5 ವರ್ಷವಾದರೂ 501 ಸಾಲಮನ್ನಾ ಫಲಾನುಭವಿಗಳಿಗೆ 3.99 ಕೋ.ರೂ. ಪಾವತಿಯಾಗಿಲ್ಲ: ಅಶೋಕ್ ಕುಮಾರ್
Team Udayavani, Apr 27, 2023, 3:57 PM IST
ಪುತ್ತೂರು: ಐದು ವರ್ಷದ ಹಿಂದಿನ ಸರಕಾರ ಜಾರಿ ಮಾಡಿದ್ದ 1 ಲಕ್ಷ ರೂ. ಸಾಲಮನ್ನಾ ಯೋಜನೆಯಡಿ ಪುತ್ತೂರು ತಾಲೂಕಿನಲ್ಲಿ ಸಾಲಮನ್ನಾದ ಸೌಲಭ್ಯ ಪಡೆಯಲು ಎಲ್ಲ ಅರ್ಹತೆ ಹೊಂದಿ ಗ್ರೀನ್‌ಲಿಸ್ಟ್‌ನಲ್ಲಿರುವ 501 ಮಂದಿಗೆ 3.99 ಕೋ.ರೂ.ಹಣವನ್ನು ಬಿಜೆಪಿ ಸರಕಾರ ಈ ತನಕ ಬಿಡುಗಡೆ ಮಾಡಿಲ್ಲ. ಇದು ಬಿಜೆಪಿ ಸರಕಾರದ ರೈತ ವಿರೋಧಿ ನೀತಿಗೆ ಉದಾಹರಣೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಕಾರ್ಯ ನಡೆಸಿದ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಪ್ರಸ್ತುತ 1,420 ಮಂದಿ ಗ್ರೀನ್‌ಲೀಸ್ಟ್ ಪಟ್ಟಿಯಲ್ಲಿದ್ದರು. ಅದರಲ್ಲಿ 919 ಮಂದಿಯನ್ನು ನಾನಾ ನೆಪ ಒಡ್ಡಿ ತಿರಸ್ಕರಿಸಲಾಗಿದೆ. ಆದರೆ ಸರಕಾರವೇ ಅರ್ಹರೆಂದು ಪರಿಗಣಿಸಿದ 501 ಮಂದಿಗೆ ಸಾಲಮನ್ನಾ ಹಣ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಫಲಾನುಭವಿಗಳು ವಿಚಾರಿಸಿದರೆ ಹಣ ಇಲ್ಲ ಅನ್ನುವ ಉತ್ತರ ಬಂದಿದೆ. ಕೃಷಿಯೇತರ ಕಾರ್ಯಕ್ಕೆ ಕೋಟ್ಯಾಂತರ ಖರ್ಚು ಮಾಡುವ ಸರಕಾರಕ್ಕೆ ಕೃಷಿಕರ ಸಾಲಮನ್ನಾ ಮೊತ್ತ ನೀಡಲು ಹಣ ಇಲ್ಲದಿರುವುದು ದುರಂತ ಎಂದು ಅವರು ಟೀಕಿಸಿದರು.
ಮಂಜೂರಾತಿ ಹಂತದಲ್ಲೇ ತಿರಸ್ಕಾರ
1ಲಕ್ಷ ರೂ.ಸಾಲಮನ್ನಾ ಘೋಷಿಸಿದ ಸಂದರ್ಭದಲ್ಲಿ ಆರಂಭಿಕ ಹಂತದಲ್ಲಿ ಸಹಕಾರ ಸಂಘಗಳು ಕಳುಹಿಸಿದ ಪಟ್ಟಿಯಲ್ಲಿದ್ದ ಪುತ್ತೂರು ತಾಲೂಕಿನ 4 ಸಾವಿರಕ್ಕೂ ಅಧಿಕ ರೈತ ಫಲಾನುಭವಿಗಳನ್ನು ಮಂಜೂರಾತಿ ಹಂತದಲ್ಲೇ ಕೈ ಬಿಟ್ಟು ಅವರಿಗೆ ಸೌಲಭ್ಯ ಸಿಗದಂತೆ ಮಾಡಿದ್ದು ಬಿಜೆಪಿ ಸರಕಾರ ಎಂದು ಅಶೋಕ್ ಕುಮಾರ್ ರೈ ಅಂಕಿ ಅಂಶ ಸಹಿತ ವಾಗ್ದಾಳಿ ನಡೆಸಿದರು.
ಬಿಜೆಪಿ ಮುಖಂಡರು ಮಾತನಾಡುವುದಿಲ್ಲ..!
