ್ರಾಹಿಂ ಜದ್ರಾನ್ (ನಾಯಕ), ರೆಹಮಾನುಲ್ಲ ಗುರ್ಬಜ್, ಇಬ್ರಾಹಿಂ ಅಲಿಖೀಲ್, ಹಜ್ರತುಲ್ಲ ಜಜಾಯ್, ರೆಹಮತ್ ಶಾ, ನಜೀಬುಲ್ಲ ಜದ್ರಾನ್, ಮೊಹಮ್ಮದ್ ನಬಿ, ಕರೀಂ ಜನ್ನತ್, ಅಜ್ಮತುಲ್ಲ ಒಮರ್‌ಜಾಯ್, ಶರಾಫುದ್ದೀನ್ ಅಶ್ರಫ್, ಮುಜೀಬ್ ಉರ್ ರೆಹಮಾನ್, ಫಜಲ್ ಹಕ್ ಫಾರೂಖೀ, ಫರೀದ್ ಅಹ್ಮದ್, ನವೀನ್ ಉಲ್ ಹಕ್, ನೂರ್ ಅಹ್ಮದ್, ಮೊಹಮ್ಮದ್ ಸಲೀಂ, ಕೈಸ್ ಅಹ್ಮದ್, ಗುಲ್ಬದಿನ್ ನೈಬ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.