ಸಾಲಮನ್ನಾ ಸಿಗದ ಫಲಾನುಭವಿಗಳು ಹತ್ತಾರು ಪ್ರತಿಭಟನೆಗಳನ್ನು ನಡೆಸಿದರೂ ಶಾಸಕರಾಗಲಿ, ಬಿಜೆಪಿ ಮುಖಂಡರಾಗಲಿ ಅದಕ್ಕೆ ಪೂರ್ಣ ಸ್ಪಂದನೆ ನೀಡಿಲ್ಲ. ಕೆಲವರ ಸಾಲಮನ್ನಾ ಮಂಜೂರಾತಿ ಮಾಡಿ ಎಲ್ಲರಿಗೆ ಸಿಕ್ಕಿದೆ ಎಂದು ಹೇಳಿಕೆ ನೀಡಿ ಪುಕ್ಸಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ರೈತರಿಗೆ ಆಗಿರುವ ಅನ್ಯಾಯದ ಆಕ್ರೋಶ ಕ್ಷೇತ್ರದೆಲ್ಲೆಡೆ ಇದೆ. ಇದರಿಂದಾಗಿ ಬಿಜೆಪಿ ತನ್ನ ಪ್ರಚಾರ ಭಾಷಣದಲ್ಲಿ ಧರ್ಮ ಧರ್ಮದ ನಡುವೆ ಕಿಚ್ಚು ಮೂಡಿಸಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಇದಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಜಾಗ ಕಾಯ್ದಿರಿಸುವ ಕೆಲಸವನ್ನು ಈ ಹಿಂದಿನ ಕಾಂಗ್ರೆಸ್ ಸರಕಾರ ಮಾಡಿತ್ತು. ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವನ್ನು ಕಾಂಗ್ರೆಸ್ ಸರಕಾರವೇ ಮಾಡಲಿದೆ. ಇದಕ್ಕೆ ಪೂರಕವಾಗಿ ಜನಪರ ಕಾಳಜಿಯುಳ್ಳ ಅಶೋಕ್ ಕುಮಾರ್ ರೈ ಅವರನ್ನು ಗೆಲ್ಲಿಸಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಕಾಂಗ್ರೆಸ್ ಸರ್ವರ ಹಿತ ಬಯಸುವ ಪಕ್ಷ. ಬಿಜೆಪಿ ಅಪಪ್ರಚಾರ ಮಾಡುವುದರಲ್ಲೇ ಲಾಭ ಗಳಿಸಲು ನೋಡುವ ಪಕ್ಷ. ಕೃಷಿಕರ ಸ್ವಾಧೀನ ಇರುವ ಜಾಗವನ್ನು ನೀಡಲು ಅಕ್ರಮ ಸಕ್ರಮದಲ್ಲಿ ಜನರಿಂದ ಲಕ್ಷ ಲಕ್ಷ ಹಣ ಲೂಟಿ ಮಾಡಲಾಗಿದೆ. ಹೀಗಾಗಿ ಬಿಜೆಪಿಯ ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ಸಮರ್ಥ ನಾಯಕತ್ವದ ಅಗತ್ಯವಿದ್ದು, ಅಶೋಕ್ ಕುಮಾರ್ ರೈ ಅವರಿಗೆ ಗರಿಷ್ಠ ಮತ ನೀಡುವ ಮೂಲಕ ಶಕ್ತಿ ತುಂಬಬೇಕು ಎಂದು ತಿಳಿಸಿದರು.
ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ|ರಾಜಾರಾಮ ಕೆ.ಬಿ. ಮಾತನಾಡಿ, ಕ್ಷೇತ್ರದಲ್ಲಿನ ಅಪೂರ್ಣ ಕಾಮಗಾರಿಗಳೇ ತನ್ನ ಸಾಧನೆ ಎಂದು ಹೇಳಿಕೊಳ್ಳುವ ಸ್ಥಿತಿ ಬಿಜೆಪಿಯದ್ದು. ಜಲಸಿರಿ, ಜೆಜೆಎಂ ಮೂಲಕ ಕೋಟ್ಯಾಂತರ ರೂ. ಹಣ ಖರ್ಚು ಮಾಡಲಾಗಿದ್ದು ತೊಟ್ಟು ನೀರು ಜನರಿಗೆ ತಲುಪಿಲ್ಲ ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿ, ಕಳೆದ ಐದು ವರ್ಷದಲ್ಲಿ ಪುತ್ತೂರು ಕ್ಷೇತ್ರದಲ್ಲಿನ ಬಿಜೆಪಿ ಭ್ರಷ್ಟಚಾರದ ವಿರುದ್ಧ ಜನಾಕ್ರೋಶ ಮೂಡಿದೆ ಎಂದರು.
ವಿವಿಧೆಡೆ ನಡೆದ ಪ್ರಚಾರ ಕಾರ್ಯದಲ್ಲಿ ಪುತ್ತೂರು ಕ್ಷೇತ್ರದ ಉಸ್ತುವಾರಿ ಹರಿಯಾಣ ರಾಜ್ಯದ ಶಾಸಕ ದೀರಜ್ ಶರ್ಮ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಅಗರಿ ನವೀನ್ ಭಂಡಾರಿ, ಎಂ.ಎಸ್. ಮಹಮ್ಮದ್, ಮುರಳೀಧರ ರೈ ಮಠಂತಬೆಟ್ಟು, ಪ್ರವೀಣ್‌ಚಂದ್ರ ಆಳ್ವ, ಉಮಾನಾಥ ಶೆಟ್ಟಿ, ಮಹೇಶ್ ರೈ ಅಂಕೊತ್ತಿಮಾರ್, ವೇದನಾಥ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ ಸೇರ್ಪಡೆ
ಈ ಸಂದರ್ಭದಲ್ಲಿ ಬಿಜೆಪಿ ಸೇರಿದಂತೆ ವಿವಿಧ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು. ಆನಂದ ದರ್ಬೆ, ಮಣಿ ದರ್ಬೆ, ಬಾಬು ದರ್ಬೆ, ಸೂರ್ಯ ದರ್ಬೆ , ರಂಜಿತ್ ಮುರುಗ, ಅಣ್ಣಪ್ಪ, ಕೃಷ್ಣ ಕಾಂತರಾಜ್, ಮಂಜುಳಾ, ಪ್ರಿಯ, ಲಕ್ಷ್ಮೀ, ಸರೋಜಾ, ಜ್ಯೋತಿ, ಆನಂದ, ಮಣಿಕಂಠ, ಬಾಲರಾಜ್, ಮನೋಹರ, ಸೂರ್ಯ, ವಸಂತ, ಅಶೋಕ್, ಶಿವರಾಜ್, ಕಾರ್ತಿಕ್ ಮತ್ತಿತರರು ಕಾಂಗ್ರೆಸ್ ಸೇರ್ಪಡೆಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.